ಗೋಕರ್ಣದಲ್ಲಿ ವಿಜೃಂಭಣೆಯ ಮಹಾಶಿವರಾತ್ರಿ


ಭಾರತದ ಅನೇಕ ಪುಣ್ಯ ಕ್ಷೇತ್ರಗಳಲ್ಲಿ ಗೋಕರ್ಣವೂ ಒಂದು. ಇಲ್ಲಿ ಪರಶಿವನ ಆತ್ಮಲಿಂಗವು ಆತನ ಮಗ ಗಣಪತಿಯಿಂದಲೇ ಪ್ರತಿಷ್ಠಾಪಿಸಲ್ಪಟ್ಟ ಕಾರಣದಿಂದ ಭೂಸ್ಪರ್ಶ ಹೊಂದಿ, ಭೂಕೈಲಾಸವೆಂದು ಗೋಕರ್ಣಕ್ಕೆ ಇನ್ನೊಂದು ಹೆಸರು. ಇಲ್ಲಿ ಭಕ್ತರು ಭಕ್ತಿ, ಶ್ರದ್ಧೆ, ಜ್ಞಾನ, ವೈರಾಗ್ಯಗಳಿಂದ ಶಿವನನ್ನು ಪೂಜಿಸಿ ಕೃತಾರ್ಥರಾಗುತ್ತಾರೆ. ಶಿವರಾತ್ರಿಯಂದು ಶಿವನು ಕೇವಲ ನೀರು ಬಿಲ್ವಪತ್ರೆಯಿಂದ ಸಂತುಷ್ಠಗೊಳ್ಳುತ್ತಾನೆ. ಅದು ಭಕ್ತನು ತನ್ನ ಭಕ್ತಿಯಿಂದ ಅರ್ಚಿಸಿದಾಗ ಮಾತ್ರ ಸಾಧ್ಯವಿದೆ.  ಭಕ್ತರು ಈ ದಿನ ಪೂಜಿಸಿದರೆ ಅವರ ಅಭೀಷ್ಠೆಗಳನ್ನು ಪೂರೈಸಲು ಶಿವನು ಧರೆಗಿಳಿದು ಬರುತ್ತಾನೆಂಬ ನಂಬಿಕೆಯಿದೆ. ಈ ಕಾರಣಕ್ಕಾಗಿ ಭಕ್ತರು ಶಿವಧ್ಯಾನದಲ್ಲಿ ಮುಳುಗುತ್ತಾರೆ. ದಾನ-ಧರ್ಮಗಳನ್ನು ನಡೆಸುತ್ತಾರೆ. ಶಿವಪಂಚಾಕ್ಷರಿ ಜಪ ನಡೆಯುತ್ತದೆ. ಅರ್ಚನೆ-ಅಭಿಷೇಕ, ಮಂತ್ರಪಠಣ, ಭಜನೆ ಸಂಕೀರ್ತನೆಗಳು ನಡೆಯುತ್ತದೆ. ಹೀಗೆ ಶಿವರಾತ್ರಿ ಆಚರಣೆಯು ಶಿವ ಭಕ್ತರಿಗೆ ಹಬ್ಬದ ಸಂಭ್ರಮವಾಗಿದೆ.
ಗೋಕರ್ಣವು ಸಿದ್ಧಿ ಹಾಗೂ ಮುಕ್ತಿ ಕ್ಷೇತ್ರ. ಶಿವನ ಆತ್ಮಲಿಂಗವು ಭೂಸ್ಪರ್ಶವಾದ ಕಾರಣಕ್ಕೆ ಭೂಕೈಲಾಸವೆಂದು ಪ್ರಸಿದ್ಧಿ ಪಡೆದಿದೆ. ಗೋಕರ್ಣದ ಶಿವರಾತ್ರಿ ಮಹೋತ್ಸವವು ಮಾಘ ಬಹುಳ ನವಮಿಯಿಂದ ಆರಂಭವಾಗಿ, ಮಾಘ ಶುದ್ಧ ಬಿದಿಗೆಯವರೆಗೆ ಒಂಭತ್ತು ದಿನಗಳಕಾಲ ವಿವಿಧ ಉತ್ಸವಾದಿಗಳು ಆಚರಣೆಗೊಳ್ಳುತ್ತದೆ.ಆಗಮ ಶಾಸರೀತ್ಯಾ ಉತ್ಸವಾದಿಗಳು ವಿವಿಧ ಹವನಾದಿಗಳು, ವಿವಿಧ ರಥೋತ್ಸವಾದಿಗಳು, ಬಲಿ-ಭೂತಬಲಿ, ಚೂರ್ಣೋತ್ಸವ,ಅವಭೃತೋತ್ಸವಗಳೊಂದಿಗೆ ಶಿವರಾತ್ರಿ ಮಹೋತ್ಸವವು ಭಕ್ತರಿಂದೊಡಗೂಡಿ, ಮಹಾಜಾತ್ರೆಯಾಗಿ ಆಚರಿಸಲ್ಪಡುತ್ತದೆ.
ಇಲ್ಲಿನ ವಿಶೇಷವೆಂದರೆ ಭಕ್ತರು ಸ್ವಹಸ್ತದಿಂದ ಪೂಜೆ, ಅರ್ಚನೆಗಳನ್ನು ನೆರವೇರಿಸಬಹುದಾಗಿದೆ. ಈ ರೀತಿ ಉಳಿದ ಯಾವ ಕ್ಷೇತ್ರಗಳಲ್ಲೂ ಪೂಜೆ ಮಾಡಲು ಭಕ್ತರಿಗೆ ಅವಕಾಶವಿರುವುದಿಲ್ಲ. ಆದರೆ ಗೋಕರ್ಣದಲ್ಲಿ ಮಾತ್ರ ಪೂಜಿಸುವ ಭಾಗ್ಯವಿದೆ. ಆ ಕಾರಣಕ್ಕಾಗಿ ದೇಶದ ವಿವಿಧ ಭಾಗಗಳಿಂದ ಶಿವರಾತ್ರಿಯಂದು ಪರಶಿವನ ಆತ್ಮಲಿಂಗವನ್ನೂ, ದ್ವಿಭುಜ ಗಣಪತಿಯನ್ನೂ ಪೂಜಿಸಿ, ತಾಯಿ ಪಾರ್ವತಿ ದರ್ಶನ ಪಡೆದು ಸಮುದ್ರ ಸ್ನಾನ ಹಾಗೂ ಕೋಟಿತೀರ್ಥ, ರಾಮತೀರ್ಥಗಳಲ್ಲಿ ಪುಣ್ಯಸ್ನಾನ ಗೈದು ಪೂಜೆಗೆ ಅಣಿಯಾಗುತ್ತಾರೆ. ಶಿವನನ್ನು ಶಿವರಾತ್ರಿ ಪರ್ವಕಾಲದಲ್ಲಿ ಪೂಜಿಸುವುದು ಶಿವಭಕ್ತರ ಕರ್ಮಗಳಲ್ಲಿ ಒಂದು. ಗೋಕರ್ಣ ಕ್ಷೇತ್ರಕ್ಕೆ ಶಿವರಾತ್ರಿಯಂದೇ ಶಿವನನ್ನು ಪೂಜಿಸಲು ಭಕ್ತರು ಸಂಭ್ರಮದಿಂದ ಸೇರುತ್ತಾರೆ. ಶಿವರಾತ್ರಿ ಭಕ್ತಕೋಟಿಗೆ ಮುದವನ್ನು ನೀಡುತ್ತದೆ. ಕಾರಣ ಸಾಮಾನ್ಯವಾಗಿ ಎಲ್ಲಾ ದೇವಾಲಯಗಳಲ್ಲಿ ದರ್ಶನಕ್ಕೆ ಮಾತ್ರ ಸೀಮೀತವಾಗಿರುವುದನ್ನು ನಾವು ಕಾಣುತ್ತೇವೆ. ಆದರೆ ಇಲ್ಲಿ ಜಾತಿ-ಮತ-ಬೇಧವಿಲ್ಲದೇ ಎಲ್ಲಾ ಭಕ್ತರೂ ಸ್ವತಃ ಅವರೇ ಪೂಜಿಸುವ ಅವಕಾಶ ಗೋಕರ್ಣದಲ್ಲಿ ಮಾತ್ರವಿದೆ. ಭಕ್ತರು ತಮ್ಮ ಭಕ್ತಿ-ಶ್ರದ್ಧೆಗೆ ಅನುಗುಣವಾಗಿ ಪುರೋಹಿತರ ಮಾರ್ಗದರ್ಶನದಲ್ಲಿ ಪೂಜೆ ಸಲ್ಲಿಸುತ್ತಾರೆ.