ಕಲುಷಿತವಾಗುತ್ತಿದೆ ಡೋಣಿ ನದಿ

ತಾಳಿಕೋಟೆ ಪಟ್ಟಣವನ್ನು ಅರ್ಧ ಸುತ್ತುವರಿದ, ವಿಜಯನಗರ ಸಾಮ್ರಾಜ್ಯದಲ್ಲಿ ವೈರಿ ಪಡೆಯ ಸೈನಿಕರು ತಾಳಿಕೋಟೆ ಪಟ್ಟಣ ಪ್ರವೇಶಿಸದಂತೆ ತಡೆಯೊಡ್ಡುತ್ತಿದ್ದ ಡೋಣಿ ನದಿ ನೀರಿಲ್ಲದೇ ಬಣಗುಡುತ್ತಿದೆ. ಜೊತೆಗೆ ಕಸ, ಕಡ್ಡಿ ಬೆಳೆಯುತ್ತಿದ್ದು ಕಲುಷಿತಗೊಳ್ಳುತ್ತಿದೆ.
ನೀರಿಲ್ಲದೆ ಬಣಗುಡುತ್ತಿರುವ ಡೋಣಿ ನದಿಯಲ್ಲಿ ಸಾರ್ವಜನಿಕರು ಕಟ್ಟಡದ ಮಣ್ಣು, ಕಲ್ಲು, ಚಿಪ್ಪುಗಳನ್ನು ಎಸೆಯುವ ಜೊತೆಗೆ ಹಳೆಯ ಬಟ್ಟೆಗಳ ಗಂಟುಗಳನ್ನು ಎಸೆದು ಹೋಗುತ್ತಿದ್ದಾರೆ. ಇದರಿಂದಾಗಿ ನದಿಯಲ್ಲಿ ಹೂಳು ತುಂಬುತ್ತಿದೆ. ನದಿಯಲ್ಲಿ ಎಲ್ಲೆಂದರಲ್ಲಿ ಕಸ, ಕಡ್ಡಿ, ಮುಳ್ಳಿನ ಗಿಡಗಳು ಬೆಳೆದಿವೆ. ಇರುವ ಅಲ್ಪಸ್ವಲ್ಪ ನೀರು ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ. ಇದರಿಂದಾಗಿ ನದಿಯ ಮೇಲಿನ ಸೇತುವೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ನಡೆದಾಡುವಂತಾಗಿದೆ.
ನದಿಯಲ್ಲಿ ಹೂಳು ತುಂಬಿದ್ದರಿಂದ ಮಳೆಗಾಲದಲ್ಲಿ ನದಿ ತುಂಬಿ ಪ್ರವಾಹ ಉಂಟಾಗಿ, ಅಕ್ಕಪಕ್ಕದ ರೈತರ ಜಮೀನುಗಳಿಗೆ ನೀರು ನುಗ್ಗುತ್ತದೆ. ಇದರಿಂದಾಗಿ ಪಕ್ಕದ ಜಮೀನುಗಳಲ್ಲಿನ ಬೆಳೆಗಳಿಗೆ ಹಾನಿ ಉಂಟಾಗುತ್ತಿದೆ.
ತಾಳಿಕೋಟೆ ಪಟ್ಟಣಕ್ಕೆ ಸಮೀಪದ ಹಡಗಿನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಡೋಣಿ ನದಿಯ ಕೆಳಮಟ್ಟದ ಸೇತುವೆ ಮೇಲೆ ನಿತ್ಯ ದ್ವಿಚಕ್ರ ವಾಹನ, ಟೆಂಪೋ, ಟ್ರ್ಯಾಕ್ಸ್ ಮತ್ತು ಬಸ್ಗಳು ಸಂಚರಿಸುತ್ತವೆ. ತಾಳಿಕೋಟೆ ಪಟ್ಟಣಕ್ಕೆ ಸರಪಳಿ ಕೊಂಡಿಯಂತಿರುವ ಹಡಗಿನಾಳ, ಹರನಾಳ, ಕಲ್ಲದೇವನಳ್ಳಿ, ಮೂಕೀಹಾಳ, ನಾಗೂರ, ಬಪ್ಪರಗಿ, ಶಿವಪುರ, ಚವನಬಾವಿ, ಅಡವಿ ಸೋಮನಾಳ, ಹಗರಗುಂಡ, ದೇವರ ಹುಲಗಬಾಳ ಈ ಗ್ರಾಮಗಳ ರೈತರು, ಶಾಲಾ ಮಕ್ಕಳು ಇದೇ ರಸ್ತೆಯಲ್ಲೇ ಸಂಚರಿಸುತ್ತಾರೆ. ನದಿಯಲ್ಲಿ ಕಲುಷಿತ ನೀರಿನಿಂದಾಗಿ ಹಬ್ಬುವ ದುರ್ನಾತದಿಂದಾಗಿ ಪ್ರಯಾಣಿಕರು, ಸಾರ್ವಜನಿಕರು, ರೈತರು ನರಕಯಾತನೆ ಅನುಭವಿಸುವಂತಾಗಿದೆ.
ಡೋಣಿ ನದಿಯಲ್ಲಿನ ಸೇತುವೆಯ ಇಕ್ಕೆಲಗಳಲ್ಲಿ ಮತ್ತು ನದಿಯಲ್ಲಿ ಮಾಂಸ ಮಾರಾಟಗಾರರು ಕೋಳಿಗಳ ಪುಚ್ಚ ಎಸೆಯುತ್ತಾರೆ. ಪಟ್ಟಣದಲ್ಲಿ ಸತ್ತ ಹಂದಿ, ನಾಯಿ, ದನಕರುಗಳನ್ನು ತಂದು ಇಲ್ಲಿ ಬಿಸಾಕಲಾಗುತ್ತದೆ. ಅಲ್ಲದೆ ಪಟ್ಟಣದ ನಿವಾಸಿಗಳು ಹಳೆ ಬಟ್ಟೆ ಗಂಟು, ಇತರ ತ್ಯಾಜ್ಯ ವಸ್ತುಗಳನ್ನು ಎಸೆಯುತ್ತಿದ್ದಾರೆ. ಇದರಿಂದಾಗಿ ನದಿ ನೀರಲ್ಲದೆ, ನದಿಯ ಸುತ್ತಮುತ್ತಲಿನ ಪ್ರದೇಶಗಳು ಕೂಡ ಕಲುಷಿತಗೊಂಡಿವೆ. ದುರ್ವಾಸನೆ, ಸೊಳ್ಳೆಗಳ ಕಾಟದಿಂದ ಜನ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ.

ಹೇರೂರು ಮಂಜುನಾಥ ಭಟ್ಟ ಕಾಂಬೋಡಿಯಾಕ್ಕೆ


ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕು ಹೇರೂರಿನ ಮಂಜುನಾಥ ಭಟ್ಟ ಜ.4 ರಿಂದ 14ರ ವರೆಗೆ ಕಾಂಬೋಡಿಯಾದಲ್ಲಿ ನಡೆಯುತ್ತಿರುವ "ಏತ್ ಇಂಟರ್ನ್ಯಾಷನಲ್ ಇಂಟೆನ್ಸಿವ್ ಸಂಸ್ಕೃತ ಸಮರ ರಿಟ್ರೀಟ್-2013" ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಈ ಸಮ್ಮೇಳನದಲ್ಲಿ ಅಮೇರಿಕ, ಜರ್ಮನಿ, ಜಪಾನ್ ಮೊದಲಾದ ದೇಶಗಳಿಂದ ಆಗಮಿಸುವ ವಿದ್ವಾಂಸರು ಪಾಲ್ಗೊಂಡಿದ್ದಾರೆ. ವಿಶ್ವದ ಅತ್ಯಂತ ಎತ್ತರದ ದೇವಾಲಯ ಎಂದು ಖ್ಯಾತಿ ಪಡೆದ ಅಂಗೋಕರ ವಾಟ್ ಕಾಂಬೋಡಿಯಾದಲ್ಲಿದ್ದು ಅಲ್ಲಿ ಇರುವ ಶಾಸನಗಳ ಸಂಶೋಧನೆ ಮತ್ತು ಪರಿಷ್ಕರಣೆ ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ. ಮಂಜುನಾಥ ಭಟ್ಟ ಅವರು ಪ್ರಸ್ತುತ ತಮಿಳುನಾಡಿನ ಪಾಂಡಿಚೇರಿಯಲ್ಲಿ ಸಂಸ್ಕೃತ ಸಂಶೋಧನಾ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಂಜುನಾಥ ಭಟ್ ಅವರ ತಂದೆ ಗಣಪತಿ ಭಟ್ಟ ಹೇರೂರಿನ ಸಿದ್ಧಿವಿನಾಯಕ ದೇವಾಲಯದ ಪ್ರಧಾನ ಅರ್ಚಕರು.

ಮಣ್ಣಲ್ಲಿ ಮಣ್ಣಾಗಿದೆ ಕುಂಬಾರನ ಬದುಕು


ಮುಂಜಾನೆದ್ದು ಕುಂಬಾರಣ್ಣ ಹಾಲುಭಾನ ಉಂಡಾನಂತ ಹಾರಾರೀ ಮಣ್ಣ ತುಳಿದಾನ?. ಇದು ಕುಂಬಾರರ ಜೀವನದ ಕಾರ್ಯ ನಿರ್ವಹಣೆ ನೆನಪಿಸುವ ಗೀತೆ. ಆದರೆ, ಇಂದು ಕುಂಬಾರರ ಬದುಕು ನಶಿಸುತ್ತಿದೆ. ದಿನದಿಂದ ದಿನಕ್ಕೆ ಮಡಕೆಯಂತೆ ಸವೆಯುತ್ತಿದೆ. ಪ್ಲಾಸ್ಟಿಕ್ ವಸ್ತುಗಳ ಭರಾಟೆಯಿಂದ ಮಣ್ಣಿನ ಪಾತ್ರಗಳಿಗೆ ಬೇಡಿಕೆ ಇಲ್ಲದಂತಾಗಿ ಕುಂಬಾರರ ಕುಟುಂಬಗಳು ಸಂಕಷ್ಟದಲ್ಲಿ ಸಿಲುಕಿವೆ. ಆರ್ಯೋಗ್ಯಕ್ಕೆ ಪೂರಕವಾಗಿರುವ ಮಡಕೆ ಗಡಿಗೆ ಮತ್ತು ಭಜೆಂತ್ರಿ ಸಮುದಾಯದ ಇಚಲು ಬುಟ್ಟಿಗಳ ಜಾಗವನ್ನು ಸ್ಟೀಲ್, ಪ್ಲಾಸ್ಟಿಕ್ ವಸ್ತುಗಳು ಮತ್ತು ಸುಣ್ಣಗಾರರ ಸುಣ್ಣದ ಬದಲಾಗಿ ಬಣ್ಣಗಳು ಬಂದು ಆ ಜಾಗವನ್ನು ಆಕ್ರಮಿಸಿಕೊಂಡಿರುವುದರಿಂದ, ಕುಂಬಾರ ಸಮುದಾಯದ ಆತ್ಮಸ್ಥೈರ್ಯ ಕುಂದಿದೆ. ಜೇಡಿ ಮಣ್ಣನ್ನು ತಂದು ಕೆಲಕಾಲ ನೆನಸಿಡುತ್ತಾರೆ. ನಸುಕಿನಲ್ಲಿ ಎದ್ದು ಮೈ ತುಂಬಾ ಬೆವರು ಹರಿಸಿ, ಮಡಿಕೆ, ಸಣ್ಣಪುಟ್ಟ ಸಾಮಗ್ರಿಗಳನ್ನು ತಯಾರಿಸುತ್ತಾರೆ. ಆದರೆ ಕೊಳ್ಳುವವರು ಮಾತ್ರ ವಿರಳ.
ಕುಲಕಸುಬಾಗಿ ಕುಂಬಾರಿಕೆಯನ್ನೇ ನೆಚ್ಚಿಕೊಂಡಿರುವ ಕುಟುಂಬಗಳು ಆರಕ್ಕೇರದೆ, ಮೂರಕ್ಕಿಳಿಯದೇ ಜೀವನ ಸಾಗಿಸುತ್ತಿವೆ. ಹುಣ್ಣಿಮೆ, ಅಮಾವಾಸ್ಯೆ, ಇನ್ನಿತರ ಹಬ್ಬದ ದಿನಗಳಲ್ಲಿ ಕುಂಬಾರ ಕುಟುಂಬದವರಿಗೆ ತುಸು ಕೆಲಸ ಜಾಸ್ತಿ. ಉಳಿದ ದಿನಗಳಲ್ಲಿ ಕೂಲಿಯೇ ಗತಿ. ಹಬ್ಬಗಳಲ್ಲಿ ಒಂದಿಷ್ಟು ಮಟ್ಟಿಗೆ ಮಡಕೆ, ಪಣತಿ ಸೇರಿದಂತೆ ಇತರ  ಮಣ್ಣಿನ ವಸ್ತುಗಳನ್ನು ಖರೀದಿಸುತ್ತಾರೆ. ಉಳಿದ ದಿನಗಳಲ್ಲಿ ಆಟಕ್ಕುಂಟು, ಲೆಕ್ಕಕ್ಕಿಲ್ಲ. ಪ್ಲಾಸ್ಟಿಕ್ ವಸ್ತುಗಳನ್ನು ಹೆಚ್ಚಿನ ಬೆಲೆ ಕೊಟ್ಟು ಖರೀದಿಸುವ ಗ್ರಾಹಕರು ಮಣ್ಣಿನ ಸಾಮಗ್ರಿ ಕೊಳ್ಳಲು ಚೌಕಾಶಿ ಮಾಡುತ್ತಾರೆ. ಕೆಲ ವೇಳೆ ನಷ್ಟವಾದರೂ ಗ್ರಾಹಕರು ಕೇಳಿದಷ್ಟು ಬೆಲೆಗೆ ಕೊಡಬೇಕಾಗುತ್ತದೆ. ಹಾಗಾಗಿ, ಗ್ರಾಮೀಣ ಪ್ರದೇಶದ ಬಹುತೇಕ ಕುಂಬಾರರು ತಮ್ಮ ವೃತ್ತಿಗೆ ವಿದಾಯ ಹೇಳಿದ್ದಾರೆ. ಹೊಸ ಪೀಳಿಗೆ ಕುಂಬಾರಿಕೆಯಿಂದ ದೂರ ಉಳಿದಿದೆ ಎನ್ನುವುದು ಹಿರಿಯ ಕುಂಬಾರರ ಅಳಲು.

ಝರಿ ನೀರಿನಿಂದ ಮೊಳಗುವುದಿಲ್ಲಿ ಘಂಟಾನಾದ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ತೋಡುರು ಗ್ರಾಮದ ಮರ್ಗಿಹೊಂಡದ ಬಳಿ ಇರುವ ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ವರ್ಷವಿಡೀ ಘಂಟಾನಾದ ಮೊಳಗುತ್ತದೆ. ಜನ ವಸತಿ ಇಲ್ಲದ ಗುಡ್ಡದ ತುದಿಯ ದಟ್ಟಾರಣ್ಯದಲ್ಲಿ ಈ ದೈವಿಕ ನಾದ ದಿವ್ಯ ಅನುಭವ ನೀಡುತ್ತದೆ. ಇದರಲ್ಲಿ ಅತೀಂದ್ರಿಯ ಶಕ್ತಿಯ ಕೈವಾಡವಿಲ್ಲ. ಪುಣ್ಯ ಪುರುಷರ ಪವಾಡವೀ ಇಲ್ಲ. ಇಲ್ಲಿ ಬೆಟ್ಟದಿಂದ ಹರಿಯುವ ನೈಸರ್ಗಿಕ ನೀರಿನ ಝರಿಯನ್ನೇ ಭಕ್ತರು ನಿರಂತರ ಘಂಟಾನಾದಕ್ಕೆ ಬಳಸಿಕೊಂಡಿದ್ದಾರೆ.

ಮರ್ಗಿಹೊಂಡ, ತೋಡುರಿನ ನಾಗರಿಕ ವಸತಿ ಪ್ರದೇಶದಿಂದ ಎತ್ತರದಲ್ಲಿದೆ. ಇಲ್ಲಿಗೆ ಹೋಗಲು ಸಾಕಷ್ಟು ಸಾಹಸ ಪಡಬೇಕು. ಗುಡ್ಡದ ತುದಿಯಲ್ಲಿನ ಪುಟ್ಟ ಬಯಲು ಪ್ರದೇಶ. ಅಲ್ಲಿದೆ ಭಕ್ತರು ನಿರ್ಮಿಸಿಕೊಂಡ ಅಯ್ಯಪ್ಪ ಸ್ವಾಮಿಯ ಸನ್ನಿಧಾನ. ಸನಿಹದಲ್ಲಿಯೇ ಹುಲಿಯೊಂದರ ಸಮಾಧಿ. ಇದರ ಪಕ್ಕದಲ್ಲೇ ವರ್ಷವಿಡೀ ಹರಿಯುವ ನೀರಿನ ಝರಿ ಇದೆ. ಈ ಪ್ರಶಾಂತ ಸ್ಥಳಕ್ಕೆ ತೆರಳಿದರೆ ವಾಪಸ್ ಬರಲು ಮನಸ್ಸಾಗುವುದಿಲ್ಲ.
ಮರ್ಗಿಹೊಂಡದ ಪ್ರಮುಖ ಕೇಂದ್ರ ಬಿಂದು ನಿರಂತರ ಮೊಳಗುವ ಘಂಟಾ ನಿನಾದ. ಘಂಟೆಯ ನಿರಂತರ ವಾದನದ ಹಿಂದೆ ಆಧುನಿಕ ತಂತ್ರಜ್ಞಾನ ಅಡಗಿಲ್ಲ. ಬೆಟ್ಟದಿಂದ ಹರಿಯುವ ನೀರನ್ನು ಪೈಪ್ ಮೂಲಕ ಹರಿಸಿ, ನೀರನ್ನು ಚಕ್ರದ ಮೇಲೆ ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ. ಚಕ್ರದ ಸುತ್ತ ಪ್ಲಾಸ್ಟಿಕ್ ತಂಬಿಗೆಯನ್ನು ಕಟ್ಟಲಾಗಿದೆ. ಪೈಪ್ನಿಂದ ಬೀಳುವ ನೀರು ತಂಬಿಗೆ ತುಂಬಿಸುತ್ತದೆ. ನಂತರ ಚಕ್ರ ವೇಗವಾಗಿ ತಿರುಗುತ್ತದೆ. ಚಕ್ರಕ್ಕೆ ಅಳವಡಿಸಿದ ಹಗ್ಗದ ಸಹಾಯದಿಂದ ಗುಡಿಯಲ್ಲಿ ಘಂಟೆ ನಿರಂತರವಾಗಿ ಮೊಳಗುತ್ತಿರುತ್ತದೆ.
ಸ್ಥಳಕ್ಕೆ ಧಾರ್ಮಿಕ ಮಹತ್ವದ ಒಂದಿಷ್ಟು ಹಿನ್ನೆಲೆಯಿದೆ. ಸುಮಾರು 25 ವರ್ಷದ ಹಿಂದೆ ತೋಡುರಿನ ನಿವಾಸಿ ಮಂಜುನಾಥ ಸ್ವಾಮಿ ಎನ್ನುವವರ ಕನಸಿನಲ್ಲಿ ಈ ಅಜ್ಞಾತ ಸ್ಥಳ ಕಂಡಿತಂತೆ. ಅವರು ಮಾರನೇ ದಿನವೇ ಆ ಸ್ಥಳ ಹುಡುಕುತ್ತಾ ಬೆಟ್ಟ ಹತ್ತಿದರು. ಅರಣ್ಯ ಪ್ರದೇಶದಲ್ಲಿ ಹುಲಿಗಳ ಕಾಟವಿದ್ದರೂ ಆ ಪ್ರದೇಶ ತಲುಪಿದರು. ನಂತರ ಅವರಿಗೆ ಆ ಸ್ಥಳ ಬಿಟ್ಟು ಬರಲು ಮನಸ್ಸು ಒಪ್ಪಲಿಲ್ಲ. ಅಂದೇ ಈ ಪ್ರದೇಶದಲ್ಲಿ ಒಂದು ಗುಡಿ ಕಟ್ಟಬೇಕು ಎಂದು ಸಂಕಲ್ಪ ತೊಟ್ಟರಂತೆ. ಆ ಸಮಯದಲ್ಲಿ ಮರ್ಗಿಹೊಂಡದ ಅರಣ್ಯ ಪ್ರದೇಶದಿಂದ ಇಳಿದು ಬಂದ ಹುಲಿಯೊಂದು ಅದೇ ಸ್ಥಳದಲ್ಲಿ ಪ್ರಾಣ ಬಿಟ್ಟಿತಂತೆ. ಹಾಗಾಗಿ, ಅಲ್ಲಿಯೇ ಹುಲಿಯನ್ನು ಸಮಾಧಿ ಮಾಡಿದರು ಮಂಜುನಾಥ ಸ್ವಾಮಿ.
ನಂತರ ಅಲ್ಲಿಯೇ ಚಿಕ್ಕದೊಂದು ಅಯ್ಯಪ್ಪನ ಗುಡಿ ನಿರ್ಮಿಸಿ, ಅಲ್ಲಿಂದ ಶಬರಿಮಲೆಗೆ ಯಾತ್ರೆ ಕೈಗೊಂಡರು. ಈಗ ಪ್ರತಿವರ್ಷ ಈ ಗುಡ್ಡದಲ್ಲಿ ಅಯ್ಯಪ್ಪ ಸ್ವಾಮಿಯ ಯಾತ್ರೆ ಸಂಪನ್ನಗೊಳ್ಳುತ್ತದೆ. ಅಯ್ಯಪ್ಪನ ಮಾಲೆ ಧರಿಸಿದ ಮಂಜುನಾಥ ಅವರ ಪ್ರಕಾರ ಕೆಲ ವರ್ಷಗಳ ಹಿಂದೆ ಹುಲಿಯ ಸಮಾಧಿ ಬಳಿ ಒಂದು ಜೀವಂತ ಹುಲಿ ಬಂದು ಗರ್ಜಿಸುತ್ತಿತ್ತು. ನಂತರದ ದಿನಗಳಲ್ಲಿ ಹುಲಿಯ ಸಮಾಧಿಗೂ ಗುಡಿ ನಿರ್ಮಿಸಲಾಯಿತು. ಆ ನಂತರ ಹುಲಿಯ ಗರ್ಜನೆ ನಿಂತಿದೆ ಎನ್ನುತ್ತಾರೆ ಅವರು.
ಹುಲಿಯ ಸಮಾಧಿಗೆ ಗುಡಿ ಕಟ್ಟಲು ಹಣದ ಅಭಾವವಿತ್ತು. ಆದರೆ ಇದು ಪೂರ್ತಿಗೊಂಡಿದ್ದು ಈ ಪ್ರದೇಶದ ಬಾಳೆ ಗಿಡಕ್ಕೆ ಆದ ಭಾರೀ ಗಾತ್ರದ ಬಾಳೆಗೊನೆಯಿಂದ. ಆ ಬಾಳೆಗೊನೆ ಸವಾಲಿನಲ್ಲಿ ಮಾರಾಟವಾದ ಹಣದಿಂದ ಹುಲಿಯ ಸಮಾಧಿಗೆ ಗುಡಿ ನಿರ್ಮಿಸಲಾಯಿತು ಎನ್ನುತ್ತಾರೆ ಅವರು.
ಈ ಅಯ್ಯಪ್ಪನ ಸನ್ನಿಧಾನದಲ್ಲಿ ಇನ್ನೊಂದು ವಿಶೇಷತೆ ಇದೆ. ಮರ್ಗಿಹೊಂಡ ಸಂಪೂರ್ಣ ಅರಣ್ಯ ಪ್ರದೇಶ. ಮಂಗ, ಕೋತಿಗಳ ಪ್ರಮಾಣವೂ ಹೆಚ್ಚಾಗಿದೆ. ಇಲ್ಲಿ ಬೆಳೆಯುವ ಬಾಳೆಗೊನೆ, ಪೇರಲೆಹಣ್ಣು, ಪಪ್ಪಾಯಿಯಂಥ ಹಣ್ಣುಗಳನ್ನು ಮಂಗ, ಕೋತಿಗಳು ಮುಟ್ಟುವುದಿಲ್ಲ. ಸಾಕಷ್ಟು ಬಾಳೆ, ಪೇರಲೆ ಹಣ್ಣಿನ ಗಿಡಗಳಿದ್ದು ಇದರ ಬಳಿ ಸುಳಿಯುವುದೂ ಇಲ್ಲ.
ಈಗ ಸಾಕಷ್ಟು ಭಕ್ತರು ಅಯ್ಯಪ್ಪನ ಮಾಲೆ ಧರಿಸಿ ಇಲ್ಲಿಯೇ ಇದ್ದು ಅಯ್ಯಪ್ಪನ ವ್ರತಾಚರಣೆ ಮಾಡುತ್ತಾರೆ. ಪ್ರತಿವರ್ಷ ಈ ಪ್ರದೇಶದಿಂದಲೇ ಶಬರಿಮಲೆ ಯಾತ್ರೆಗೆ ತೆರಳುತ್ತಾರೆ. ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅಯ್ಯಪ್ಪನ ಸನ್ನಿಧಾನವೂ ಅಭಿವೃದ್ಧಿಯಾಗುತ್ತಿದೆ.

ವೆಲ್ಕಮ್ ಟು 2013...
ವೆಲ್ಕಮ್ ಟು 2013... ಗುಡ್ ಬೈ ಟು... 2012