ಮಾರ್ಜಾಲಕ್ಕಿಲ್ಲಿ ನೈವೇದ್ಯ


ಒಳ್ಳೆಯ ಕೆಲಸಕ್ಕೆ ಹೋಗುವಾಗ ಬೆಕ್ಕು ಅಡ್ಡ ಬಂದರೆ ಅಪಶಕುನವೆಂದು ನಂಬುವ ಜನರೆ ಹೆಚ್ಚು, ಆದರೆ ಶಹಾಪುರ ತಾಲೂಕಿನ ಹಯ್ಯಳ (ಬಿ) ಗ್ರಾಮದಲ್ಲಿ ಹಯ್ಯಳಲಿಂಗೇಶ್ವರ ದೇಗುಲಕ್ಕೆ ಬರುವ ಭಕ್ತರು ಬೆಕ್ಕಿಗೆ ಹಾಲು ಹಾಗೂ ತುಪ್ಪವನ್ನು ನೈವೇದ್ಯವಾಗಿ ಸಲ್ಲಿಸುತ್ತಾರೆ. ಈ ಪದ್ಧತಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಹಯ್ಯಳಲಿಂಗೇಶ್ವರ ಜಾತ್ರೆ ಸಂಕ್ರಾಂತಿ ಹಾಗೂ ನೂಲಹುಣ್ಣಿಮೆ ವೇಳೆ ನಡೆಯುತ್ತದೆ. ಆಂಧ್ರಪ್ರದೇಶ, ಮಹಾರಾಷ್ಟ್ರದಿಂದಲೂ ದೇಗುಲಕ್ಕೆ ಭಕ್ತರು ಬರುತ್ತಾರೆ. ತಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ಹಿತ್ತಾಳೆ ಗಂಟೆ, ಬೆಳ್ಳಿ ಕುದುರೆ, ಬೆಳ್ಳಿ ತೊಟ್ಟಿಲುಗಳ ಹರಕೆ ಹೊತ್ತುಕೊಳ್ಳುತ್ತಾರೆ. ಹರಕೆಯಾಗಿ ತಂದ ಈ ಪದಾರ್ಥಗಳನ್ನು ದೇವಾಲಯದಲ್ಲಿ ಕಟ್ಟುವ ಮೂಲಕ ದೇವರಿಗೆ ಹರಕೆ ತೀರಿಸುತ್ತಾರೆ.
ಹಯ್ಯಳಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಸುಮಾರು ನೂರಕ್ಕಿಂತ ಹೆಚ್ಚು ಬೆಕ್ಕುಗಳಿವೆ. ಇಲ್ಲಿಗೆ ಬರುವ ಭಕ್ತರು ದೇವರಿಗೆ ತಂದ ನೈವೇದ್ಯ, ಹಾಲು, ತುಪ್ಪವನ್ನು ತಪ್ಪದೆ ಈ ಬೆಕ್ಕುಗಳಿಗೆ ಹಾಕುತ್ತಾರೆ. ಭಕ್ತರು ತರುವ ಹಾಲನ್ನು ಬೆಕ್ಕುಗಳಿಗೆ ಹಾಕಲು ಕಲ್ಲಿನ ತಟ್ಟೆ(ಲೋಟ) ಕೆತ್ತಲಾಗಿದೆ. ಬೆಕ್ಕುಗಳು ದೇವಾಲಯದ ಆವರಣದಲ್ಲೇ ಓಡಾಡಿಕೊಂಡಿರುತ್ತವೆ.
"ನಮ್ಮ ತಾತ, ಮುತ್ತಾತನ ಕಾಲದಿಂದಲೂ ಬೆಕ್ಕುಗಳು ದೇವಾಲಯದ ಆವರಣದಲ್ಲಿವೆ ಎಂದು ನಮ್ಮ ತಂದೆ ಹೇಳುತ್ತಾರೆ. ಈ ಬೆಕ್ಕುಗಳನ್ನು ನಾವು ಅಪಶಕುನವೆಂದು ತಿಳಿದಿಲ್ಲ. ಮದುವೆ ಸಮಯದಲ್ಲಿ ಕಟ್ಟೆ ಮೇಲೆ, ಕಂಬಳಿಯಲ್ಲಿ ಬಂದು ಕುಳಿತುಕೊಳ್ಳುತ್ತವೆ. ನಾವು ಓಡಿಸುವುದಿಲ್ಲ. ದೇವರ ದರ್ಶನಕ್ಕೆ ಬರುವ ಜನರು ದೇವರಿಗೆ ನೈವೇದ್ಯ ತೋರಿಸಿದ ನಂತರ ಇಲ್ಲಿರುವ ಬೆಕ್ಕುಗಳಿಗೆ ತಾವು ತಂದ ಹಾಲು, ತುಪ್ಪ ಹಾಕುತ್ತಾರೆ'' ಎನ್ನುತ್ತಾರೆ ದೇವಾಲಯದ ಪೂಜಾರಿ.