ವಂದೇ ಶಿವಂ ಶಂಕರಂ.


ವಂದೇ ಶಿವಂ ಶಂಕರಂ
ಶಿವಂ ಶಿವಕರಂ ಶಾಂತಂ
ಶಿವಾತ್ಮಾನಂ ಶಿವೋತ್ತಮಂ
ಶಿವಮಾರ್ಗ ಪ್ರಣೀತಾರಂ
ಪ್ರಣತೋಸ್ಮಿ ಸದಾಶಿವಂ॥
ರಜತಗಿರಿಗೊಡೆಯನಾದ ಈಶ್ವರ, ಶಂಕರ, ಪಶುಪತಿಯೇ ಮೊದಲಾದ ನಾಮಧೇಯಗಳಿಂದ ಗುರುತಿಸಲ್ಪಡುವ, ತ್ರಿಮೂರ್ತಿಗಳಲ್ಲಿ "ಲಯ'ಕಾರಕನೆಂದೇ ಪ್ರಸಿದ್ಧನಾಗಿರುವ, ಭಕ್ತ ವೃಂದದಿಂದ ಸರ್ವಮಂಗಲದಾತಾರನೆಂದೇ ಸ್ತುತಿಸಲ್ಪಡುತ್ತಿರುವ ಜಗದೊಡೆಯ ಸಾಕ್ಷಾತ್ ಪರಶಿವನನ್ನು ಪೂಜಿಸಲು ಅತ್ಯಂತ ಪ್ರಶಸ್ತ ದಿನವೇ ಮಹಾಶಿವರಾತ್ರಿ!
"ಶಿವ' ಶಬ್ಧಕ್ಕೆ ಮಂಗಳಕಾರಕನೆಂದು ಅರ್ಥವಿದೆ. ಮಹಾಮಹಿಮನಾದ ಶಿವನ ರೂಪವೂ. ಆಭರಣಗಳೂ ಉಳಿದ ದೇವತೆಗಳಿಗಿಂತ ತುಸು ವಿಭಿನ್ನ. ಅಭಿಷೇಕ ಪ್ರಿಯನಾಗಿರುವ ರುದ್ರನ ಶಿರದಲ್ಲಿ ಗಂಗೆ ಮತ್ತು ಚಂದ್ರರು ಶೋಭಿಸುತ್ತಿದ್ದಾರೆ. ಶಿವನ ಜಟೆಯನ್ನು ಕಪರ್ದಿಯೆಂದು ಕರೆಯುತ್ತಾರೆ. ಅಗ್ನಿಮಯವಾದ ಮೂರನೆಯ ಕಣ್ಣು ಶಿವನ ಹಣೆಯಲ್ಲಿರುವುದರಿಂದಲೇ ಅವನನ್ನು ತ್ರಿನೇತ್ರನೆಂದೂ, ವಿರೂಪಾಕ್ಷನೆಂದೂ ಆರಾಧಿಸುತ್ತಾರೆ. ಪಿನಾಕವೆಂಬ ಶೂಲವನ್ನು ಕರದಲ್ಲಿ ಧರಿಸಿ, ಗಜಚರ್ಮಾಂಬರಧಾರಿಯಾಗಿ, ಸರ್ವಾಂಗಗಳಲ್ಲೂ ಚಿತಾಭಸ್ಮವನ್ನು ಲೇಪಿಸಿ, ಸರ್ಪಾಭರಣ ಭೂಷಿತನಾಗಿ ಮೆರೆಯುತ್ತಿರುವ ಶಿವನ ವಾಹನವೇ ಬಿಳಿ ನಂದಿ. ನಂದಿವಾಹಕನಾದ ಅವನನ್ನು ನಂದಿಕೇಶ್ವರನೆಂದು ಸಹಾ ಬಿಂಬಿಸಲಾಗುತ್ತಿದೆ.
ಪ್ರಣವ ಸ್ವರೂಪನಾದ ಚಂದ್ರಶೇಖರ ಶಿವನನ್ನು ಜಗತ್ದ್ರಕ್ಷಕನೆಂದೂ ಕೊಂಡಾಡುತ್ತಾರೆ. ದೂರ್ವಾಸರ ಶಾಪದಿಂದ ಇಂದ್ರನ ಅಮರಾವತಿಯ ಸುವಸ್ತುಗಳೆಲ್ಲ ಸಮುದ್ರ ಪಾಲಾಗಲು ದೇವದಾನವರೊಡಗೂಡಿ, ಮಂದರ ಪರ್ವತವನ್ನು ಕಡೆಗೋಲಾಗಿಸಿ, ವಾಸುಕಿಯನ್ನು ಹಗ್ಗವಾಗಿಸಿ ಸಮುದ್ರ ಮಥನ ಮಾಡಿ ಕಳೆದು ಹೋದ ವಸ್ತುಗಳನ್ನು ಮರಳಿ ಪಡೆಯುವ ಪ್ರಯತ್ನ ಮಾಡುತ್ತಿರಲು ಅಲ್ಲಿ ಆವಿರ್ಭವಿಸಿದ ಕಾಲಕೂಟವೆಂಬ ಮಹಾವಿಷ್ಣುವನ್ನು, ಪ್ರಪಂಚದ ರಕ್ಷಣೆಗೋಸ್ಕರವಾಗಿ ಶಿವನು ನೇಮಿಸಿದನೆಂದೂ, ಆ ಸಮಯದಲ್ಲಿ ಶಿವ ಪತ್ನಿ ಉಮೆಯು, ವಿಷವು ಶಿವನ ದೇಹವಿಡೀ ವ್ಯಾಪಿಸಿದಂತೆ ತನ್ನ ಕರಗಳಿಂದ ಅವನ ಕಂಠವನ್ನು ಒತ್ತಿ ಹಿಡಿದಾಗ ವಿಷವು ಕಂಠದಲ್ಲೇ ಉಳಿಯಿತೆಂದೂ ಪುರಾಣಗಳಲ್ಲಿ ಉಲ್ಲೇಖವಿದೆ. ಅಂದಿನಿಂದ ಶಿವನಿಗೆ ಗರಳಕಂಠ, ನೀಲಕಂಠ ಎಂಬ ಹೆಸರು ಬಂತು.
ಶಿವಪುರಾಣದಲ್ಲಿ ಶಿವನ ನಿರಾಕಾರ ಮತ್ತು ವಿರಾಟ ರೂಪದ ವರ್ಣನೆಯಿದೆ. ಭಯಂಕರ ಮತ್ತು ಸೌಮ್ಯ ರೂಪಗಳಲ್ಲಿ ಕಂಡು ಬರುವ ಶಿವನಿಗೆ ಬಿಲ್ವಪತ್ರ, ರುದ್ರಾಕ್ಷಿಗಳು ಅತ್ಯಂತ ಪ್ರಿಯ. ಶಿವನ ಉಗ್ರರೂಪವನ್ನು ‘ಕಪಾಲಿ’ ಎಂದೂ ಕರೆಯುತ್ತಾರೆ. ನೃತ್ಯದ ಅಧಿದೇವತೆ ನಟರಾಜನೆಂದರೆ ಶಿವನೇ. ಶಿವನ ನೃತ್ಯವು ತಾಂಡವ ಎಂಬ ಹೆಸರಿನಿಂದಲೇ ಪ್ರಸಿದ್ಧಿಯಾಗಿದೆ. ವಿರೂಪಾಕ್ಷ, ಭದ್ರಕಾಳಿ, ವೀರಭದ್ರನೇ ಮೊದಲಾದವರು ಶಿವನ ಕೆಲವು ಪ್ರಮುಖ ಗಣಗಳಾದರೆ ಗಣಪತಿ ಮತ್ತು ಸುಬ್ರಹ್ಮಣ್ಯನನ್ನು ಅವನ ಪುತ್ರನೆಂದೂ ಪುರಾಣಗಳು ಸಾರುತ್ತವೆ.
ಭಕ್ತಾಭಿಷ್ಟ ಲಪ್ರದಾಯಕನಾದ ಶಿವನು ಕ್ಷಿಪ್ರ ಪ್ರಸಾದಿ. ತನ್ನ ಅನನ್ಯ ಭಕ್ತಿಯಿಂದ ಪಶುಪತಿಯನ್ನು ಭಜಿಸಿ, ಮೃತ್ಯುವನ್ನೇ ಹಿಮ್ಮೆಟ್ಟಿಸಿ, ಚಿರಂಜೀವಿಯಾಗಿ ಮೆರೆದ ಮಾರ್ಕಾಂಡೇಯನ ಕಥೆಯನ್ನು ತಿಳಿಯದವರಾರು? ಶಿವಪುರಾಣ, ಶಿವಲೀಲಾಮೃತವೇ ಮೊದಲಾದ ಗ್ರಂಥಗಳಲ್ಲಿ, ಶಿವಸ್ಮರಣೆಯಿಂದ ಸಮಸ್ತ ಪಾಪ ನಿವಾರಣೆಗೊಂಡು, ಮೋಕ್ಷಗಳಿಸಿದಂತಹ ಹಲವಾರು ಭಕ್ತರ ಕಥೆಗಳಿವೆ.
ಮಾಘ ಮಾಸದ ಬಹುಳ ಚತುರ್ದಶಿಯನ್ನು ಮಹಾಶಿವರಾತ್ರಿಯೆಂದು ಆಚರಿಸಲಾಗುತ್ತಿದೆ. ವಿಶ್ವ ರಕ್ಷಣೆಗಾಗಿ ವಿಷವನ್ನು ಸೇವಿಸಿದ ಪರಮೇಶ್ವರನ ಒಳಿತಿಗಾಗಿ, ದೇವದಾನವರ ಸಹಿತ ಇಡೀ ವಿಶ್ವವೇ ಸ್ತುತಿಸಿ ರಕ್ಷಣೆಗಾಗಿ ಮೊರೆಯಿಟ್ಟ ದಿನವನ್ನೇ ಶಿವರಾತ್ರಿಯೆಂದು ನಂಬಲಾಗುತ್ತಿದೆ.
ಶಿವರಾತ್ರಿಯಂದು ಉಪವಾಸ ಮತ್ತು ಜಾಗರಣೆಗಳಿಗೆ ಆದ್ಯತೆ. ಈ ದಿನ ಶಿವನ ವಿಶೇಷ ಸಾನ್ನಿಧ್ಯವಿರುವುದರಿಂದ, ಪರಿಶುದ್ಧ ಮನದಿಂದ ಇಂದು (ಮಾ.10) ಶಿವಸ್ಮರಣೆ ಮಾಡಿದರೆ ಅತ್ಯಂತ ಶೀಘ್ರವಾಗಿ ಮನೋಭಿಲಾಷೆಗಳು ಕೈಗೂಡುತ್ತವೆ ಎಂಬುದು ಭಕ್ತರ ನಂಬಿಕೆ.

ಭಾರತದಾದ್ಯಂತ ಶೈವ ಪಂಥದವರು ಮಾತ್ರವಲ್ಲ, ಸಕಲ ಆಸ್ತಿಕರೂ ಸಡಗರ, ಸಂಭ್ರಮ, ಭಕ್ತಿಯಿಂದ ಇಂದು ಶಿವರಾತ್ರಿಯನ್ನಾಚರಿಸುತ್ತಾರೆ. ದೇಶದಾದ್ಯಂತವಿರುವ ಶಿವಮಂದಿರಗಳಲ್ಲಿ ಇಂದು ಪರಮೇಶ್ವರನಿಗೆ ವಿಶೇಷ ಅರ್ಚನೆ, ಪೂಜೆಗಳು ಸಲ್ಲುತ್ತದೆ.
ಈ ಶಿವರಾತ್ರಿಯಂದು ನಿರ್ಮಲಮನದಿಂದ ಶಿವನಾಮ ಸ್ಮರಣೆ ಮಾಡುತ್ತಾ ಶಿವನಾಮ ಆಲಿಸುತ್ತಾ, ಶಿವಪೂಜೆ ನೋಡುತ್ತಾ, ಶಿವನಿಗೆ ಪ್ರದಕ್ಷಿಣೆ ಮಾಡುತ್ತಾ, ಸಕಲವನ್ನೂ ಶಿವಮಯವಾಗಿಸಿ, ಮಹಾಮಹಿಮನಾದ ರುದ್ರರೂಪಿಯಾದ ಪಾರ್ವತೀ ಪತಿಯನ್ನು ಸ್ತುತಿಸಿ, ಅವನ ಅನುಗ್ರಹವನ್ನು ಪಡೆಯೋಣ. ಮಹಾಮೃತ್ಯುಂಜಯನಾದ ಶಿವನು ವಿಶ್ವಕ್ಕೇ ಒಳಿತನ್ನುಂಟುಮಾಡಲಿ ಎಂದು ಮನದುಂಬಿ ಪ್ರಾರ್ಥಿಸೋಣ.
ವಂದೇ ದೇವಮುಪಾಪತಿಂ ಸುರಗುರುಂ
ವಂದೇ ಜಗತ್ಮಾರಣಂ
ವಂದೇ ಪನ್ನಗ ಭೂಷಣಂ ಮೃಗಧರಂ
ವಂದೇ ಪಶೂನಾಂಪತಿಂ
ವಂದೇ ಸೂರ್ಯಶಶಾಂಕಮಹ್ನಿ ನಯನಂ
ವಂದೇ ಮುಕುಂದಪ್ರಿಯಂ
ವಂದೇ ಭಕ್ತಜನಾಶ್ರಯಂಚ ವರದಂ
ವಂದೇ ಶಿವಂ ಶಂಕರಂ.