‘ಕಾಮದುಘಾ' ಯೋಜನೆಗೆ 'ಬ್ರೀಡ್ ಸೇವಿಯರ್ ಅವಾರ್ಡ್'


ಕಾಸರಗೋಡು ತಳಿಯ ಗೋವುಗಳ ಸಂರಕ್ಷಣೆ, ಸಂವರ್ಧನೆ ಹಾಗೂ ಸಂಶೋಧನೆಯ ಗುರಿಯೊಂದಿಗೆ 2004 ನವೆಂಬರ್ 6 ರಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ 'ಕಾಮದುಘಾ' ಯೋಜನೆಯ ಮೂಲಕ ಆರಂಭವಾದ ಪೆರ್ಲದ ಬಜಕೂಡ್ಲಿನ 'ಅಮೃತಧಾರಾ ಗೋಶಾಲೆ'ಗೆ ದೇಶದ ಪ್ರತಿಷ್ಠಿತ 'ಬ್ರೀಡ್ ಸೇವಿಯರ್ ಅವಾರ್ಡ್-2012' ಬಂದಿದೆ.
ಕೇವಲ 48 ದನಗಳು ಮತ್ತು 5 ಹೋರಿಗಳ ಸಾಕಣೆಯ ಮೂಲಕ ಆರಂಭವಾದ ಈ ಗೋಶಾಲೆಯಲ್ಲಿ ಪ್ರಸ್ತುತ 100 ಕ್ಕೂ ಮಿಕ್ಕಿ ದೇಶೀ ಜಾನುವಾರುಗಳಿಗೆ ಆಶ್ರಯ ನೀಡಲಾಗುತ್ತಿದ್ದು, ದೇಶ, ವಿದೇಶಗಳಲ್ಲಿ ಗೋಪ್ರೇಮಿಗಳ ಗಮನವನ್ನು ಸೆಳೆದಿದೆ. ಈ ಗೋಶಾಲೆಯಲ್ಲಿರುವ ಕಾಸರಗೋಡು ತಳಿಯ ಗಿಡ್ಡ ದನ 'ಬಂಗಾರಿ' ಈಗಾಗಲೇ 'ಲಿಮ್ಕಾ ಬುಕ್ ಆ್ ರೆಕಾಡ್ಸ್' ನಲ್ಲಿ ಸ್ಥಾನ ಗಳಿಸಿದ್ದು, ಈಗ ಸೇವಾ' ಸಂಸ್ಥೆಯು ದೇಶೀ ತಳಿ ಜಾನುವಾರುಗಳ ಸಂರಕ್ಷಣೆಗಾಗಿ ಕೊಡಮಾಡುವ 'ಬ್ರೀಡ್ ಸೇವಿಯರ್' ಪ್ರಶಸ್ತಿಗೆ ಯೋಜನೆಯನ್ನು ಗುರುತಿಸಿರುವುದು ದೇಶೀ ಗೋತಳಿಯ ಸಂರಕ್ಷಣೆಯ ಪ್ರಯತ್ನಕ್ಕೆ ಸಂದ ಗೌರವವಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಹಿಂದೆ ಬಹುದೊಡ್ಡ ಸಂಖ್ಯೆಯಲ್ಲಿದ್ದ, ಈಗ ವಿನಾಶದಂಚಿಗೆ ಸರಿಯುತ್ತಿರುವ ಕಾಸರಗೋೀಡು ತಳಿಯ ಹಸುಗಳು ಶೂನ್ಯ ಬಂಡವಾಳದ ಕೃಷಿಗೆ ಹೆಚ್ಚು ಯೋಗ್ಯವಾದವುಗಳು. ಅತಿ ಕಡಿಮೆ ಆಹಾರ ಸೇವನೆ ಮಾಡುವ ಈ ಗೋವುಗಳ ಹಾಲು, ಮೂತ್ರ, ಸೆಗಣಿ ಅತ್ಯಂತ ಶ್ರೇಷ್ಠವಾದವುಗಳು. ಅವುಗಳ ಸಂರಕ್ಷಣೆಯ ಕಾರ್ಯವನ್ನು ಕೈಗೊಂಡಿರುವುದರಿಂದ ಪೆರ್ಲದ ಬಜಕೂಡ್ಲು ಅಮೃತಧಾರಾ ಗೋಶಾಲೆಯ 'ಕಾಮದುಘಾ' ಯೋಜನೆಗೆ ಪ್ರಶಸ್ತಿ ದೊರಕಿದೆ.
ಭಾರತೀಯ ಗೋಬ್ಯಾಂಕಿನ ಮುಖಾಂತರ 380 ಆಸಕ್ತ ಸಾಕಣಿಕೆದಾರರಿಗೆ ಕಾಸರಗೋಡು ಗೋವುಗಳನ್ನು ಅಮೃತಧಾರಾ ಗೋಶಾಲೆ ಈಗಾಗಲೇ ವಿತರಿಸಲಾಗಿದೆ. ಶಮನ ತೈಲ, ಹಿಮಗಿರಿ ತೈಲ, ಶೋಡಷಿ ದಂತ ಮಂಜನ, ಕ್ಲೀನ್ ನೈಲ್(ಉಗುರು ಶುಚಿಕಾರಯ) ಗೋಸಾರವಟಿ ಇತ್ಯಾದಿ ವಿಶೇಷ ಪಂಚಗವ್ಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ. ನಬಾರ್ಡ್ ಸಂಸ್ಥೆಯ ಅನುದಾನದಲ್ಲಿ 4 ಪಂಚಾಯತ್ಗಳಲ್ಲಿ ಕಾಸರಗೋಡು ಗೋವುಗಳ ಗಣತಿ ಹಾಗೂ ಉತ್ತಮ ಗೋವುಗಳ ಮಾಹಿತಿ ಸಂಗ್ರಹ ಕಾರ್ಯ ನಡೆಸಿ 200 ಉತಷ್ಟ ಗೋವುಗಳನ್ನು ಆಯ್ಕೆ ಮಾಡಲಾಗಿದೆ. ರಕ್ತ ಪರೀಕ್ಷೆಯ ಮುಖಾಂತರ ತಳಿ ಶುದ್ಧತೆಯ ಬಗ್ಗೆ ಸಂಶೋಧನೆ, ಕಾಸರಗೋಡು ಗೋ ಆಧಾರಿತ ಕೃಷಿಯ ಬಗ್ಗೆ ಆಸಕ್ತರಿಗೆ ಉಚಿತ ತರಬೇತಿ ಶಿಬಿರಗಳನ್ನೂ ಆಯೋಜಿಸಿರುವುದರಿಂದ 'ಅಮೃತಧಾರಾ ಗೋಶಾಲೆ'ಗೆ ಅರ್ಹವಾಗಿ ಈ ಪ್ರಶಸ್ತಿ ದೊರಕಿದೆ.
ಈಗಾಗಲೇ ಅಮೃತಧಾರಾ ಗೋಶಾಲೆಯಲ್ಲಿ ಎ2 ಹಾಲಿನ ಸಂಶೋಧನೆಗೆ ಚಾಲನೆ ನೀಡಲಾಗಿದೆ. ಕಾಸರಗೋಡು ಗೋವಿನ ಪ್ರಚಾರಕ್ಕಾಗಿ ಭಾರತೀಯ ಗೋಯಾತ್ರೆ, ಗೋಸಂಪತ್ತು, ಗೋಮಾತಾ ತುಲಾಭಾರ ಇತ್ಯಾದಿ ಕಾರ್ಯಕ್ರಮಗಳನ್ನು 'ಕಾಮದುಘಾ' ಯೋಜನೆಯು ಯಶಸ್ವಿಯಾಗಿ ಆಯೋಜಿಸಿದೆ. ಕೇರಳದ ವಿವಿದೆಡೆಗಳಲ್ಲಿ ದೇಶೀ ಗೋತಳಿಯ ಪ್ರಚಾರಕ್ಕಾಗಿ ಗೋವುಗಳ ಪ್ರದರ್ಶನ ನಡೆಸಿರುವುದನ್ನೂ ಮನಗಂಡ 'ಸೇವಾ' ಸಂಸ್ಥೆಯು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡುತ್ತಿದೆ.
ಹಸು, ಎಮ್ಮೆ, ಆಡು, ಕುರಿ ಸಹಿತ ವಿವಿಧ ದೇಸೀ ತಳಿಯ ಜಾನುವಾರುಗಳ ಸಂರಕ್ಷಣೆಗಾಗಿ ಸೇವಾ ಸಂಸ್ಥೆ ನೀಡುವ ಈ 'ಬ್ರೀಡ್ ಸೇವಿಯರ್' ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 8 ಮತ್ತು 9 ರಂದು ದೆಹಲಿಗೆ ಸಮೀಪದ ಕರ್ನಾಲ್ನಲ್ಲಿ ನಡೆಯಲಿದೆ.