ಕುಣಿಗಲ್ನಲ್ಲಿ ಗಗನಕ್ಕೇರುತ್ತಿದೆ ನಿವೇಶನ ಬೆಲೆ


ಬೆಂಗಳೂರು, ತುಮಕೂರಿನಲ್ಲಿ ನೀವು ಅಂದುಕೊಂಡ ಉತ್ತಮ ಬೆಲೆಗೆ ಒಳ್ಳೆ ಕಡೆ ಸೈಟ್ ಖರೀದಿಸಬಹುದು. ಆದರೆ, ಕುಣಿಗಲ್ನಲ್ಲಿ ಸೈಟ್ ಬೆಲೆ ಕೇಳಿದರೆ ನಿಮಗೆ ಶಾಕ್ ಹೊಡೆಯುತ್ತದೆ. ಸಮರ್ಪಕ ರಸ್ತೆ, ಕುಡಿಯುವ ನೀರು, ಚರಂಡಿ, ಬೀದಿ ದೀಪ... ಹೀಗೆ ಏನೇನೂ ಸೌಲಭ್ಯವಿಲ್ಲದ, ಈ ಊರಿನಲ್ಲಿ ಸೈಟ್ ಬೆಲೆ ಮಾತ್ರ ದುಬಾರಿ.
ನಾಲ್ಕು ವರ್ಷಗಳ ಹಿಂದೆ ಹೌಸಿಂಗ್ ಬೋರ್ಡ್, ಅಂದಾನಯ್ಯ ಬಡಾವಣೆ, ಡಿ.ಗ್ರೂಪ್ ಬಡಾವಣೆ ಮತ್ತು ಪಟ್ಟಣದ ಹೃದಯ ಭಾಗದ ಆಸು-ಪಾಸುಗಳಲ್ಲಿ ಗರಿಷ್ಟ 2-3 ಲಕ್ಷ ರೂ.ಗಳಿದ್ದ ಸೈಟಿನ ಬೆಲೆ ಈಗ ಬರೋಬ್ಬರಿ 10-12ಲಕ್ಷ ರೂ.ಗೆ ದಿಡೀರ್ ಏರಿಕೆಯಾಗಿದೆ. ವ್ಯಾಪಾರಿಗಳು, ನೌಕರರು, ಮಧ್ಯಮ ವರ್ಗದ ಜನತೆಯನ್ನು ಗುರಿಯಾಗಿಸಿಕೊಂಡು ಭೂಮಾಫಿಯಾ ಮತ್ತು ದಳ್ಳಾಳಿಗಳು ಬೆಲೆ ಹೆಚ್ಚಿಸುತ್ತಾ ತಮ್ಮ ಬೇಳೆಯನ್ನೂ ಬೇಯಿಸಿಕೊಂಡು ನಿವೇಶನಗಳು ಬಡವರ ಕೈಗೆ ಸಿಗದಂತೆ ಕಟ್ಟೆಚ್ಚರ ವಹಿಸಿದ್ದಾರೆ. ತಮ್ಮ ಹೆಸರಿಗೆ ಬೇರೊಬ್ಬರಿಂದ ಕಡಿಮೆ ಬೆಲೆಗೆ ಸೈಟು ಅಗ್ರಿಮೆಂಟ್ ಹಾಕಿಸಿಕೊಂಡು ಮೂರು ತಿಂಗಳಲ್ಲಿ ಹಣ ದ್ವಿಗುಣ ಮಾಡಿಕೊಳ್ಳುತ್ತಿರುವ ಪಕ್ಕಾ ಭೂಮಾಫಿಯಾಗಳ ಕೈಚಳಕವಿದು.
ನಗರೀಕರಣದ ಪ್ರಭಾವ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿದ್ದು, ಒಂದು ಕಡೆ ವಿದ್ಯಾವಂತ ಯುವಕ, ಯುವತಿಯರು ಉದ್ಯೋಗ ಹರಸಿ ಉದ್ಯಾನ ನಗರಿ ಬೆಂಗಳೂರು ಕಡೆಗೆ ಹೆಜ್ಜೆ ಹಾಕುತ್ತಿದ್ದರೆ, ಮತ್ತೊಂದೆಡೆ ಬೆಂಗಳೂರಿನಂತಹ ಪ್ರದೇಶದಲ್ಲಿ ಒತ್ತಡದ ಬದುಕಿನಲ್ಲಿ ಜೀವನವೇ ಸಾಕು ಎಂದು ಕಾಲು ಕೀಳುತ್ತಿರುವ ಮಂದಿ ತಮ್ಮ ಜೀವಿತ ಅವಧಿಯ ಕೊನೆಗಾಲದಲ್ಲಾದರೂ ಪಟ್ಟಣದಲ್ಲಿ ತಲೆ ಮೇಲೆ ಸೂರು ಹೊಂದುವ ಆಸೆಗೆ ಈ ಭೂಮಾಫಿಯಾ ಅಡ್ಡಿಯಾಗಿದೆ.
ಮಳೆ ಆಧಾರಿತ ಒಣ ಭೂಮಿ ಪ್ರದೇಶವಾಗಿದ್ದರೂ ಇಲ್ಲಿ ಭೂಮಿಗೆ ಚಿನ್ನದ ಬೆಲೆ ಇದೆ. ಮೊದ-ಮೊದಲು ಪಟ್ಟಣದಲ್ಲಿ ಯಾವ ಕಡೆ ಬೇಕಾದರೂ ಸೈಟು ಖರೀದಿಸಬಹುದಿತ್ತು. ಕಳೆದ 3-4 ವರ್ಷಗಳ ಹಿಂದೆ ಇದ್ದ ನಿವೇಶನಗಳ ಬೆಲೆ ಈಗ ದುಪ್ಪಟ್ಟಾಗಿದೆ. ನಿವೇಶನ ಬೆಲೆ ಲಕ್ಷ-ಲಕ್ಷಕ್ಕೂ ಮೀರಿದೆ. ಕಾಲು ಕೋಟಿ ಎಂದರೆ ಅಚ್ಚರಿ ಇಲ್ಲ. ಆದರೂ, ಪಟ್ಟಣ ಅಭಿವೃದ್ಧಿಯಲ್ಲಿ 10-15 ವರ್ಷಗಳ ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ. ಅಧಿಕಾರಸ್ಥ ರಾಜಕಾರಣಿಗಳ ಇಚ್ಛಾಶಕ್ತಿಯ ಫಲವಾಗಿ ಪಟ್ಟಣ ಅಭಿವೃದ್ಧಿಯಲ್ಲಿ ಹಿಂದೆ ಸರಿದಿದೆ. ಭೌಗೋಳಿಕವಾಗಿ ತೀರಾ ಕಿಷ್ಕಿಂದೆಯಾಗಿರುವ ಪಟ್ಟಣದಲ್ಲಿ ನಿವೇಶನಗಳ ಬೆಲೆ ಮಾತ್ರ ಮುಂಬೈ ಸೆನೆಕ್ಸ್ನಂತೆ ಏರುತ್ತಲೇ ಹೋಗುತ್ತಿದೆ. ಭೂಪರಿವರ್ತನೆಯಾಗಿಲ್ಲದ ಸೈಟುಗಳ ಬೆಲೆಯೂ ಹೆಚ್ಚು.
ರಾಷ್ಟ್ರೀಯ ಹೆದ್ದಾರಿ 48 ಹಾದು ಹೋಗುವ ಪಟ್ಟಣ, ತುಮಕೂರಿಗೆ 40 ಕಿ.ಮೀ ಮತ್ತು ಬೆಂಗಳೂರಿಗೆ 72 ಕಿ.ಮೀ ಅಂತರದಲ್ಲಿದೆ. ಹೀಗಾಗಿ ಪಟ್ಟಣ ಸರ್ಕಾರಿ ನೌಕರರು, ವ್ಯಾಪಾರಸ್ಥರು, ಖಾಸಗಿ ಕಂಪನಿಯ ಉದ್ಯೋಗಿಗಳು, ಫ್ಯಾಕ್ಟರಿ ನೌಕರರು ಹಾಗೂ ಇತರ ವರ್ಗದ ಜನರಿಗೆ ಕೇಂದ್ರಸ್ಥಾನವಾಗಿದೆ. ಈಗಾಗಲೇ ಚತುಷ್ಪಥ ರಸ್ತೆ ನಿರ್ಮಾಣವಾಗಿದೆ. ಬಸ್ ಹತ್ತಿದರೆ ಬೆಂಗಳೂರಿನಿಂದ ಸುಮಾರು 1.15 ಗಂಟೆ ಸಮಯದಲ್ಲಿ ಬೆಂಗಳೂರಿನಲ್ಲಿ ಇರಬಹುದು.
ಅಲ್ಲಿಂದಲೂ ಅಷ್ಟೆ ಸಮಯ. ತುಮಕೂರು-ಮದ್ದೂರು ರಸ್ತೆಯೂ ಕೂಡ ಮುಂಬರುವ 6 ತಿಂಗಳಲ್ಲಿ ಅಭಿವೃದ್ಧಿ ಕಾಣಲಿದೆ. ದ್ವಿಪಥ ರಸ್ತೆಯಾಗಿ ಪರಿವರ್ತನೆಯಾಗಲಿರುವ ಈ ಮಾರ್ಗದ ಮೂಲಕ 40-50 ನಿಮಿಷಗಳಲ್ಲಿ ತುಮಕೂರಿನಿಂದ ಕುಣಿಗಲ್ಗೆ ಬಂದಿಳಿಯಬಹುದು. ಉತ್ತರಕ್ಕೆ ದೊಡ್ಡಕೆರೆ ಮತ್ತು ದಕ್ಷಿಣಕ್ಕೆ ಚಿಕ್ಕಕೆರೆ ಇರುವುದರಿಂದ ಪಟ್ಟಣ ಬೆಳೆಯಲು ಸಾಧ್ಯವಾಗಿಲ್ಲ. ಆದರೆ, ಪೂರ್ವಕ್ಕೆ ಮತ್ತು ಪಶ್ಚಿಮಕ್ಕೆ ಪಟ್ಟಣ ಅಭಿವೃದ್ಧಿ ಹೊಂದುತ್ತಿದೆ. ಪುರಸಭೆ ವ್ಯಾಪ್ತಿಗೆ ಕಳೆದ 5 ವರ್ಷದಿಂದ ಸೇರ್ಪಡೆಯಾಗಿರುವ, ಅದಕ್ಕೂ ಮುನ್ನ ಕಂದಾಯ ಪ್ರದೇಶವಾಗಿದ್ದ ಬಿದನಗೆರೆ ಮತ್ತು ಮಲ್ಲಾಘಟ್ಟ ಪ್ರದೇಶಗಳಲ್ಲಿ ಮತ್ತು ಮಲ್ಲಿಪಾಳ್ಯ ಆಸು-ಪಾಸು ಜಮೀನು ಖರೀದಿಸುವುದೆಂದರೆ ಚಿನ್ನ ಖರೀದಿಸಿದಂತೆ. ಇನ್ನು ಮೂರ್ನಾಲ್ಕು ವರ್ಷಗಳಲ್ಲಿ ಬೆಂಗಳೂರು-ಹಾಸನ ರೈಲು ಬರುವ ಸಾಧ್ಯತೆ ಇರುವುದೂ ಕೂಡ ಸೈಟು ಬೆಲೆ ಹೆಚ್ಚಳಕ್ಕೆ ಕಾರಣ. ಇದರ ಜೊತೆಗೆ ಮುಂದಿನ ಹತ್ತು ವರ್ಷಗಳಲ್ಲಿ ಪಟ್ಟಣದ ಮೂಲಕ ಹಾದು ಹೋಗಲಿರುವ ತುಮಕೂರು-ಚಾಮರಾಜನಗರ ರೈಲು ಮಾರ್ಗವೂ ಕಾರಣವಾಗಲಿದೆ.
ಪಟ್ಟಣದ ಅರ್ಧ ಭಾಗ ಮಲ್ಯ ಒಡೆತನದ ಸ್ಟಡ್ ಫಾರಂ ವಶದಲ್ಲಿದೆ. ಎತ್ತ ನೋಡಿದರೂ ಸೈಟು ನಿರ್ಮಾಣಕ್ಕೆ ಖಾಲಿ ಜಾಗದ ಕೊರತೆ ಎದ್ದು ಕಾಣುತ್ತಿದೆ. ಪಟ್ಟಣ ಬೆಳೆಯುವುದಾದರೆ ಬೆಂಗಳೂರು ಕಡೆಗೆ, ಅಂದರೆ ಅಂಚೆಪಾಳ್ಯ ಇಲ್ಲವೇ, ಬಿಳಿ ದೇವಾಲಯ ಗ್ರಾಮದ ಕಡೆಗೆ ಬೆಳೆಯಬೇಕು. ಇದೂ ಕೂಡ ತುಸು ಕಷ್ಟದ ಮಾತು. ಏಕೆಂದರೆ, ರಸ್ತೆಯ ಇಕ್ಕೆಡೆಗಳಲ್ಲೂ ತೋಟ ಮತ್ತು ತುಡಿಕೆಗಳಿವೆ. ರೈತರ ಬದುಕಿನ ಜೀವಾಳವಾಗಿರುವ ತೋಟಗಳನ್ನೇ ಮಾರಾಟ ಮಾಡಿಕೊಂಡು ನಿವೇಶನ ಮಾಡಿದರೆ ಭವಿಷ್ಯದ ಗತಿ ಏನು ಎಂದು ಅರಿತಿರುವ ಬುದ್ಧಿವಂತ ರೈತರು ಇಂತಹ ದುರಾಲೋಚನೆಗೆ ಮುಂದಾಗಿಲ್ಲ. ಆದರೆ, ಭೂಮಾಫಿಯಾ ದಂಧೆಯಲ್ಲಿ ತೊಡಗಿಸಿಕೊಂಡಿರುವ ಕೆಲ ಬಲಾಢ್ಯ ವ್ಯಕ್ತಿಗಳು ಕೆಲ ಕಡೆಗಳಲ್ಲಿ ಭತ್ತದ ಗದ್ದೆ, ಅಡಿಕೆ, ಬಾಳೆ ಮತ್ತು ತೆಂಗಿನ ತೋಟಗಳನ್ನು ಭೂ ಪರಿವರ್ತನೆ ಮಾಡಿಕೊಂಡಿದ್ದಾರೆ.