ಮನ ಮಿಡಿಯಿತು ಕೃಷಿಯತ್ತ, ವಿಮುಖವಾಯಿತು ನಗರದಿಂದ ಚಿತ್ತ


ಗಂಡನಿಗೆ ತಿಂಗಳಿಗೆ 75 ಸಾವಿರ ಸಂಬಳ, ಹೆಂಡತಿಗೆ 50 ಸಾವಿರ... ಕನಸಿನ ನಗರಿ ಬೆಂಗಳೂರಿನಲ್ಲಿ ಬದುಕು ಕಂಡುಕೊಳ್ಳಲು ಧಾರವಾಡದಿಂದ ಖುಷಿಯಿಂದ ಹೋಗಿದ್ದರು ಈ ದಂಪತಿ. ಆದರೆ ನಾಲ್ಕೆ ವರ್ಷ. ನಗರೀಕರಣದ ಯಾಂತ್ರಿಕ ಬದುಕು ಇವರನ್ನು ರಸ ಹೀರಿದ ಕಬ್ಬಿನಂತೆ ಮಾಡಿಬಿಟ್ಟಿತು. ಕೊನೆಗೆ ಆರೋಗ್ಯವೂ ಕೈ ಕೊಟ್ಟಿತು. ಆಗ ನೆನಪಾಗಿದ್ದು ಅಪ್ಪನ ಕೃಷಿ ಭೂಮಿ.
ನಿಜವಾದ ಬದುಕು ಅಂದ್ರೆ ಏನು ಎಂಬ ಅರಿವು ಈಗ ಆಗಿದೆ ಎಂದು ಶುಭಾ ರಾಜಶ್ರೀ ವಿಭೂತಿ ಹೇಳುವಾಗ ಅವರ ಕಣ್ಣಿನಲ್ಲಿ ಕೃಷಿ ಸಾಮ್ರಾಜ್ಯ ವಿಸ್ತರಿಸುವ ತವಕವಿತ್ತು. ಓದಿದ್ದು ಪದವಿ ವರೆಗೆ ಮಾತ್ರ. ಆದರೆ ಇಂಗ್ಲಿಷ್ ಭಾಷೆಯಿಂದಾಗಿ ವಿದೇಶಿ ಟೆಲಿಕಾಂ ಕಂಪನಿಯೊಂದರಲ್ಲಿ ಉತ್ತಮ ಹುದ್ದೆಯಲ್ಲಿ ಕೆಲಸ. ತಿಂಗಳ ಸಂಬಳ 50 ಸಾವಿರ ರೂ. ಆದರೆ ನೆಮ್ಮದಿ ಇರಲಿಲ್ಲ. ಮುಂಜಾವಿನ ಸೂರ್ಯೋದಯ, ಸಂಜೆಯ ಚಂದ್ರನುದಯ ಯಾವುದೂ ಇವರ ಜೀವನಕ್ಕೆ ಸಂಬಂಧಪಟ್ಟ ವಿಷಯವಾಗಿ ಉಳಿಯಲಿಲ್ಲ. ಅಲ್ಲೇನಿದ್ದರೂ ಬರೀ ದುಡಿತ, ದುಡಿತ, ದುಡಿತ..!
ವಿದೇಶಿ ಮೂಲದ ಖಾಸಗಿ ಟೆಲಿಕಾಂ ಕಂಪನಿಯೊಂದರಲ್ಲಿ ಗ್ರಾಹಕ ಸಂಬಂಧದ ವ್ಯವಸ್ಥಾಪಕಿಯಾಗಿದ್ದ ಶುಭಾ ಅವರ ದಿನಚರಿ ಅವರನ್ನು ಹಿಂಡಿ ಹಿಪ್ಪೆ ಮಾಡಿತ್ತು. ಬೆಳಗ್ಗೆ ಎದ್ದು ಮನೆಕೆಲಸ ಮಾಡಿಕೊಂಡು ಎಂಟು ಗಂಟೆಗೆ ಆಫೀಸು ತಲುಪಬೇಕು. ರಾತ್ರಿ 10:00 ಗಂಟೆ ವರೆಗೆ ಬಿಟ್ಟೂ ಬಿಡದ ಕೆಲಸ. ಹಬ್ಬಗಳೋ ಕನಸಿನಲ್ಲಿಯೇ ಆಚರಣೆ, ನಮ್ಮ ತಿನಿಸು, ತಿಂಡಿಗಳನ್ನು ನೆನೆಪಿಸಿಕೊಳ್ಳುವುದಷ್ಟೆ. ವಾರದ ರಜೆಯಲ್ಲಿ ಸುಸ್ತು, ಅಡುಗೆ ಮಾಡಿ ತಿನ್ನುವುದಕ್ಕೂ ಮನಸ್ಸಿಲ್ಲದಂತೆ ಕಚೇರಿಯ ದೂರವಾಣಿ ಕರೆಗಳು, ಸಾಲದ್ದಕ್ಕೆ ಸಣ್ಣ ತಪ್ಪಿಗೆ ಬಾಸ್ಗಳ ಕಿರಿಕಿರಿ.
ಇವರ ಬದುಕು ಇಂತಿದ್ದರೆ ಪತಿ ರಾಜೇಶ್ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ವ್ಯಕ್ತಿ. ತಿಂಗಳಿಗೆ 75 ಸಾವಿರ ರೂ., ಸಂಬಳ. ಬೆಂಗಳೂರಿನಲ್ಲಿ ಮನೆ, ಕಾರು ಆಳು-ಕಾಳು ಎಲ್ಲವೂ ಓಕೆ. ಆದರೆ ವೈಯಕ್ತಿಕ ಜೀವನ ಸಾಧನೆ ಮಾತ್ರ ಶೂನ್ಯ ಎನ್ನಿಸಿತು ಅವರಿಗೆ. ಅಷ್ಟೇ ಅಲ್ಲ, ಕೆಲಸದ ಒತ್ತಡದಿಂದಾಗಿ ಆರೋಗ್ಯ ಕೈ ಕೊಟ್ಟಿತು. ಒತ್ತಡದ ಬದುಕು ಮತ್ತು ಯಾಂತ್ರಿಕ ಜೀವನ ಶೈಲಿಯಿಂದಾಗಿ ಬದುಕು ದುಸ್ತರ ಎನಿಸಿತು. ಕೂಡಲೇ ದಂಪತಿ ಗಮನ ಹೊರಳಿದ್ದು ಕೃಷಿಯತ್ತ, ಅರ್ಥಾತ್ ಮರಳಿ ಮಣ್ಣಿನತ್ತ.
ಕೃಷಿಯಲ್ಲಿ ಏನಿದೇ ಎಂದು ಪ್ರಶ್ನಿಸುವವರಿಗೆ ಬೆಂಗಳೂರಿನಲ್ಲಿ ಕೆಲಸ ಮಾಡಲು ಬಿಡಬೇಕು. ನಂತರ ಅವರಿಗೆ ತಿಳಿಯುತ್ತೆ ಕೃಷಿಯೇ ಎಲ್ಲದಕ್ಕೂ ಮೂಲ ಎಂಬುದು. ಮಲ್ಟಿನ್ಯಾಷನಲ್ ಕಂಪನಿಗಳ ನೀಲಿ ಗಾಜಿನ ಕಟ್ಟಡದಲ್ಲಿ ಕುಳಿತು ಕಂಪ್ಯೂಟರ್ ಎಂಬ ಹುಚ್ಚನೊಂದಿಗೆ ವ್ಯವರಿಸಿ ಸುಸ್ತಾದವರಿಗೆ ಈ ದಂಪತಿ ಮಾತ್ರ ಕೃಷಿಯಲ್ಲಿ ತೊಡಗಿಕೊಳ್ಳುವಂತೆ ಸಲಹೆ ನೀಡುತ್ತಾರೆ.
ಶುಭಾ ವಿಭೂತಿ ದಂಪತಿಗೆ ಹಿರಿಯರ ಕಾಲದ ಕೃಷಿ ಭೂಮಿ ಇದೆ. ಧಾರವಾಡ-ಅಳ್ನಾವರ ರಸ್ತೆಯಲ್ಲಿರುವ ಹೊನ್ನಾಪುರ ಗ್ರಾಮದ ಸಮೀಪದಲ್ಲಿ ಈ ಜಮೀನಿದೆ. ಮಕ್ಕಳು ಉನ್ನತ ವ್ಯಾಸಂಗ ಮಾಡಿ ಬೆಂಗಳೂರು, ಮುಂಬೈ ಸೇರಿಕೊಂಡ ಬಳಿಕ ಇದನ್ನು ನೋಡಿಕೊಳ್ಳುವವರು ಇಲ್ಲದಾಗಿತ್ತು. ಉನ್ನತ ವ್ಯಾಸಂಗ ಮಾಡಿದ ಎಲ್ಲರಿಗೂ ಮೊದಮೊದಲು ಜಮೀನು, ತೋಟ ಇಷ್ಟವಾಗುವುದಿಲ್ಲ. ಆಗೇನಿದ್ದರೂ ಲಕ್ಷ ಸಂಬಳದ ಗುರಿ ಕಾಡುತ್ತಿರುತ್ತದೆ.
ಆದರೆ ಕೃಷಿ ಮಾಡುವುದಾಗಿ ನಿರ್ಧರಿಸಿದ ದಂಪತಿ ಕೃಷಿಗೆ ತೊಡಗಿಕೊಳ್ಳುವ ಮುನ್ನ ಮುಂದೇನು ಮಾಡಬೇಕು ಎಂಬುದರ ಪುಟ್ಟ ಸಿದ್ಧತೆ ಮಾಡಿಕೊಂಡೇ ಬಂದಿದ್ದರು. ಇದರ ಫಲವಾಗಿ ಜಮೀನಿನಲ್ಲಿ ಅಡಿಕೆ, ತೆಂಗು, ಬಾಳೆ, ತೇಗದ ಮರಗಳ ಜೊತೆಗೆ ಮನೆಗೆ ಬೇಕಾಗುವ ಆಹಾರ ಧಾನ್ಯ, ಕಾಯಿಪಲ್ಲೆಗಳನ್ನು ಕೂಡ ಬೆಳೆಯುತ್ತಿದ್ದಾರೆ. ಏಳು ತಿಂಗಳಿನಿಂದ ಸಾವಯವ ಮತ್ತು ಎರೆಹುಳು ಗೊಬ್ಬರವನ್ನು ಕೂಡ ಉತ್ಪಾದಿಸುತ್ತಿದ್ದಾರೆ. ತಿಂಗಳಿಗೆ ಗೊಬ್ಬರದ ಉತ್ಪಾದನೆಯೇ 100 ಕ್ವಿಂಟಲ್. ಇದನ್ನು ಚಿತ್ರದುರ್ಗ, ದಾವಣಗೆರೆ, ಬೈಲಹೊಂಗಲ ಮತ್ತು ಧಾರವಾಡ ಸೇರಿದಂತೆ ಇತರೆಡೆಗಳಿಗೆ ಪೂರೈಕೆ ಮಾಡುತ್ತಾರೆ. ರಾಜ್ಯದಲ್ಲಿ ನಡೆಯುವ ದೊಡ್ಡ ಉತ್ಸವಗಳು, ಕೃಷಿ ಮೇಳಗಳಲ್ಲಿ ಶುದ್ಧ ಆರ್ಗ್ಯಾನಿಕ್ ಎಂಬ ಸಂಸ್ಥೆಯೊಂದನ್ನು ಕಟ್ಟಿಕೊಂಡು ಅಲ್ಲಿ ತಾವು ಉತ್ಪಾದಿಸಿದ ಎರೆಹುಳು ಗೊಬ್ಬರ ಮಾರಾಟ ಮಾಡುತ್ತಿದ್ದಾರೆ.
ಸಂಬಳ ಮತ್ತು ವೃತ್ತಿಕೌಶಲ್ಯದಿಂದ ಹಣ ಗಳಿಕೆ ಮಾಡುವವರಿಗೆ ಬೆಂಗಳೂರು ಖಂಡಿತವಾಗಿಯೂ ಬೃಹತ್ ಭಿತ್ತಿ. ಆದರೆ ಹಣದ ಬೆನ್ನು ಹತ್ತಿದರೆ ನಿಜವಾದ ಬದುಕು ನಡೆಸುವುದು ಸಾಧ್ಯವಿಲ್ಲ ಎಂಬುದು ಈ ದಂಪತಿ ಅನಿಸಿಕೆ. ಸಾಕಷ್ಟು ಓದಿದ ನಂತರ ಒಂದಿಷ್ಟು ಕೆಲಸ ಮಾಡಬೇಕು. ಇತರರಂತೆ ನಾವು ದೊಡ್ಡ ನಗರದಲ್ಲಿ ವಾಸಿಸಬೇಕು ಎಂಬ ಕನಸು ಸಹಜ. ಆದರೆ ಅಲ್ಲಿನ ಬದುಕು ನಮಗೆ ಪಾಠ ಕಲಿಸುತ್ತದೆ. ಅದರಲ್ಲೂ ವಿಶೇಷವಾಗಿ ಮೂಲತಃ ಕೃಷಿ ಕುಟುಂಬ ಮತ್ತು ಅವಿಭಕ್ತ ಕುಟುಂಬದ ಸದಸ್ಯರಿಗೆ ಅಲ್ಲಿನ ಬದುಕು ಹಿಂಸೆಯಾಗಿ ಪರಿವರ್ತನೆಗೊಳ್ಳುತ್ತದೆ ಎಂಬುದು ಇವರ ಸ್ಪಷ್ಟೋಕ್ತಿ.
ಇದೀಗ ರಾಜೇಶ ಅವರ ಆರೋಗ್ಯ ಸುಧಾರಣೆಯಾಗಿದೆ. ನಾವೀಗ ಕೃಷಿಕರು ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇವೆ. ನಮ್ಮ ಬದುಕಿಗೆ ಇದೀಗ ನಿಜವಾದ ಅರ್ಥ ಬಂದಿದೆ ಎನ್ನುತ್ತಾರೆ ಶುಭಾ ವಿಭೂತಿ. ಜೀವನ ನಡೆಸುವುದಕ್ಕೆ ಹಣಬೇಕು. ಆದರೆ ಹಣ ಗಳಿಸುವುದೇ ಜೀವನದ ಮುಖ್ಯ ಉದ್ದೇಶ ಆಗಬಾರದು. ಕೃಷಿಯಲ್ಲಿ ಬದುಕಿದೆ, ಹೊಲದಲ್ಲಿ ಚಿಗುರು ಬೆಳೆ, ಬೀಸುವ ತಂಗಾಳಿ, ಸುರಿಯುವ ಮಳೆ ಮತ್ತು ಹಕ್ಕಿಪಿಕ್ಕಿಗಳ ಕಲರವ ಮನುಷ್ಯನ ಜೀವನಕ್ಕೆ ಸಾರ್ಥಕತೆಯನ್ನು ತಂದು ಕೊಡಬಲ್ಲದು. ಇದು ದೈತ್ಯ ನಗರದ ಗಗನಚುಂಬಿ ಕಟ್ಟಡಗಳಲ್ಲಾಗಲಿ, ವಿದೇಶಿ ಕಂಪನಿಗಳು ವಿಸುವ ಗುರಿ ತಲುಪುವ ಆಟದಲ್ಲಿ ಸಿಕ್ಕಲಾರದು ಎಂಬುದಕ್ಕೆ ಈ ದಂಪತಿ ಸಾಕ್ಷಿಯಾಗಿದ್ದಾರೆ.