ಘಮ ಘಮ ಮಲ್ಲಿಗೆ, ನೀ ಎಲ್ಲಿದ್ದಿ ಇಲ್ಲಿವರೆಗೆಶುಭ-ಅಶುಭ ಎಲ್ಲಾ ಕಾರ್ಯಗಳಿಗೂ ಹೂವು ಇರಲೇಬೇಕು. ಹೂವುಗಳಿಗೆ ಗುಲಾಬಿ ರಾಜನಾದರೂ ಮಲ್ಲಿಗೆಯನ್ನು ಇಷ್ಟ ಪಡುವ ಜನರೇ ಹೆಚ್ಚು. ಇಂತಹ ಮಲ್ಲಿಗೆಯನ್ನು ಇಂದು ತಮ್ಮ ಇತರ ವೃತ್ತಿಯೊಂದಿಗೆ ಉಪಬೆಳೆಯಾಗಿ ಬೆಳೆದು ಅಧಿಕ ಲಾಭ ಗಳಿಸುವವರು ಇದ್ದಾರೆ. ಇವರಲ್ಲಿ ಪುತ್ತೂರು ತಾಲೂಕಿನ ಕಬಕ ಗ್ರಾಮದ ಯಮುನಾ ಕೂಡ ಒಬ್ಬರು.
ಕಳೆದ 2 ವರ್ಷಗಳಿಂದ ಮಲ್ಲಿಗೆ ಕಷಿಯಲ್ಲಿ ತೊಡಗಿರುವ ಯಮುನಾ ಈ ಬಾರಿ ಸುಮಾರು 30 ಮಲ್ಲಿಗೆ ಗಿಡಗಳನ್ನು ನಾಟಿ ಮಾಡಿದ್ದಾರೆ. ಮನೆಯಂಗಳದಲ್ಲೇ ವಿಶಾಲವಾಗಿ ಹಬ್ಬಿರುವ ಈ ಗಿಡಗಳಿಗೆ ದಿನಕ್ಕೆ ಒಂದು ಬಾರಿ ನೀರುಣಿಸುತ್ತಾರೆ. ಒಂದು ಮಲ್ಲಿಗೆ ಗಿಡ 15 ರಿಂದ 20 ವರ್ಷಗಳ ಕಾಲ ಬದುಕಬಲ್ಲದು. ಗಿಡ ನೆಟ್ಟ ಆರು ತಿಂಗಳ ನಂತರ ಉತ್ತಮ ಇಳುವರಿ ಪಡೆಯಲು ಸಾಧ್ಯ. ಗಿಡದಿಂದ ಗಿಡಕ್ಕೆ ಸಾಕಷ್ಟು ಅಂತರ ಅಗತ್ಯ. ಆರಂಭದ 10 ತಿಂಗಳ ಕಾಲ ಅಧಿಕ ಹೂ ದೊರೆಯುವುದಲ್ಲದೆ, ಬೇಸಿಗೆಯಲ್ಲಿ ಅಧಿಕ ಇಳುವರಿ ಲಭಿಸುತ್ತಿದ್ದು, ಮಾರುಕಟ್ಟೆಯಲ್ಲಿ ಒಂದು ಅಟ್ಟೆ ಮಲ್ಲಿಗೆಗೆ ಸುಮಾರು 800 ರಿಂದ 900 ದರವಿರುತ್ತದೆ ಎನ್ನುತ್ತಾರೆ ಯಮುನಾ.
ಈ ಗಿಡಗಳಿಗೆ ಯಾವುದೇ ರಾಸಾಯನಿಕಗಳನ್ನು ಹಾಕದೆ ಕೇವಲ ಹಟ್ಟಿ ಗೊಬ್ಬರ ಮತ್ತು ತಿಂಗಳಿಗೊಮ್ಮೆ ನೆಲಕಡ್ಲೆ ಹಿಂಡಿ, ಅರಳು ಹಿಂಡಿಯನ್ನು ಹಾಕುತ್ತಾರೆ. ಪ್ರತಿದಿನ ದಿನಪತ್ರಿಕೆಯಲ್ಲಿರುವ ದರವನ್ನು ನೋಡಿ ಸ್ಥಳೀಯ ಮಾರುಕಟ್ಟೆಗೆ ಮಲ್ಲಿಗೆಯನ್ನು ಒಯ್ಯುತ್ತಾರೆ.
ಈ ಗಿಡಗಳಿಗೆ ತಗಲುವ ಎಲೆ ಚುಕ್ಕೆ ರೋಗ ಮತ್ತು ಎಲೆಗಳನ್ನು ಹುಳುಗಳು ತಿಂದು ಹಾಳು ಮಾಡುವುದನ್ನು ತಡೆಯಲು 15 ದಿನಕ್ಕೊಮ್ಮೆ ಗೋಮೂತ್ರವನ್ನು ಸಿಂಪಡಿಸುತ್ತಾರೆ. ಸರಿಯಾದ ನೀರಿನ ವ್ಯವಸ್ಥೆ ಇದ್ದರೆ ಇಡೀ ವರ್ಷ ಮಲ್ಲಿಗೆ ಕಷಿಯನ್ನು ಕೈಗೊಳ್ಳಬಹುದು. ಆದರೆ ಅಧಿಕ ಲಾಭ ಪಡೆಯುವ ಉದ್ದೇಶದಿಂದ ರಾಸಾಯನಿಕದ ಮೊರೆ ಹೋದರೆ ನಷ್ಟ ಅನುಭವಿಸಬೇಕಾದಿತು ಎನ್ನುತ್ತಾರೆ ಅವರು.
ಪ್ರತಿದಿನ ಬೆಳಗ್ಗಿನ ಜಾವ ಮೊಗ್ಗು ಕಟಾವು ಮಾಡುವ ಮೊದಲು ಇಬ್ಬನಿ ಕರಗಲು ಗಿಡಗಳಿಗೆ ಒಂಚೂರು ನೀರು ಹನಿಸಬೇಕು. ಗಿಡದಲ್ಲಿ ಇಬ್ಬನಿ ನಿಂತರೆ ಹೂವಿನ ಗುಣಮಟ್ಟ ಕಡಿಮೆಯಾಗುತ್ತದೆ. ಕಡಿಮೆ ಶ್ರಮದಲ್ಲಿ ಅಧಿಕ ಲಾಭ ಗಳಿಸಲು ಮಲ್ಲಿಗೆ ಕಷಿ ಒಂದು ಉತ್ತಮ ದಾರಿ ಎನ್ನುತ್ತಾರೆ ಅವರು.