ಬದುಕು ಕಟ್ಟುವ ಉಪನ್ಯಾಸಕಿ ಬದುಕು ಕಳೆದುಕೊಂಡ ಕಥೆ


ಸರಿಯಾಗಿ ಎರಡು ವರ್ಷಗಳ ಹಿಂದೆ. ಜು.26ರಂದು. ಮೇಲಂತಬೆಟ್ಟಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸ ಮುಗಿಸಿ ಬೆಳ್ತಂಗಡಿ ಬಸ್ ನಿಲ್ದಾಣದೆಡೆಗೆ ಬರುತ್ತಿದ್ದರು ಆಕೆ. ಅದೇನು ದುರಾದೃಷ್ಟವೋ, ಎದುರಿನಿಂದ ಬಂದ ಪಿಕ್ಅಪ್ ವಾಹನವೊಂದು ನೇರಾ ನೇರ ರಿಕ್ಷಾಗೆ ಢಿಕ್ಕಿ ಹೊಡೆದೇ ಬಿಟ್ಟಿತು. ರಿಕ್ಷಾ ರಸ್ತೆಗೆ ಬೋರಲಾಗಿ ಮಗುಚಿತು. ರಿಕ್ಷಾದಲ್ಲಿ ಸಹಪ್ರಯಾಣಿಕೆಯಾಗಿದ್ದ ನತದೃಷ್ಟ ಉಪನ್ಯಾಸಕಿ ಭಾರತಿ (27) ಅವರು ಜೀವಚ್ಛವವಾಗಿ ಇಂದಿಗೂ ನರಳುವಂತಾಯಿತು.
ಕನಸುಕಂಗಳ, ಸಾಧನೆಯ ಹಂಬಲದ, ಕಲಿಯುವ ತುಡಿತದ ಈಕೆ ತನ್ನ ಸ್ವಂತ ಸಂಪಾದನೆಯಿಂದ ಒಂದಷ್ಟು ಆದಾಯ ಬಂದರೆ ಚಂದದ ಸೂರು ಕಟ್ಟಬೇಕು. ಮನೆಯ ವ್ಯವಸ್ಥೆ ಸರಿ ಮಾಡಬೇಕು. ಕಲಿಯಲು ಅಮ್ಮ ಮಾಡಿಟ್ಟ ಅಷ್ಟೂ ಸಾಲ ತೀರಿಸಬೇಕು. ಮನೆಯವರ ಬದುಕಿಗೆ ಆಧಾರವಾಗಬೇಕು. ತಮ್ಮ, ತಂಗಿಯ ಓದಿಗೆ ನೆರವಾಗಬೇಕು... ಹೀಗೆಲ್ಲ ಆಶಾಗೋಪುರ ಕಟ್ಟಿದ್ದರು. ಆದರೆ ವಿಯ ಆಟವೇ ಬೇರೆ ಆಗಿತ್ತು. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಅರ್ಧ ದೇಹದ ಮೇಲಿನ ಸ್ವಾೀನ ಕಳೆದುಕೊಂಡ ಭಾರತಿ ಅವರು ಲಕ್ಷಾಂತರ ರೂ. ಖರ್ಚು ಮಾಡಿದರೂ ಇಂದಿಗೂ ಮಲಗಿದಲ್ಲಿಯೇ ಇದ್ದಾರೆ.
ಕುರುಂಬಿಲ ಲಕ್ಷ್ಮೆ ಅವರ ಏಳು ಮಕ್ಕಳ ಪೈಕಿ ಭಾರತಿ ಮೊದಲನೆಯವರು. ತಂದೆ ತೀರಿ 10 ವರ್ಷವಾಯಿತು. ಭಾರತಿ ಅವರು ಮನೆಯ ಕಷ್ಟದ ದಿನಗಳಲ್ಲಿಯೇ ಎಂಕಾಂ ಪದವಿ ಮಾಡಿದರು. ಉಜಿರೆ ಅನುಗ್ರಹ ಕಾಲೇಜಿಗೆ ಉಪನ್ಯಾಸಕಿಯಾಗಿ ಸೇರಿ ಬಳಿಕ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅರೆಕಾಲಿಕ ಅತಿಥಿ ಉಪನ್ಯಾಸಕಿಯಾಗಿ ಸೇರಿದರು. ವಾಮದಪದವು ಪದವಿ ಪೂರ್ವ ಕಾಲೇಜಿನಲ್ಲಿಯೂ ಅತಿಥಿ ಉಪನ್ಯಾಸಕಿಯಾಗಿ ಒಂದಷ್ಟು ಸಂಪಾದನೆ ಶುರು ಆಯಿತು ಎನ್ನುವಷ್ಟರಲ್ಲಿ ವಿ ಅಟಕಾಯಿಸಿಕೊಂಡಿತು.
‘ ಇನ್ನು ಮಾರಲು ಎಂದೇನೂ ಉಳಿದಿಲ್ಲ. ಬಹುಶಃ ಇಂತಹ ಪರಿಸ್ಥಿತಿ ಬರುತ್ತದೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಮಗಳು ಕಲಿತಳು, ಮನೆಗೆ ಆಧಾರವಾದಳು ಎಂದೇ ಭಾವಿಸಿದ್ದೆವು. ನಮ್ಮ ಕನಸಿನ ಸೌಧ ನುಚ್ಚುನೂರಾಯಿತು. ವಿ ವಾಹನದ ರೂಪದಲ್ಲಿ ನಮ್ಮನ್ನು ಅಟ್ಟಾಡಿಸಿಕೊಂಡು ಬಂತು. ಇಷ್ಟಕ್ಕೂ ನಮಗೆ ಇರುವುದು ತುಂಡು ಭೂಮಿ. ಉಳಿದುಕೊಂಡ ಮನೆ ಮಾಡಿಗೆ ಹಂಚು ಹಾಕಲು ಉಪಯೋಗಿಸಿದ್ದು ಬಿದಿರಿನ ಗಳ. ಅದೂ ಹಳತಾಗುತ್ತಿದೆ. ಮಣ್ಣಿನ ನೆಲ. ಸಿಮೆಂಟ್ ಕಂಡೇ ಇಲ್ಲ. ಮನೆ ದುರಸ್ತಿ ಮಾಡಿಸುವುದೋ, ಮಗಳ ಆರೋಗ್ಯಕ್ಕಾಗಿ ಖರ್ಚು ಮಾಡುವುದೋ ಎಂಬ ಒದ್ದಾಟದಲ್ಲಿರುವಾಗಲೇ ಬ್ಯಾಂಕಿನವರು ಕಲಿಯಲು ಮಾಡಿದ ಸಾಲ ತೀರಿಸಿ ಎಂದು ಬೆನ್ನತ್ತುತ್ತಾರೆ. ಮಗಳು ದೇಹದ ಸ್ವಾೀನ ಕಳೆದುಕೊಂಡು ಮಲಗಿದಲ್ಲಿಯೇ ಇದ್ದಾಳೆ. ದುಡಿಯುವ ತಾಕತ್ತನ್ನು ದೇವರು ತೆಗೆದು ಬಿಟ್ಟಿದ್ದಾನೆ. ಮಗಳಲ್ಲಿ ಒಂದಷ್ಟು ಚೈತನ್ಯ ತುಂಬಿದರೆ, ಹೇಗಾದರೂ ಮಾಡಿ ಆಕೆ ಕುಳಿತಲ್ಲಿಯೇ ಮಾಡುವ ಉದ್ಯೋಗಕ್ಕೆ ಹೋದರೆ ಆಗ ಖಂಡಿತ ನಿಮ್ಮ ಸಾಲ ತೀರಿಸುತ್ತೇನೆ. ದಯವಿಟ್ಟು ಸಮಯ ಕೊಡಿ ಎಂದರೆ ಬ್ಯಾಂಕಿನವರಿಗೆ ದಾಖಲೆ ಮಾತ್ರ ಬೇಕಾದುದು, ಮಿಡಿವ ಹೃದಯವಲ್ಲ. ಕರುಳು ಹಿಂಡುವ ಕಂಬನಿಯ ಧಾರೆಯಲ್ಲ’ ಎಂಬುದು ಆಕೆಯ ಅಮ್ಮನ ಗೋಳು.
ಮೂರು ಎಕರೆ ಗುಡ್ಡ ಎಂಬ ಜಾಗ ಇದೆ. ಅದರಲ್ಲಿ ನಾಲ್ಕಾರು ತೆಂಗಿನ ಮರಗಳು ಬಿಟ್ಟರೆ ಬೇರೇನೂ ಸಂಪಾದನೆಯಿಲ್ಲ. ತಂಗಿ ರೇವತಿ ಬೆಂಗಳೂರಿನಲ್ಲಿ ನರ್ಸ್ ಆಗಿದ್ದಾರೆ. ಇಬ್ಬರು ತಮ್ಮಂದಿರು , ಮೂವರು ತಂಗಿಯಂದಿರು ಕಲಿಯುತ್ತಿದ್ದಾರೆ. ಅಮ್ಮ ಬೀಡಿ ಕಟ್ಟಿ ಪುಡಿಕಾಸು ಸಂಪಾದಿಸುತ್ತಾರೆ. ಆದರೆ ಅದು ಯಾವುದಕ್ಕೂ ಸಾಲದು. ಸಾಲದ ಶೂಲೆ ಇರಿಯುತ್ತಿದೆ. ಆಕೆಯದೇನೂ ವಾಸಿಯಾಗದ ಕಾಯಿಲೆಯಲ್ಲ,. ಅಂತಹ ದೊಡ್ಡ ಸಮಸ್ಯೆಯೂ ಅಲ್ಲ. ಒಂದಷ್ಟು ಹೃದಯವಂತರು ಮನಸ್ಸು ಮಾಡಿದರೆ ಈಕೆಗೆ ಚಿಕಿತ್ಸೆ ಕೊಡಿಸಬಹುದು. ಹಾಗಾದಾಗ ಈಕೆ ಗಾಲಿಕುರ್ಚಿಯಲ್ಲಾದರೂ ಹೋದಾರು. ಹಾಗೆ ಹೋದರೆ ತನ್ನ ಬದುಕನ್ನು ತಾನು ನಡೆಸಿಯಾರು. ಕನಸುಗಳು ಕರಗಿ ಜಾರದಂತೆ ಈಕೆಯ ಆಸೆಯ ವೇದಿಕೆಗೆ ಮೆಟ್ಟಿಲಾಗಲು ಸಹಾಯ ಹಸ್ತ ಬೇಕಿದೆ.
ವಿಳಾಸ: ಭಾರತಿ. ಉಬರಡ್ಕ ಮನೆ. ಗೇರುಕಟ್ಟೆ ಅಂಚೆ. ಬೆಳ್ತಂಗಡಿ ತಾಲೂಕು. 02142200021971 ಗೇರುಕಟ್ಟೆ ಸಿಂಡಿಕೇಟ್ ಬ್ಯಾಂಕ್.