ಹುಲಿ ಸಂರಕ್ಷಿತ ಅರಣ್ಯಕ್ಕೆ ಬೇಕಿದೆ ರಕ್ಷಣೆ


ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ವನ್ಯಜೀವಿ ಉಪವಲಯದ ಕುಳಗಿ ಮತ್ತು ಪಣಸೋಲಿ ವಲಯದ ಕಾಡುಗಳಿಗೆ ಆಗಾಗ ಬೀಳುವ ಕಾಳ್ಗಿಚ್ಚಿಗೆ ಕೀಟಗಳು, ಸೂಕ್ಷ್ಮ ಜೀವಿಗಳು, ಔಷಧ ಸಸ್ಯಗಳು ನಾಶಹೊಂದುತ್ತಿವೆ. ಕೆಲವೆಡೆ ಪಕ್ಷಿಗಳ ಗೂಡುಗಳು ಸಹ ಸುಟ್ಟು ಹೋಗುತ್ತಿದ್ದು, ಪಕ್ಷಿ ಸಂತತಿ ವಿನಾಶವಾಗುತ್ತಿದೆ. ದಾಂಡೇಲಿ-ಅಣಶಿ ಹುಲಿ ಸಂರಕ್ಷಿತ ವಲಯದ ಕುಳಗಿ, ಗುಂದ, ಪಣಸೋಲಿ ಅರಣ್ಯ ವಲಯಗಳ ಸಾವಿರಾರು ಹೆಕ್ಟೆರ್ ಪ್ರದೇಶದ ಕಾಡುಗಳು ಕಾಡ್ಗಿಚ್ಚಿಗೆ ಆಹುತಿಯಾಗುತ್ತಿರುವುದು ವನ್ಯಜೀವಿ ಪ್ರೇಮಿಗಳಲ್ಲಿ ಆತಂಕದ ವಾತಾವರಣ ನಿರ್ಮಿಸಿದೆ.
ಅರಣ್ಯ ಇಲಾಖೆಯಿಂದ ಕಾಡಿನ ಬೆಂಕಿಯ ಹತೋಟಿಗಾಗಿ ಲಕ್ಷಾಂತರ ರೂ. ಅನುದಾನ ವಿನಿಯೋಗವಾಗುತ್ತಿದೆ. ಕಾಡಿನ ಬೆಂಕಿ ಹತೋಟಿಯ ಮುಂಜಾಗೃತಾ ಕ್ರಮಕ್ಕಾಗಿ ಇಲಾಖೆಗೆ ಸೌಲಭ್ಯ, ಸಿಬ್ಬಂದಿ ಇನ್ನಿತರ ಸೌಕರ್ಯದ(ಅನುದಾನ, ವಾಹನ, ಉಪಗ್ರಹಗಳಿಂದ ತುರ್ತುತಾಂತ್ರಿಕ ಮಾಹಿತಿ) ಲಭ್ಯತೆಯಿದೆ. ಆದಾಗ್ಯೂ, ಕಾಡ್ಗಿಚ್ಚು ಹತೋಟಿಯಲ್ಲಿ ಇಲಾಖೆ ಎಡವುತ್ತಿದೆ.
ಪಣಸೊಲಿ ವಲಯದಲ್ಲಿ ಕಳೆದ ವರ್ಷ ನಿರ್ಮಾಣ ಮಾಡಿದ ಸುಮಾರು 50 ಹೆಕ್ಟೆರ್ ಬಾಂಬು ನೆಡುತೋಪುಗಳಿಗೆ ಬೆಂಕಿ ಬಿದ್ದಿದೆ. ಕಾಡಿನ ಬೆಂಕಿಯ ಪ್ರಖರತೆಗೆ ಸುತ್ತಲಿನ ಪರಿಸರ ಕೂಡ ಬೇಗೆಯಿಂದ ಉರಿಯುತ್ತಿದೆ. ಹಾಗಾಗಿ, ವಾತಾವರಣದ ಉಷ್ಣತೆ ಹೆಚ್ಚಾಗಿದೆ.
ಕೆಲವರು ಮಳೆಗಾಲದಲ್ಲಿ ಜಿಗಣಿಗಳ ಕಾಟ ಕಡಿಮೆ ಆಗುತ್ತದೆ ಎನ್ನುವ ಕಾರಣಕ್ಕೆ ಮನೆ ಹತ್ತಿರದ ಕಾಡಿಗೆ ಬೆಂಕಿ ಹಚ್ಚಿ ಅವರೇ ಆರಿಸಿ ಕಾಡಿಗೆ ಅಪಾಯ ತಗುಲದಂತೆ ನೋಡಿಕೊಳ್ಳುತ್ತಿದ್ದರೆ, ಇನ್ನು ಕೆಲವರು ಉದ್ದೇಶ ಪೂರ್ವಕವಾಗಿ ಬೆಂಕಿ ಹಚ್ಚಿ ತಮ್ಮ ತೀಟೆ ತೀರಿಸಿಕೊಳ್ಳುವ ತಂತ್ರಕ್ಕೆ ಮೊರೆಹೊಗಿ ಕಾಡು ನಾಶಕ್ಕೆ ಕಾರಣರಾಗುತ್ತಾರೆ.
ಇಲಾಖೆ ಸಿಬ್ಬಂದಿಗಳು ಬೆಂಕಿ ರೇಖೆ ಹಾಕಿ ರಸ್ತೆಯಂಚಿನ ಒಣ ಎಲೆಗಳನ್ನು ಸುಡುವಾಗ ಕೆಲ ಸಿಬ್ಬಂದಿಗಳು ಜಾಗೃತಿ ವಹಿಸದೆ ಬೆಂಕಿ ಆರುವ ಮುನ್ನವೇ ಮನೆ ಸೇರುತ್ತಾರೆ. ಈ ಕೃತ್ಯದಿಂದ ಆರದೇ ಇರುವ ಬೆಂಕಿ ರಾತ್ರಿ ಪೂರ್ಣ ಸುತ್ತಲ ಕಾಡನ್ನು ಸುಟ್ಟಿದ ಉದಾಹರಣೆಗಳೂ ತಾಲೂಕಿನ ಅನೇಕ ಕಡೆ ಸಂಭವಿಸಿದೆ. ಈ ರೀತಿಯ ನಿರ್ಲಕ್ಷಕ್ಕೆ ಏನನ್ನೋಣ.