ಶೇಳಿಯಲ್ಲಿ ತಲೆ ಎತ್ತಲಿದೆ ಪ್ರವೇಶ ಶುಲ್ಕದ ಗೇಟ್


ಗೋವಾದಲ್ಲಿ ಕಳೆದ ವರ್ಷದಿಂದ ಅದಿರು ವ್ಯವಹಾರ ಸ್ಥಗಿತಗೊಂಡಿದೆ. ಅಲ್ಲದೇ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕಡಿಮೆ ಮಾಡಿದೆ. ಈ ನಷ್ಟವನ್ನು ಸರಿದೂಗಿಸುವ ಮೂಲಕ ಆದಾಯದ ಮೂಲ ಹೆಚ್ಚಿಸಿಕೊಳ್ಳಲು ಗೋವಾ ಸರಕಾರ ಅನ್ಯರಾಜ್ಯದ ವಾಹನಗಳಿಂದ ತೆರಿಗೆ ವಸೂಲಿ ಮಾಡುವ ನೂತನ ನೀತಿಯನ್ನು ಜಾರಿಗೆ ತಂದಿದೆ. ಹಾಗಾಗಿ, ೆ.1 ರಿಂದ ಗೋವಾ ಪ್ರವೇಶಿಸುವ ದ್ವಿಚಕ್ರ ವಾಹನಗಳಿಗೆ 15 ರೂ. 4 ಚಕ್ರದ ವಾಹನಗಳಿಗೆ 250 ರೂ. ಲಾರಿ ಸೇರಿದಂತೆ ಭಾರಿ ವಾಹನಗಳಿಗೆ 665 ರೂ. ನಿಗದಿಗೊಳಿಸಿದೆ. ಕರ್ನಾಟಕ-ಗೋವಾ ಗಡಿಯಲ್ಲಿ ಗೋವಾ ಗಡಿಭಾಗದಿಂದ ಸುಮಾರು ಮೂರು ಕಿ.ಮಿ. ದೂರದಲ್ಲಿ ವಾಹನ ಪ್ರವೇಶ ಶುಲ್ಕ ಗೇಟ್ನ್ನು ಸ್ಥಾಪಿಸುವ ಮೂಲಕ ಗಡಿಭಾಗದಲ್ಲಿರುವ ವ್ಯಾಪಾರ ವಹಿವಾಟುದಾರರಿಗೆ ಅನುಕೂಲ ಮಾಡಿಕೊಡಲು ಗೋವಾ ಸರಕಾರ ಮುಂದಾಗಿದೆ. ಈಗಾಗಲೇ ಗಡಿಭಾಗದಲ್ಲಿ ಅಬಕಾರಿ, ಪೊಲೀಸ್, ವಾಣಿಜ್ಯ ತೆರಿಗೆ, ಕಸ್ಟಂ, ಭೂವಿಜ್ಞಾನ ಇಲಾಖೆ ಕಚೇರಿಗಳಿವೆ. ಆದರೂ, ಹೊಸದಾಗಿ ಗೋವಾ ಸರಕಾರ ಪ್ರಾರಂಭಿಸಲು ಉದ್ದೇಶಿಸಿರುವ ವಾಹನ ಪ್ರವೇಶ ತೆರಿಗೆ ವಸೂಲಾತಿ ಗೇಟ್ನ್ನು ದೂರದಲ್ಲಿರುವ ಶೇಳಿ ಎನ್ನುವ ಗ್ರಾಮದಲ್ಲಿ ಸ್ಥಾಪಿಸಲಾಗುತ್ತಿದೆ.
ಕಾರವಾರ ಹಾಗೂ ಗೋವಾ ಗಡಿ ಪ್ರಾರಂಭದಲ್ಲಿ ಪೊಳೆಂ ಎನ್ನುವ ಊರಿದೆ. ಇಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಲಿಕ್ಕರ್(ಮದ್ಯ) ವ್ಯವಹಾರ ನಡೆಯುತ್ತದೆ. ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯ ಅಕ್ಕ-ಪಕ್ಕದಲ್ಲಿಯೇ ಸುಮಾರು ಹತ್ತಕ್ಕೂ ಹೆಚ್ಚು ಲಿಕ್ಕರ್ (ಮದ್ಯ)ಹೋಲ್ಸೇಲ್ ಅಂಗಡಿಗಳು ಮತ್ತು ಹದಿನೈದಕ್ಕೂ ಹೆಚ್ಚು ಬಾರ್ ಮತ್ತು ರೆಸ್ಟೋರೆಂಟ್ಗಳು, ಐದಾರು ಚಿಕ್ಕಪುಟ್ಟ ಅಂಗಡಿಗಳಿವೆ. ಈ ಭಾಗದಲ್ಲಿರುವ ಅಂಗಡಿಗಳಲ್ಲಿ ಲಿಕ್ಕರ್ ಮಾರಾಟವಾಗಬೇಕೆಂದರೆ ಇಲ್ಲಿಂದ ಆರು ಕಿ.ಮಿ. ದೂರದಲ್ಲಿರುವ ಮಾಜಾಳಿ, ಸದಾಶಿವಗಡ ಮತ್ತು ಹತ್ತು ಕಿ.ಮಿ. ದೂರದಲ್ಲಿರುವ ಕಾರವಾರದಿಂದಲೇ ಗ್ರಾಹಕರು ಹೋಗಬೇಕು. ಇಲ್ಲವಾದರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದಲೇ ವ್ಯಾಪಾರ ವಹಿವಾಟು ನಡೆಯಬೇಕು.
ಗೋವಾ ಸರಕಾರದ ದಾಖಲೆಯಲ್ಲಿ ಪೋಳೆಂ ಗಡಿ ಭಾಗದ ಕುಗ್ರಾಮವಾಗಿದೆ. ಇಲ್ಲಿಯ ಜನಗಳು ಅಲ್ಲಸ್ವಲ್ಪ ಕೃಷಿ ಭೂಮಿ ಹೊಂದಿದ್ದರೂ ಕೂಡ ಮುಖ್ಯವಾಗಿ ಜೀವನಾಧಾರವೆಂದರೆ ಬಾರ್ ಮತ್ತು ರೆಸ್ಟೋರೆಂಟ್ಗಳು. ನಿತ್ಯ ಸಂಜೆಯಾಗುತ್ತಲೇ ಪೋಳೆಂನ ಬಾರ್ಗಳ ಮುಂದೆ ಕಾರವಾರದ ನೋಂದಣಿ ಹೊಂದಿರುವ ದ್ವಿಚಕ್ರವಾಹನಗಳು ಮತ್ತು ನಾಲ್ಕು ಚಕ್ರದ ವಾಹನಗಳ ಸಾಲು ನಿಂತಿರುತ್ತದೆ. ರಜಾ ಸಂದರ್ಭ ಬಂತೆಂದರೆ ಬಾರ್ಗಳಲ್ಲಿ ಹೊಟೇಲ್ ವಾತಾವರಣವನ್ನು ಕಾಣಬಹುದು. ಅಷ್ಟರ ಮಟ್ಟಿಗೆ ಪೋಳೆಂನ ಬಾರ್ಗಳಿಗೆ ಕಾರವಾರಿಗರೇ ಗ್ರಾಹಕರಾಗಿದ್ದಾರೆ.
ಇದರ ಜೊತೆಯಲ್ಲಿ ಇನ್ನೊಂದು ವ್ಯವಹಾರವೆಂದರೆ ಪೆಟ್ರೋಲ್ ಬಂಕ್. ಇದು ಕೂಡ ಪೊಳೆಂದಲ್ಲಿದೆ. ಇದಕ್ಕೂ ಕೂಡ ಕಾರವಾರಿಗರೇ ಗ್ರಾಹಕರಾಗಿದ್ದಾರೆ. ಕಾರವಾರಿಗರು ಯಾವುದೇ ಅಡೆತಡೆಯಿಲ್ಲದೆ ಇಲ್ಲಿಂದ ತಮ್ಮ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ತುಂಬಿಸಿಕೊಂಡು ಸಾಗಬಹುದಾಗಿದೆ. ಕಾರವಾರಕ್ಕಿಂತ 18 ರೂ. ಕಡಿಮೆಯಲ್ಲಿ ದೊರೆಯುತ್ತಿರುವುದರಿಂದ ಸಹಜವಾಗಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಿಗರು ಈಚೆಗೆ ಧಾವಿಸಿ ಬರುತ್ತಿದ್ದಾರೆ.
ಈ ಟೋಲ್ಗೇಟ್ನ್ನು ಗಡಿಯಿಂದ ಮೂರು ಕಿ.ಮಿ. ದೂರದ ಶೇಳಿಯಲ್ಲಿ ಸ್ಥಾಪಿಸಲು ಗೋವಾದ ಪೊಳೆಂ ಭಾಗದ ಬಾರ್ಗಳ ಮಾಲಿಕರು ಹಾಗೂ ಪೆಟ್ರೋಲ್ ಬಂಕ್ ಮಾಲಿಕರ ಲಾಬಿ ಕೆಲಸ ಮಾಡಿದೆ ಎನ್ನಲಾಗುತ್ತಿದೆ. ಕರ್ನಾಟಕದ ಗಡಿ ಭಾಗದಲ್ಲಿರುವ ಬಾರ್ಗಳು ಹಾಗೂ ಪೆಟ್ರೋಲ್ ಬಂಕ್ಗಳು ಕರ್ನಾಟಕದ ಗ್ರಾಹಕರನ್ನೇ ಹೆಚ್ಚಿನದಾಗಿ ಅವಲಂಬಿಸಿರುವುದು ಇದಕ್ಕೆ ಕಾರಣ. ಗೋವಾ ಸರ್ಕಾರದ ಈ ನೀತಿ ತಮ್ಮ ಬಾರ್ ಮಾಲಿಕರನ್ನು ರಕ್ಷಿಸುವ ತಂತ್ರವಾಗಿದೆ. ಒಂದು ವೇಳೆ ಗೋವಾ ಸರ್ಕಾರ ಪೊಳೆಂನ ಗಡಿಯಲ್ಲಿಯೇ ಪ್ರವೇಶ ಶುಲ್ಕ ವಿಧಿಸುವ ಟೋಲ್ ನಿರ್ಮಿಸಿದರೆ ಕಾರವಾರದ ಜನರು ಗೋವಾಕ್ಕೆ ಪ್ರವೇಶಿಸುವುದಿಲ್ಲ. ಆಗ ಗಡಿ ಭಾಗದಲ್ಲಿನ ವ್ಯಾಪಾರಸ್ಥರಿಗೆ ಭಾರಿ ಹಾನಿಯಾಗುತ್ತದೆ.