ಜೌಗು ತಾಣಗಳೀಗ ಕಾಣುತ್ತಲೇ ಇಲ್ಲ


ಅಲ್ಲಿ ದಟ್ಟ ಹಸಿರಿದೆ, ಮೇ ತಿಂಗಳ ಅಖೈರಿನಲ್ಲೂ ನಿಂತ ನೆಲ ಹಸಿ ಹಸಿ ಎಂದರೆ ಅದು ಕಣ್ಮರೆಯ ದಾರಿಯಲ್ಲಿನ ಜೌಗು ಪ್ರದೇಶಗಳು ಎಂದೇ ಅರ್ಥ. ನೆಲದ ಮತ್ತು ಜಲದ ನೆಲೆ ಇದು. ನೆಲ ಮತ್ತು ಜಲದ ಮೂಲ ನಿಲ್ದಾಣವೂ ಇದೇ. ಕಾಡಿನ ನಡುವೆಯ ಕೊಳ್ಳದಲ್ಲಿ ನೆಲ ಮತ್ತು ಜಲ ಸಂಧಿಸುವ ತಾಣವೇ ಜೌಗು. ಇದನ್ನು ಜವಗು, ಜಡ್ಡಿ , ಮಿರಿಸ್ಟಿಕಾ ಜವಗು, ರಾಂಪತ್ರೆ ಜಡ್ಡಿ ಎಂದೂ ಕರೆಯುತ್ತಾರೆ. ಕಾಡಿನ ತಗ್ಗಿನಲ್ಲಿ ಇರುವ ಬೆರಳೆಣಿಕೆಯ ಇಂತಹ ಪ್ರದೇಶಗಳು ಇಡೀ ಪರಿಸರ ವ್ಯವಸ್ಥೆಯ ಮಹತ್ವದ ಸ್ಥಾನ ಪಡೆದುಕೊಂಡಿವೆ.
ಜೌಗು ಪ್ರದೇಶಗಳು ಅಪರೂಪದ, ಕೆಲವೇ ಕೆಲವು ಕಡೆ ಕಾಣಸಿಗುವ ಅನೇಕ ಜಾತಿಯ ವೃಕ್ಷಗಳು, ಸಸ್ತನಿಗಳು, ಜೀವ ವೈವಿಧ್ಯಗಳ ಕಣಜ. ನೈಸರ್ಗಿಕ ಅರಣ್ಯದ ತಾಯ್ನೆಲ. ನೀರು, ಭೂಮಿ ಎರಡರಲ್ಲೂ ವಾಸಿಸಬಲ್ಲ, ಉಭಯ ವಾಸಿಗಳ ಆವಾಸ ಸ್ಥಾನ, ಶುದ್ಧ ನೀರಿನ ಮೂಲವೂ ಇದೆ. ಒಂದಂಕಿ ಮರ, ಮಳೆ ನೇರಲು, ದೊಡ್ಡ ಪತ್ರೆ ಹಾಗೂ ಇತರ ಸಸ್ಯಗಳು, ಹಾವು, ವಿವಿಧ ಬಗೆಯ ಕಪ್ಪೆಗಳು, ಚಿಟ್ಟೆಗಳು, ಜೇಡಗಳು ನೆಮ್ಮದಿಯ ಉಸಿರು ಕಾಣುವ ನೆಲಗಟ್ಟು. ಜೌಗು ಪ್ರದೇಶವು ಪಶ್ಚಿಮ ಘಟ್ಟದಲ್ಲಿ ಅಲ್ಲಲ್ಲಿ ಇವೆ. ಗೋವಾ, ಕರ್ನಾಟಕ, ಕೇರಳದಲ್ಲಿ ಇಂತಹ ಪ್ರದೇಶಗಳು ಅಧಿಕ ಇವೆ. ಕರ್ನಾಟಕದ ಉಂಚಳ್ಳಿ, ಕತ್ತಲೆಕಾನು, ಮಹಿಮೆಯಂತಹ ಕಾಡಿನಲ್ಲಿ ಮಾತ್ರ ಈವರೆಗೆ ಕಂಡು ಬಂದಿವೆ.
1977ರಲ್ಲಿ ಇರಾನ್ನ ರಾಮ್ಸಾರನಲ್ಲಿ ನಡೆದ ಅಂತಾರಾಷ್ಟ್ರೀಯ ಶೃಂಗಮೇಳದಲ್ಲಿ ವಿವಿಧ ದೇಶಗಳ ಸರಕಾರಿ ಪ್ರತಿನಿಧಿಗಳು ಜೌಗು ಪ್ರದೇಶದ ರಕ್ಷಣೆಗೆ ಸಹಿ ಹಾಕಿವೆ. ಜಗತ್ತಿನಲ್ಲಿ 2,100 ಜೌಗು ಪ್ರದೇಶಗಳಿವೆ. ಅವುಗಳಲ್ಲಿ ಭಾರತದ 27 ಪ್ರದೇಶಗಳು ಸೇರ್ಪಡೆ ಆಗಿವೆ. ಮಾನ್ಯತೆ ಇದ್ದರೂ ಮಾಹಿತಿ ಕೊರತೆಯಿಂದ, ಅಭಿವೃದ್ಧಿ ನೀತಿಗಳ ಕಾರಣದಿಂದ ಬಹಳ ಕಡೆ ಇಂತಹ ಜೌಗು ಪ್ರದೇಶಗಳು ಇಂದು ಕೃಷಿ ಭೂಮಿಯಾಗಿ ಪರಿವರ್ತನೆ ಆಗಿವೆ. ಅನೇಕ ಜಡ್ಡಿ ಪ್ರದೇಶಗಳು ಅಣೆಕಟ್ಟಿನಲ್ಲಿ ಕಳೆದು ಹೋಗಿವೆ. ಪ್ರಪಂಚದ ಎರಡನೇ ಅತಿ ದೊಡ್ಡ ಹಾಟ್ ಸ್ಪಾಟ್ ಎಂದು ಕರೆಯಲಾಗುವ ಪಶ್ಚಿಮ ಘಟ್ಟದ ಅಕ್ಷರಶಃ ತಪ್ಪಲಿನ ಪ್ರದೇಶದಲ್ಲೂ ಜೌಗು ಪ್ರದೇಶಗಳು ಕಣ್ಮರೆಯ ದಾರಿಯಲ್ಲಿವೆ. ಜನಸಂಖ್ಯಾ ಸ್ಫೋಟ, ಅರಣ್ಯದ ಮೇಲಿನ ಅತಿ ಒತ್ತಡಗಳ ಅಡ್ಡ ಪರಿಣಾಮದ ಕಾರಣದಿಂದ ಇವು ವಿನಾಶದ ಭೀತಿಯಲ್ಲಿವೆ. ಜೌಗು ಪ್ರದೇಶಗಳ ರಕ್ಷಣೆಗೆ ಸ್ಥಳೀಯರ ಸಹಭಾಗಿತ್ವದಲ್ಲಿ ಅರಣ್ಯ ಇಲಾಖೆ ನೆಲ ಮಟ್ಟದ ಯೋಜನೆ ರೂಪಿಸಬೇಕು. ಬದಲೀ ಉದ್ದೇಶಕ್ಕೆ ಈ ಪ್ರದೇಶ ಬಳಕೆಯಾಗದೇ ಸಂರಕ್ಷಿಸಬೇಕು. ನೀರಿನ ಮೂಲದ ಉಳಿವಿಗೆ, ವೈವಿಧ್ಯತೆ ರಕ್ಷಣೆಗೆ ಯೋಜಿಸಬೇಕು, ಆ ಭಾಗದ ಅರಣ್ಯ ಉತ್ಪನ್ನ ಬಳಕೆಗೆ ನಿರ್ಬಂಧಿಸಬೇಕು, ಸ್ಥಳೀಯರಿಗೆ ಬದಲಿ ವ್ಯವಸ್ಥೆ ಕಲ್ಪಿಸಬೇಕು, ಹಾಳಾದ ಜಡ್ಡಿಗಳ ಪುನಶ್ಚೇತನ ಮಾಡಬೇಕು, ಇಡೀ ಪಶ್ಚಿಮ ಘಟ್ಟದಲ್ಲಿನ ಜೌಗು ಪ್ರದೇಶ ಗುರುತಿಸಿ ರಕ್ಷಣೆ ಮಾಡಬೇಕು. ಕಾಡಿನ ಮಧ್ಯೆ ಇರುವ ನಿಜವಾದ ವಾಟರ್ ಟ್ಯಾಂಕ್ ಉಳಿಸಿಕೊಳ್ಳಬೇಕು.