ಮತ ಕೇಳಿ ಸಂದೇಶ ಬಂದರೆ ದೂರು ನೀಡಬಹುದು

ಭಾರತ ಚುನಾವಣಾ ಆಯೋಗದ ನೀತಿ ನಿಯಮಾವಳಿಯಂತೆ ಮೊಬೈಲ್ ಅಥವಾ ಧ್ವನಿ ಸಂದೇಶ ಕಳುಹಿಸುವುದು ವಾಣಿಜ್ಯ ಪ್ರಚಾರದ ಒಂದು ಭಾಗ. ಹಾಗಾಗಿ, ಪ್ರಸಕ್ತ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅಥವಾ ಅಂತಹ ಅಭ್ಯರ್ಥಿಗಳ ಬೆಂಬಲಿಗರು ಮೊಬೈಲ್ ಸಮೂಹ ಸಂದೇಶದ ಮೂಲಕ ಪ್ರಚಾರ ಕೈಗೊಳ್ಳುವ ಪ್ರಸಂಗವಿದ್ದಲ್ಲಿ ಚುನಾವಣಾ ಆಯೋಗ ನಿರ್ದಿಷ್ಟ ಪಡಿಸಿದ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಮೊಬೈಲ್ ಸಂದೇಶ ಕಳುಹಿಸುವವರು, ಸಂಬಂಧಿತ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಅಧ್ಯಕ್ಷರಾಗಿರುವ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಉಸ್ತುವಾರಿ ಸಮಿತಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ, ಸಂದೇಶದ ವಿವರ, ಸಮಯ ಹಾಗೂ ತಗಲುವ ಖರ್ಚು-ವೆಚ್ಚಗಳನ್ನು ತಿಳಿಸಿ ಪರವಾನಿಗೆ ಪಡೆಯಬೇಕಿದೆ. ಅಲ್ಲದೇ ಜಾಹೀರಾತಿನ ಖರ್ಚು-ವೆಚ್ಚದ ವಿವರಗಳನ್ನು ಸಂಬಂಧಿಸಿದ ಮತಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ತಪ್ಪಿದಲ್ಲಿ ಚುನಾವಣಾ ಆಯೋಗದ ನಿಯಮಾವಳಿಯಂತೆ ದಂಡನೆಗೆ ಗುರಿಯಾಗಬೇಕಾಗುತ್ತದೆ. ಹಾಗಾಗಿ, ನಿಮಗೆ ಮೊಬೈಲ್ ಸಮೂಹ ಸಂದೇಶದ ಮೂಲಕ ಪ್ರಚಾರ ಕೈಗೊಂಡ ಬಗ್ಗೆ ಮಾಹಿತಿ ಬಂದರೆ ಅಥವಾ ನಿಮ್ಮ ಮೊಬೈಲ್ಗೆ ಮತ ಹಾಕುವಂತೆ ಸಂದೇಶ ಬಂದರೆ ಚುನಾವಣಾ ಸಹಾಯವಾಣಿ 1950 ಅಥವಾ 08372 220600 ಸಂಖ್ಯೆಗೆ ಉಚಿತ ಕರೆ ಮಾಡಿ ದೂರು ನೀಡಬಹುದು.

ಬ್ರಾಹ್ಮಣ ಜಾಗೃತಿ ಸಮ್ಮೇಳನಾಧ್ಯಕ್ಷ ಡಾ.ಪಿ. ಸದಾನಂದ ಮಯ್ಯ


ಬ್ರಾಹ್ಮಣ ಒಕ್ಕೂಟದ ವತಿಯಿಂದ ಮಂಗಳೂರಿನ ಸಂಘನಿಕೇತನದಲ್ಲಿ ಏಪ್ರಿಲ್ 21ರಂದು ಜರುಗುವ ಬ್ರಾಹ್ಮಣ ಜಾಗೃತಿ ಸಮ್ಮೇಳನದ ಅಧ್ಯಕ್ಷರಾಗಿ ಉದ್ಯಮಿ, ಅಂಕಣಕಾರ ಡಾ.ಪಿ. ಸದಾನಂದ ಮಯ್ಯ  ಆಯ್ಕೆಯಾಗಿದ್ದಾರೆ. ಡಾ. ಮಯ್ಯ ಅವರು ಮಯ್ಯಸ್ ಬಿವರೇಜ್ಸ್ ಮತ್ತು ುಡ್ ಸಂಸ್ಥೆ ಮಾಲೀಕರಾಗಿದ್ದು, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಭಾರ್ಗವ ಪ್ರಶಾಂತಿ, ನರಸಿಂಹ, ಡಿೆನ್ಸ್ ಟೆಕ್ನಾಲಜಿ ಎ್ಸ್ಸೋಷ್ಶನ್, ಕನ್ನಡ ರಾಜ್ಯೋತ್ಸವ, ಆರ್ಯಭಟ, ಕೆಂಪೇಗೌಡ ಸೇರಿದಂತೆ ವಿವಿಧ ಪ್ರಶಸ್ತಿ,  ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.
ಬೆಳಗ್ಗೆ 6 ಗಂಟೆಯಿಂದ ಯಜ್ಞ ಮಂಟಪದಲ್ಲಿ ಹೋಮ ಹವನಾದಿಗಳು ನೆರವೇರಲಿವೆ. ಬಳಿಕ ಸಮ್ಮೇಳನಾಧ್ಯಕ್ಷರನ್ನು ಮೆರವಣಿಗೆಯಲ್ಲಿ ಕರೆ ತರಲಾಗುವುದು. ಪ್ರಧಾನ ವೇದಿಕೆಯಲ್ಲಿ ಬೆಳಗ್ಗೆ 6ರಿಂದ ಉದಯರಾಗ, ನಾದ ಸಂಗೀತ ವೈಭವ, ಬೆಳಗ್ಗೆ 9 ಗಂಟೆಗೆ ಸಮ್ಮೇಳನ ಉದ್ಘಾಟನೆ ನಡೆಯಲಿದೆ. ಇದರಲ್ಲಿ ಸ್ವಾಮೀಜಿಗಳು ಮತ್ತು ಗಣ್ಯರು ಭಾಗವಹಿಸಲಿದ್ದಾರೆ. 11.30ರಿಂದ ಚಿಂತನಾ ಗೋಷ್ಠಿಗಳು ನಡೆಯಲಿವೆ. ಅಪರಾಹ್ನ 1 ಗಂಟೆಗೆ ಪುರಾಣ ವಾಚನ, ಚೂರ್ಣಿಕಾ, 2ಕ್ಕೆ ಮಾಲಿಕಾ ಮಂಗಳಾರತಿ, ಮಂತ್ರಾಕ್ಷತೆ, 2.30ಕ್ಕೆ ಡಾ.ಕೆ.ಪಿ. ಪುತ್ತೂರಾಯ ಅವರಿಂದ ‘ಬ್ರಾಹ್ಮಣ ಸಂಘಟನೆ - ಸಮಗ್ರತೆ ಮತ್ತು ಸಕ್ರಿಯತೆ’ ಕುರಿತು ಚಿಂತನ ಮತ್ತು ಮಾರ್ಗದರ್ಶನ ಉಪನ್ಯಾಸ ನಡೆಯಲಿದೆ. 3 ಗಂಟೆಗೆ ಸಮಾಜದ ಸಾಧಕರಿಗೆ ಸಾಧನಾ ಪುರಸ್ಕಾರ ಹಾಗೂ 4 ಗಂಟೆಗೆ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಂಜೆ 6 ಗಂಟೆಯಿಂದ ನಾದ, ತಾಳ, ಲಯ, ನೃತ್ಯ, ಯಕ್ಷಗಾನ ವೈಭವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ.
ಶಿವಳ್ಳಿ, ಹವ್ಯಕ, ಕೋಟ, ಸ್ಥಾನಿಕ, ಕೋಟೇಶ್ವರ, ಚಿತ್ಪಾವನ, ಕರ್ಹಾಡ, ದೇಶಸ್ಥ ಸೇರಿದಂತೆ ಎಲ್ಲ ಬ್ರಾಹ್ಮಣ ವರ್ಗದವರ ಸಮಾವೇಶ ಇದಾಗಿದೆ. ವಸ್ತು ಪ್ರದರ್ಶನ ಮಳಿಗೆ, ವಿವಾಹ ವೇದಿಕೆ, ಧಾರ್ಮಿಕ ಗ್ರಂಥಗಳ ಮಳಿಗೆ, ಮಯ್ಯಸ್ ಬೆಂಗಳೂರು ಆಹಾರೋತ್ಪನ್ನ ಮಳಿಗೆಗಳನ್ನು ತೆರೆಯಲಾಗುವುದು. ಸುಮಾರು 5 ರಿಂದ 10 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಅಂದ ಹಾಗೆ ನೀವೂ ಬನ್ನಿ. ಸಮಾವೇಶದಲ್ಲಿ ಪಾಲ್ಗೊಳ್ಳಿ.

ಗರಿಕೆ, ಹೊಂಗೆ, ಸಬ್ಸಿಗೆ ಸೊಪ್ಪು ಬಳಸಿ ಕುಡಿತ ಬಿಡಿ


ಬೆಳಗ್ಗೆ ಖಾಲಿ ಹೊಟ್ಟೆಗೆ 20 ದಿನ ಗರಿಕೆ ಜ್ಯೂಸ್, 20 ದಿನ ಹೊಂಗೆ ಸೊಪ್ಪಿನ ಜ್ಯೂಸ್, 20 ದಿನ ಸಬ್ಸಿಗೆ ಸೊಪ್ಪಿನ ಜ್ಯೂಸ್ ಕುಡಿದರೆ ಸುಲಭವಾಗಿ ಮದ್ಯಪಾನ ಬಿಡಬಹುದು. ಕಾರಣವೇನು ಗೊತ್ತೆ?. ಒಂದು ಬಾರಿ ಮದ್ಯ ಸೇವಿಸಿದರೆ ಸಾಕು, ಅದರಲ್ಲಿನ ಆಲ್ಕೋಹಾಲ್ ಮಿದುಳಿನ ಮೇಲಿನ ಹಿಡಿತ ತಪ್ಪಿಸಿ ಮತ್ತೆ ಕುಡಿಯಬೇಕೆಂದು ಪ್ರಚೋದನೆ ನೀಡುತ್ತದೆ. ಈ ಮೂರು ರೀತಿಯ ಸೊಪ್ಪಿನ ಜ್ಯೂಸ್ ಬಳಸುವುದರಿಂದ ಮೆದುಳಿನ ಈ ಋಣಾತ್ಮಕ ಚಿಂತನೆಗಳು ದೂರವಾಗಿ ಯಥಾಸ್ಥಿತಿಗೆ ತರುವುದರಿಂದ ಮತ್ತೆ ಕುಡಿಯಬೇಕೆನ್ನಿಸುವುದಿಲ್ಲ. ಅಲ್ಲದೆ ಲಿವರ್ ಖಾಯಿಲೆಗಳಿದ್ದರೆ ಅದೂ ಕೂಡ ನಿವಾರಣೆಯಾಗುತ್ತದೆ. ಜೊತೆಗೆ ರಕ್ತ ಶುದ್ದಿಯಾಗಿ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎನ್ನುವುದು ವೈದ್ಯರ ಅಭಿಮತ.
ನಮ್ಮ ಆರೋಗ್ಯ ಯಾವುದೇ ವೈದ್ಯರ ಬಳಿ ಇರುವುದಿಲ್ಲ. ಅದು ನಮ್ಮ ಕೈಯಲ್ಲಿಯೇ ಇದೆ. ನಾವು ಬಳಸುವ ಆಹಾರ ಹಾಗೂ ಆಹಾರ ಕ್ರಮದಿಂದ ರೋಗಮುಕ್ತ ಜೀವನ ನಡೆಸಬಹುದಾಗಿದೆ. ಪ್ರಕೃತಿ ಸಹಜ ಆಹಾರ ಬಳಸದೆ ರಾಸಾಯನಿಕ ಆಹಾರ ಬಳಸಿ ರೋಗಗಳಿಗೆ ಆಹ್ವಾನ ನೀಡುತ್ತಿದ್ದೇವೆ. ಹಾಗಾಗಿ ಸೊಪ್ಪು, ತರಕಾರಿ, ಸಿರಿಧಾನ್ಯಗಳನ್ನು ಯಥೇಚ್ಛವಾಗಿ ಬಳಸಿ. ಜೊತೆಗೆ ಹಾಗಲಕಾಯಿ, ಬೇವು, ಹೊಂಗೆ ಕಹಿ ಇರುತ್ತದೆಯೇ ವಿನ: ವಿಷವಾಗಿರುವುದಿಲ್ಲ. ಪ್ರತಿ ದಿನ ಇದನ್ನು ಬಳಸಿ ಆರೋಗ್ಯ ರಕ್ಷಿಸಿಕೊಳ್ಳಬಹುದಾಗಿದೆ. ಕಹಿ ಹೋಗಲಾಡಿಸಲು ಬೇಕಿದ್ದರೆ ಕಪ್ಪುಬೆಲ್ಲ ಅಥವಾ ಜೇನು ತುಪ್ಪ ಬಳಸಬಹುದಾಗಿದೆ.

ಕುಣಿಗಲ್ನಲ್ಲಿ ಗಗನಕ್ಕೇರುತ್ತಿದೆ ನಿವೇಶನ ಬೆಲೆ


ಬೆಂಗಳೂರು, ತುಮಕೂರಿನಲ್ಲಿ ನೀವು ಅಂದುಕೊಂಡ ಉತ್ತಮ ಬೆಲೆಗೆ ಒಳ್ಳೆ ಕಡೆ ಸೈಟ್ ಖರೀದಿಸಬಹುದು. ಆದರೆ, ಕುಣಿಗಲ್ನಲ್ಲಿ ಸೈಟ್ ಬೆಲೆ ಕೇಳಿದರೆ ನಿಮಗೆ ಶಾಕ್ ಹೊಡೆಯುತ್ತದೆ. ಸಮರ್ಪಕ ರಸ್ತೆ, ಕುಡಿಯುವ ನೀರು, ಚರಂಡಿ, ಬೀದಿ ದೀಪ... ಹೀಗೆ ಏನೇನೂ ಸೌಲಭ್ಯವಿಲ್ಲದ, ಈ ಊರಿನಲ್ಲಿ ಸೈಟ್ ಬೆಲೆ ಮಾತ್ರ ದುಬಾರಿ.
ನಾಲ್ಕು ವರ್ಷಗಳ ಹಿಂದೆ ಹೌಸಿಂಗ್ ಬೋರ್ಡ್, ಅಂದಾನಯ್ಯ ಬಡಾವಣೆ, ಡಿ.ಗ್ರೂಪ್ ಬಡಾವಣೆ ಮತ್ತು ಪಟ್ಟಣದ ಹೃದಯ ಭಾಗದ ಆಸು-ಪಾಸುಗಳಲ್ಲಿ ಗರಿಷ್ಟ 2-3 ಲಕ್ಷ ರೂ.ಗಳಿದ್ದ ಸೈಟಿನ ಬೆಲೆ ಈಗ ಬರೋಬ್ಬರಿ 10-12ಲಕ್ಷ ರೂ.ಗೆ ದಿಡೀರ್ ಏರಿಕೆಯಾಗಿದೆ. ವ್ಯಾಪಾರಿಗಳು, ನೌಕರರು, ಮಧ್ಯಮ ವರ್ಗದ ಜನತೆಯನ್ನು ಗುರಿಯಾಗಿಸಿಕೊಂಡು ಭೂಮಾಫಿಯಾ ಮತ್ತು ದಳ್ಳಾಳಿಗಳು ಬೆಲೆ ಹೆಚ್ಚಿಸುತ್ತಾ ತಮ್ಮ ಬೇಳೆಯನ್ನೂ ಬೇಯಿಸಿಕೊಂಡು ನಿವೇಶನಗಳು ಬಡವರ ಕೈಗೆ ಸಿಗದಂತೆ ಕಟ್ಟೆಚ್ಚರ ವಹಿಸಿದ್ದಾರೆ. ತಮ್ಮ ಹೆಸರಿಗೆ ಬೇರೊಬ್ಬರಿಂದ ಕಡಿಮೆ ಬೆಲೆಗೆ ಸೈಟು ಅಗ್ರಿಮೆಂಟ್ ಹಾಕಿಸಿಕೊಂಡು ಮೂರು ತಿಂಗಳಲ್ಲಿ ಹಣ ದ್ವಿಗುಣ ಮಾಡಿಕೊಳ್ಳುತ್ತಿರುವ ಪಕ್ಕಾ ಭೂಮಾಫಿಯಾಗಳ ಕೈಚಳಕವಿದು.
ನಗರೀಕರಣದ ಪ್ರಭಾವ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿದ್ದು, ಒಂದು ಕಡೆ ವಿದ್ಯಾವಂತ ಯುವಕ, ಯುವತಿಯರು ಉದ್ಯೋಗ ಹರಸಿ ಉದ್ಯಾನ ನಗರಿ ಬೆಂಗಳೂರು ಕಡೆಗೆ ಹೆಜ್ಜೆ ಹಾಕುತ್ತಿದ್ದರೆ, ಮತ್ತೊಂದೆಡೆ ಬೆಂಗಳೂರಿನಂತಹ ಪ್ರದೇಶದಲ್ಲಿ ಒತ್ತಡದ ಬದುಕಿನಲ್ಲಿ ಜೀವನವೇ ಸಾಕು ಎಂದು ಕಾಲು ಕೀಳುತ್ತಿರುವ ಮಂದಿ ತಮ್ಮ ಜೀವಿತ ಅವಧಿಯ ಕೊನೆಗಾಲದಲ್ಲಾದರೂ ಪಟ್ಟಣದಲ್ಲಿ ತಲೆ ಮೇಲೆ ಸೂರು ಹೊಂದುವ ಆಸೆಗೆ ಈ ಭೂಮಾಫಿಯಾ ಅಡ್ಡಿಯಾಗಿದೆ.
ಮಳೆ ಆಧಾರಿತ ಒಣ ಭೂಮಿ ಪ್ರದೇಶವಾಗಿದ್ದರೂ ಇಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ. ಮೊದ-ಮೊದಲು ಪಟ್ಟಣದಲ್ಲಿ ಯಾವ ಕಡೆ ಬೇಕಾದರೂ ಸೈಟು ಖರೀದಿಸಬಹುದಿತ್ತು. ಕಳೆದ 3-4 ವರ್ಷಗಳ ಹಿಂದೆ ಇದ್ದ ನಿವೇಶನಗಳ ಬೆಲೆ ಈಗ ದುಪ್ಪಟ್ಟಾಗಿದೆ. ನಿವೇಶನ ಬೆಲೆ ಲಕ್ಷ-ಲಕ್ಷಕ್ಕೂ ಮೀರಿದೆ. ಕಾಲು ಕೋಟಿ ಎಂದರೆ ಅಚ್ಚರಿ ಇಲ್ಲ. ಆದರೂ, ಪಟ್ಟಣ ಅಭಿವೃದ್ಧಿಯಲ್ಲಿ 10-15 ವರ್ಷಗಳ ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಅಧಿಕಾರಸ್ಥ ರಾಜಕಾರಣಿಗಳ ಇಚ್ಛಾಶಕ್ತಿಯ ಫಲವಾಗಿ ಪಟ್ಟಣ ಅಭಿವೃದ್ಧಿಯಲ್ಲಿ ಹಿಂದೆ ಸರಿದಿದೆ. ಭೌಗೋಳಿಕವಾಗಿ ತೀರಾ ಕಿಷ್ಕಿಂದೆಯಾಗಿರುವ ಪಟ್ಟಣದಲ್ಲಿ ನಿವೇಶನಗಳ ಬೆಲೆ ಮಾತ್ರ ಮುಂಬೈ ಸೆನೆಕ್ಸ್ನಂತೆ ಏರುತ್ತಲೇ ಹೋಗುತ್ತಿದೆ. ಭೂಪರಿವರ್ತನೆಯಾಗಿಲ್ಲದ ಸೈಟುಗಳ ಬೆಲೆಯೂ ಹೆಚ್ಚು.
ರಾಷ್ಟ್ರೀಯ ಹೆದ್ದಾರಿ 48 ಹಾದು ಹೋಗುವ ಪಟ್ಟಣ, ತುಮಕೂರಿಗೆ 40 ಕಿ.ಮೀ ಮತ್ತು ಬೆಂಗಳೂರಿಗೆ 72 ಕಿ.ಮೀ ಅಂತರದಲ್ಲಿದೆ. ಹೀಗಾಗಿ ಪಟ್ಟಣ ಸರ್ಕಾರಿ ನೌಕರರು, ವ್ಯಾಪಾರಸ್ಥರು, ಖಾಸಗಿ ಕಂಪನಿಯ ಉದ್ಯೋಗಿಗಳು, ಫ್ಯಾಕ್ಟರಿ ನೌಕರರು ಹಾಗೂ ಇತರ ವರ್ಗದ ಜನರಿಗೆ ಕೇಂದ್ರಸ್ಥಾನವಾಗಿದೆ. ಈಗಾಗಲೇ ಚತುಷ್ಪಥ ರಸ್ತೆ ನಿರ್ಮಾಣವಾಗಿದೆ. ಬಸ್ ಹತ್ತಿದರೆ ಬೆಂಗಳೂರಿನಿಂದ ಸುಮಾರು 1.15 ಗಂಟೆ ಸಮಯದಲ್ಲಿ ಬೆಂಗಳೂರಿನಲ್ಲಿ ಇರಬಹುದು.
ಅಲ್ಲಿಂದಲೂ ಅಷ್ಟೆ ಸಮಯ. ತುಮಕೂರು-ಮದ್ದೂರು ರಸ್ತೆಯೂ ಕೂಡ ಮುಂಬರುವ 6 ತಿಂಗಳಲ್ಲಿ ಅಭಿವೃದ್ಧಿ ಕಾಣಲಿದೆ. ದ್ವಿಪಥ ರಸ್ತೆಯಾಗಿ ಪರಿವರ್ತನೆಯಾಗಲಿರುವ ಈ ಮಾರ್ಗದ ಮೂಲಕ 40-50 ನಿಮಿಷಗಳಲ್ಲಿ ತುಮಕೂರಿನಿಂದ ಕುಣಿಗಲ್ಗೆ ಬಂದಿಳಿಯಬಹುದು. ಉತ್ತರಕ್ಕೆ ದೊಡ್ಡಕೆರೆ ಮತ್ತು ದಕ್ಷಿಣಕ್ಕೆ ಚಿಕ್ಕಕೆರೆ ಇರುವುದರಿಂದ ಪಟ್ಟಣ ಬೆಳೆಯಲು ಸಾಧ್ಯವಾಗಿಲ್ಲ. ಆದರೆ, ಪೂರ್ವಕ್ಕೆ ಮತ್ತು ಪಶ್ಚಿಮಕ್ಕೆ ಪಟ್ಟಣ ಅಭಿವೃದ್ಧಿ ಹೊಂದುತ್ತಿದೆ. ಪುರಸಭೆ ವ್ಯಾಪ್ತಿಗೆ ಕಳೆದ 5 ವರ್ಷದಿಂದ ಸೇರ್ಪಡೆಯಾಗಿರುವ, ಅದಕ್ಕೂ ಮುನ್ನ ಕಂದಾಯ ಪ್ರದೇಶವಾಗಿದ್ದ ಬಿದನಗೆರೆ ಮತ್ತು ಮಲ್ಲಾಘಟ್ಟ ಪ್ರದೇಶಗಳಲ್ಲಿ ಮತ್ತು ಮಲ್ಲಿಪಾಳ್ಯ ಆಸು-ಪಾಸು ಜಮೀನು ಖರೀದಿಸುವುದೆಂದರೆ ಚಿನ್ನ ಖರೀದಿಸಿದಂತೆ. ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಬೆಂಗಳೂರು-ಹಾಸನ ರೈಲು ಬರುವ ಸಾಧ್ಯತೆ ಇರುವುದೂ ಕೂಡ ಸೈಟು ಬೆಲೆ ಹೆಚ್ಚಳಕ್ಕೆ ಕಾರಣ. ಇದರ ಜೊತೆಗೆ ಮುಂದಿನ ಹತ್ತು ವರ್ಷಗಳಲ್ಲಿ ಪಟ್ಟಣದ ಮೂಲಕ ಹಾದು ಹೋಗಲಿರುವ ತುಮಕೂರು-ಚಾಮರಾಜನಗರ ರೈಲು ಮಾರ್ಗವೂ ಕಾರಣವಾಗಲಿದೆ.
ಪಟ್ಟಣದ ಅರ್ಧ ಭಾಗ ಮಲ್ಯ ಒಡೆತನದ ಸ್ಟಡ್ ಫಾರಂ ವಶದಲ್ಲಿದೆ. ಎತ್ತ ನೋಡಿದರೂ ಸೈಟು ನಿರ್ಮಾಣಕ್ಕೆ ಖಾಲಿ ಜಾಗದ ಕೊರತೆ ಎದ್ದು ಕಾಣುತ್ತಿದೆ. ಪಟ್ಟಣ ಬೆಳೆಯುವುದಾದರೆ ಬೆಂಗಳೂರು ಕಡೆಗೆ, ಅಂದರೆ ಅಂಚೆಪಾಳ್ಯ ಇಲ್ಲವೇ, ಬಿಳಿ ದೇವಾಲಯ ಗ್ರಾಮದ ಕಡೆಗೆ ಬೆಳೆಯಬೇಕು. ಇದೂ ಕೂಡ ತುಸು ಕಷ್ಟದ ಮಾತು. ಏಕೆಂದರೆ, ರಸ್ತೆಯ ಇಕ್ಕೆಡೆಗಳಲ್ಲೂ ತೋಟ ಮತ್ತು ತುಡಿಕೆಗಳಿವೆ. ರೈತರ ಬದುಕಿನ ಜೀವಾಳವಾಗಿರುವ ತೋಟಗಳನ್ನೇ ಮಾರಾಟ ಮಾಡಿಕೊಂಡು ನಿವೇಶನ ಮಾಡಿದರೆ ಭವಿಷ್ಯದ ಗತಿ ಏನು ಎಂದು ಅರಿತಿರುವ ಬುದ್ಧಿವಂತ ರೈತರು ಇಂತಹ ದುರಾಲೋಚನೆಗೆ ಮುಂದಾಗಿಲ್ಲ. ಆದರೆ, ಭೂಮಾಫಿಯಾ ದಂಧೆಯಲ್ಲಿ ತೊಡಗಿಸಿಕೊಂಡಿರುವ ಕೆಲ ಬಲಾಢ್ಯ ವ್ಯಕ್ತಿಗಳು ಕೆಲ ಕಡೆಗಳಲ್ಲಿ ಭತ್ತದ ಗದ್ದೆ, ಅಡಿಕೆ, ಬಾಳೆ ಮತ್ತು ತೆಂಗಿನ ತೋಟಗಳನ್ನು ಭೂ ಪರಿವರ್ತನೆ ಮಾಡಿಕೊಂಡಿದ್ದಾರೆ.

ಕುಷ್ಟಗಿಯಲ್ಲಿ ಯುಗಾದಿ ಮರುದಿನ ಮೊಲಗಳಿಗೆ ಪ್ರಾಣ ಸಂಕಟ


ಯುಗಾದಿ ಬಂದರೆ ಸಾಕು ಹೈದ್ರಾಬಾದ್ ಕರ್ನಾಟಕದ ವರಸೆಯೇ ಬೇರೆ. ಯುಗಾದಿ ಮರುದಿನ ಇಲ್ಲಿ 'ಕರಿಯ ದಿನ'. ಅಂದರೆ ಈ ದಿನ ಕೆಲವೆಡೆ ಬಣ್ಣದ ಆಟ; ಇನ್ನೂ ಕೆಲವೆಡೆ ಬೇಟೆಯ ಆಟ. ಆದರೆ ಈ ಬೇಟೆಗೆ ಆಹುತಿಯಾಗುವುದು ಮಾತ್ರ ಬಡಪಾಯಿ ಮೊಲಗಳು!
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ, ಜಾಲಿಹಾಳ, ಮಾಟೂರ, ಕಲಕೇರಿ, ಮುದ್ದಲಗುಂದಿ, ಬೆಂಚಮಟ್ಟಿ, ಮ್ಯಾಗಲಡಕ್ಕಿ ತಾಂಡಾ, ಕಳಮಳ್ಳಿ ಗ್ರಾಮಗಳಲ್ಲಿ ಯುಗಾದಿಯ ಮಾರನೆ ದಿನ ಮೊಲಗಳ ಬೇಟೆ ಆಟ ನಡೆಯುತ್ತದೆ. ಸಾಮೂಹಿಕವಾಗಿ ಹಗಲಿಡಿ ಬೇಟೆಯಾಡಿ ರಾತ್ರಿ ಮೃತ ಮೊಲಗಳ ಮಾಂಸವನ್ನು ಹಂಚಿಕೊಂಡು ತಿನ್ನುತ್ತಾರೆ. ಮೊಲ ಬೇಟೆಯ ಪೈಪೋಟಿಯಲ್ಲಿ ಮೊದಲನೆ ಮುದ್ದಲಗುಂದಿ ಗ್ರಾಮಸ್ಥರು ಮೊದಲಿದ್ದಾರೆ.
ಕರಿಯ ದಿನ ಬೆಳಗ್ಗೆ ಗ್ರಾಮದ ಹಿರಿಯರು, ಯುವಕರು, ಹುಡುಗರು, ಮಧ್ಯ ವಯಸ್ಕರೆಲ್ಲರೂ ರೊಟ್ಟಿ, ಬೇಳೆ, ಶೇಂಗಾ ಪುಡಿ ಇತ್ಯಾದಿಗಳನ್ನು ಕಟ್ಟಿಕೊಂಡು ಬೇಟೆಗೆಂದೇ ಕೊಡಲಿ, ದೊಣ್ಣೆ, ಮಚ್ಚು, ಕುಡುಗೋಲು, ಬೆತ್ತ, ಹಾರೆ ಮುಂತಾದ ಹರಿತ ಆಯುಧಗಳನ್ನು ಹೆಗಲಿಗೇರಿಸಿ, ಸಹಾಯಕ್ಕಾಗಿ ಬೇಟೆ ನಾಯಿಗಳನ್ನು ಕರೆದೊಯ್ಯುತ್ತಾರೆ. ಮೊಲಗಳು ಅಡಗಿರುವ ತಾಣಗಳನ್ನು ಮೊದಲೇ ಅರಿತಿರುವ ಗ್ರಾಮಸ್ಥರು, ಕುರುಚಲು ಪೊದೆಗಳು, ಹಳ್ಳ-ಕೊಳ್ಳಗಳಂಥ ತಂಪಿನ ತಾಣಗಳಲ್ಲಿ ಅಡಗಿರುವ ಕೋಮಲ ದೇಹದ ಮೊಲಗಳನ್ನು ಹಿಡಿಯಲು ಮುಂದಾಗುತ್ತಾರೆ. ಮೊಲಗಳು ಈ ಹುಚ್ಚು ಬೇಟೆಯ ತಂಡದ ಗೌಜು-ಗದ್ದಲಕ್ಕೆ ಕಂಗಾಲಾಗಿ ಓಟಕ್ಕಿಳಿಯುತ್ತವೆ.
ಬೇಟೆಗೆಂದು ಬಂದ ಜನರು ಒಂದೆಡೆ ಬಲೆ ಹರಡಿ ಮತ್ತೊಂದೆಡೆಯಿಂದ ಅವಿತಿರುವ ಮೊಲಗಳ ಜಾಡು ಹಿಡಿದು, ಜೋರಾಗಿ ಹುಯಿಲೆಬ್ಬಿಸುತ್ತಾ ಅಟ್ಟಿಸಿಕೊಂಡು ಬರುತ್ತಾರೆ. ಬೆದರಿದ ಮೊಲಗಳು ದಿಕ್ಕೆಟ್ಟು ಓಡುವಾಗ ಹರಡಿರುವ ಬಲೆಗೆ ಬಂದು ಬೀಳುತ್ತವೆ. ಆಗ ಬಲೆಯನ್ನು ಸುತ್ತುವರೆದು ಎಲ್ಲಿಲ್ಲದ ಉತ್ಸಾಹದಿಂದ ಮೊಲಗಳನ್ನು ಮನಸೋ ಇಚ್ಚೆ ಚಚ್ಚುತ್ತಾ ಬಡಿಯುತ್ತಾರೆ. ಒಂದೇ ಏಟಿಗೆ ಅವುಗಳ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ. ಕುಪ್ಪಳಿಸುತ್ತಿದ್ದ ಮೊಲಗಳು ಶವಗಳಾಗಿ ಬೇಟೆಗಾರರ ಕೈಯಲ್ಲಿ ನೇತಾಡುತ್ತವೆ. ಹೀಗೆ ಎಲ್ಲರೂ ತಾವು ಕೊಂದು ತಂದ ಮೊಲಗಳನ್ನು ಒಂದೆಡೆ ರಾಶಿ ಹಾಕಿ, ಲೆಕ್ಕ ಮಾಡುತ್ತಾರೆ. ತಾವು ತಂದಿದ್ದ ಬುತ್ತಿಯನ್ನು ಬಿಚ್ಚಿ ಗಿಡದ ನೆರಳಲ್ಲಿ ಕುಳಿತು ಉಂಡು ನೀರು ಕುಡಿದು ತಮ್ಮೂರತ್ತ ಹೆಜ್ಜೆ ಹಾಕುತ್ತಾರೆ.
ಸೂರ್ಯಾಸ್ತವಾಗುತ್ತಿರುವಂತೆ ಅವರೆಲ್ಲರೂ ಮನೆ ತಲುಪಿರುತ್ತಾರೆ. ನಂತರ ಮೊಲಗಳ ಮಾಂಸವನ್ನು ಕತ್ತರಿಸಿ ತುಂಡು ತುಂಡು ಮಾಡಿ ಹಂಚಿಕೊಳ್ಳುವ ಕಾರ್ಯಕ್ರಮ ಶುರುವಾಗುತ್ತದೆ. ಅಂದು ಮನೆಗಳಲ್ಲಿ ಮೊಲದ ಮಾಂಸದ ರುಚಿಕಟ್ಟಾದ ಅಡುಗೆ. ತಮ್ಮ ಬೇಟೆಯ ಪರಾಕ್ರಮ, ಪೌರುಷವನ್ನು ಪರಸ್ಪರ ಹೇಳಿಕೊಳ್ಳುತ್ತಾ ಮಾಂಸದಡುಗೆಯನ್ನು ಸವಿಯುತ್ತಾರೆ.
ವನ್ಯಜೀವಿ ಹತ್ಯೆ ಅಪರಾಧ. ಅದಕ್ಕೆ ಜೈಲು ಶಿಕ್ಷೆ, ದಂಡ ವಿಧಿಸುವ ಕಾನೂನುಗಳಿದ್ದರೂ ಕುಷ್ಟಗಿ ತಾಲೂಕಿನ ಹಳ್ಳಿಗಳಲ್ಲಿ ಪ್ರತಿವರ್ಷ ಲೆಕ್ಕವಿಲ್ಲದಷ್ಟು ಮೊಲಗಳು ಹೀಗೆ ಬಲಿಯಾಗುತ್ತವೆ. ಮೊಲಗಳ ಹತ್ಯೆಯನ್ನು ನಿಲ್ಲಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ ತಳೆದಿದ್ದಾರೆ. ಮೊಲಗಳನ್ನು ಕೊಲ್ಲುವುದು ತಪ್ಪು ಎಂದು ಗ್ರಾಮಸ್ಥರಿಗೆ ತಿಳಿವಳಿಕೆ ನೀಡುವವರು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ.

ತುಳುವೆರ ಪೊಸ ವರ್ಷ 'ಬಿಸು ಪರ್ಬ'


ತುಳುವರೆಲ್ಲಾ ಹೊಸ ವರುಷವನ್ನು ಸ್ವಾಗತಿಸುವ ಬಿಸುಕಣಿ ಬಂದಿದೆ. ರವಿವಾರ ಪಗ್ಗುತಿಂಗಳ ಆರಂಭ ದಿನ. ಮುನ್ನಾದಿನ ಸುಗ್ಗಿ ತಿಂಗಳ ಕೊನೆಯ ದಿನ, ಅಂದು ಸಂಕ್ರಾತಿ. ಇದಕ್ಕೆ ಬಿಸು ಸಂಕ್ರಮಣ ಅಂತ ಕರೆಯತ್ತಾರೆ .ತುಳುವರ ಕೊನೆಯ ದಿನ ಸಂಕ್ರಮಣ, ಮರುದಿನ ಬಿಷು. ಬಿಷುವಿನಂದು ಸೂರ್ಯೋದಯದ ಮುನ್ನ ಬಿಸುಕಣಿಯನ್ನು ನೋಡಬೇಕು. ಈ ಹೊತ್ತಿನಲ್ಲಿ ಹೊಸ ಬಟ್ಟೆ ಧರಿಸಿಕೊಂಡು ಗುರು ಹಿರಿಯರ, ತಂದೆ ತಾಯಿಯವರ ಕಾಲುಗಳಿಗೆ ಅಡ್ಡ ಬಿದ್ದು ಆಶೀರ್ವಾದ ಪಡೆಯುವರು. ಚಂದ್ರನ ಆಧಾರದಲ್ಲಿ ಚಾಂದ್ರಮಾನ ಪದ್ಧತಿಯನ್ನು (ಶಾಲಿವಾಹನ ಶಕೆ) ಆಚರಿಸುವವರಿಗೆ 'ಯುಗಾದಿ' ಯಾಗಿಯೂ ಸೂರ್ಯನ ಆಧಾರದ ಸೌರಮಾನ ಪದ್ಧತಿಯವರಿಗೆ (ವಿಕ್ರಮ ಶಕೆ) 'ವಿಷು' ಅಥವಾ 'ಬಿಷು' ವಾಗಿಯೂ ಆಚರಿಸುವರು. ತುಳುನಾಡು ಮತ್ತು ತೆಂಕಣ ಕೇರಳಿಯರೂ ಕೂಡಾ ಈ ಆಚರಣೆಯನ್ನು ವಿಷು ಆಂತಾಲೇ ಕರೆದು ಹೊಸವರುಷವನ್ನು ಆಚರಿಸುವರು. ಚಂದ್ರಗಿರಿಯಿಂದ ಬಾರಕೂರಿನವರೆಗಿನ ತುಳುವರಿಗೆ ಬಿಸುಕಣಿ ಹೊಸವರುಷದ ಸಂಭ್ರಮ.
ತುಳುವರ ಆಚರಣೆ ಪ್ರಕಾರ ಸಂಕ್ರಮಣ ತಿಂಗಳ ಕೊನೆಯಾದರೆ ಆದರ ಮರುದಿನ 'ಸಿಂಗ್ಡೆ'ಯ ಪ್ರಾರಂಭ. ಸುಗ್ಗಿ ತಿಂಗಳ ಸಂಕ್ರಮಣದಂದು ಬಿಸು. ಮರುದಿವಸ ಹೊಸ ತಿಂಗಳು ಪಗ್ಗು. ಒಂದರಂದು ಕಣಿ. ಹೀಗೆ ತುಳುವರಿಗೆ ಎರಡು ದಿವಸದ ಹಬ್ಬವಿದೆ. ಸಿಂಗ್ಡೆಯೆಂದು ಮನೆಯೊಳಗಿನ ಹಣ, ಐಶ್ವರ್ಯ ವಸ್ತುಗಳನ್ನು ಹೊರಗಿನವರಿಗೆ ಕೊಡಬಾರದೆನ್ನುವ ನಂಬಿಕೆ ಇದೆ. ಕೊಟ್ಟರೆ ತುಳುವರ ಮನೆಯೊಳಗಿನ 'ಪೊಲ್ಸು'(ಐಶ್ವರ್ಯ)ಹೋಗುವುದು ಮತ್ತು ಕೊಡಲೇ ಬೇಕೇನ್ನುವುದಾದರೆ ಮುನ್ನ ದಿನ ಕೊಡತಕ್ಕದು ಎಂಬ ಬಲವಾದ ನಂಬಿಕೆ ತುಳುವರಲ್ಲಿದೆ. ವಿಷು ಕಣಿ ಇಟ್ಟನಂತರ ಆ ದಿನದ ಮಟ್ಟಿಗೆ ಯಾವುದೇ ವ್ಯವಹಾರ ನಡೆಸುವುದಿಲ್ಲ. ವಿಷುವಿನಿಂದ ವಿಷುವಿಗೆ ತುಳುವರಿಗೆ ಒಂದು ವರ್ಷ. ಆದ ಕಾರಣ ಒಂದೇ ವರ್ಷದಲ್ಲಿ ಎರಡು ಮದುವೆ ಮಾಡಬಾರದು. ಮನೆಯ ಗೃಹಪ್ರವೇಶ ಆದ ನಂತರ ಆ ಮನೆಯಲ್ಲಿ ಮದುವೆ ನಡೆಯಬಾರದು ಎಂಬ ನಂಬಿಕೆಯಿದೆ. ಒಂದು ಬಿಸು ಮುಗಿದ ನಂತರ ನಡೆಸಬಹುದು. ತುಳುನಾಡಿನಲ್ಲಿ ಹಬ್ಬದ ಕೊನೆ ಎಂಬುದು ಕೂಡ ಇಲ್ಲಿಂದಲೇ ಪ್ರಾರಂಭ. ಅಷ್ಟಮಿಗೆ ಹಬ್ಬ ಆರಂಭ 'ಭೀಮೆ ಕೊಂಡು ಕನತೇ...ಅಷ್ಟಮಿಗ್ ಕಿಟ್ನ ದೇವೆರ್ ಉದಿಸೊಂದು ಬತ್ತೇರ್...'ಎಂಬ ಮಾತಿದೆ.
ಬಿಸುಕಣಿಯ ದಿನ ಮುಂಜಾನೆ ದೇವಸ್ಥಾನ, ದೈವಸ್ಥಾನ, ಗುತ್ತು, ಚಾವಡಿ, ಪಡಿಪ್ಪಿರೆ, ಭಂಡಾರ ಮನೆಗಳನ್ನು ಶುದ್ಧಿಗೊಳಿಸಿ ಸಂಪ್ರದಾಯದಂತೆ ಮನೆಯಲ್ಲಿ ಬೆಳೆದ ಎಲ್ಲಾ ಕೃಷಿ ಬೆಳೆಗಳು,ಲವಸ್ತುಗಳನ್ನು ದೇವರ ಪೋಟೋ ಜತೆ, ಪಂಚಾಗವನ್ನು ಜೋಡಿಸಿ ದೇವರ ಕೋಣೆಯಲ್ಲಿ ಇಡುವರು. ಎದುರುಗಡೆ ದೀಪ ಹೊತ್ತಿಸಿ, ಧೂಪ ಹಿಡಿದು ಆಚರಣೆ ಮಾಡುವ ಕ್ರಮವೇ ಬಿಸುಕಣಿ. ಅಂದು ದೇವಸ್ಥಾನದಲ್ಲಿ ಮಕ್ಕಳಿಗೆ ಕಣಿ ಕಾಣಿಸುವ ಕ್ರಮವಿದೆ. ನಂತರ ತುಳುವರ ಪ್ರತಿ ಮನೆಯಲ್ಲಿ ವಿಶೇಷ ಊಟ ತಯಾರಾಗುತ್ತದೆ. ಹಸಿಗೇರು ಬೀಜ, ಹೆಸರು ಬೆಳೆಯ ಪಲ್ಯ ಮತ್ತು ಹೆಸರು ಬೆಳೆಯ ಪಾಯಸ ರೆಡಿಯಾಗಿ ಮನೆ ಮಂದಿ ಆ ದಿವಸ ಮಧ್ಯಾಹ್ನ ಒಟ್ಟಿಗೆ ಕೂತು ವಿಷುಹಬ್ಬದ ಊಟವನ್ನು ಸವಿಯುತ್ತಾರೆ.
ಬಿಸು ಸಂಕ್ರಾತಿಗೆ ಹೆಚ್ಚಿನ ದೇವಸ್ಥಾನದಲ್ಲಿ ಜಾತ್ರೆ ಆರಂಭವಾಗುವುದು. ಕೇರಳ ಮತ್ತು ಕರ್ನಾಟಕ (ದ.ಕ.)ಕ್ಕೆ ಹಂಚಿ ಹೋಗಿರುವ ನಾಗರ ಖಂಡದ ತುಳುನಾಡಿನಲ್ಲಿ ಬಿಸುಕಣಿಯಂದು ಹೊಸ ವರುಷ ಆರಂಭವಾಗುವುದು. ಮಧೂರು ೇ ಮದನಂತೇಶ್ವರ ಕ್ಷೇತ್ರ, ಐಲೇ ದುರ್ಗಾಪರಮೇಶ್ವರೀ ಕ್ಷೇತ್ರ, ಪುತ್ತೂರು ೇ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಬಿಸುವಿನಂದು ವಾರ್ಷಿಕ ಜಾತ್ರೆ ಜರುಗುವುದು. ಹೊಸ ವರ್ಷದ ಜಾತ್ರೆ ಇದಾಗಿದ್ದು ಇಲ್ಲಿಯ 'ವಿಷುಕಣಿ'ಯನ್ನು ನೋಡಲು ಸಹಸ್ರಾರು ಭಕ್ತರು ಆಗಮಿಸುವರು. ಮಧೂರುನಲ್ಲಿ ಮುನ್ನಾದಿನವೇ ಕಣಿ ನೋಡಲು ಅಲ್ಲಿಗೆ ಆಗಮಿಸುವರು. ಶಬರಿಮಲೆಯಲ್ಲಿ ವಿಷುವಿನ ಪ್ರಯುಕ್ತ ವಿಶೇಷ ಪೂಜೆ ಇದೆ. ವಾರ್ಷಿಕ ಜಾತ್ರೆಯೂ ಅಲ್ಲಿದೆ. ಈಗಾಗಲೇ ಸಹಸ್ರಾರು ಭಕ್ತರೂ ಶಬರಿಮಲೆಯತ್ತ ತೀರ್ಥಯಾತ್ರೆಗೆ ತೆರಳಿದ್ದಾರೆ.


ಎಲ್ಲರಿಗೂ ಹೊಸ ವರುಷ ಹೊಸ ಹರುಷವ ತರಲಿ...

ಹುಲಿ ಸಂರಕ್ಷಿತ ಅರಣ್ಯಕ್ಕೆ ಬೇಕಿದೆ ರಕ್ಷಣೆ


ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ವನ್ಯಜೀವಿ ಉಪವಲಯದ ಕುಳಗಿ ಮತ್ತು ಪಣಸೋಲಿ ವಲಯದ ಕಾಡುಗಳಿಗೆ ಆಗಾಗ ಬೀಳುವ ಕಾಳ್ಗಿಚ್ಚಿಗೆ ಕೀಟಗಳು, ಸೂಕ್ಷ್ಮ ಜೀವಿಗಳು, ಔಷಧ ಸಸ್ಯಗಳು ನಾಶಹೊಂದುತ್ತಿವೆ. ಕೆಲವೆಡೆ ಪಕ್ಷಿಗಳ ಗೂಡುಗಳು ಸಹ ಸುಟ್ಟು ಹೋಗುತ್ತಿದ್ದು, ಪಕ್ಷಿ ಸಂತತಿ ವಿನಾಶವಾಗುತ್ತಿದೆ. ದಾಂಡೇಲಿ-ಅಣಶಿ ಹುಲಿ ಸಂರಕ್ಷಿತ ವಲಯದ ಕುಳಗಿ, ಗುಂದ, ಪಣಸೋಲಿ ಅರಣ್ಯ ವಲಯಗಳ ಸಾವಿರಾರು ಹೆಕ್ಟೆರ್ ಪ್ರದೇಶದ ಕಾಡುಗಳು ಕಾಡ್ಗಿಚ್ಚಿಗೆ ಆಹುತಿಯಾಗುತ್ತಿರುವುದು ವನ್ಯಜೀವಿ ಪ್ರೇಮಿಗಳಲ್ಲಿ ಆತಂಕದ ವಾತಾವರಣ ನಿರ್ಮಿಸಿದೆ.
ಅರಣ್ಯ ಇಲಾಖೆಯಿಂದ ಕಾಡಿನ ಬೆಂಕಿಯ ಹತೋಟಿಗಾಗಿ ಲಕ್ಷಾಂತರ ರೂ. ಅನುದಾನ ವಿನಿಯೋಗವಾಗುತ್ತಿದೆ. ಕಾಡಿನ ಬೆಂಕಿ ಹತೋಟಿಯ ಮುಂಜಾಗೃತಾ ಕ್ರಮಕ್ಕಾಗಿ ಇಲಾಖೆಗೆ ಸೌಲಭ್ಯ, ಸಿಬ್ಬಂದಿ ಇನ್ನಿತರ ಸೌಕರ್ಯದ(ಅನುದಾನ, ವಾಹನ, ಉಪಗ್ರಹಗಳಿಂದ ತುರ್ತುತಾಂತ್ರಿಕ ಮಾಹಿತಿ) ಲಭ್ಯತೆಯಿದೆ. ಆದಾಗ್ಯೂ, ಕಾಡ್ಗಿಚ್ಚು ಹತೋಟಿಯಲ್ಲಿ ಇಲಾಖೆ ಎಡವುತ್ತಿದೆ.
ಪಣಸೊಲಿ ವಲಯದಲ್ಲಿ ಕಳೆದ ವರ್ಷ ನಿರ್ಮಾಣ ಮಾಡಿದ ಸುಮಾರು 50 ಹೆಕ್ಟೆರ್ ಬಾಂಬು ನೆಡುತೋಪುಗಳಿಗೆ ಬೆಂಕಿ ಬಿದ್ದಿದೆ. ಕಾಡಿನ ಬೆಂಕಿಯ ಪ್ರಖರತೆಗೆ ಸುತ್ತಲಿನ ಪರಿಸರ ಕೂಡ ಬೇಗೆಯಿಂದ ಉರಿಯುತ್ತಿದೆ. ಹಾಗಾಗಿ, ವಾತಾವರಣದ ಉಷ್ಣತೆ ಹೆಚ್ಚಾಗಿದೆ.
ಕೆಲವರು ಮಳೆಗಾಲದಲ್ಲಿ ಜಿಗಣಿಗಳ ಕಾಟ ಕಡಿಮೆ ಆಗುತ್ತದೆ ಎನ್ನುವ ಕಾರಣಕ್ಕೆ ಮನೆ ಹತ್ತಿರದ ಕಾಡಿಗೆ ಬೆಂಕಿ ಹಚ್ಚಿ ಅವರೇ ಆರಿಸಿ ಕಾಡಿಗೆ ಅಪಾಯ ತಗುಲದಂತೆ ನೋಡಿಕೊಳ್ಳುತ್ತಿದ್ದರೆ, ಇನ್ನು ಕೆಲವರು ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚಿ ತಮ್ಮ ತೀಟೆ ತೀರಿಸಿಕೊಳ್ಳುವ ತಂತ್ರಕ್ಕೆ ಮೊರೆಹೊಗಿ ಕಾಡು ನಾಶಕ್ಕೆ ಕಾರಣರಾಗುತ್ತಾರೆ.
ಇಲಾಖೆ ಸಿಬ್ಬಂದಿಗಳು ಬೆಂಕಿ ರೇಖೆ ಹಾಕಿ ರಸ್ತೆಯಂಚಿನ ಒಣ ಎಲೆಗಳನ್ನು ಸುಡುವಾಗ ಕೆಲ ಸಿಬ್ಬಂದಿಗಳು ಜಾಗೃತಿ ವಹಿಸದೆ ಬೆಂಕಿ ಆರುವ ಮುನ್ನವೇ ಮನೆ ಸೇರುತ್ತಾರೆ. ಈ ಕೃತ್ಯದಿಂದ ಆರದೇ ಇರುವ ಬೆಂಕಿ ರಾತ್ರಿ ಪೂರ್ಣ ಸುತ್ತಲ ಕಾಡನ್ನು ಸುಟ್ಟಿದ ಉದಾಹರಣೆಗಳೂ ತಾಲೂಕಿನ ಅನೇಕ ಕಡೆ ಸಂಭವಿಸಿದೆ. ಈ ರೀತಿಯ ನಿರ್ಲಕ್ಷಕ್ಕೆ ಏನನ್ನೋಣ.

ಯುಗಾದಿ ಮರಳಿ ಬಂದಿದೆ...


ಯುಗ ಯುಗಾದಿ ಕಳೆದರು, ಯುಗಾದಿ ಮರಳಿ ಬರುತಿದೆ.... ಕನ್ನಡದ ವರಕವಿ ಡಾ. ದ.ರಾ.ಬೇಂದ್ರೆಯವರ ಕವಿವಾಣಿಯಂತೆ, ನಿಸರ್ಗದ ನಿಯಮದಂತೆ ಹಿಂದೂ ಧರ್ಮೀಯರ ಹೊಸ ವರ್ಷ 'ಯುಗಾದಿ' ಮತ್ತೆ ಬಂದಿದೆ. ಉರಿ ಬಿಸಿಲು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ತಾಪದ ನಡುವೆಯೇ ಬಂದಿರುವುದು ಈ ಬಾರಿಯ ಯುಗಾದಿ ವಿಶೇಷ.
ಸಂಕ್ರಾಂತಿ ಮುಗಿಸಿದ ಬಹು ದಿನಗಳ ವಿರಾಮದ ನಂತರ ಬಂದಿರುವ ಯುಗಾದಿಯನ್ನು ಅದ್ದೂರಿಯಾಗಿ ಸ್ವ್ವಾಗತಿಸುವಂತಹ ಉತ್ಸುಕತೆಯ 'ಮೂಡ್' ಜನರಲ್ಲಿ ಇಲ್ಲವೆಂಬುದು ಮಾರುಕಟ್ಟೆಯಲ್ಲಿ ಸುತ್ತಾಡಿದರೆ ಕಂಡು ಬರುತ್ತದೆ. ಅಕ್ಕಿ, ಬೇಳೆ, ಬೆಲ್ಲ, ಕಡಲೆ, ಎಣ್ಣೆ, ಹಿಟ್ಟು, ಕೊಬ್ಬರಿ, ಸಕ್ಕರೆ ಬೆಲೆಗಳು ಗಗನಮುಖಿಯಾಗಿವೆ. ಯುಗಾದಿ ಸಂಕೇತವಾಗಿರುವ ಬೇವು- ಬೆಲ್ಲ ತಯಾರಿಸಲು ಬೇಕಾದ ಕಡಲೆ ಮತ್ತು ಬೆಲ್ಲದ ಬೆಲೆಗಳು ಜನರಿಗೆ ಕಹಿ ಉಂಟು ಮಾಡುವಂತಿವೆ. ಕಡಲೆ ಕೆಜಿಗೆ 80-85 ರೂ., ಬೆಲ್ಲದ ರೇಟು 40-45!. ಸಕ್ಕರೆ ಬೆಲೆಗಿಂತಲೂ ಬೆಲ್ಲದ ಬೆಲೆಯೇ ಹೆಚ್ಚಾಗಿದೆ.
ಹೂವಿನ ಬೆಲೆ 'ಕೈ'ಸುಡುವಂತೆ ಇಲ್ಲದಿದ್ದರೂ ಹಣ್ಣಿನ ಬೆಲೆ ತುಸು ಜಾಸ್ತಿಯೇ ಇದೆ. ಇನ್ನು ಹಬ್ಬದಂದು ಶೃಂಗರಿಸಲು ಬಳಸುವ ಮಾವು- ಬೇವು ಕೈಗೆಟುಕುವ ದರದಲ್ಲಿ ಇಲ್ಲ. ಯುಗಾದಿಯ ವಿಶೇಷ 'ಶ್ಯಾವಿಗೆ' ಬೆಲೆಯೂ ಹೆಚ್ಚಾಗಿದೆ.
ಈ ಬಾರಿಯ ಯುಗಾದಿ ಹಬ್ಬದ ಮುನ್ನಾ ದಿನವೇ ಏ.10 ರಿಂದ 14ನೇ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯವೂ ಪ್ರಾರಂಭವಾಗಿದೆ. ಝರ್ರನೆ ಏರುತ್ತಿರುವ ಬಿಸಿಲಿನ ತಾಪದಂತೆ ಚುನಾವಣಾ ಕಾವೂ ಏರುತ್ತಿದೆ.
 ಬೆಲೆ ಹೆಚ್ಚಳ ಎಂಬ ಕಾರಣಕ್ಕಾಗಿ ಹೊಸ ಸಂವತ್ಸರ 'ವಿಜಯನಾಮ'ವನ್ನು ಹೊತ್ತು ತಂದಿರುವ ಯುಗಾದಿಯನ್ನು ಸ್ವಾಗತಿಸದೆ ಬಿಡುವಂತಿಲ್ಲ. ಹಬ್ಬ ಮಾಡದೆ ಬಿಡುವಂತಿಲ್ಲ. ಇರುವುದರಲ್ಲೇ ಹಬ್ಬ ಮಾಡಬೇಕು ಎಂಬ ಧಾವಂತ ಜನರಲ್ಲಿ ಇದ್ದೇ ಇದೆ.
ಯುಗಾದಿ.... ತಗಾದಿ....
'ಯುಗಾದಿ ಯಾವಾಗಲೂ ತಗಾದಿ...' ಎಂಬ ಚಾಲ್ತಿ ಮಾತಿನಂತೆ ಈ ಬಾರಿಯ ಯುಗಾದಿ ಕೂಡಾ ತಗಾದೆಯೊಂದಿಗೆ ಬಂದಿದೆ. ಬುಧವಾರ ಅಮವಾಸ್ಯೆ ಬಂದಿರುವುದರಿಂದ ಗುರುವಾರ ಚಂದ್ರ ಕಾಣಲು ಸಾಧ್ಯವಿಲ್ಲ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಗುರುವಾರ ಚಂದ್ರನ ದರ್ಶನ ಗ್ಯಾರಂಟಿ. ಹಾಗಾಗಿ ಗುರುವಾರ ಬೆಳಗ್ಗೆ ಶ್ಯಾವಿಗೆ, ಮಧ್ಯಾಹ್ನ ಹೋಳಿಗೆ, ಸಾಯಂಕಾಲ ಚಂದ್ರದರ್ಶನ ಎಂಬ ಲೆಕ್ಕಾಚಾರದೊಂದಿಗೆ ಒಂದೇ ದಿನ ಶ್ಯಾವಿಗೆ, ಹೋಳಿಗೆ ಮಾಡುತ್ತಿದ್ದೇವೆ ಎನ್ನುತ್ತಾರೆ ಅನೇಕರು.
'ಹೊಸ ವರುಷಕೆ ಹೊಸ ಹರುಷವ... ಹೊಸತು ಹೊಸತು ತರುತಿದೆ...'ಎಂಬ ಕವಿವಾಣಿಯಂತೆ ಹಿಂದೂ ಧರ್ಮೀಯರ ಪಾಲಿನ ಹೊಸ ವರ್ಷ, ಹೊಸ ಯುಗದ ಪ್ರಾರಂಭದ ಸಂಕೇತವಾಗಿರುವ ಯುಗಾದಿ ಕಳೆದ ವರ್ಷದ ಎಲ್ಲಾ ಬೇಗುದಿಯನ್ನು ದೂರ ಮಾಡಲಿ. ಮತ್ತೆಂದೂ 'ಬರ'ದ ಕರಾಳ ಛಾಯೆ ಮೂಡದಿರಲಿ. ಉತ್ತಮ ಮಳೆ, ಬೆಳೆ, ಎಲ್ಲೆಡೆ ಸಮೃದ್ಧತೆಯನ್ನು ಹೊತ್ತು ತರಲಿ ಎಂದು ಪ್ರಾರ್ಥಿಸೋಣ.

ಮನಸೆಳೆದ ಜೇನು ಹಬ್ಬ


ಶಿರಸಿ ಪಟ್ಟಣಕ್ಕೆ ಹೊಂದಿಕೊಂಡಿರುವ ಬೆಳ್ಳೇಮನೆಯಲ್ಲಿ ಇತ್ತೀಚೆಗೆ ಪ್ರಕೃತಿ ಸಂಸ್ಥೆ ಜೇನು ಹಬ್ಬ ಹಮ್ಮಿಕೊಂಡಿತ್ತು. ಇದರಲ್ಲಿ ಮಕ್ಕಳು, ಮಹಿಳೆಯರ ಸಹಿತ ಸುತ್ತಮುತ್ತಲ ಜನ ಪಾಲ್ಗೊಂಡಿದ್ದರು. ವಿಷಯತಜ್ಞರು ರಾಣಿ ಹುಳ ಎಂದರೆ ಯಾವುದು? ಗಂಡು ಹುಳ ಯಾಕೆ ಕೆಲಸ ಮಾಡುವುದಿಲ್ಲ? ಜೇನಿನ ಸುಸ್ಥಿರ ಕೋಯ್ಲು ಯಾವಾಗ ನಡೆಸಬೇಕು? ಜೇನುಗಳು ದಿನವೊಂದಕ್ಕೆ ಎಷ್ಟು ದೂರ ಹಾರುತ್ತವೆ. ಯಾಕೆ ಜೇನಿನ ಬಣ್ಣ, ರುಚಿಯಲ್ಲಿ ವ್ಯತ್ಯಾಸ ಇರುತ್ತದೆ?, ನಿಜವಾದ ಜೇನು ತುಪ್ಪ ಗುರುತಿಸುವುದು ಹೇಗೆ? ಸೇರಿದಂತೆ ಮಕ್ಕಳ ಅನೇಕ ಪ್ರಶ್ನೆಗಳಿಗೆ ವಿಷಯ ತಜ್ಞರು ಉತ್ತರ ಕಂಡುಕೊಂಡರು. ಸ್ವತಃ ಜೇನು ಪೆಟ್ಟಿಗೆಗೆ ಕೈ ಹಾಕಿ ಅವುಗಳ ಕಾರ್ಯವೈಖರಿ ವೀಕ್ಷಿಸಿದರು. ರಟ್ಟು ಸಹಿತ ಜೇನಿನ ಹನಿಯನ್ನೂ ಸವಿದರು.
ಬೆಳ್ಳೇಮನೆಯಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡ ಪರಿಸರ ಹೋರಾಟಗಾರ ಪಾಂಡುರಂಗ ಹೆಗಡೆ ಮಾತನಾಡಿ, ನಗರದಲ್ಲಿ ಸಿಗುವ ಜೇನು ತುಪ್ಪಗಳು ಕಲಬೆರಕೆಯಿಂದ ಕೂಡಿರುತ್ತವೆ. ಶುದ್ಧತೆ ಇರುವುದಿಲ್ಲ. ಶುದ್ಧ ಜೇನು ತುಪ್ಪ ತಯಾರಿಕೆ ಜೊತೆಗೆ ಪ್ರಕೃತಿಯಲ್ಲಿ ಪರಾಗಸ್ಪರ್ಶ ಕ್ರಿಯೆಯನ್ನು ಜೇನು ನೊಣಗಳು ಮಾಡುತ್ತವೆ. ಕಳೆದ 15 ವರ್ಷಗಳಿಂದ 70ಕ್ಕೂ ಅಧಿಕ ಜೇನು ಹಬ್ಬಗಳನ್ನು ನಡೆಸುವ ಮೂಲಕ ನೂರಕ್ಕೂ ಅಧಿಕ ಯುವಕರಿಗೆ ಉಪ ಕಸುಬಾಗಿ ರೂಪಿಸುವಲ್ಲಿ ನೆರವಾಗಿದ್ದೇವೆ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ನಾಗರಾಜ ಹೆಗಡೆ ಬೆಳ್ಳೇಮನೆ, ಸೀತಾರಾಮ ಹೆಗಡೆ ನೇರ್ಲಹದ್ದ, ಸುಬ್ರಾಯ ಹೆಗಡೆ ಮಣ್ಬಾಗಿ, ನಾರಾಯಣ ನೀರ್ನಳ್ಳಿ, ರಾಮಕೃಷ್ಣ ಹೆಗಡೆ ಗೋರ್ನಮನೆ ಹಾಜರಿದ್ದರು.

ಸೌದಿ ಅರೇಬಿಯಾದಲ್ಲಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಭಾರತೀಯರು


ಸೌದಿ ಅರೇಬಿಯಾ ಸರಕಾರ ಜಾರಿಗೊಳಿಸುತ್ತಿರುವ ಹೊಸ ಹೊಸ ಕಾನೂನುಗಳಿಂದಾಗಿ ಆ ದೇಶದಲ್ಲಿರುವ ಭಾರತೀಯರು ಸಂಕಷ್ಟ ಎದುರಿಸುವಂತಾಗಿದೆ. ಅಲ್ಲಿ ಕೆಲಸ ಮಾಡುತ್ತಿರುವ ಹಲವು ಮಂದಿ ಭಾರತೀಯರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಕೆಂಪು ಕಾರ್ಡು ಮತ್ತು ಹಳದಿ ಕಾರ್ಡು ವ್ಯವಸ್ಥೆ ಜಾರಿಗೆ ತಂದು ಸ್ವಲ್ಪ ಪ್ರಮಾಣದ ಭಾರತೀಯರು ಸ್ವದೇಶಕ್ಕೆ ತೆರಳುವಂತೆ ಮಾಡಿದ್ದ ಸೌದಿ ಸರಕಾರ, ಈಗ ಪ್ರೀ ವೀಸಾದಲ್ಲಿ ದೇಶಕ್ಕೆ ಬಂದು ಉದ್ಯೋಗ ಮಾಡಿಕೊಂಡಿರುವವರ ಮೇಲೆ ಕೆಂಗಣ್ಣು ಬೀರಿದೆ. ಹೊಸ ಕಾಯಿದೆಯ ಪ್ರಕಾರ ಸೌದಿ ಅರೇಬಿಯಾದಲ್ಲಿರುವ ಫ್ರೀ ವೀಸಾದ ಉದ್ಯೋಗದಲ್ಲಿರುವವರು ಇನ್ನು ಮುಂದೆ ಸ್ವಂತ ಉದ್ಯೋಗವನ್ನು ಮಾಡುವಂತಿಲ್ಲ. ವಿದೇಶದಿಂದ ಫ್ರೀ ವೀಸಾದಲ್ಲಿ ಸೌದಿಗೆ ಬರುವ ಉದ್ಯೋಗಾರ್ಥಿಗಳು ಒಬ್ಬ ಕಫೀಲ್(ಸಾಹುಕಾರ)ನ ಹೆಸರಿನಲ್ಲಿ ಬಂದಿದ್ದರೂ ದೇಶದ ಎಲ್ಲಿ ಬೇಕಾದರೂ ಕೆಲಸ ಮಾಡಬಹುದಿತ್ತು. ಇನ್ನು ಮುಂದೆ ಯಾವ ಕಫೀಲನ ಹೆಸರಿನಲ್ಲಿ ಅವರು ದೇಶಕ್ಕೆ ಬರುತ್ತಾರೊ ಅದೇ ಕಫೀಲ್ನ ಅಧೀನದಲ್ಲಿ ಉದ್ಯೋಗ ನಿರ್ವಹಿಸತಕ್ಕದ್ದು. ಹಿಂದೆ ಕಫೀಲ್ಗೆ ಮಾಸಿಕ ಮೊತ್ತ ಪಾವತಿಸಿ ದೇಶದ ಎಲ್ಲಿ ಬೇಕಾದರೂ ಉದ್ಯೋಗ ಮಾಡಬಹುದಿತ್ತು.
ಇನ್ನು ಮುಂದೆ ಕಫೀಲ್ಗಳು ತಮ್ಮ ಸಂಸ್ಥೆಗಳಿಗೆ ಅಗತ್ಯವಿರುವ ಉದ್ಯೋಗಿಗಳನ್ನು ಮಾತ್ರ ಆಯ್ದುಕೊಳ್ಳಬೇಕು. ಉಳಿದವರು ದೇಶ ಬಿಟ್ಟು ತೆರಳಬೇಕು. ಈ ಬಗ್ಗೆ ಸರಕಾರ ತೀವ್ರ ತಪಾಸಣೆಯಲ್ಲಿ ತೊಡಗಿದೆ. ಸಾಮಾನ್ಯವಾಗಿ ಹೆಚ್ಚಿನ ಮಂದಿ ಫ್ರೀ ವೀಸಾದಲ್ಲಿ ಸೌದಿಗೆ ಹೋಗಿ ಅಲ್ಲಿ ಎಲ್ಲಾದರೊಂದು ಕಡೆ ಕಷ್ಟಪಟ್ಟು ಉದ್ಯೋಗ ಮಾಡಿ ಊರಿಗೆ ಹಣ ಕಳುಹಿಸುತ್ತಿದ್ದರು. ಇನ್ನು ಮುಂದೆ ಕಫೀಲ್ಗಳು ಕೆಲಸಕ್ಕೆ ಇಟ್ಟುಕೊಂಡರೆ ಉಂಟು, ಇಲ್ಲದಿದ್ದರೆ ಹಿಂತಿರುಗಬೇಕು. ಆದರೆ, ಕಂಪನಿ ವೀಸಾದಲ್ಲಿ ಹೋದವರಿಗೆ ಈ ಸಮಸ್ಯೆ ಇಲ್ಲ.

ವಿಮಾ ಪ್ರತಿನಿಧಿಯ ವಿವಾಹ ಬಂಧನ


ವಿವಾಹ ಬಂಧನ ಗೊತ್ತು, ಅದು ಪ್ರತಿಯೊಬ್ಬರ ಬದುಕಿನ ಸುಮಧುರ ಕ್ಷಣ ಎನ್ನಿ. ಆದರೆ, ಏನಿದು ವಿಮಾ ಬಂಧನ? ಎಂದು ಹುಬ್ಬೇರಿಸಬೇಡಿ. ಇದು ಮಂಗಲ ಪತ್ರವೊಂದರ ವಿಶೇಷತೆ. ಪ್ರತಿ ಸಾಲಿನಲ್ಲೂ ಜೀವ ವಿಮಾ ನಿಗಮದ ಒಂದೊಂದು ಪಾಲಿಸಿಯ ಹೆಸರುಗಳನ್ನು ಇಟ್ಟೇ ಬರೆಯಲಾಗಿದೆ. ಈ ಕಾರಣಕ್ಕೆ ಇದು ವಿವಾಹ ಬಂಧನ ಜೊತೆ ವಿಮಾ ಬಂಧನವೂ ಅಕ್ಷರದಲ್ಲಿ ಜೋಡಣೆಯಾಗಿದೆ.
ಇಲ್ಲಿನ ಎಲ್ಐಸಿ ಪ್ರತಿನಿಧಿ ಕೃಷ್ಣಮೂರ್ತಿ ಹೆಗಡೆ ಕಂಚೀಕೈ ಅವರು ಕೊಡಗದ್ದೆಯ ಸುವರ್ಣಾ ಹೆಗಡೆ ಎಂಬುವವರೊಂದಿಗೆ ಏ.26ಕ್ಕೆ ಸಪ್ತಪದಿ ತುಳಿಯುವ ಶುಭ ವೇಳೆಯ ಮಂಗಲ ಪತ್ರದ ವಿಶಿಷ್ಟತೆ ಇದು.
ಈಗ ನನ್ನ ಜೀವನ್ ಮಧುರ ಕ್ಷಣ...
ನವ ಜೀವನ ಅನುರಾಗ ಅಂಕುರದ ಶುಭ ಗಳಿಗೆ...
ಜೀವನ್ ತರಂಗದಲ್ಲಿ ದೊರೆತ ನಿಧಿ
ನನ್ನ ಜೀವನ ಸಾಥಿಯಾಗುವ ಆನಂದದ ಅಮೂಲ್ಯ ಸಮಯ...
ಜೀವನ್ ಮಿತ್ರರಾದ ತಮಗೆಲ್ಲ ನನ್ನ ಆಹ್ವಾನ...
ಜೀವನ್ ಸುಗಮ ಮಾರ್ಗದಲ್ಲಿ ಸಾಗುವದಕ್ಕೆ...
ಶುಭ ಹಾರೈಸಲು ನಿರೀಕ್ಷಿಸುತ್ತಿದ್ದೇವೆ...ಎಂದು ಆಕರ್ಷಕವಾಗಿ ಜೋಡಿಸಿ ಮುದ್ರಿಸಲಾಗಿದೆ.
ಇದೂ ಅಲ್ಲದೇ ಬೇಸಗೆಯ ಝಳ ಹೆಚ್ಚುತ್ತಿರುವುದರಿಂದ ಕರೆಂಟ್ ಬಯಸದ ಬೀಸಣಿಕೆಯಾಗಿಯೂ ಬಳಕೆ ಮಾಡಿಕೊಳ್ಳಲು ಹಿಡಿಕೆ ಸಹಿತ ರೂಪಿಸಲಾಗಿದೆ. ಕ್ರಿಯಾಶೀಲ ಮನಸ್ಸುಗಳಿದ್ದರೆ ಇದ್ದರೆ ಮಂಗಲ ಪತ್ರದಲ್ಲೂ ಹೊಸತನ ಮೂಡಿಸಬಹುದು ಎಂಬುದುಕ್ಕೆ ಇದೇ ಸಾಕ್ಷಿ. ಆ ಕಾರಣದಿಂದ ವಿವಾಹ ಬಂಧನ ಆಹ್ವಾನ ಪತ್ರಿಕೆಯನ್ನು ಅನ್ವರ್ಥವಾಗಿ ವಿಮಾ ಬಂಧನ್ ಎಂದೂ ನಾಮಕರಣ ಮಾಡಬಹುದು!.

ಮಣ್ಣಿನ ಮಡಿಕೆಗೆ ಭಾರಿ ಬೇಡಿಕೆ


ನೀರಿನ ದಾಹ ನೀಗಿಸುವ ಬಡವರ ಫ್ರೀಜ್ ಎಂದೇ ಹೆಸರಾದ ಮಣ್ಣಿನ ಬಿಂದಿಗೆಗಳಿಗೆ ಬೇಸಿಗೆ ಬಂತೆಂದರೆ ಬೇಡಿಕೆ ಮಾತ್ರ ಗಗನ ಕುಸುಮ. ನಾಲ್ಕು ತಿಂಗಳ ಬೇಸಿಗೆಯಲ್ಲಿ ಬಾಯಾರಿಕೆ ನೀಗಿಸಿಕೊಳ್ಳಲು ಜನಸಾಮಾನ್ಯರಿಗೆ ಈ ಮಣ್ಣಿನ ಬಿಂದಿಗೆಗಳು ತುಂಬಾ ಉಪಯುಕ್ತ. ಕಳೆದ ಒಂದು ದಶಕದ ಹಿಂದೆ ಇದ್ದ ಬಿಂದಿಗೆಗೆ ಈಗ ಹೊಸ ರೂಪ ನೀಡಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಮಾಡಿರುವ ಇವು ನೋಡಲು ಆಕರ್ಷಕ. ಸ್ಟೀಲ್ ಪೈಪ್ ಅಳವಡಿಸುವ ಹಾಗೆ ಈ ಮಣ್ಣಿನ ಬಿಂದಿಗೆಗಳಿಗೆ ನಲ್ಲಿ ಅಳವಡಿಸಲಾಗಿದೆ.
ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದರಿಂದ ಪಟ್ಟಣದಲ್ಲಿ ತಂಪು ನೀರಿಗಾಗಿ ಮಣ್ಣಿನ ಬಿಂದಿಗೆಗಳು ಭರ್ಜರಿಯಾಗಿ ಮಾರಾಟವಾಗುತ್ತವೆ. ಒಂದು ಬಿಂದಿಗೆಗೆ ಸುಮಾರು 100 ರೂ.ಗಳಿಂದ ಹಿಡಿದು ಸುಮಾರು 300 ರೂ.ಗಳವರೆಗೆ ಹಣ ನನೀಡಡಿ ಜನ ಖರೀದಿಸುತ್ತಾರೆ. ಹೊಸ ಮಾದರಿಯಲ್ಲಿ ನಲ್ಲಿ ಅಳವಡಿಸಿ ತಯಾರಿಸಿರುವ ಬಿಂದಿಗೆಗಳಿಗೆ ನಗರ ಪ್ರದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ. ಗ್ರಾಮೀಣ ಪ್ರದೇಶದ ಜನರು ಮಾತ್ರ ಹಳೆ ಮಾದರಿ ಬಿಂದಿಗೆ ಕೊಳ್ಳುತ್ತಾರೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಕಳೆದ ವರ್ಷಕ್ಕಿಂತ ಈ ಸಲ ಬಿಸಿಲಿನ ತಾಪ ಹೆಚ್ಚಾಗಿದ್ದು, ಬೆಳಗ್ಗೆ 8 ಗಂಟೆಯಾಗುತ್ತಿದ್ದಂತೆ ಬಿಸಿಲಿನ ರುದ್ರನರ್ತನ ತಾಂಡವಾಡುತ್ತದೆ. ಹೀಗಾಗಿ ಜನ ಹೊರಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನರು ಬೆಳಗ್ಗೆ 6 ಗಂಟೆಯಿಂದಲೇ ಕೆಲಸ ಪ್ರಾರಂಭಿಸಿದ್ದಾರೆ.