ಸೊಕ್ಕಿದ್ದರೆ ಯಾಣ-ದುಡ್ಡಿದ್ದರೆ ಗೋಕರ್ಣ
ಸೊಕ್ಕಿದ್ದರೆ ಯಾಣ-ದುಡ್ಡಿದ್ದರೆ ಗೋಕರ್ಣ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪ್ರಚಲಿತ ಗಾದೆ. ಶಿವರಾತ್ರಿ ಬಂತೆಂದರೆ ಎಲ್ಲರಿಗೂ ಯಾವುದಾದರೂ ಶಿವತಾಣಗಳಿಗೆ ಹೋಗಬೇಕೆಂದು ಎನ್ನಿಸದೇ ಇರದು. ತ್ರಾಣ ಇದ್ದವರು, ಸೊಕ್ಕಿದ್ದವರು ಯಾಣಕ್ಕೆ ಹೋಗುತ್ತಾರೆ. ಇನ್ನು ಹೋಗಲೆಬೇಕಾದವರು ಕೆಲವರು ಗೋಕರ್ಣ, ಸಿದ್ದನಗುಡ್ಡ, ಗವಿಗುಡ್ಡ, ಮುರ್ಡೆಶ್ವರ ಮೊದಲಾದ ತಾಣಗಳಿಗೆ ಹೋಗುತ್ತಾರೆ. ಉಳಿದಂತೆ ಸಿದ್ದಾಪುರ ತಾಲೂಕಿನ ಇಟಗಿಯ ರಾಮೇಶ್ವರ, ಇಡಗುಂದಿಯ ರಾಮಲಿಂಗೇಶ್ವರ, ಸಾತೊಡ್ಡಿ ಜಲಪಾತ ಮಾರ್ಗದ ಮಧ್ಯೆ ಇರುವ ಗಣೇಶಗುಡಿಯ ಶಿವತಾಣ, ಮಲವಳ್ಳಿಯ ರಾಮಲಿಂಗೇಶ್ವರ ದೇಗುಲ, ಗುಳ್ಳಾಪುರದ ಸಮೀಪದ ರಾ.ಹೆ ಪಕ್ಕದಲ್ಲಿರುವ ಮೊಗದ್ದೆ, ನಗರದ ಸಮೀಪವಿರುವ ಬಿಲ್ಲಿಗದ್ದೆ ರಾಮಲಿಂಗೇಶ್ವರ ದೇವಸ್ಥಾನ, ಈಶ್ವರಗಲ್ಲಿಯ ಈಶ್ವರ ದೇವಸ್ಥಾನ, ಪ್ರಸಿದ್ಧವಾದ ಶಿವತಾಣಗಳಾಗಿವೆ. ಸಹಸ್ರಲಿಂಗಗಳಿಗೆ ಇಲ್ಲಿ ನಿತ್ಯವೂ ಜಲಾಭಿಷೇಕ: 
ಶಿರಸಿ ಸಮೀಪದ ಸಹಸ್ರಾರು ಲಿಂಗಗಳಿಗೆ ನಿತ್ಯವೂ ಜಲಾಭಿಷೇಕ. ಪ್ರಕೃತಿಯೇ ಇಲ್ಲಿ ಪ್ರತಿ ಕ್ಷಣವೂ ನವಿರಾಗಿ ಪೂಜಿಸುತ್ತಿದೆ. ಜಿಲ್ಲೆಯ ಹೆಮ್ಮೆಯ ಪ್ರವಾಸಿ ತಾಣಗಳಲ್ಲಿ ಒಂದಾದ ಸಹಸ್ರಲಿಂಗ ಪವಿತ್ರ ಕ್ಷೇತ್ರವಾಗಿ, ಪ್ರವಾಸಿ ತಾಣವಾಗಿ ಪರಿಚಿತಗೊಂಡಿದೆ. ಇಂದು ಮಹಾ ಶಿವರಾತ್ರಿ. ಸಹಸ್ರಕ್ಕೂ ಅಧಿಕ ಭಕ್ತರು ನಾಡಿನ ಉದ್ದಗಲದಿಂದಲೂ ಪವಿತ್ರ ಶಿವತಾಣ, ಪ್ರಕೃತಿ ಸೊಬಗಿನ ಸಹಸ್ರಲಿಂಗಕ್ಕೆ ಬರುವುದು ವಾಡಿಕೆಯಾಗಿದೆ. ಇಲ್ಲಿಗೆ ಮುಂಜಾನೆಯೇ ಆಗಮಿಸಿ ಸ್ವತಃ ಜಲಾಭಿಷೇಕ ನಡೆಸಿ, ಪೂಜಿಸಿ ಕೃರ್ತಾರ್ಥರಾಗುತ್ತಾರೆ. ಸ್ಥಳೀಯ ಯುವಕ ಮಂಡಳಿ, ಗ್ರಾಪಂ ಭಕ್ತರಿಗೆ ಅನುಕೂಲ ಸೃಷ್ಟಿಸುತ್ತದೆ.
ಶಾಲ್ಮಲಾ ನದಿಯಲ್ಲಿರುವ ಅಪರೂಪದ ಸಹಸ್ರಲಿಂಗ ಶಿರಸಿ ಸಮೀಪದ ಯಲ್ಲಾಪುರ ಹೆದ್ದಾರಿ ಪಕ್ಕದಲ್ಲಿದೆ. ಸಹಸ್ರಲಿಂಗವು ಮಳೆಗಾಲ ಪ್ರಾರಂಭವಾಗುತ್ತಿರುವಂತೆ ಜಲದಡಿಯಾಗುತ್ತಿದ್ದು, ಕೆಲವು ಲಿಂಗಗಳು ಈಗಾಗಲೇ ಉರುಳಿ ಬಿದ್ದಿವೆ. ಬಿಸಿಲು, ಗಾಳಿಯಿಂದ ಸಹಸ್ರಲಿಂಗ ನಲುಗುತ್ತಿದೆ. ಹಿಂದೆ ಶಿವರಾತ್ರಿಯಲ್ಲಿ ಮಾತ್ರ ಜನರಿಂದ ಪೂಜಿಸಲ್ಪಡುತ್ತಿದ್ದ ಸಹಸ್ರಲಿಂಗ ಇಂದು ನಿತ್ಯ ಪ್ರವಾಸಿಗರ ಗಮನ ಕೂಡ ಸೆಳೆಯುವಂತಾಗಿದೆ.
ಭವ್ಯ ಐತಿಹ್ಯ: ದೇವತೆಗಳು ಈ ಲಿಂಗ ಕೊರೆಯುತ್ತಿದ್ದಾಗ ಕೃಷ್ಣ ಇದು ಸರಿಯಾದ ಸ್ಥಳವಲ್ಲ ಎಂದು ಕೋಳಿಯಾಕಾರದಲ್ಲಿ ಬಂದು ಕೂಗಿದ, ಬೆಳಗಾಯಿತೆಂದು ದೇವತೆಗಳು ಕೆಲಸ ಕೈ ಬಿಟ್ಟವು. ಸ್ವಾದಿ ರಾಜ ಅರಸಪ್ಪ ನಾಯಕನಿಗೆ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಪುರೋಹಿತರ ಮಾರ್ಗದರ್ಶನದಂತೆ ಕ್ರಿ.ಶ 1688ರ ವೇಳೆಗೆ ಸಹಸ್ರಾರು ಲಿಂಗಗಳನ್ನು ಕೆತ್ತಿಸಿ ಪೂಜಿಸಿದ ಎಂಬ ಕಥೆಗಳು ಇವೆ. ಇಲ್ಲಿ ಬಂಡೆ ಬಸಪ್ಪನ ಪಕ್ಕದಲ್ಲಿ ಶಿವಪೂಜೆ ಮಾಡುತ್ತಿರುವ ಪುರುಷ ಮೃಗದ ವಿಗ್ರಹವಿದೆ. ಹಾಗೂ ವನದೇತೆಗಳ ಮೂರ್ತಿಗಳೂ ಇವೆ.

ಪೂಜಾ ಭಾಗ್ಯ ಕಾಣದೇ ಅನಾಥವಾದ ದೇಗುಲ: 
ಭಾರತದ ದಕ್ಷಿಣ ಕಾಶಿಯೆಂದೆ ಪ್ರಸಿದ್ಧವಾಗಿರುವ ಶ್ರೀ ಕ್ಷೇತ್ರ ಗೋಕರ್ಣ ಸೇರಿದಂತೆ ಎಲ್ಲ ಕಡೆಗಳಲ್ಲಿ ಶಿವರಾತ್ರಿಯಂದು ಈಶ್ವರನಿಗೆ ವಿಶೇಷ ಪೂಜೆ ಅಭಿಷೇಕ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ, ಅಂಕೋಲಾ ತಾಲೂಕಿನ ಗ್ರಾಮವೊಂದರಲ್ಲಿ ಅನಾದಿ ಕಾಲದ ಶಿವ ಮಂದಿರವೊಂದು ಪೂಜಾಭಾಗ್ಯ ಕಾಣದೇ ಅನಾಥವಾಗಿದೆ. ಅಂಕೋಲಾದಿಂದ ಸುಮಾರು 28 ಕಿ.ಮೀ. ದೂರದಲ್ಲಿರುವ ಅತ್ಯಂತ ಹಿಂದುಳಿದ ಹಾಲಕ್ಕಿ ಹಾಗೂ ಕರಿಒಕ್ಕಲ ಸಮುದಾಯಕ್ಕೆ ಸೇರಿದ ಸುಮಾರು 30 ಕುಟುಂಬಗಳು ವಾಸಿಸುವ ಮಾರುಗದ್ದೆ ಗ್ರಾಮದಲ್ಲಿರುವ ಈಶ್ವರ ದೇವಸ್ಥಾನವೇ ಪಾಳುಬಿದ್ದ ಶಿವಗುಡಿ.
ಮಂದಿರ ಸಂಪೂರ್ಣವಾಗಿ ನಶಿಸಿಹೋಗಿದ್ದು, ಕೇವಲ ಕಲ್ಲಿನ ಬಾಗಿಲಷ್ಟೇ ಉಳಿದುಕೊಂಡಿದೆ. ದೇವಾಲಯದಲ್ಲಿ ಸುಮಾರು ಎರಡೂವರೆ ಅಡಿ ಎತ್ತರದ ಶಿವಲಿಂಗದ ಜೊತೆಗೆ ಗಣಪತಿ, ನಂದಿ ವಿರೂಪಾಕ್ಷೇಶ್ವರ, ಪಾರ್ವತಿ ಪರಮೇಶ್ವರ ಹೀಗೆ ಹತ್ತಾರು ಪುರಾತನ ಕಾಲದ ವಿಗ್ರಹಗಳು ಕಾಣುತ್ತವೆ. ಗತಕಾಲದ ವೈಭವ ನೆನಪಿಸುವ ಶಿಲಾಶಾಸನಗಳ ಕೆತ್ತನೆ ಗಮನಿಸಿದರೆ ಹಂಪೆಯನ್ನು ವೀಕ್ಷಿಸಿದಂತಹ ಅನುಭವವಾಗುತ್ತದೆ.
ಮಾರುಗದ್ದೆಯ ಅರಣ್ಯದಲ್ಲಿರುವ ಸುಮಾರು 12-13ನೇ ಶತಮಾನದ ಇತಿಹಾಸ ಹೊಂದಿರುವ ಈ ದೇವಸ್ಥಾನ ಭಾಗಶಃ ಮಣ್ಣಿನಲ್ಲಿ ಹೂತು ಹೋಗಿದ್ದು, ಸುತ್ತ-ಮುತ್ತಲಿನ ಪ್ರದೇಶವೆಲ್ಲ ಗಿಡಗಂಟಿಗಳಿಂದ ಮುಚ್ಚಿ ಹೋಗಿದೆ. ದೇಗುಲದ ಮೇಲ್ಭಾಗ ಮಾತ್ರ ಕಣ್ಣಿಗೆ ಕಾಣುತ್ತಿದೆ. ಶಿಲಾಶಾಸನ, ಮೂರ್ತಿಗಳನ್ನು ನಿಧಿಗಳ್ಳರು, ನಿಧಿ ಆಸೆಗಾಗಿ ಭಗ್ನಗೊಳಿಸಿರುವುದು ಗೋಚರವಾಗುತ್ತದೆ. ಅರಣ್ಯ ಪ್ರದೇಶದಲ್ಲಿ ನಿಧಿ ಆಸೆಗಾಗಿ ಅಲ್ಲಲ್ಲಿ ಹೊಂಡಗಳನ್ನು ತೋಡಿರುವುದು ಸಹ ಕಾಣಸಿಗುತ್ತದೆ.
ಈ ಗ್ರಾಮದಲ್ಲಿ ಮಹಾವೀರ ನಾರಾಯಣ ದೇವಸ್ಥಾನ ಸೇರಿದಂತೆ ಪ್ರಾಚೀನ ಕಾಲದ ಇತಿಹಾಸ ಸಾರುವ ಇನ್ನೂ ಹಲವಾರು ಜೈನ ಪರಂಪರೆ ಹೊಂದಿರುವ ದೇವಾಲಯಗಳಿದ್ದು, ಕೆಲ ದೇವಾಲಯಗಳಲ್ಲಿ ವರ್ಷದ ವಿಶೇಷ ಸಂದರ್ಭದಲ್ಲಿ ಮಾತ್ರ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿದ್ದು, ಈಶ್ವರ ದೇವಸ್ಥಾನ ಮಾತ್ರ ಪೂಜೆ-ಪುನಸ್ಕಾರವಿಲ್ಲದೆ ಕಾಡಿನಲ್ಲಿ ಅನಾಥವಾಗಿದೆ.