ಜೌಗು ತಾಣಗಳೀಗ ಕಾಣುತ್ತಲೇ ಇಲ್ಲ


ಅಲ್ಲಿ ದಟ್ಟ ಹಸಿರಿದೆ, ಮೇ ತಿಂಗಳ ಅಖೈರಿನಲ್ಲೂ ನಿಂತ ನೆಲ ಹಸಿ ಹಸಿ ಎಂದರೆ ಅದು ಕಣ್ಮರೆಯ ದಾರಿಯಲ್ಲಿನ ಜೌಗು ಪ್ರದೇಶಗಳು ಎಂದೇ ಅರ್ಥ. ನೆಲದ ಮತ್ತು ಜಲದ ನೆಲೆ ಇದು. ನೆಲ ಮತ್ತು ಜಲದ ಮೂಲ ನಿಲ್ದಾಣವೂ ಇದೇ. ಕಾಡಿನ ನಡುವೆಯ ಕೊಳ್ಳದಲ್ಲಿ ನೆಲ ಮತ್ತು ಜಲ ಸಂಧಿಸುವ ತಾಣವೇ ಜೌಗು. ಇದನ್ನು ಜವಗು, ಜಡ್ಡಿ , ಮಿರಿಸ್ಟಿಕಾ ಜವಗು, ರಾಂಪತ್ರೆ ಜಡ್ಡಿ ಎಂದೂ ಕರೆಯುತ್ತಾರೆ. ಕಾಡಿನ ತಗ್ಗಿನಲ್ಲಿ ಇರುವ ಬೆರಳೆಣಿಕೆಯ ಇಂತಹ ಪ್ರದೇಶಗಳು ಇಡೀ ಪರಿಸರ ವ್ಯವಸ್ಥೆಯ ಮಹತ್ವದ ಸ್ಥಾನ ಪಡೆದುಕೊಂಡಿವೆ.
ಜೌಗು ಪ್ರದೇಶಗಳು ಅಪರೂಪದ, ಕೆಲವೇ ಕೆಲವು ಕಡೆ ಕಾಣಸಿಗುವ ಅನೇಕ ಜಾತಿಯ ವೃಕ್ಷಗಳು, ಸಸ್ತನಿಗಳು, ಜೀವ ವೈವಿಧ್ಯಗಳ ಕಣಜ. ನೈಸರ್ಗಿಕ ಅರಣ್ಯದ ತಾಯ್ನೆಲ. ನೀರು, ಭೂಮಿ ಎರಡರಲ್ಲೂ ವಾಸಿಸಬಲ್ಲ, ಉಭಯ ವಾಸಿಗಳ ಆವಾಸ ಸ್ಥಾನ, ಶುದ್ಧ ನೀರಿನ ಮೂಲವೂ ಇದೆ. ಒಂದಂಕಿ ಮರ, ಮಳೆ ನೇರಲು, ದೊಡ್ಡ ಪತ್ರೆ ಹಾಗೂ ಇತರ ಸಸ್ಯಗಳು, ಹಾವು, ವಿವಿಧ ಬಗೆಯ ಕಪ್ಪೆಗಳು, ಚಿಟ್ಟೆಗಳು, ಜೇಡಗಳು ನೆಮ್ಮದಿಯ ಉಸಿರು ಕಾಣುವ ನೆಲಗಟ್ಟು. ಜೌಗು ಪ್ರದೇಶವು ಪಶ್ಚಿಮ ಘಟ್ಟದಲ್ಲಿ ಅಲ್ಲಲ್ಲಿ ಇವೆ. ಗೋವಾ, ಕರ್ನಾಟಕ, ಕೇರಳದಲ್ಲಿ ಇಂತಹ ಪ್ರದೇಶಗಳು ಅಧಿಕ ಇವೆ. ಕರ್ನಾಟಕದ ಉಂಚಳ್ಳಿ, ಕತ್ತಲೆಕಾನು, ಮಹಿಮೆಯಂತಹ ಕಾಡಿನಲ್ಲಿ ಮಾತ್ರ ಈವರೆಗೆ ಕಂಡು ಬಂದಿವೆ.
1977ರಲ್ಲಿ ಇರಾನ್ನ ರಾಮ್ಸಾರನಲ್ಲಿ ನಡೆದ ಅಂತಾರಾಷ್ಟ್ರೀಯ ಶೃಂಗಮೇಳದಲ್ಲಿ ವಿವಿಧ ದೇಶಗಳ ಸರಕಾರಿ ಪ್ರತಿನಿಧಿಗಳು ಜೌಗು ಪ್ರದೇಶದ ರಕ್ಷಣೆಗೆ ಸಹಿ ಹಾಕಿವೆ. ಜಗತ್ತಿನಲ್ಲಿ 2,100 ಜೌಗು ಪ್ರದೇಶಗಳಿವೆ. ಅವುಗಳಲ್ಲಿ ಭಾರತದ 27 ಪ್ರದೇಶಗಳು ಸೇರ್ಪಡೆ ಆಗಿವೆ. ಮಾನ್ಯತೆ ಇದ್ದರೂ ಮಾಹಿತಿ ಕೊರತೆಯಿಂದ, ಅಭಿವೃದ್ಧಿ ನೀತಿಗಳ ಕಾರಣದಿಂದ ಬಹಳ ಕಡೆ ಇಂತಹ ಜೌಗು ಪ್ರದೇಶಗಳು ಇಂದು ಕೃಷಿ ಭೂಮಿಯಾಗಿ ಪರಿವರ್ತನೆ ಆಗಿವೆ. ಅನೇಕ ಜಡ್ಡಿ ಪ್ರದೇಶಗಳು ಅಣೆಕಟ್ಟಿನಲ್ಲಿ ಕಳೆದು ಹೋಗಿವೆ. ಪ್ರಪಂಚದ ಎರಡನೇ ಅತಿ ದೊಡ್ಡ ಹಾಟ್ ಸ್ಪಾಟ್ ಎಂದು ಕರೆಯಲಾಗುವ ಪಶ್ಚಿಮ ಘಟ್ಟದ ಅಕ್ಷರಶಃ ತಪ್ಪಲಿನ ಪ್ರದೇಶದಲ್ಲೂ ಜೌಗು ಪ್ರದೇಶಗಳು ಕಣ್ಮರೆಯ ದಾರಿಯಲ್ಲಿವೆ. ಜನಸಂಖ್ಯಾ ಸ್ಫೋಟ, ಅರಣ್ಯದ ಮೇಲಿನ ಅತಿ ಒತ್ತಡಗಳ ಅಡ್ಡ ಪರಿಣಾಮದ ಕಾರಣದಿಂದ ಇವು ವಿನಾಶದ ಭೀತಿಯಲ್ಲಿವೆ. ಜೌಗು ಪ್ರದೇಶಗಳ ರಕ್ಷಣೆಗೆ ಸ್ಥಳೀಯರ ಸಹಭಾಗಿತ್ವದಲ್ಲಿ ಅರಣ್ಯ ಇಲಾಖೆ ನೆಲ ಮಟ್ಟದ ಯೋಜನೆ ರೂಪಿಸಬೇಕು. ಬದಲೀ ಉದ್ದೇಶಕ್ಕೆ ಈ ಪ್ರದೇಶ ಬಳಕೆಯಾಗದೇ ಸಂರಕ್ಷಿಸಬೇಕು. ನೀರಿನ ಮೂಲದ ಉಳಿವಿಗೆ, ವೈವಿಧ್ಯತೆ ರಕ್ಷಣೆಗೆ ಯೋಜಿಸಬೇಕು, ಆ ಭಾಗದ ಅರಣ್ಯ ಉತ್ಪನ್ನ ಬಳಕೆಗೆ ನಿರ್ಬಂಧಿಸಬೇಕು, ಸ್ಥಳೀಯರಿಗೆ ಬದಲಿ ವ್ಯವಸ್ಥೆ ಕಲ್ಪಿಸಬೇಕು, ಹಾಳಾದ ಜಡ್ಡಿಗಳ ಪುನಶ್ಚೇತನ ಮಾಡಬೇಕು, ಇಡೀ ಪಶ್ಚಿಮ ಘಟ್ಟದಲ್ಲಿನ ಜೌಗು ಪ್ರದೇಶ ಗುರುತಿಸಿ ರಕ್ಷಣೆ ಮಾಡಬೇಕು. ಕಾಡಿನ ಮಧ್ಯೆ ಇರುವ ನಿಜವಾದ ವಾಟರ್ ಟ್ಯಾಂಕ್ ಉಳಿಸಿಕೊಳ್ಳಬೇಕು.

ಶೇಳಿಯಲ್ಲಿ ತಲೆ ಎತ್ತಲಿದೆ ಪ್ರವೇಶ ಶುಲ್ಕದ ಗೇಟ್


ಗೋವಾದಲ್ಲಿ ಕಳೆದ ವರ್ಷದಿಂದ ಅದಿರು ವ್ಯವಹಾರ ಸ್ಥಗಿತಗೊಂಡಿದೆ. ಅಲ್ಲದೇ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿಮೆ ಮಾಡಿದೆ. ಈ ನಷ್ಟವನ್ನು ಸರಿದೂಗಿಸುವ ಮೂಲಕ ಆದಾಯದ ಮೂಲ ಹೆಚ್ಚಿಸಿಕೊಳ್ಳಲು ಗೋವಾ ಸರಕಾರ ಅನ್ಯರಾಜ್ಯದ ವಾಹನಗಳಿಂದ ತೆರಿಗೆ ವಸೂಲಿ ಮಾಡುವ ನೂತನ ನೀತಿಯನ್ನು ಜಾರಿಗೆ ತಂದಿದೆ. ಹಾಗಾಗಿ, ೆ.1 ರಿಂದ ಗೋವಾ ಪ್ರವೇಶಿಸುವ ದ್ವಿಚಕ್ರ ವಾಹನಗಳಿಗೆ 15 ರೂ. 4 ಚಕ್ರದ ವಾಹನಗಳಿಗೆ 250 ರೂ. ಲಾರಿ ಸೇರಿದಂತೆ ಭಾರಿ ವಾಹನಗಳಿಗೆ 665 ರೂ. ನಿಗದಿಗೊಳಿಸಿದೆ. ಕರ್ನಾಟಕ-ಗೋವಾ ಗಡಿಯಲ್ಲಿ ಗೋವಾ ಗಡಿಭಾಗದಿಂದ ಸುಮಾರು ಮೂರು ಕಿ.ಮಿ. ದೂರದಲ್ಲಿ ವಾಹನ ಪ್ರವೇಶ ಶುಲ್ಕ ಗೇಟ್ನ್ನು ಸ್ಥಾಪಿಸುವ ಮೂಲಕ ಗಡಿಭಾಗದಲ್ಲಿರುವ ವ್ಯಾಪಾರ ವಹಿವಾಟುದಾರರಿಗೆ ಅನುಕೂಲ ಮಾಡಿಕೊಡಲು ಗೋವಾ ಸರಕಾರ ಮುಂದಾಗಿದೆ. ಈಗಾಗಲೇ ಗಡಿಭಾಗದಲ್ಲಿ ಅಬಕಾರಿ, ಪೊಲೀಸ್, ವಾಣಿಜ್ಯ ತೆರಿಗೆ, ಕಸ್ಟಂ, ಭೂವಿಜ್ಞಾನ ಇಲಾಖೆ ಕಚೇರಿಗಳಿವೆ. ಆದರೂ, ಹೊಸದಾಗಿ ಗೋವಾ ಸರಕಾರ ಪ್ರಾರಂಭಿಸಲು ಉದ್ದೇಶಿಸಿರುವ ವಾಹನ ಪ್ರವೇಶ ತೆರಿಗೆ ವಸೂಲಾತಿ ಗೇಟ್ನ್ನು ದೂರದಲ್ಲಿರುವ ಶೇಳಿ ಎನ್ನುವ ಗ್ರಾಮದಲ್ಲಿ ಸ್ಥಾಪಿಸಲಾಗುತ್ತಿದೆ.
ಕಾರವಾರ ಹಾಗೂ ಗೋವಾ ಗಡಿ ಪ್ರಾರಂಭದಲ್ಲಿ ಪೊಳೆಂ ಎನ್ನುವ ಊರಿದೆ. ಇಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಲಿಕ್ಕರ್(ಮದ್ಯ) ವ್ಯವಹಾರ ನಡೆಯುತ್ತದೆ. ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಅಕ್ಕ-ಪಕ್ಕದಲ್ಲಿಯೇ ಸುಮಾರು ಹತ್ತಕ್ಕೂ ಹೆಚ್ಚು ಲಿಕ್ಕರ್ (ಮದ್ಯ)ಹೋಲ್ಸೇಲ್ ಅಂಗಡಿಗಳು ಮತ್ತು ಹದಿನೈದಕ್ಕೂ ಹೆಚ್ಚು ಬಾರ್ ಮತ್ತು ರೆಸ್ಟೋರೆಂಟ್ಗಳು, ಐದಾರು ಚಿಕ್ಕಪುಟ್ಟ ಅಂಗಡಿಗಳಿವೆ. ಈ ಭಾಗದಲ್ಲಿರುವ ಅಂಗಡಿಗಳಲ್ಲಿ ಲಿಕ್ಕರ್ ಮಾರಾಟವಾಗಬೇಕೆಂದರೆ ಇಲ್ಲಿಂದ ಆರು ಕಿ.ಮಿ. ದೂರದಲ್ಲಿರುವ ಮಾಜಾಳಿ, ಸದಾಶಿವಗಡ ಮತ್ತು ಹತ್ತು ಕಿ.ಮಿ. ದೂರದಲ್ಲಿರುವ ಕಾರವಾರದಿಂದಲೇ ಗ್ರಾಹಕರು ಹೋಗಬೇಕು. ಇಲ್ಲವಾದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದಲೇ ವ್ಯಾಪಾರ ವಹಿವಾಟು ನಡೆಯಬೇಕು.
ಗೋವಾ ಸರಕಾರದ ದಾಖಲೆಯಲ್ಲಿ ಪೋಳೆಂ ಗಡಿ ಭಾಗದ ಕುಗ್ರಾಮವಾಗಿದೆ. ಇಲ್ಲಿಯ ಜನಗಳು ಅಲ್ಲಸ್ವಲ್ಪ ಕೃಷಿ ಭೂಮಿ ಹೊಂದಿದ್ದರೂ ಕೂಡ ಮುಖ್ಯವಾಗಿ ಜೀವನಾಧಾರವೆಂದರೆ ಬಾರ್ ಮತ್ತು ರೆಸ್ಟೋರೆಂಟ್ಗಳು. ನಿತ್ಯ ಸಂಜೆಯಾಗುತ್ತಲೇ ಪೋಳೆಂನ ಬಾರ್ಗಳ ಮುಂದೆ ಕಾರವಾರದ ನೋಂದಣಿ ಹೊಂದಿರುವ ದ್ವಿಚಕ್ರವಾಹನಗಳು ಮತ್ತು ನಾಲ್ಕು ಚಕ್ರದ ವಾಹನಗಳ ಸಾಲು ನಿಂತಿರುತ್ತದೆ. ರಜಾ ಸಂದರ್ಭ ಬಂತೆಂದರೆ ಬಾರ್ಗಳಲ್ಲಿ ಹೊಟೇಲ್ ವಾತಾವರಣವನ್ನು ಕಾಣಬಹುದು. ಅಷ್ಟರ ಮಟ್ಟಿಗೆ ಪೋಳೆಂನ ಬಾರ್ಗಳಿಗೆ ಕಾರವಾರಿಗರೇ ಗ್ರಾಹಕರಾಗಿದ್ದಾರೆ.
ಇದರ ಜೊತೆಯಲ್ಲಿ ಇನ್ನೊಂದು ವ್ಯವಹಾರವೆಂದರೆ ಪೆಟ್ರೋಲ್ ಬಂಕ್. ಇದು ಕೂಡ ಪೊಳೆಂದಲ್ಲಿದೆ. ಇದಕ್ಕೂ ಕೂಡ ಕಾರವಾರಿಗರೇ ಗ್ರಾಹಕರಾಗಿದ್ದಾರೆ. ಕಾರವಾರಿಗರು ಯಾವುದೇ ಅಡೆತಡೆಯಿಲ್ಲದೆ ಇಲ್ಲಿಂದ ತಮ್ಮ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ತುಂಬಿಸಿಕೊಂಡು ಸಾಗಬಹುದಾಗಿದೆ. ಕಾರವಾರಕ್ಕಿಂತ 18 ರೂ. ಕಡಿಮೆಯಲ್ಲಿ ದೊರೆಯುತ್ತಿರುವುದರಿಂದ ಸಹಜವಾಗಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಿಗರು ಈಚೆಗೆ ಧಾವಿಸಿ ಬರುತ್ತಿದ್ದಾರೆ.
ಈ ಟೋಲ್ಗೇಟ್ನ್ನು ಗಡಿಯಿಂದ ಮೂರು ಕಿ.ಮಿ. ದೂರದ ಶೇಳಿಯಲ್ಲಿ ಸ್ಥಾಪಿಸಲು ಗೋವಾದ ಪೊಳೆಂ ಭಾಗದ ಬಾರ್ಗಳ ಮಾಲಿಕರು ಹಾಗೂ ಪೆಟ್ರೋಲ್ ಬಂಕ್ ಮಾಲಿಕರ ಲಾಬಿ ಕೆಲಸ ಮಾಡಿದೆ ಎನ್ನಲಾಗುತ್ತಿದೆ. ಕರ್ನಾಟಕದ ಗಡಿ ಭಾಗದಲ್ಲಿರುವ ಬಾರ್ಗಳು ಹಾಗೂ ಪೆಟ್ರೋಲ್ ಬಂಕ್ಗಳು ಕರ್ನಾಟಕದ ಗ್ರಾಹಕರನ್ನೇ ಹೆಚ್ಚಿನದಾಗಿ ಅವಲಂಬಿಸಿರುವುದು ಇದಕ್ಕೆ ಕಾರಣ. ಗೋವಾ ಸರ್ಕಾರದ ಈ ನೀತಿ ತಮ್ಮ ಬಾರ್ ಮಾಲಿಕರನ್ನು ರಕ್ಷಿಸುವ ತಂತ್ರವಾಗಿದೆ. ಒಂದು ವೇಳೆ ಗೋವಾ ಸರ್ಕಾರ ಪೊಳೆಂನ ಗಡಿಯಲ್ಲಿಯೇ ಪ್ರವೇಶ ಶುಲ್ಕ ವಿಧಿಸುವ ಟೋಲ್ ನಿರ್ಮಿಸಿದರೆ ಕಾರವಾರದ ಜನರು ಗೋವಾಕ್ಕೆ ಪ್ರವೇಶಿಸುವುದಿಲ್ಲ. ಆಗ ಗಡಿ ಭಾಗದಲ್ಲಿನ ವ್ಯಾಪಾರಸ್ಥರಿಗೆ ಭಾರಿ ಹಾನಿಯಾಗುತ್ತದೆ.

ಲಂಬಾಪುರ ಭಾಗದಲ್ಲಿ ಹೆಚ್ಚಿದೆ ಚಿರತೆ ಹಾವಳಿ


ಕಳೆದ ಕೆಲವು ದಿನಗಳಿಂದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಲಂಬಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಐಸೂರು, ಅರಿಶಿನಗೋಡ ಸುತ್ತ ಮುತ್ತ ಹಲವು ಜಾನುವಾರುಗಳನ್ನು ಚಿರತೆ ಕೊಂದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಇದರಿಂದಾಗಿ ಆ ಭಾಗದ ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಪಶ್ಚಿಮಘಟ್ಟ ಪ್ರದೇಶದಲ್ಲಿರುವ ಐಸೂರು ಹಾಗೂ ಸುತ್ತಮುತ್ತ ಕಳೆದ ಕೆಲವು ದಿನಗಳಿಂದ 3-4 ಚಿರತೆಗಳು ಜನವಸತಿಯ ಸಮೀಪ ಕಾಣಿಸಿಕೊಳ್ಳುತ್ತಿದ್ದು ಸಂಜೆಯ ವೇಳೆಗೆ ಮನೆ ಸಮೀಪವೇ ಬರುತ್ತಿದೆ. ಕೊಟ್ಟಿಗೆ ಹತ್ತಿರ ಬಂದು ಕೂಗುತ್ತಿದ್ದ ಚಿರತೆಗಳು ಕೊಟ್ಟಿಗೆ ಒಳಗೆ ನುಗ್ಗಿ ಜಾನುವಾರುಗಳನ್ನು ಕೊಲ್ಲುವ ಪ್ರಯತ್ನ ನಡೆಸಿದೆ. ಐಸೂರಿನ ಕೃಷ್ಣಾ ಗೋವಿಂದ ನಾಯ್ಕ, ಅಣ್ಣಪ್ಪ ರಾಮಾ ನಾಯ್ಕ, ಈರಾ ರಾಮ ನಾಯ್ಕ, ಕೆಳಗಿನಸಸಿಯ ಪರಮೇಶ್ವರ ಗ.ನಾಯ್ಕ ಎನ್ನುವವರ ಹಸುಗಳು ಹಾಗೂ ಅರಿಶಿನಗೋಡಿನ ರವಿ ಈರಾ ನಾಯ್ಕ ಎನ್ನುವವರ ಎತ್ತಿನ ಹೋರಿಯನ್ನು ಕೊಂದಿದೆ. ಕ್ಯಾದಗಿ ಸಮೀಪದ ಹೆಗ್ಗೇರಿ-ಗುಡ್ಡೆಕೊಪ್ಪದಲ್ಲಿ ಆಕಳೊಂದು ಚಿರತೆಗೆ ಬಲಿಯಾಗಿದೆ. ಕೃಷಿಗೆ ಅಗತ್ಯವಾದ ಆಕಳು, ಹೋರಿ ಮುಂತಾದವು ಚಿರತೆಗಳಿಗೆ ಸರಣಿಯೋಪಾದಿಯಲ್ಲಿ ಬಲಿಯಾಗುತ್ತಿದ್ದು ಬೆಲೆಬಾಳುವ ಜಾನುವಾರುಗಳ ನಷ್ಟದ ಜೊತೆಗೆ ಸಾರ್ವಜನಿಕರು ಸಂಚರಿಸಲು ಭಯಪಡಬೇಕಾದ ವಾತಾವರಣ ಸೃಷ್ಟಿಯಾಗಿದೆ. ಶಾಲಾ ಮಕ್ಕಳು ಹಾಗೂ ಮಹಿಳೆಯರಂತೂ ಜೀವವನ್ನು ಅಂಗೈಯಲ್ಲಿ ಹಿಡಿದಿಟ್ಟುಕೊಂಡು ಸಂಚರಿಸಬೇಕಾದ ಸ್ಥಿತಿ ಎದುರಾಗಿದೆ.
ಸೂಕ್ಷ್ಮ ಹಾಗೂ ಚತುರ ಕಾಡು ಪ್ರಾಣಿಗಳಲ್ಲಿ ಒಂದಾಗಿರುವ ಚಿರತೆ ಅತ್ಯಂತ ಅಪಾಯಕಾರಿ. ಹುಲಿಗಿಂತಲೂ ಚಾಣಾಕ್ಷವಾಗಿರುವ ಇದು ಸಲೀಸಾಗಿ ಮರವನ್ನೇರಬಲ್ಲದು. ಸುಳಿವನ್ನೇ ಕೊಡದೆ ಬೇಟೆಯಾಡುವ ನಿಪುಣ ಪ್ರಾಣಿ ಇದಾಗಿರುವುದರಿಂದ ಅದರಿಂದ ಎದುರಾಗುವ ಅಪಾಯವೂ ಹೆಚ್ಚು. ಹಾಗಾಗಿ, ಜನತೆ ಚಿರತೆಗಳ ಸರಣಿ ಬೇಟೆಗೆ ಕಂಗಾಲಾಗಿದ್ದಾರೆ. ಈ ಚಿರತೆಗಳನ್ನು ಕಣ್ಣಾರೆ ನೋಡಿರುವ ಈ ಭಾಗದ ಹಲವರು 3-4 ಚಿರತೆಗಳಿವೆ ಎಂದು ಗುರುತಿಸಿದ್ದಾರೆ. ಕಾಡಿನಲ್ಲಿ ಆಹಾರ ದೊರೆಯದ ಕಾರಣ ಅವು ನಾಡಿಗೆ ಬಂದಿವೆ. ಸುಲಭವಾಗಿ ಸಿಗುವ ಬೇಟೆಯಾದ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುವ ಚಿರತೆಗಳು ಏನೂ ಸಿಗದಿದ್ದಾಗ ನಾಯಿಗಳನ್ನು ಹೊತ್ತೊಯ್ಯಲು ಮುಂದಾಗಬಹುದು. ತಮಗೆ ಭಯವಾದಾಗ ನಾಯಿಗಳು ಮನುಷ್ಯರ ಬಳಿ ಸೇರಿಕೊಂಡಾಗ ಚಿರತೆಗಳು ಮನುಷ್ಯರ ಮೇಲೂ ದಾಳಿ ನಡೆಸುವ ಸಾಧ್ಯತೆಯಿರುತ್ತದೆ. ಒಮ್ಮೆ ಮನುಷ್ಯ ರಕ್ತದ ರುಚಿ ನೋಡಿದ ಚಿರತೆಗಳು ನಂತರದಲ್ಲಿ ನಿರಂತರವಾಗಿ ಜನರ ಮೇಲೆ ಎರಗಬಹುದು.

ನೇಪಥ್ಯಕ್ಕೆ ಸರಿದ 50 ಪೈಸೆ ನಾಣ್ಯಗಳು

ಎಲ್ಲಿಯೂ ಸದ್ದು ಗದ್ದಲವಿಲ್ಲದೆ ಯಾರಿಗೂ ಗೊತ್ತಾಗದ ರೀತಿಯಲ್ಲಿ 50 ಪೈಸೆ ನಾಣ್ಯಗಳು ಸವಕಲಾಗಿವೆ. ಈಗ 50ಪೈಸೆಗೆ ಏನೂ ಬರುತ್ತಿಲ್ಲ. ಯಾರಿಗಾದರೂ ನಾವು 50 ಪೈಸೆ ದಾನ ಮಾಡಲು ಹೋದರೆ ಭಿಕ್ಷುಕರು ಅದನ್ನು ತಿರಸ್ಕರಿಸುತ್ತಾರೆ. ಅಂಗಡಿಯಲ್ಲಿ ನಾವು ಏನಾದರೂ ಸಾಮಾನು ಕೊಂಡುಕೊಂಡಾಗ 50 ಪೈಸೆ ಚಿಲ್ಲರೆ ಉಳಿದರೆ ಅದಕ್ಕೆ ಚಾಕಲೇಟ್ ನೀಡುತ್ತಾರೆ. ಕಾರಣ ಕೇಳಿದರೆ ತಟ್ಟನೆ ಉತ್ತರ ಸಿದ್ದ 50 ಪೈಸೆ ನಮ್ಮಲ್ಲಿ ಇಲ್ಲ. ಅಷ್ಟೇ ಅಲ್ಲ. 50 ಪೈಸೆ ಚಲಾವಣೆಯಲ್ಲಿಯೇ ಇಲ್ಲ ಎಂದು ಬಿಡುತ್ತಾರೆ. 50 ಪೈಸೆಗೆ ಈಗ ಎಲ್ಲೂ ಬೆಲೆಯೇ ಇಲ್ಲ. ಅಂದ ಹಾಗೆ ಈ 50 ಪೈಸೆ ನಾಣ್ಯವನ್ನು ಯಾರು ಚಲಾವಣೆಯಿಂದ ಹಿಂದಕ್ಕೆ ಪಡೆಯಬೇಕು. ಆರ್.ಬಿ.ಐ ಗವರ್ನರ್ ಅವರು ಮುಂದಾಗಿ ಮಾರುಕಟ್ಟೆಯಲ್ಲಿನ ಬೆಲೆಯನ್ನು ಲೆಕ್ಕ ಹಾಕಿ ಚಲಾವಣೆಯಿಂದ ಹಿಂದಕ್ಕೆ ಪಡೆಯಬೇಕು. ಆದರೆ, ಅಧಿಕೃತವಾಗಿ ಈ 50 ಪೈಸೆ ನಾಣ್ಯವನ್ನು ಚಲಾವಣೆಯಿಂದ ಹಿಂದಕ್ಕೆ ತೆಗೆದುಕೊಂಡ ಬಗ್ಗೆ ಯಾವುದೇ ರೀತಿಯಲ್ಲಿ ಜನಸಾಮಾನ್ಯರಿಗೆ ಮಾಹಿತಿ ಇಲ್ಲ. ಆದರೂ ಈ 50 ಪೈಸೆ ನಾಣ್ಯ ಮಾತ್ರ ಚಲಾವಣೆಯಿಲ್ಲದ ಸವಕಲು ನಾಣ್ಯವಾಗಿದೆ.