ತುಳುವೆರ ಪೊಸ ವರ್ಷ 'ಬಿಸು ಪರ್ಬ'


ತುಳುವರೆಲ್ಲಾ ಹೊಸ ವರುಷವನ್ನು ಸ್ವಾಗತಿಸುವ ಬಿಸುಕಣಿ ಬಂದಿದೆ. ರವಿವಾರ ಪಗ್ಗುತಿಂಗಳ ಆರಂಭ ದಿನ. ಮುನ್ನಾದಿನ ಸುಗ್ಗಿ ತಿಂಗಳ ಕೊನೆಯ ದಿನ, ಅಂದು ಸಂಕ್ರಾತಿ. ಇದಕ್ಕೆ ಬಿಸು ಸಂಕ್ರಮಣ ಅಂತ ಕರೆಯತ್ತಾರೆ .ತುಳುವರ ಕೊನೆಯ ದಿನ ಸಂಕ್ರಮಣ, ಮರುದಿನ ಬಿಷು. ಬಿಷುವಿನಂದು ಸೂರ್ಯೋದಯದ ಮುನ್ನ ಬಿಸುಕಣಿಯನ್ನು ನೋಡಬೇಕು. ಈ ಹೊತ್ತಿನಲ್ಲಿ ಹೊಸ ಬಟ್ಟೆ ಧರಿಸಿಕೊಂಡು ಗುರು ಹಿರಿಯರ, ತಂದೆ ತಾಯಿಯವರ ಕಾಲುಗಳಿಗೆ ಅಡ್ಡ ಬಿದ್ದು ಆಶೀರ್ವಾದ ಪಡೆಯುವರು. ಚಂದ್ರನ ಆಧಾರದಲ್ಲಿ ಚಾಂದ್ರಮಾನ ಪದ್ಧತಿಯನ್ನು (ಶಾಲಿವಾಹನ ಶಕೆ) ಆಚರಿಸುವವರಿಗೆ 'ಯುಗಾದಿ' ಯಾಗಿಯೂ ಸೂರ್ಯನ ಆಧಾರದ ಸೌರಮಾನ ಪದ್ಧತಿಯವರಿಗೆ (ವಿಕ್ರಮ ಶಕೆ) 'ವಿಷು' ಅಥವಾ 'ಬಿಷು' ವಾಗಿಯೂ ಆಚರಿಸುವರು. ತುಳುನಾಡು ಮತ್ತು ತೆಂಕಣ ಕೇರಳಿಯರೂ ಕೂಡಾ ಈ ಆಚರಣೆಯನ್ನು ವಿಷು ಆಂತಾಲೇ ಕರೆದು ಹೊಸವರುಷವನ್ನು ಆಚರಿಸುವರು. ಚಂದ್ರಗಿರಿಯಿಂದ ಬಾರಕೂರಿನವರೆಗಿನ ತುಳುವರಿಗೆ ಬಿಸುಕಣಿ ಹೊಸವರುಷದ ಸಂಭ್ರಮ.
ತುಳುವರ ಆಚರಣೆ ಪ್ರಕಾರ ಸಂಕ್ರಮಣ ತಿಂಗಳ ಕೊನೆಯಾದರೆ ಆದರ ಮರುದಿನ 'ಸಿಂಗ್ಡೆ'ಯ ಪ್ರಾರಂಭ. ಸುಗ್ಗಿ ತಿಂಗಳ ಸಂಕ್ರಮಣದಂದು ಬಿಸು. ಮರುದಿವಸ ಹೊಸ ತಿಂಗಳು ಪಗ್ಗು. ಒಂದರಂದು ಕಣಿ. ಹೀಗೆ ತುಳುವರಿಗೆ ಎರಡು ದಿವಸದ ಹಬ್ಬವಿದೆ. ಸಿಂಗ್ಡೆಯೆಂದು ಮನೆಯೊಳಗಿನ ಹಣ, ಐಶ್ವರ್ಯ ವಸ್ತುಗಳನ್ನು ಹೊರಗಿನವರಿಗೆ ಕೊಡಬಾರದೆನ್ನುವ ನಂಬಿಕೆ ಇದೆ. ಕೊಟ್ಟರೆ ತುಳುವರ ಮನೆಯೊಳಗಿನ 'ಪೊಲ್ಸು'(ಐಶ್ವರ್ಯ)ಹೋಗುವುದು ಮತ್ತು ಕೊಡಲೇ ಬೇಕೇನ್ನುವುದಾದರೆ ಮುನ್ನ ದಿನ ಕೊಡತಕ್ಕದು ಎಂಬ ಬಲವಾದ ನಂಬಿಕೆ ತುಳುವರಲ್ಲಿದೆ. ವಿಷು ಕಣಿ ಇಟ್ಟನಂತರ ಆ ದಿನದ ಮಟ್ಟಿಗೆ ಯಾವುದೇ ವ್ಯವಹಾರ ನಡೆಸುವುದಿಲ್ಲ. ವಿಷುವಿನಿಂದ ವಿಷುವಿಗೆ ತುಳುವರಿಗೆ ಒಂದು ವರ್ಷ. ಆದ ಕಾರಣ ಒಂದೇ ವರ್ಷದಲ್ಲಿ ಎರಡು ಮದುವೆ ಮಾಡಬಾರದು. ಮನೆಯ ಗೃಹಪ್ರವೇಶ ಆದ ನಂತರ ಆ ಮನೆಯಲ್ಲಿ ಮದುವೆ ನಡೆಯಬಾರದು ಎಂಬ ನಂಬಿಕೆಯಿದೆ. ಒಂದು ಬಿಸು ಮುಗಿದ ನಂತರ ನಡೆಸಬಹುದು. ತುಳುನಾಡಿನಲ್ಲಿ ಹಬ್ಬದ ಕೊನೆ ಎಂಬುದು ಕೂಡ ಇಲ್ಲಿಂದಲೇ ಪ್ರಾರಂಭ. ಅಷ್ಟಮಿಗೆ ಹಬ್ಬ ಆರಂಭ 'ಭೀಮೆ ಕೊಂಡು ಕನತೇ...ಅಷ್ಟಮಿಗ್ ಕಿಟ್ನ ದೇವೆರ್ ಉದಿಸೊಂದು ಬತ್ತೇರ್...'ಎಂಬ ಮಾತಿದೆ.
ಬಿಸುಕಣಿಯ ದಿನ ಮುಂಜಾನೆ ದೇವಸ್ಥಾನ, ದೈವಸ್ಥಾನ, ಗುತ್ತು, ಚಾವಡಿ, ಪಡಿಪ್ಪಿರೆ, ಭಂಡಾರ ಮನೆಗಳನ್ನು ಶುದ್ಧಿಗೊಳಿಸಿ ಸಂಪ್ರದಾಯದಂತೆ ಮನೆಯಲ್ಲಿ ಬೆಳೆದ ಎಲ್ಲಾ ಕೃಷಿ ಬೆಳೆಗಳು,ಲವಸ್ತುಗಳನ್ನು ದೇವರ ಪೋಟೋ ಜತೆ, ಪಂಚಾಗವನ್ನು ಜೋಡಿಸಿ ದೇವರ ಕೋಣೆಯಲ್ಲಿ ಇಡುವರು. ಎದುರುಗಡೆ ದೀಪ ಹೊತ್ತಿಸಿ, ಧೂಪ ಹಿಡಿದು ಆಚರಣೆ ಮಾಡುವ ಕ್ರಮವೇ ಬಿಸುಕಣಿ. ಅಂದು ದೇವಸ್ಥಾನದಲ್ಲಿ ಮಕ್ಕಳಿಗೆ ಕಣಿ ಕಾಣಿಸುವ ಕ್ರಮವಿದೆ. ನಂತರ ತುಳುವರ ಪ್ರತಿ ಮನೆಯಲ್ಲಿ ವಿಶೇಷ ಊಟ ತಯಾರಾಗುತ್ತದೆ. ಹಸಿಗೇರು ಬೀಜ, ಹೆಸರು ಬೆಳೆಯ ಪಲ್ಯ ಮತ್ತು ಹೆಸರು ಬೆಳೆಯ ಪಾಯಸ ರೆಡಿಯಾಗಿ ಮನೆ ಮಂದಿ ಆ ದಿವಸ ಮಧ್ಯಾಹ್ನ ಒಟ್ಟಿಗೆ ಕೂತು ವಿಷುಹಬ್ಬದ ಊಟವನ್ನು ಸವಿಯುತ್ತಾರೆ.
ಬಿಸು ಸಂಕ್ರಾತಿಗೆ ಹೆಚ್ಚಿನ ದೇವಸ್ಥಾನದಲ್ಲಿ ಜಾತ್ರೆ ಆರಂಭವಾಗುವುದು. ಕೇರಳ ಮತ್ತು ಕರ್ನಾಟಕ (ದ.ಕ.)ಕ್ಕೆ ಹಂಚಿ ಹೋಗಿರುವ ನಾಗರ ಖಂಡದ ತುಳುನಾಡಿನಲ್ಲಿ ಬಿಸುಕಣಿಯಂದು ಹೊಸ ವರುಷ ಆರಂಭವಾಗುವುದು. ಮಧೂರು ೇ ಮದನಂತೇಶ್ವರ ಕ್ಷೇತ್ರ, ಐಲೇ ದುರ್ಗಾಪರಮೇಶ್ವರೀ ಕ್ಷೇತ್ರ, ಪುತ್ತೂರು ೇ ಮಹಾಲಿಂಗೇಶ್ವರ ಕ್ಷೇತ್ರದಲ್ಲಿ ಬಿಸುವಿನಂದು ವಾರ್ಷಿಕ ಜಾತ್ರೆ ಜರುಗುವುದು. ಹೊಸ ವರ್ಷದ ಜಾತ್ರೆ ಇದಾಗಿದ್ದು ಇಲ್ಲಿಯ 'ವಿಷುಕಣಿ'ಯನ್ನು ನೋಡಲು ಸಹಸ್ರಾರು ಭಕ್ತರು ಆಗಮಿಸುವರು. ಮಧೂರುನಲ್ಲಿ ಮುನ್ನಾದಿನವೇ ಕಣಿ ನೋಡಲು ಅಲ್ಲಿಗೆ ಆಗಮಿಸುವರು. ಶಬರಿಮಲೆಯಲ್ಲಿ ವಿಷುವಿನ ಪ್ರಯುಕ್ತ ವಿಶೇಷ ಪೂಜೆ ಇದೆ. ವಾರ್ಷಿಕ ಜಾತ್ರೆಯೂ ಅಲ್ಲಿದೆ. ಈಗಾಗಲೇ ಸಹಸ್ರಾರು ಭಕ್ತರೂ ಶಬರಿಮಲೆಯತ್ತ ತೀರ್ಥಯಾತ್ರೆಗೆ ತೆರಳಿದ್ದಾರೆ.


ಎಲ್ಲರಿಗೂ ಹೊಸ ವರುಷ ಹೊಸ ಹರುಷವ ತರಲಿ...