ಬೆಂಗಳೂರು ಐಐಎಂ ವಿದ್ಯಾರ್ಥಿಗಳು ವಿಶ್ವದಲ್ಲೇ ನಂ.1


ವಿಶ್ವದ ಶ್ರೇಷ್ಠ 200 ವಿಶ್ವವಿದ್ಯಾಲಯಗಳಲ್ಲಿ ಭಾರತದ ಒಂದೂ ವಿ.ವಿ.ಗೆ ಸ್ಥಾನವಿಲ್ಲ ಎಂಬ ನಿರಾಸೆಯ ಸುದ್ದಿಯ ಬೆನ್ನಲ್ಲೇ ಭಾರತೀಯರು ಅದರಲ್ಲೂ ಬೆಂಗಳೂರು ಹೆಮ್ಮೆ ಪಡುವಂತಹ ಸುದ್ದಿ ಬಂದಿದೆ. ಬೆಂಗಳೂರಿನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಅಫ್ ಮ್ಯಾನೇಜ್ಮೆಂಟ್(ಐಐಎಂ)ನ ವಿದ್ಯಾರ್ಥಿಗಳು ವಿಶ್ವದಲ್ಲೇ ನಂ.1 ಎಂದು ಸಮೀಕ್ಷೆಯೊಂದು ಹೇಳಿದೆ. ಈ ಮೂಲಕ ಹಾರ್ವರ್ಡ್, ಸ್ಟಾನ್ಫೋರ್ಡ್, ಎಂಐಟಿಯಂತಹ ವಿಶ್ವಶ್ರೇಷ್ಠ ವಿದ್ಯಾಲಯಗಳ ವಿದ್ಯಾರ್ಥಿಗಳನ್ನೂ ಐಐಎಂ (ಬಿ) ವಿದ್ಯಾರ್ಥಿಗಳು ಹಿಂದಿಕ್ಕಿದ್ದಾರೆ.
'ಕ್ಯುಎಸ್ ಗ್ಲೋಬಲ್ 200 ಬ್ಯುಸಿನೆಸ್ ಸ್ಕೂಲ್' ವರದಿಯ ಅನ್ವಯ, ವಿಶ್ವದ ಶ್ರೇಷ್ಠ ಬ್ಯುಸಿನೆಸ್ ಸ್ಕೂಲ್ಗಳಲ್ಲಿ ಪ್ರವೇಶ ಪಡೆಯಲು ನಡೆಸಲಾಗುವ ಜಿಮ್ಯಾಟ್ ಪ್ರವೇಶ ಪರೀಕ್ಷೆಯಲ್ಲಿ ಬೆಂಗಳೂರು ಐಐಎಂನ ವಿದ್ಯಾರ್ಥಿಗಳು ಸರಾಸರಿ 780 ಅಂಕ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ನಂ.1 ಸ್ಥಾನ ಪಡೆದುಕೊಂಡಿದ್ದಾರೆ. ಜಿಮ್ಯಾಟ್ ಪ್ರವೇಶ ಪರೀಕ್ಷೆಯಲ್ಲಿ ಸ್ಟಾನ್ಫೋರ್ಡ್ ವಿದ್ಯಾರ್ಥಿಗಳ ಸರಾಸರಿ ಅಂಕ 730ರಷ್ಟಿದ್ದರೆ, ಐಐಎಂ ಅಹಮದಾಬಾದ್ನ ವಿದ್ಯಾರ್ಥಿಗಳ ಸರಾಸರಿ ಅಂಕ 767 ಇದೆ. ಅಂದರೆ ಈ ಪಟ್ಟಿಯಲ್ಲಿ ಮೊದಲ ಎರಡೂ ಸ್ಥಾನ ಭಾರತದ ಐಐಎಂಗಳದ್ದು.
ಭಾರತದ ಎರಡೂ ಐಐಎಂಗಳಲ್ಲಿ ಸೇರ್ಪಡೆಯಾಗಿರುವ ವಿದ್ಯಾರ್ಥಿಗಳು ಕೇವಲ 2 ವರ್ಷದ ಉದ್ಯಮದ ಅನುಭವ ಹೊಂದಿದ್ದಾರೆ. ಎಂಬಿಎ ಪೂರ್ಣಗೊಂಡ ಬಳಿಕ ಸಣ್ಣಮಟ್ಟದ ಕೆಲಸಕ್ಕೆ ಸೇರುವ ಬದಲು ಅವರೆಲ್ಲಾ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವುದೇ, ಐಐಎಂ (ಬಿ)ನಲ್ಲಿ ಉತ್ತಮ ವಿದ್ಯಾರ್ಥಿಗಳನ್ನು ಕಾಣಲು ಅನುವು ಮಾಡಿಕೊಟ್ಟಿದೆ. ಜೊತೆಗೆ ಬೆಂಗಳೂರು ಐಐಎಂ, ಮೆಲ್ಬರ್ನ್ ಬ್ಯುಸಿನೆಸ್ ಸ್ಕೂಲ್ ಅನ್ನೂ ಹಿಂದಿಕ್ಕಿ ಮುನ್ನಡೆದಿದೆ ಎಂದು ಸಮೀಕ್ಷೆ ಹೇಳಿದೆ.