ಮತ ಕೇಳಿ ಸಂದೇಶ ಬಂದರೆ ದೂರು ನೀಡಬಹುದು

ಭಾರತ ಚುನಾವಣಾ ಆಯೋಗದ ನೀತಿ ನಿಯಮಾವಳಿಯಂತೆ ಮೊಬೈಲ್ ಅಥವಾ ಧ್ವನಿ ಸಂದೇಶ ಕಳುಹಿಸುವುದು ವಾಣಿಜ್ಯ ಪ್ರಚಾರದ ಒಂದು ಭಾಗ. ಹಾಗಾಗಿ, ಪ್ರಸಕ್ತ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಅಥವಾ ಅಂತಹ ಅಭ್ಯರ್ಥಿಗಳ ಬೆಂಬಲಿಗರು ಮೊಬೈಲ್ ಸಮೂಹ ಸಂದೇಶದ ಮೂಲಕ ಪ್ರಚಾರ ಕೈಗೊಳ್ಳುವ ಪ್ರಸಂಗವಿದ್ದಲ್ಲಿ ಚುನಾವಣಾ ಆಯೋಗ ನಿರ್ದಿಷ್ಟ ಪಡಿಸಿದ ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕಿದೆ. ಮೊಬೈಲ್ ಸಂದೇಶ ಕಳುಹಿಸುವವರು, ಸಂಬಂಧಿತ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಅಧ್ಯಕ್ಷರಾಗಿರುವ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಮತ್ತು ಉಸ್ತುವಾರಿ ಸಮಿತಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಭರ್ತಿ ಮಾಡಿ, ಸಂದೇಶದ ವಿವರ, ಸಮಯ ಹಾಗೂ ತಗಲುವ ಖರ್ಚು-ವೆಚ್ಚಗಳನ್ನು ತಿಳಿಸಿ ಪರವಾನಿಗೆ ಪಡೆಯಬೇಕಿದೆ. ಅಲ್ಲದೇ ಜಾಹೀರಾತಿನ ಖರ್ಚು-ವೆಚ್ಚದ ವಿವರಗಳನ್ನು ಸಂಬಂಧಿಸಿದ ಮತಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಸಲ್ಲಿಸಬೇಕು. ತಪ್ಪಿದಲ್ಲಿ ಚುನಾವಣಾ ಆಯೋಗದ ನಿಯಮಾವಳಿಯಂತೆ ದಂಡನೆಗೆ ಗುರಿಯಾಗಬೇಕಾಗುತ್ತದೆ. ಹಾಗಾಗಿ, ನಿಮಗೆ ಮೊಬೈಲ್ ಸಮೂಹ ಸಂದೇಶದ ಮೂಲಕ ಪ್ರಚಾರ ಕೈಗೊಂಡ ಬಗ್ಗೆ ಮಾಹಿತಿ ಬಂದರೆ ಅಥವಾ ನಿಮ್ಮ ಮೊಬೈಲ್ಗೆ ಮತ ಹಾಕುವಂತೆ ಸಂದೇಶ ಬಂದರೆ ಚುನಾವಣಾ ಸಹಾಯವಾಣಿ 1950 ಅಥವಾ 08372 220600 ಸಂಖ್ಯೆಗೆ ಉಚಿತ ಕರೆ ಮಾಡಿ ದೂರು ನೀಡಬಹುದು.