ಇದು ರಾಜ್ಯದ ಮೊದಲ ಮುಖ್ಯಮಂತ್ರಿಯ ಸ್ವಗ್ರಾಮದ ಪ್ರೌಢಶಾಲಾ ದುರ್ಗತಿ


ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕೆಜಿಎಪ್ಗೆ ಸಮೀಪದ ಕ್ಯಾಸಂಬಳ್ಳಿ, ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಚಂಗಲ್ರಾಯರೆಡ್ಡಿಯವರ ಹುಟ್ಟೂರು.
ಇಲ್ಲೊಂದು ಸರ್ಕಾರಿ ಪ್ರಾಥಮಿಕ ಶಾಲೆಯಿತ್ತು. ಪ್ರೌಢಶಾಲೆಗಾಗಿ ಸುತ್ತಮುತ್ತಲಿನ ಹಳ್ಳಿಗಳ ಮಕ್ಕಳು ಸುಮಾರು 40 ಕಿ.ಮೀ. ಕ್ರಮಿಸಬೇಕಾಗಿತ್ತು. ಹೀಗಾಗಿ ಶೇ.90ರಷ್ಟು ಮಕ್ಕಳು ಪ್ರಾಥಮಿಕ ಶಾಲೆಗೆ ತಮ್ಮ ವಿದ್ಯಾಭ್ಯಾಸ ಮುಗಿಸುತ್ತಿದ್ದರು. ಗ್ರಾಮಸ್ಥರ ಒತ್ತಾಯದ ಮೆಲೆ 1968ರಲ್ಲಿ ಗ್ರಾಮಕ್ಕೆ ಪ್ರೌಢಶಾಲೆ ಬಂತು. ಕಟ್ಟಡ ಇಲ್ಲದ ಕಾರಣ ಪ್ರಾಥಮಿಕ ಶಾಲಾಕಟ್ಟಡದಲ್ಲಿಯೇ ಪ್ರೌಢಶಾಲೆಯನ್ನು ಆರಂಭಿಸಲಾಯಿತು. ಕೆಲವೇ ಮಕ್ಕಳಿಂದ ಪ್ರಾರಂಭವಾದ ಈ ಶಾಲೆ, ಕ್ರಮೇಣ ಹೆಚ್ಚು ಹೆಚ್ಚು ವಿದ್ಯಾರ್ಥಿಗಳನ್ನು ಆಕರ್ಷಿಸಲಾರಂಭಿಸಿತು. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಾ ಬಂತು. ಆದರೆ ಕೊಠಡಿಗಳ ಸಂಖ್ಯೆ ಮಾತ್ರ ಹೆಚ್ಚಾಗಲಿಲ್ಲ.
ಪ್ರೌಢಶಾಲೆಗೆ ಪ್ರತ್ಯೇಕ ಕಟ್ಟಡ ಮಂಜೂರಾಗಲಿಲ್ಲ. ಕಟ್ಟಡಕ್ಕೆ ಬೇಕಾದ ನಿವೇಶನ ಇಲ್ಲದ ಕಾರಣ ಪ್ರೌಢಶಾಲೆಗೆ ಪ್ರತ್ಯೇಕ ಕಟ್ಟಡ ನಿರ್ಮಿಸಲು ಸರ್ಕಾರ ಮುಂದೆ ಬರಲೇ ಇಲ್ಲ. 1990ರ ದಶಕದಲ್ಲಿ ಕ್ಯಾಸಂಬಳ್ಳಿ ಹೊರವಲಯದಲ್ಲಿ ಸುಮಾರು 2 ಎಕ್ರೆ ಭೂಮಿಯನ್ನು ಪ್ರೌಢಶಾಲೆಗೆಂದು ನಿಗದಿ ಮಾಡಲಾಯಿತು. ಆದರೆ, ಅಂದಿನ ರಾಜಕೀಯ ಮುಖಂಡರು ತಮಗೆ ಶಾಲೆಗಿಂತ ವಿದ್ಯುತ್ಶಕ್ತಿ ಸಬ್ಸ್ಟೇಷನ್ ಮುಖ್ಯ ಎಂದು ಹೇಳಿ ಆ ಸ್ಥಳವನ್ನು ಕರ್ನಾಟಕ ವಿದ್ಯುತ್ ಶಕ್ತಿ ಮಂಡಳಿಗೆ ಸ್ಥಳಾಂತರಿಸಿದರು. ಅಂದಿನಿಂದ ಇಂದಿನವರೆಗೆ ಪ್ರೌಢಶಾಲೆಗೆ ನಿವೇಶನ ಸಿಗಲೇ ಇಲ್ಲ. ಸ್ವಂತ ಕಟ್ಟಡ ನಿರ್ಮಾಣವಾಗಲೇ ಇಲ್ಲ.
ಈಗ ಸುತ್ತಮುತ್ತಲಿನ ಗ್ರಾಮಗಳಿಂದ ಸುಮಾರು 800 ಮಕ್ಕಳು ಶಾಲೆಗೆ ಬರುತ್ತಿದ್ದಾರೆ. ಪ್ರತಿ ತರಗತಿಯಲ್ಲೂ ನಾಲ್ಕು ವಿಭಾಗಗಳಾಗಿವೆ. ಆದರೆ ಮಕ್ಕಳಿಗೆ ಕುಳಿತುಕೊಳ್ಳಲು ಕೊಠಡಿಗಳೇ ಇಲ್ಲ. ಮರದ ಕೆಳಗೆ, ಚಾವಣಿ ಮೇಲೆ ಶಿಕ್ಷಕರು ತರಗತಿಗಳನ್ನು ನಡೆಸುವ ದೃಶ್ಯ ಈ ಶಾಲೆಯಲ್ಲಿ ಸರ್ವೆಸಾಮಾನ್ಯ. 2004ರಲ್ಲಿ ಮಳೆಗೆ ಶಾಲಾ ಕೊಠಡಿ ಶಿಥಿಲಗೊಂಡಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಜಿಲ್ಲಾ ಪಂಚಾಯಿತಿ ವತಿಯಿಂದ ನಾಲ್ಕು ಕೊಠಡಿಗಳನ್ನು ನಿರ್ಮಿಸಲಾಯಿತು. ಆದರೆ ಆ ಕೊಠಡಿಗಳು ಮಳೆ ಬಂದರೆ ಸೋರುತ್ತವೆ. ಗಾಳಿ ಮತ್ತು ಬೆಳಕು ಇಲ್ಲದಂತಹ ಕೊಠಡಿಗಳಲ್ಲಿ ಸೊಳ್ಳೆಗಳು ತುಂಬಿ ಕುಳಿತುಕೊಳ್ಳಲು ಯೋಗ್ಯವಲ್ಲದ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಬೇರೆ ವಿಯಿಲ್ಲದೆ ತರಗತಿಗಳನ್ನು ಅಲ್ಲೆ ನಡೆಸಲಾಗುತ್ತಿದೆ. 800 ಮಂದಿ ಮಕ್ಕಳಿರುವ ಈ ಶಾಲೆಗೆ ಒಂದೇ ಒಂದು ಶೌಚಾಲಯವೂ ಇಲ್ಲ. ಹೀಗಾಗಿ, ಸುಮಾರು 300 ಹೆಣ್ಣು ಮಕ್ಕಳು ಬಯಲಿನಲ್ಲೆ ಶೌಚಕ್ಕೆ ಹೋಗುವ ಅನಿವಾರ್ಯತೆ ಎದುರಾಗಿದೆ. ರಾಜ್ಯದ ಪ್ರಥಮ ಮುಖ್ಯಮಂತ್ರಿಯ ತವರೂರಿನ ಶಾಲೆಯ ದುರ್ಗತಿಯಿದು.