ಪುಣ್ಯದ ನಾಡಲ್ಲೊಂದು ಪಾಪದ ಕೆಲಸ


ಉತ್ತರ ಪ್ರದೇಶದ ಅಲಹಾಬಾದ್ನಲ್ಲಿ ನಡೆಯುವ ಮಹಾಕುಂಭ ಮೇಳ ಹಿಂದೂಗಳಿಗೊಂಡು ಪವಿತ್ರ ಹಬ್ಬ. ಜನ ಅಲಹಾಬಾದ್ಗೆ ಬಂದು ಗಂಗೆಯಲ್ಲಿ ಮಿಂದು ತಮ್ಮ ಪಾಪಗಳನ್ನು ತೊಳೆದುಕೊಳ್ಳುತ್ತಾರೆ. ಹಲವರಿಗೆ ಇದೊಂದು ಬದುಕಿನ ಮಹತ್ವದ ಸಂಗತಿ ಮತ್ತು ಅತ್ಯಂತ ಸಂತಸ ತರುವ ಅಂಶ. ಆದರೆ ಕುಂಭಮೇಳದ ಇನ್ನೊಂದು ಮುಖವನ್ನು ನೋಡುವುದಾದರೆ, ಕೆಲವರಿಗೆ ತಮ್ಮ ಹಿರಿ ವಯಸ್ಸಿನವರನ್ನು ಪರಿತ್ಯಜಿಸಲು ಇದೊಂದು ಸೂಕ್ತ ಸಮಯ.
ಹಲವರು ತಮ್ಮ ಹಿರಿಯರನ್ನು ಬಿಟ್ಟುಬಿಡಲು ಕುಂಭಮೇಳಕ್ಕೆ ಕಾಯುತ್ತಾರೆ. ಹೀಗೆ ಪರಿತ್ಯಕ್ತರಾದವರಿಗೆ ಇದ್ಯಾವುದೂ ಗೊತ್ತೇ ಇರುವುದಿಲ್ಲ. ವೃದ್ಧರು ಉಪಯೋಗಕ್ಕೆ ಬಾರದ್ದರಿಂದ ಮತ್ತೆ ಅವರನ್ನು ನೋಡಿಕೊಳ್ಳುವ ಉಸಾಬರಿಯೇ ಬೇಡ ಎಂದು ಭಾವಿಸುತ್ತಾರೆ. ಅದಕ್ಕಾಗಿ ಅವರನ್ನು ಕುಂಭಮೇಳದ ನೆವದಲ್ಲಿ ಕರೆದುಕೊಂಡು ಬಂದು ಇಲ್ಲಿ ಬಿಟ್ಟು ನಾಪತ್ತೆಯಾಗುತ್ತಾರೆ.
ಕುಂಭಮೇಳದಲ್ಲಿ ವೃದ್ಧ ಪುರುಷ, ಮಹಿಳೆಯರನ್ನು ತಂದು ಬಿಟ್ಟುಬಿಡಲಾಗುತ್ತದೆ. ಇದರಲ್ಲಿ ಹೆಚ್ಚಾಗಿರುವುದು ವೃದ್ಧ ವಿಧವೆಯರು. ಕೆಲವರು ನಿಜವಾಗಿಯಾದರೂ ತಮ್ಮ ಗುಂಪಿನಿಂದ ತಪ್ಪಿಹೋದರೆ, ಇನ್ನು ಕೆಲವರು ನಿಜವಾಗಿಯೂ ತಮ್ಮ ವೃದ್ಧರನ್ನು ಬಿಟ್ಟುಬಿಡುತ್ತಾರೆ. ಹೀಗೆ ಪರಿತ್ಯಕ್ತರಾದವರು, ಮತ್ತೆ ಮನೆಗೆ ತಮ್ಮಷ್ಟಕ್ಕೆ ಮನೆ ದಾರಿ ಹಿಡಿಯುವಷ್ಟೂ ಶಕ್ತರಲ್ಲ. ಅವರಲ್ಲಿ ಕೆಲವರು ಅಕ್ಷರಸ್ಥರಲ್ಲ, ಕೆಲಸವೂ ಗೊತ್ತಿಲ್ಲ. ಹಲವು ವರ್ಷಗಳ ಕಾಲ ಅವರು ಯಾವ ಪ್ರದೇಶದಲ್ಲಿ, ಯಾವ ಜಿಲ್ಲೆಯಲ್ಲಿ ವಾಸ ಮಾಡುತ್ತಾರೆ ಎಂಬುದೇ ಅವರಿಗೆ ಗೊತ್ತಿರುವುದಿಲ್ಲ.
ಹೀಗೆ ಪರಿತ್ಯಕ್ತರಾದವರನ್ನು ಸ್ವಯಂಸೇವಕರು ಟೆಂಟ್ಗಳಲ್ಲಿರುವ ಗಿಜಿಗುಟ್ಟುವ ನಾಪತ್ತೆ-ಪತ್ತೆ ಕೇಂದ್ರಕ್ಕೆ ಸೇರಿಸುತ್ತಾರೆ. ಇದರಲ್ಲಿ ವೃದ್ಧರು ಸರ್ಕಾರ ನಡೆಸುವ ಕೇಂದ್ರಕ್ಕೆ ಸೇರುವ ಸಾಧ್ಯತೆ ಇರುತ್ತದೆ. ಇಂತಹ ನಿರ್ವಸಿತರ ಕೇಂದ್ರಗಳ ಸ್ಥಿತಿ ತೀರ ಕೆಟ್ಟದಾಗಿರುತ್ತವೆ. ಆದಾಗ್ಯೂ ಹಲವರು, ರಸ್ತೆಗಳಲ್ಲಿ ಭಿಕ್ಷೆ ಬೇಡಿ ಬದುಕು ಕಂಡುಕೊಳ್ಳುತ್ತಾರೆ. ವಾರಾಣಸಿ, ವೃಂದಾವನದಂತಹ ದೇಗುಲ ನಗರಿಗಳಲ್ಲಿ ಇವರ ಜೀವನ ಸಾಗುತ್ತದೆ. ಒಂದು ವೇಳೆ ಅವರು ಅದೃಷ್ಟ ಮಾಡಿದ್ದರೆ, ಅವರಿಗೆ ದೇವಸ್ಥಾನಗಳು ಅಥವಾ ಚಾರಿಟಿಗಳು ನಡೆಸುವ ಕೇಂದ್ರಗಳಲ್ಲಿ ಜೀವನ ಸಾಗಿಸುತ್ತಾರೆ.
ದೊಡ್ಡ ನಗರಗಳನ್ನು ಸೇರುವ ಪರಿತ್ಯಕ್ತರು, ಅವರಲ್ಲೂ ಕುಟುಂಬದ ಬೆಂಬಲದಿಂದ ವಂಚಿತರಾದ, ಹೆಚ್ಚಾಗಿ ಮಹಿಳೆಯರು, ಮೋಕ್ಷದ ಗುಂಗಿನಲ್ಲಿ ಇಂತಹ ದೇಗುಲ ನಗರಿಗಳಲ್ಲೇ ತಮ್ಮ ಕೊನೆ ಜೀವನವನ್ನು ಸಾಗಿಸುತ್ತಾರೆ. ಹಸಿವು ಇವರನ್ನು ಅಪಾರವಾಗಿ ಬಾಧಿಸುತ್ತಿರುತ್ತದೆ. ಹಿಂದೂ ಪರಂಪರೆ ಪ್ರಕಾರ ಮಹಿಳೆಯನ್ನು ತಂದೆ, ಬಳಿಕ ಪತಿ, ನಂತರ ಮಕ್ಕಳು ಆಕೆಯನ್ನು ಅಂತ್ಯಕಾಲದವರೆಗೆ ಜವಾಬ್ದಾರಿಯಿಂದ ನೋಡಿಕೊಳ್ಳಬೇಕು. ತಂದೆ-ತಾಯಿ ದೇವರ ಸಮಾನ. ತಂದೆ-ತಾಯಿಯನ್ನು ಹಿಂಸಿಸುವುದು ಮಹಾಪಾಪ ಎನ್ನುತ್ತದೆ ಹಿಂದೂ ಧರ್ಮ. ಆದರೆ, ಇದನ್ನೆಲ್ಲಾ ಇಂದು ಕೇಳುವವರಾರು?. ಪುಣ್ಯದ ನಾಡಲ್ಲೊಂದು ನಡೆಯುವ ಇಂತಹ ಪಾಪದ ಕೆಲಸಕ್ಕೆ ಯಾರು ಹೊಣೆ?.