ಕುಷ್ಟಗಿಯಲ್ಲಿ ಯುಗಾದಿ ಮರುದಿನ ಮೊಲಗಳಿಗೆ ಪ್ರಾಣ ಸಂಕಟ


ಯುಗಾದಿ ಬಂದರೆ ಸಾಕು ಹೈದ್ರಾಬಾದ್ ಕರ್ನಾಟಕದ ವರಸೆಯೇ ಬೇರೆ. ಯುಗಾದಿ ಮರುದಿನ ಇಲ್ಲಿ 'ಕರಿಯ ದಿನ'. ಅಂದರೆ ಈ ದಿನ ಕೆಲವೆಡೆ ಬಣ್ಣದ ಆಟ; ಇನ್ನೂ ಕೆಲವೆಡೆ ಬೇಟೆಯ ಆಟ. ಆದರೆ ಈ ಬೇಟೆಗೆ ಆಹುತಿಯಾಗುವುದು ಮಾತ್ರ ಬಡಪಾಯಿ ಮೊಲಗಳು!
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ, ಜಾಲಿಹಾಳ, ಮಾಟೂರ, ಕಲಕೇರಿ, ಮುದ್ದಲಗುಂದಿ, ಬೆಂಚಮಟ್ಟಿ, ಮ್ಯಾಗಲಡಕ್ಕಿ ತಾಂಡಾ, ಕಳಮಳ್ಳಿ ಗ್ರಾಮಗಳಲ್ಲಿ ಯುಗಾದಿಯ ಮಾರನೆ ದಿನ ಮೊಲಗಳ ಬೇಟೆ ಆಟ ನಡೆಯುತ್ತದೆ. ಸಾಮೂಹಿಕವಾಗಿ ಹಗಲಿಡಿ ಬೇಟೆಯಾಡಿ ರಾತ್ರಿ ಮೃತ ಮೊಲಗಳ ಮಾಂಸವನ್ನು ಹಂಚಿಕೊಂಡು ತಿನ್ನುತ್ತಾರೆ. ಮೊಲ ಬೇಟೆಯ ಪೈಪೋಟಿಯಲ್ಲಿ ಮೊದಲನೆ ಮುದ್ದಲಗುಂದಿ ಗ್ರಾಮಸ್ಥರು ಮೊದಲಿದ್ದಾರೆ.
ಕರಿಯ ದಿನ ಬೆಳಗ್ಗೆ ಗ್ರಾಮದ ಹಿರಿಯರು, ಯುವಕರು, ಹುಡುಗರು, ಮಧ್ಯ ವಯಸ್ಕರೆಲ್ಲರೂ ರೊಟ್ಟಿ, ಬೇಳೆ, ಶೇಂಗಾ ಪುಡಿ ಇತ್ಯಾದಿಗಳನ್ನು ಕಟ್ಟಿಕೊಂಡು ಬೇಟೆಗೆಂದೇ ಕೊಡಲಿ, ದೊಣ್ಣೆ, ಮಚ್ಚು, ಕುಡುಗೋಲು, ಬೆತ್ತ, ಹಾರೆ ಮುಂತಾದ ಹರಿತ ಆಯುಧಗಳನ್ನು ಹೆಗಲಿಗೇರಿಸಿ, ಸಹಾಯಕ್ಕಾಗಿ ಬೇಟೆ ನಾಯಿಗಳನ್ನು ಕರೆದೊಯ್ಯುತ್ತಾರೆ. ಮೊಲಗಳು ಅಡಗಿರುವ ತಾಣಗಳನ್ನು ಮೊದಲೇ ಅರಿತಿರುವ ಗ್ರಾಮಸ್ಥರು, ಕುರುಚಲು ಪೊದೆಗಳು, ಹಳ್ಳ-ಕೊಳ್ಳಗಳಂಥ ತಂಪಿನ ತಾಣಗಳಲ್ಲಿ ಅಡಗಿರುವ ಕೋಮಲ ದೇಹದ ಮೊಲಗಳನ್ನು ಹಿಡಿಯಲು ಮುಂದಾಗುತ್ತಾರೆ. ಮೊಲಗಳು ಈ ಹುಚ್ಚು ಬೇಟೆಯ ತಂಡದ ಗೌಜು-ಗದ್ದಲಕ್ಕೆ ಕಂಗಾಲಾಗಿ ಓಟಕ್ಕಿಳಿಯುತ್ತವೆ.
ಬೇಟೆಗೆಂದು ಬಂದ ಜನರು ಒಂದೆಡೆ ಬಲೆ ಹರಡಿ ಮತ್ತೊಂದೆಡೆಯಿಂದ ಅವಿತಿರುವ ಮೊಲಗಳ ಜಾಡು ಹಿಡಿದು, ಜೋರಾಗಿ ಹುಯಿಲೆಬ್ಬಿಸುತ್ತಾ ಅಟ್ಟಿಸಿಕೊಂಡು ಬರುತ್ತಾರೆ. ಬೆದರಿದ ಮೊಲಗಳು ದಿಕ್ಕೆಟ್ಟು ಓಡುವಾಗ ಹರಡಿರುವ ಬಲೆಗೆ ಬಂದು ಬೀಳುತ್ತವೆ. ಆಗ ಬಲೆಯನ್ನು ಸುತ್ತುವರೆದು ಎಲ್ಲಿಲ್ಲದ ಉತ್ಸಾಹದಿಂದ ಮೊಲಗಳನ್ನು ಮನಸೋ ಇಚ್ಚೆ ಚಚ್ಚುತ್ತಾ ಬಡಿಯುತ್ತಾರೆ. ಒಂದೇ ಏಟಿಗೆ ಅವುಗಳ ಪ್ರಾಣ ಪಕ್ಷಿ ಹಾರಿ ಹೋಗುತ್ತದೆ. ಕುಪ್ಪಳಿಸುತ್ತಿದ್ದ ಮೊಲಗಳು ಶವಗಳಾಗಿ ಬೇಟೆಗಾರರ ಕೈಯಲ್ಲಿ ನೇತಾಡುತ್ತವೆ. ಹೀಗೆ ಎಲ್ಲರೂ ತಾವು ಕೊಂದು ತಂದ ಮೊಲಗಳನ್ನು ಒಂದೆಡೆ ರಾಶಿ ಹಾಕಿ, ಲೆಕ್ಕ ಮಾಡುತ್ತಾರೆ. ತಾವು ತಂದಿದ್ದ ಬುತ್ತಿಯನ್ನು ಬಿಚ್ಚಿ ಗಿಡದ ನೆರಳಲ್ಲಿ ಕುಳಿತು ಉಂಡು ನೀರು ಕುಡಿದು ತಮ್ಮೂರತ್ತ ಹೆಜ್ಜೆ ಹಾಕುತ್ತಾರೆ.
ಸೂರ್ಯಾಸ್ತವಾಗುತ್ತಿರುವಂತೆ ಅವರೆಲ್ಲರೂ ಮನೆ ತಲುಪಿರುತ್ತಾರೆ. ನಂತರ ಮೊಲಗಳ ಮಾಂಸವನ್ನು ಕತ್ತರಿಸಿ ತುಂಡು ತುಂಡು ಮಾಡಿ ಹಂಚಿಕೊಳ್ಳುವ ಕಾರ್ಯಕ್ರಮ ಶುರುವಾಗುತ್ತದೆ. ಅಂದು ಮನೆಗಳಲ್ಲಿ ಮೊಲದ ಮಾಂಸದ ರುಚಿಕಟ್ಟಾದ ಅಡುಗೆ. ತಮ್ಮ ಬೇಟೆಯ ಪರಾಕ್ರಮ, ಪೌರುಷವನ್ನು ಪರಸ್ಪರ ಹೇಳಿಕೊಳ್ಳುತ್ತಾ ಮಾಂಸದಡುಗೆಯನ್ನು ಸವಿಯುತ್ತಾರೆ.
ವನ್ಯಜೀವಿ ಹತ್ಯೆ ಅಪರಾಧ. ಅದಕ್ಕೆ ಜೈಲು ಶಿಕ್ಷೆ, ದಂಡ ವಿಧಿಸುವ ಕಾನೂನುಗಳಿದ್ದರೂ ಕುಷ್ಟಗಿ ತಾಲೂಕಿನ ಹಳ್ಳಿಗಳಲ್ಲಿ ಪ್ರತಿವರ್ಷ ಲೆಕ್ಕವಿಲ್ಲದಷ್ಟು ಮೊಲಗಳು ಹೀಗೆ ಬಲಿಯಾಗುತ್ತವೆ. ಮೊಲಗಳ ಹತ್ಯೆಯನ್ನು ನಿಲ್ಲಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ ತಳೆದಿದ್ದಾರೆ. ಮೊಲಗಳನ್ನು ಕೊಲ್ಲುವುದು ತಪ್ಪು ಎಂದು ಗ್ರಾಮಸ್ಥರಿಗೆ ತಿಳಿವಳಿಕೆ ನೀಡುವವರು ಯಾರು ಎಂಬ ಪ್ರಶ್ನೆ ಉದ್ಭವವಾಗಿದೆ.