ಮಣ್ಣಿನ ಮಡಿಕೆಗೆ ಭಾರಿ ಬೇಡಿಕೆ


ನೀರಿನ ದಾಹ ನೀಗಿಸುವ ಬಡವರ ಫ್ರೀಜ್ ಎಂದೇ ಹೆಸರಾದ ಮಣ್ಣಿನ ಬಿಂದಿಗೆಗಳಿಗೆ ಬೇಸಿಗೆ ಬಂತೆಂದರೆ ಬೇಡಿಕೆ ಮಾತ್ರ ಗಗನ ಕುಸುಮ. ನಾಲ್ಕು ತಿಂಗಳ ಬೇಸಿಗೆಯಲ್ಲಿ ಬಾಯಾರಿಕೆ ನೀಗಿಸಿಕೊಳ್ಳಲು ಜನಸಾಮಾನ್ಯರಿಗೆ ಈ ಮಣ್ಣಿನ ಬಿಂದಿಗೆಗಳು ತುಂಬಾ ಉಪಯುಕ್ತ. ಕಳೆದ ಒಂದು ದಶಕದ ಹಿಂದೆ ಇದ್ದ ಬಿಂದಿಗೆಗೆ ಈಗ ಹೊಸ ರೂಪ ನೀಡಲಾಗಿದೆ. ಆಧುನಿಕ ತಂತ್ರಜ್ಞಾನ ಬಳಸಿ ಮಾಡಿರುವ ಇವು ನೋಡಲು ಆಕರ್ಷಕ. ಸ್ಟೀಲ್ ಪೈಪ್ ಅಳವಡಿಸುವ ಹಾಗೆ ಈ ಮಣ್ಣಿನ ಬಿಂದಿಗೆಗಳಿಗೆ ನಲ್ಲಿ ಅಳವಡಿಸಲಾಗಿದೆ.
ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದರಿಂದ ಪಟ್ಟಣದಲ್ಲಿ ತಂಪು ನೀರಿಗಾಗಿ ಮಣ್ಣಿನ ಬಿಂದಿಗೆಗಳು ಭರ್ಜರಿಯಾಗಿ ಮಾರಾಟವಾಗುತ್ತವೆ. ಒಂದು ಬಿಂದಿಗೆಗೆ ಸುಮಾರು 100 ರೂ.ಗಳಿಂದ ಹಿಡಿದು ಸುಮಾರು 300 ರೂ.ಗಳವರೆಗೆ ಹಣ ನನೀಡಡಿ ಜನ ಖರೀದಿಸುತ್ತಾರೆ. ಹೊಸ ಮಾದರಿಯಲ್ಲಿ ನಲ್ಲಿ ಅಳವಡಿಸಿ ತಯಾರಿಸಿರುವ ಬಿಂದಿಗೆಗಳಿಗೆ ನಗರ ಪ್ರದೇಶದಲ್ಲಿ ಹೆಚ್ಚಿನ ಬೇಡಿಕೆ ಇದೆ. ಗ್ರಾಮೀಣ ಪ್ರದೇಶದ ಜನರು ಮಾತ್ರ ಹಳೆ ಮಾದರಿ ಬಿಂದಿಗೆ ಕೊಳ್ಳುತ್ತಾರೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಕಳೆದ ವರ್ಷಕ್ಕಿಂತ ಈ ಸಲ ಬಿಸಿಲಿನ ತಾಪ ಹೆಚ್ಚಾಗಿದ್ದು, ಬೆಳಗ್ಗೆ 8 ಗಂಟೆಯಾಗುತ್ತಿದ್ದಂತೆ ಬಿಸಿಲಿನ ರುದ್ರನರ್ತನ ತಾಂಡವಾಡುತ್ತದೆ. ಹೀಗಾಗಿ ಜನ ಹೊರಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನರು ಬೆಳಗ್ಗೆ 6 ಗಂಟೆಯಿಂದಲೇ ಕೆಲಸ ಪ್ರಾರಂಭಿಸಿದ್ದಾರೆ.