ಮನಸೆಳೆದ ಜೇನು ಹಬ್ಬ


ಶಿರಸಿ ಪಟ್ಟಣಕ್ಕೆ ಹೊಂದಿಕೊಂಡಿರುವ ಬೆಳ್ಳೇಮನೆಯಲ್ಲಿ ಇತ್ತೀಚೆಗೆ ಪ್ರಕೃತಿ ಸಂಸ್ಥೆ ಜೇನು ಹಬ್ಬ ಹಮ್ಮಿಕೊಂಡಿತ್ತು. ಇದರಲ್ಲಿ ಮಕ್ಕಳು, ಮಹಿಳೆಯರ ಸಹಿತ ಸುತ್ತಮುತ್ತಲ ಜನ ಪಾಲ್ಗೊಂಡಿದ್ದರು. ವಿಷಯತಜ್ಞರು ರಾಣಿ ಹುಳ ಎಂದರೆ ಯಾವುದು? ಗಂಡು ಹುಳ ಯಾಕೆ ಕೆಲಸ ಮಾಡುವುದಿಲ್ಲ? ಜೇನಿನ ಸುಸ್ಥಿರ ಕೋಯ್ಲು ಯಾವಾಗ ನಡೆಸಬೇಕು? ಜೇನುಗಳು ದಿನವೊಂದಕ್ಕೆ ಎಷ್ಟು ದೂರ ಹಾರುತ್ತವೆ. ಯಾಕೆ ಜೇನಿನ ಬಣ್ಣ, ರುಚಿಯಲ್ಲಿ ವ್ಯತ್ಯಾಸ ಇರುತ್ತದೆ?, ನಿಜವಾದ ಜೇನು ತುಪ್ಪ ಗುರುತಿಸುವುದು ಹೇಗೆ? ಸೇರಿದಂತೆ ಮಕ್ಕಳ ಅನೇಕ ಪ್ರಶ್ನೆಗಳಿಗೆ ವಿಷಯ ತಜ್ಞರು ಉತ್ತರ ಕಂಡುಕೊಂಡರು. ಸ್ವತಃ ಜೇನು ಪೆಟ್ಟಿಗೆಗೆ ಕೈ ಹಾಕಿ ಅವುಗಳ ಕಾರ್ಯವೈಖರಿ ವೀಕ್ಷಿಸಿದರು. ರಟ್ಟು ಸಹಿತ ಜೇನಿನ ಹನಿಯನ್ನೂ ಸವಿದರು.
ಬೆಳ್ಳೇಮನೆಯಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡ ಪರಿಸರ ಹೋರಾಟಗಾರ ಪಾಂಡುರಂಗ ಹೆಗಡೆ ಮಾತನಾಡಿ, ನಗರದಲ್ಲಿ ಸಿಗುವ ಜೇನು ತುಪ್ಪಗಳು ಕಲಬೆರಕೆಯಿಂದ ಕೂಡಿರುತ್ತವೆ. ಶುದ್ಧತೆ ಇರುವುದಿಲ್ಲ. ಶುದ್ಧ ಜೇನು ತುಪ್ಪ ತಯಾರಿಕೆ ಜೊತೆಗೆ ಪ್ರಕೃತಿಯಲ್ಲಿ ಪರಾಗಸ್ಪರ್ಶ ಕ್ರಿಯೆಯನ್ನು ಜೇನು ನೊಣಗಳು ಮಾಡುತ್ತವೆ. ಕಳೆದ 15 ವರ್ಷಗಳಿಂದ 70ಕ್ಕೂ ಅಧಿಕ ಜೇನು ಹಬ್ಬಗಳನ್ನು ನಡೆಸುವ ಮೂಲಕ ನೂರಕ್ಕೂ ಅಧಿಕ ಯುವಕರಿಗೆ ಉಪ ಕಸುಬಾಗಿ ರೂಪಿಸುವಲ್ಲಿ ನೆರವಾಗಿದ್ದೇವೆ ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ನಾಗರಾಜ ಹೆಗಡೆ ಬೆಳ್ಳೇಮನೆ, ಸೀತಾರಾಮ ಹೆಗಡೆ ನೇರ್ಲಹದ್ದ, ಸುಬ್ರಾಯ ಹೆಗಡೆ ಮಣ್ಬಾಗಿ, ನಾರಾಯಣ ನೀರ್ನಳ್ಳಿ, ರಾಮಕೃಷ್ಣ ಹೆಗಡೆ ಗೋರ್ನಮನೆ ಹಾಜರಿದ್ದರು.