ಝರಿ ನೀರಿನಿಂದ ಮೊಳಗುವುದಿಲ್ಲಿ ಘಂಟಾನಾದ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ತೋಡುರು ಗ್ರಾಮದ ಮರ್ಗಿಹೊಂಡದ ಬಳಿ ಇರುವ ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ವರ್ಷವಿಡೀ ಘಂಟಾನಾದ ಮೊಳಗುತ್ತದೆ. ಜನ ವಸತಿ ಇಲ್ಲದ ಗುಡ್ಡದ ತುದಿಯ ದಟ್ಟಾರಣ್ಯದಲ್ಲಿ ಈ ದೈವಿಕ ನಾದ ದಿವ್ಯ ಅನುಭವ ನೀಡುತ್ತದೆ. ಇದರಲ್ಲಿ ಅತೀಂದ್ರಿಯ ಶಕ್ತಿಯ ಕೈವಾಡವಿಲ್ಲ. ಪುಣ್ಯ ಪುರುಷರ ಪವಾಡವೀ ಇಲ್ಲ. ಇಲ್ಲಿ ಬೆಟ್ಟದಿಂದ ಹರಿಯುವ ನೈಸರ್ಗಿಕ ನೀರಿನ ಝರಿಯನ್ನೇ ಭಕ್ತರು ನಿರಂತರ ಘಂಟಾನಾದಕ್ಕೆ ಬಳಸಿಕೊಂಡಿದ್ದಾರೆ.

ಮರ್ಗಿಹೊಂಡ, ತೋಡುರಿನ ನಾಗರಿಕ ವಸತಿ ಪ್ರದೇಶದಿಂದ ಎತ್ತರದಲ್ಲಿದೆ. ಇಲ್ಲಿಗೆ ಹೋಗಲು ಸಾಕಷ್ಟು ಸಾಹಸ ಪಡಬೇಕು. ಗುಡ್ಡದ ತುದಿಯಲ್ಲಿನ ಪುಟ್ಟ ಬಯಲು ಪ್ರದೇಶ. ಅಲ್ಲಿದೆ ಭಕ್ತರು ನಿರ್ಮಿಸಿಕೊಂಡ ಅಯ್ಯಪ್ಪ ಸ್ವಾಮಿಯ ಸನ್ನಿಧಾನ. ಸನಿಹದಲ್ಲಿಯೇ ಹುಲಿಯೊಂದರ ಸಮಾಧಿ. ಇದರ ಪಕ್ಕದಲ್ಲೇ ವರ್ಷವಿಡೀ ಹರಿಯುವ ನೀರಿನ ಝರಿ ಇದೆ. ಈ ಪ್ರಶಾಂತ ಸ್ಥಳಕ್ಕೆ ತೆರಳಿದರೆ ವಾಪಸ್ ಬರಲು ಮನಸ್ಸಾಗುವುದಿಲ್ಲ.
ಮರ್ಗಿಹೊಂಡದ ಪ್ರಮುಖ ಕೇಂದ್ರ ಬಿಂದು ನಿರಂತರ ಮೊಳಗುವ ಘಂಟಾ ನಿನಾದ. ಘಂಟೆಯ ನಿರಂತರ ವಾದನದ ಹಿಂದೆ ಆಧುನಿಕ ತಂತ್ರಜ್ಞಾನ ಅಡಗಿಲ್ಲ. ಬೆಟ್ಟದಿಂದ ಹರಿಯುವ ನೀರನ್ನು ಪೈಪ್ ಮೂಲಕ ಹರಿಸಿ, ನೀರನ್ನು ಚಕ್ರದ ಮೇಲೆ ಬೀಳುವಂತೆ ವ್ಯವಸ್ಥೆ ಮಾಡಲಾಗಿದೆ. ಚಕ್ರದ ಸುತ್ತ ಪ್ಲಾಸ್ಟಿಕ್ ತಂಬಿಗೆಯನ್ನು ಕಟ್ಟಲಾಗಿದೆ. ಪೈಪ್ನಿಂದ ಬೀಳುವ ನೀರು ತಂಬಿಗೆ ತುಂಬಿಸುತ್ತದೆ. ನಂತರ ಚಕ್ರ ವೇಗವಾಗಿ ತಿರುಗುತ್ತದೆ. ಚಕ್ರಕ್ಕೆ ಅಳವಡಿಸಿದ ಹಗ್ಗದ ಸಹಾಯದಿಂದ ಗುಡಿಯಲ್ಲಿ ಘಂಟೆ ನಿರಂತರವಾಗಿ ಮೊಳಗುತ್ತಿರುತ್ತದೆ.
ಸ್ಥಳಕ್ಕೆ ಧಾರ್ಮಿಕ ಮಹತ್ವದ ಒಂದಿಷ್ಟು ಹಿನ್ನೆಲೆಯಿದೆ. ಸುಮಾರು 25 ವರ್ಷದ ಹಿಂದೆ ತೋಡುರಿನ ನಿವಾಸಿ ಮಂಜುನಾಥ ಸ್ವಾಮಿ ಎನ್ನುವವರ ಕನಸಿನಲ್ಲಿ ಈ ಅಜ್ಞಾತ ಸ್ಥಳ ಕಂಡಿತಂತೆ. ಅವರು ಮಾರನೇ ದಿನವೇ ಆ ಸ್ಥಳ ಹುಡುಕುತ್ತಾ ಬೆಟ್ಟ ಹತ್ತಿದರು. ಅರಣ್ಯ ಪ್ರದೇಶದಲ್ಲಿ ಹುಲಿಗಳ ಕಾಟವಿದ್ದರೂ ಆ ಪ್ರದೇಶ ತಲುಪಿದರು. ನಂತರ ಅವರಿಗೆ ಆ ಸ್ಥಳ ಬಿಟ್ಟು ಬರಲು ಮನಸ್ಸು ಒಪ್ಪಲಿಲ್ಲ. ಅಂದೇ ಈ ಪ್ರದೇಶದಲ್ಲಿ ಒಂದು ಗುಡಿ ಕಟ್ಟಬೇಕು ಎಂದು ಸಂಕಲ್ಪ ತೊಟ್ಟರಂತೆ. ಆ ಸಮಯದಲ್ಲಿ ಮರ್ಗಿಹೊಂಡದ ಅರಣ್ಯ ಪ್ರದೇಶದಿಂದ ಇಳಿದು ಬಂದ ಹುಲಿಯೊಂದು ಅದೇ ಸ್ಥಳದಲ್ಲಿ ಪ್ರಾಣ ಬಿಟ್ಟಿತಂತೆ. ಹಾಗಾಗಿ, ಅಲ್ಲಿಯೇ ಹುಲಿಯನ್ನು ಸಮಾಧಿ ಮಾಡಿದರು ಮಂಜುನಾಥ ಸ್ವಾಮಿ.
ನಂತರ ಅಲ್ಲಿಯೇ ಚಿಕ್ಕದೊಂದು ಅಯ್ಯಪ್ಪನ ಗುಡಿ ನಿರ್ಮಿಸಿ, ಅಲ್ಲಿಂದ ಶಬರಿಮಲೆಗೆ ಯಾತ್ರೆ ಕೈಗೊಂಡರು. ಈಗ ಪ್ರತಿವರ್ಷ ಈ ಗುಡ್ಡದಲ್ಲಿ ಅಯ್ಯಪ್ಪ ಸ್ವಾಮಿಯ ಯಾತ್ರೆ ಸಂಪನ್ನಗೊಳ್ಳುತ್ತದೆ. ಅಯ್ಯಪ್ಪನ ಮಾಲೆ ಧರಿಸಿದ ಮಂಜುನಾಥ ಅವರ ಪ್ರಕಾರ ಕೆಲ ವರ್ಷಗಳ ಹಿಂದೆ ಹುಲಿಯ ಸಮಾಧಿ ಬಳಿ ಒಂದು ಜೀವಂತ ಹುಲಿ ಬಂದು ಗರ್ಜಿಸುತ್ತಿತ್ತು. ನಂತರದ ದಿನಗಳಲ್ಲಿ ಹುಲಿಯ ಸಮಾಧಿಗೂ ಗುಡಿ ನಿರ್ಮಿಸಲಾಯಿತು. ಆ ನಂತರ ಹುಲಿಯ ಗರ್ಜನೆ ನಿಂತಿದೆ ಎನ್ನುತ್ತಾರೆ ಅವರು.
ಹುಲಿಯ ಸಮಾಧಿಗೆ ಗುಡಿ ಕಟ್ಟಲು ಹಣದ ಅಭಾವವಿತ್ತು. ಆದರೆ ಇದು ಪೂರ್ತಿಗೊಂಡಿದ್ದು ಈ ಪ್ರದೇಶದ ಬಾಳೆ ಗಿಡಕ್ಕೆ ಆದ ಭಾರೀ ಗಾತ್ರದ ಬಾಳೆಗೊನೆಯಿಂದ. ಆ ಬಾಳೆಗೊನೆ ಸವಾಲಿನಲ್ಲಿ ಮಾರಾಟವಾದ ಹಣದಿಂದ ಹುಲಿಯ ಸಮಾಧಿಗೆ ಗುಡಿ ನಿರ್ಮಿಸಲಾಯಿತು ಎನ್ನುತ್ತಾರೆ ಅವರು.
ಈ ಅಯ್ಯಪ್ಪನ ಸನ್ನಿಧಾನದಲ್ಲಿ ಇನ್ನೊಂದು ವಿಶೇಷತೆ ಇದೆ. ಮರ್ಗಿಹೊಂಡ ಸಂಪೂರ್ಣ ಅರಣ್ಯ ಪ್ರದೇಶ. ಮಂಗ, ಕೋತಿಗಳ ಪ್ರಮಾಣವೂ ಹೆಚ್ಚಾಗಿದೆ. ಇಲ್ಲಿ ಬೆಳೆಯುವ ಬಾಳೆಗೊನೆ, ಪೇರಲೆಹಣ್ಣು, ಪಪ್ಪಾಯಿಯಂಥ ಹಣ್ಣುಗಳನ್ನು ಮಂಗ, ಕೋತಿಗಳು ಮುಟ್ಟುವುದಿಲ್ಲ. ಸಾಕಷ್ಟು ಬಾಳೆ, ಪೇರಲೆ ಹಣ್ಣಿನ ಗಿಡಗಳಿದ್ದು ಇದರ ಬಳಿ ಸುಳಿಯುವುದೂ ಇಲ್ಲ.
ಈಗ ಸಾಕಷ್ಟು ಭಕ್ತರು ಅಯ್ಯಪ್ಪನ ಮಾಲೆ ಧರಿಸಿ ಇಲ್ಲಿಯೇ ಇದ್ದು ಅಯ್ಯಪ್ಪನ ವ್ರತಾಚರಣೆ ಮಾಡುತ್ತಾರೆ. ಪ್ರತಿವರ್ಷ ಈ ಪ್ರದೇಶದಿಂದಲೇ ಶಬರಿಮಲೆ ಯಾತ್ರೆಗೆ ತೆರಳುತ್ತಾರೆ. ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅಯ್ಯಪ್ಪನ ಸನ್ನಿಧಾನವೂ ಅಭಿವೃದ್ಧಿಯಾಗುತ್ತಿದೆ.