ಅಂತೂ ಇಂತೂ ಹೆಮ್ಮನಬೈಲಿಗೆ ಸೇತುವೆ ಮಂಜೂರಾಯ್ತು


ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯತ ವ್ಯಾಪ್ತಿಯ ಹೆಮ್ಮನಬೈಲ್ ಹೊಳೆಯ ಸೇತುವೆ ನಿರ್ಮಾಣಕ್ಕೆ ರಾಜ್ಯ ಸರಕಾರ 1.40 ಕೋಟಿ ರೂ. ಮಂಜೂರು ಮಾಡಿದ್ದು, ಇದರಿಂದ ಈ ಭಾಗದ ಜನತೆಯ ಹಲವು ವರ್ಷಗಳ ಆಗ್ರಹ ಪೂರ್ವಕವಾದ ಬೇಡಿಕೆಗೆ ಫಲ ದೊರೆತಿದೆ.
ತಾಲೂಕು ಕೇಂದ್ರದಿಂದ ಸುಮಾರು 25-30 ಕಿ.ಮೀ. ದೂರದ, ಗ್ರಾಮೀಣ ಪ್ರದೇಶವಾದ ಸೋವಿನಕೊಪ್ಪ ಗ್ರಾ.ಪಂ. ವ್ಯಾಪ್ತಿಗೆ ಸಂಚಾರ ವ್ಯವಸ್ಥೆ ತುಂಬಾ ದುಸ್ತರ. ದಿನದಲ್ಲಿ ಒಂದೋ, ಎರಡೋ ಬಾರಿ ಇರುವ ಬಸ್ ಸಂಚಾರ ಮಳೆಗಾಲದಲ್ಲಿ ಸ್ಥಗಿತಗೊಳ್ಳುವುದೇ ಹೆಚ್ಚು. ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು, ದೈನಂದಿನ ಕೆಲಸ-ಕಾರ್ಯಗಳಿಗೆ ತಾಲೂಕು ಕೇಂದ್ರಕ್ಕೆ ಬರಲೇಬೇಕಾದ ಸಾರ್ವಜನಿಕರು ಇದರಿಂದ ವರ್ಷದ ಹಲವು ದಿನ ಸಿದ್ದಾಪುರ-ಕುಮಟಾ ರಸ್ತೆಯವರೆಗೆ ಸುಮಾರು 6-7 ಕಿ.ಮೀ.ದೂರದವರೆಗೆ ಕಾಲ್ನಡಿಗೆಯಲ್ಲಿ ಬಂದು ಬಸ್ ಹಿಡಿಯಬೇಕಾದ ಸಂದರ್ಭವೇ ಹೆಚ್ಚು. ವೈದ್ಯಕೀಯ ಸೌಲಭ್ಯ, ದಿನಸಿ ಮುಂತಾಗಿ ಅಗತ್ಯಗಳಿಗೆ ಬಿಳಗಿಗೆ ಬರಬೇಕಿದ್ದು ಹೊಳೆಯ ಕಾರಣದಿಂದ ಸುಮಾರು 10 ಕಿ.ಮೀ. ಸುತ್ತು ಬಳಸಿ ಬರಬೇಕು. ಬಿಳಗಿಯಿಂದ ಹೆಮ್ಮನಬೈಲ್ ಹೊಳೆಯವರೆಗೆ ಡಾಂಬರ್ ರಸ್ತೆಯಾಗಿದ್ದು ಹೊಳೆಗೆ ಸೇತುವೆಯಾದರೆ ವಾಹನ ಸಂಚಾರಕ್ಕೆ ಅನುಕೂಲವಾಗುತ್ತದೆ.
ಹೆಮ್ಮನಬೈಲ್ ಹೊಳೆಗೆ ಸೇತುವೆ ನಿರ್ಮಿಸಬೇಕೆಂದು ಹಲವು ವರ್ಷಗಳಿಂದ ಈ ಭಾಗದ ಜನ ಸರಕಾರವನ್ನು ಆಗ್ರಹಿಸುತ್ತಲೇ ಬಂದಿದ್ದರು. ಜನರ ಅಗತ್ಯವನ್ನು ಗಮನಿಸುವ, ತಾವಾಗಿಯೇ ಮುಂದಾಗಿ ಜನತೆಯ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗುವ ಮನೋಭಾವವಿಲ್ಲದ ಜನಪ್ರತಿನಿಗಳೆದುರು ಇದು ಅರಣ್ಯರೋದನವಾಗಿತ್ತು. ಆದರೂ ಛಲ ಬಿಡದ ಇಲ್ಲಿನ ಜನತೆ ತಮ್ಮ ಆಗ್ರಹವನ್ನು ಮುಂದುವರಿಸಿದ್ದಕ್ಕೆ ಈಗ ಪ್ರತಿಫಲ ದೊರಕಿದಂತಾಗಿದೆ. ತಾ.ಪಂ. ಉಪಾಧ್ಯಕ್ಷ ಪ್ರಸನ್ನ ಹೆಗಡೆ ಸೇರಿದಂತೆ ಈ ಭಾಗದ ಹಲವು ಜನಪ್ರತಿನಿಗಳ ನಿರಂತರ ಪ್ರಯತ್ನ ಫಲ ನೀಡಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸೇತುವೆ ಮಂಜೂರಿ ಮಾಡಿದ್ದು, ಇದರಿಂದಾಗಿ ಗ್ರಾಮೀಣ ಭಾಗದ ಸಂಚಾರ ವ್ಯವಸ್ಥೆಗೆ ಅನುವು ಕಲ್ಪಿಸಿದಂತಾಗಿದೆ.