ಸಪ್ತಪದಿಗೆ ಹೊಸ ಹೆಜ್ಜೆಯತ್ತ ವಧುಗಳು


ಸುಳ್ಯದ ಕಶ್ಯಪ್ ಯುವ ಬ್ರಾಹ್ಮಣ ವೇದಿಕೆ ಹಾಕಿಕೊಂಡ ಸಪ್ತಪದಿ ಹಾದಿಯಲ್ಲಿ ಹೊಸ ಹೆಜ್ಜೆಗೆ ಉತ್ತರ ಭಾರತ ಹಾಗೂ ಕರ್ನಾಟಕದ ವಧುಗಳು ಹೆಜ್ಜೆ ಹಾಕಲು ಮನ ಮಾಡಿದ್ದಾರೆ.
ಬ್ರಾಹ್ಮಣ ಯುವಕರಿಗೆ ಅದರಲ್ಲೂ ಪುರೋಹಿತ, ಕೃಷಿಕ, ಅಡುಗೆ, ವ್ಯಾಪಾರಸ್ಥರಿಗೆ ಹುಡುಗಿ ಕೊಡಲು ಹಿಂದೇಟು ಹಾಕುತ್ತಿದ್ದು, ಸಾವಿರಾರು ಮಂದಿ ವಿವಾಹವಾಗದೆ ಉಳಿದಿದ್ದಾರೆ. ಈ ಜ್ವಲಂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸುಳ್ಯದ ಕಶ್ಯಪ ಯುವ ಬ್ರಾಹ್ಮಣ ವೇದಿಕೆ ಮುಂದಾಗಿ ಕಾರ್ಯಪ್ರವೃತ್ತವಾಗಿತ್ತು. ಈ ನಿಟ್ಟಿನಲ್ಲಿ ಸಮಾಲೋಚನಾ ಸಭೆ ವಧು-ವರರ ನೋಂದಣಿ ಮಾಡಿಕೊಳ್ಳಲಾಗಿತ್ತು. ಸುಮಾರು 400ಕ್ಕೂ ಹೆಚ್ಚು ಮಂದಿ ಯುವಕರು ವಿವಾಹಾಪೇಕ್ಷೆ ಬಯಸಿ ವೇದಿಕೆಗೆ ಅರ್ಜಿ ಹಾಕಿದ್ದರು.
ಕಾಶ್ಮೀರಿ ಬ್ರಾಹ್ಮಣ ಯುವತಿಯರು, ದೆಹಲಿ, ಹರಿದ್ವಾರ, ಡೆಹರಾಡೂನ್ ಮೊದಲಾದೆಡೆಯಿರುವ ಯುವತಿಯರತ್ತ ಹುಡುಕಾಟ ಆರಂಭಿಸಲಾಯಿತು. ಅಲ್ಲಿಯ ಕೆಲವು ಸಂಘಟನೆಗಳ ಜೊತೆ ಮಾತುಕತೆ ನಡೆಯಿತು. ಹಲವಾರು ಮಂದಿ ಮಾರ್ಗದರ್ಶನ ನೀಡಿದರು. ಉತ್ತರ ಭಾರತದ ಒಂದು ಸಂಘಟನೆ ಇಲ್ಲಿನ ವೇದಿಕೆಯೊಂದಿಗೆ ಸ್ಪಂದಿಸಿ 10 ಯವತಿಯರನ್ನು ವಿವಾಹ ಮಾಡಿಕೊಡಲು ಮುಂದೆ ಬಂದಿದೆ. ಮುಂದಿನ ಹಂತದಲ್ಲಿ ಇಲ್ಲಿನ 10 ಯುವಕರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಮುಖಾಮುಖಿ ಮಾಡಿಸಲಾಗುವುದು ನಂತರದ ದಿನಗಳಲ್ಲಿ ಮುಂದಿನ ಹೆಜ್ಜೆ .. ..
ಇತ್ತ ಕರ್ನಾಟಕದ ಯುವತಿಯರು ಜಾತಿ-ಬೇಧ ಮರೆತು ವಿಶಾಲ ಮನೋಭಾವನೆ ವ್ಯಕ್ತಪಡಿಸಿ ಬ್ರಾಹ್ಮಣ ಯುವಕರನ್ನು ವಿವಾಹವಾಗಲು ಮುಂದೆ ಬಂದಿದ್ದಾರೆ. ಸಮಾವೇಶದಲ್ಲಿ ಭಾಗವಹಿಸಲು ಮಂಜೇಶ್ವರದಿಂದ ಯುವತಿಯೊಬ್ಬರು ಬಂದಿದ್ದರು. ವರದಕ್ಷಿಣೆ, ವಿವಾಹಕ್ಕೆ ತಗಲುವ ವಿಪರೀತ ಖರ್ಚು ವೆಚ್ಚ ಭರಿಸಲು ಸಾಧ್ಯವಿಲ್ಲ. ಸರಳ ವಿವಾಹದಲ್ಲಿ ಮದುವೆ ಮಾಡಿಕೊಳ್ಳುವುದಾದರೆ ನಾನು ಸಿದ್ಧ ಎಂದಳು ಆ ಯುವತಿ.