ಲಂಬಾಪುರ ಭಾಗದಲ್ಲಿ ಹೆಚ್ಚಿದೆ ಚಿರತೆ ಹಾವಳಿ


ಕಳೆದ ಕೆಲವು ದಿನಗಳಿಂದ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಲಂಬಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಐಸೂರು, ಅರಿಶಿನಗೋಡ ಸುತ್ತ ಮುತ್ತ ಹಲವು ಜಾನುವಾರುಗಳನ್ನು ಚಿರತೆ ಕೊಂದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಇದರಿಂದಾಗಿ ಆ ಭಾಗದ ಜನತೆ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಪಶ್ಚಿಮಘಟ್ಟ ಪ್ರದೇಶದಲ್ಲಿರುವ ಐಸೂರು ಹಾಗೂ ಸುತ್ತಮುತ್ತ ಕಳೆದ ಕೆಲವು ದಿನಗಳಿಂದ 3-4 ಚಿರತೆಗಳು ಜನವಸತಿಯ ಸಮೀಪ ಕಾಣಿಸಿಕೊಳ್ಳುತ್ತಿದ್ದು ಸಂಜೆಯ ವೇಳೆಗೆ ಮನೆ ಸಮೀಪವೇ ಬರುತ್ತಿದೆ. ಕೊಟ್ಟಿಗೆ ಹತ್ತಿರ ಬಂದು ಕೂಗುತ್ತಿದ್ದ ಚಿರತೆಗಳು ಕೊಟ್ಟಿಗೆ ಒಳಗೆ ನುಗ್ಗಿ ಜಾನುವಾರುಗಳನ್ನು ಕೊಲ್ಲುವ ಪ್ರಯತ್ನ ನಡೆಸಿದೆ. ಐಸೂರಿನ ಕೃಷ್ಣಾ ಗೋವಿಂದ ನಾಯ್ಕ, ಅಣ್ಣಪ್ಪ ರಾಮಾ ನಾಯ್ಕ, ಈರಾ ರಾಮ ನಾಯ್ಕ, ಕೆಳಗಿನಸಸಿಯ ಪರಮೇಶ್ವರ ಗ.ನಾಯ್ಕ ಎನ್ನುವವರ ಹಸುಗಳು ಹಾಗೂ ಅರಿಶಿನಗೋಡಿನ ರವಿ ಈರಾ ನಾಯ್ಕ ಎನ್ನುವವರ ಎತ್ತಿನ ಹೋರಿಯನ್ನು ಕೊಂದಿದೆ. ಕ್ಯಾದಗಿ ಸಮೀಪದ ಹೆಗ್ಗೇರಿ-ಗುಡ್ಡೆಕೊಪ್ಪದಲ್ಲಿ ಆಕಳೊಂದು ಚಿರತೆಗೆ ಬಲಿಯಾಗಿದೆ. ಕೃಷಿಗೆ ಅಗತ್ಯವಾದ ಆಕಳು, ಹೋರಿ ಮುಂತಾದವು ಚಿರತೆಗಳಿಗೆ ಸರಣಿಯೋಪಾದಿಯಲ್ಲಿ ಬಲಿಯಾಗುತ್ತಿದ್ದು ಬೆಲೆಬಾಳುವ ಜಾನುವಾರುಗಳ ನಷ್ಟದ ಜೊತೆಗೆ ಸಾರ್ವಜನಿಕರು ಸಂಚರಿಸಲು ಭಯಪಡಬೇಕಾದ ವಾತಾವರಣ ಸೃಷ್ಟಿಯಾಗಿದೆ. ಶಾಲಾ ಮಕ್ಕಳು ಹಾಗೂ ಮಹಿಳೆಯರಂತೂ ಜೀವವನ್ನು ಅಂಗೈಯಲ್ಲಿ ಹಿಡಿದಿಟ್ಟುಕೊಂಡು ಸಂಚರಿಸಬೇಕಾದ ಸ್ಥಿತಿ ಎದುರಾಗಿದೆ.
ಸೂಕ್ಷ್ಮ ಹಾಗೂ ಚತುರ ಕಾಡು ಪ್ರಾಣಿಗಳಲ್ಲಿ ಒಂದಾಗಿರುವ ಚಿರತೆ ಅತ್ಯಂತ ಅಪಾಯಕಾರಿ. ಹುಲಿಗಿಂತಲೂ ಚಾಣಾಕ್ಷವಾಗಿರುವ ಇದು ಸಲೀಸಾಗಿ ಮರವನ್ನೇರಬಲ್ಲದು. ಸುಳಿವನ್ನೇ ಕೊಡದೆ ಬೇಟೆಯಾಡುವ ನಿಪುಣ ಪ್ರಾಣಿ ಇದಾಗಿರುವುದರಿಂದ ಅದರಿಂದ ಎದುರಾಗುವ ಅಪಾಯವೂ ಹೆಚ್ಚು. ಹಾಗಾಗಿ, ಜನತೆ ಚಿರತೆಗಳ ಸರಣಿ ಬೇಟೆಗೆ ಕಂಗಾಲಾಗಿದ್ದಾರೆ. ಈ ಚಿರತೆಗಳನ್ನು ಕಣ್ಣಾರೆ ನೋಡಿರುವ ಈ ಭಾಗದ ಹಲವರು 3-4 ಚಿರತೆಗಳಿವೆ ಎಂದು ಗುರುತಿಸಿದ್ದಾರೆ. ಕಾಡಿನಲ್ಲಿ ಆಹಾರ ದೊರೆಯದ ಕಾರಣ ಅವು ನಾಡಿಗೆ ಬಂದಿವೆ. ಸುಲಭವಾಗಿ ಸಿಗುವ ಬೇಟೆಯಾದ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುವ ಚಿರತೆಗಳು ಏನೂ ಸಿಗದಿದ್ದಾಗ ನಾಯಿಗಳನ್ನು ಹೊತ್ತೊಯ್ಯಲು ಮುಂದಾಗಬಹುದು. ತಮಗೆ ಭಯವಾದಾಗ ನಾಯಿಗಳು ಮನುಷ್ಯರ ಬಳಿ ಸೇರಿಕೊಂಡಾಗ ಚಿರತೆಗಳು ಮನುಷ್ಯರ ಮೇಲೂ ದಾಳಿ ನಡೆಸುವ ಸಾಧ್ಯತೆಯಿರುತ್ತದೆ. ಒಮ್ಮೆ ಮನುಷ್ಯ ರಕ್ತದ ರುಚಿ ನೋಡಿದ ಚಿರತೆಗಳು ನಂತರದಲ್ಲಿ ನಿರಂತರವಾಗಿ ಜನರ ಮೇಲೆ ಎರಗಬಹುದು.