ಕಲುಷಿತವಾಗುತ್ತಿದೆ ಡೋಣಿ ನದಿ

ತಾಳಿಕೋಟೆ ಪಟ್ಟಣವನ್ನು ಅರ್ಧ ಸುತ್ತುವರಿದ, ವಿಜಯನಗರ ಸಾಮ್ರಾಜ್ಯದಲ್ಲಿ ವೈರಿ ಪಡೆಯ ಸೈನಿಕರು ತಾಳಿಕೋಟೆ ಪಟ್ಟಣ ಪ್ರವೇಶಿಸದಂತೆ ತಡೆಯೊಡ್ಡುತ್ತಿದ್ದ ಡೋಣಿ ನದಿ ನೀರಿಲ್ಲದೇ ಬಣಗುಡುತ್ತಿದೆ. ಜೊತೆಗೆ ಕಸ, ಕಡ್ಡಿ ಬೆಳೆಯುತ್ತಿದ್ದು ಕಲುಷಿತಗೊಳ್ಳುತ್ತಿದೆ.
ನೀರಿಲ್ಲದೆ ಬಣಗುಡುತ್ತಿರುವ ಡೋಣಿ ನದಿಯಲ್ಲಿ ಸಾರ್ವಜನಿಕರು ಕಟ್ಟಡದ ಮಣ್ಣು, ಕಲ್ಲು, ಚಿಪ್ಪುಗಳನ್ನು ಎಸೆಯುವ ಜೊತೆಗೆ ಹಳೆಯ ಬಟ್ಟೆಗಳ ಗಂಟುಗಳನ್ನು ಎಸೆದು ಹೋಗುತ್ತಿದ್ದಾರೆ. ಇದರಿಂದಾಗಿ ನದಿಯಲ್ಲಿ ಹೂಳು ತುಂಬುತ್ತಿದೆ. ನದಿಯಲ್ಲಿ ಎಲ್ಲೆಂದರಲ್ಲಿ ಕಸ, ಕಡ್ಡಿ, ಮುಳ್ಳಿನ ಗಿಡಗಳು ಬೆಳೆದಿವೆ. ಇರುವ ಅಲ್ಪಸ್ವಲ್ಪ ನೀರು ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ. ಇದರಿಂದಾಗಿ ನದಿಯ ಮೇಲಿನ ಸೇತುವೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ನಡೆದಾಡುವಂತಾಗಿದೆ.
ನದಿಯಲ್ಲಿ ಹೂಳು ತುಂಬಿದ್ದರಿಂದ ಮಳೆಗಾಲದಲ್ಲಿ ನದಿ ತುಂಬಿ ಪ್ರವಾಹ ಉಂಟಾಗಿ, ಅಕ್ಕಪಕ್ಕದ ರೈತರ ಜಮೀನುಗಳಿಗೆ ನೀರು ನುಗ್ಗುತ್ತದೆ. ಇದರಿಂದಾಗಿ ಪಕ್ಕದ ಜಮೀನುಗಳಲ್ಲಿನ ಬೆಳೆಗಳಿಗೆ ಹಾನಿ ಉಂಟಾಗುತ್ತಿದೆ.
ತಾಳಿಕೋಟೆ ಪಟ್ಟಣಕ್ಕೆ ಸಮೀಪದ ಹಡಗಿನಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಡೋಣಿ ನದಿಯ ಕೆಳಮಟ್ಟದ ಸೇತುವೆ ಮೇಲೆ ನಿತ್ಯ ದ್ವಿಚಕ್ರ ವಾಹನ, ಟೆಂಪೋ, ಟ್ರ್ಯಾಕ್ಸ್ ಮತ್ತು ಬಸ್ಗಳು ಸಂಚರಿಸುತ್ತವೆ. ತಾಳಿಕೋಟೆ ಪಟ್ಟಣಕ್ಕೆ ಸರಪಳಿ ಕೊಂಡಿಯಂತಿರುವ ಹಡಗಿನಾಳ, ಹರನಾಳ, ಕಲ್ಲದೇವನಳ್ಳಿ, ಮೂಕೀಹಾಳ, ನಾಗೂರ, ಬಪ್ಪರಗಿ, ಶಿವಪುರ, ಚವನಬಾವಿ, ಅಡವಿ ಸೋಮನಾಳ, ಹಗರಗುಂಡ, ದೇವರ ಹುಲಗಬಾಳ ಈ ಗ್ರಾಮಗಳ ರೈತರು, ಶಾಲಾ ಮಕ್ಕಳು ಇದೇ ರಸ್ತೆಯಲ್ಲೇ ಸಂಚರಿಸುತ್ತಾರೆ. ನದಿಯಲ್ಲಿ ಕಲುಷಿತ ನೀರಿನಿಂದಾಗಿ ಹಬ್ಬುವ ದುರ್ನಾತದಿಂದಾಗಿ ಪ್ರಯಾಣಿಕರು, ಸಾರ್ವಜನಿಕರು, ರೈತರು ನರಕಯಾತನೆ ಅನುಭವಿಸುವಂತಾಗಿದೆ.
ಡೋಣಿ ನದಿಯಲ್ಲಿನ ಸೇತುವೆಯ ಇಕ್ಕೆಲಗಳಲ್ಲಿ ಮತ್ತು ನದಿಯಲ್ಲಿ ಮಾಂಸ ಮಾರಾಟಗಾರರು ಕೋಳಿಗಳ ಪುಚ್ಚ ಎಸೆಯುತ್ತಾರೆ. ಪಟ್ಟಣದಲ್ಲಿ ಸತ್ತ ಹಂದಿ, ನಾಯಿ, ದನಕರುಗಳನ್ನು ತಂದು ಇಲ್ಲಿ ಬಿಸಾಕಲಾಗುತ್ತದೆ. ಅಲ್ಲದೆ ಪಟ್ಟಣದ ನಿವಾಸಿಗಳು ಹಳೆ ಬಟ್ಟೆ ಗಂಟು, ಇತರ ತ್ಯಾಜ್ಯ ವಸ್ತುಗಳನ್ನು ಎಸೆಯುತ್ತಿದ್ದಾರೆ. ಇದರಿಂದಾಗಿ ನದಿ ನೀರಲ್ಲದೆ, ನದಿಯ ಸುತ್ತಮುತ್ತಲಿನ ಪ್ರದೇಶಗಳು ಕೂಡ ಕಲುಷಿತಗೊಂಡಿವೆ. ದುರ್ವಾಸನೆ, ಸೊಳ್ಳೆಗಳ ಕಾಟದಿಂದ ಜನ ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿದ್ದಾರೆ.