ಯುಗಾದಿ ಮರಳಿ ಬಂದಿದೆ...


ಯುಗ ಯುಗಾದಿ ಕಳೆದರು, ಯುಗಾದಿ ಮರಳಿ ಬರುತಿದೆ.... ಕನ್ನಡದ ವರಕವಿ ಡಾ. ದ.ರಾ.ಬೇಂದ್ರೆಯವರ ಕವಿವಾಣಿಯಂತೆ, ನಿಸರ್ಗದ ನಿಯಮದಂತೆ ಹಿಂದೂ ಧರ್ಮೀಯರ ಹೊಸ ವರ್ಷ 'ಯುಗಾದಿ' ಮತ್ತೆ ಬಂದಿದೆ. ಉರಿ ಬಿಸಿಲು ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ತಾಪದ ನಡುವೆಯೇ ಬಂದಿರುವುದು ಈ ಬಾರಿಯ ಯುಗಾದಿ ವಿಶೇಷ.
ಸಂಕ್ರಾಂತಿ ಮುಗಿಸಿದ ಬಹು ದಿನಗಳ ವಿರಾಮದ ನಂತರ ಬಂದಿರುವ ಯುಗಾದಿಯನ್ನು ಅದ್ದೂರಿಯಾಗಿ ಸ್ವ್ವಾಗತಿಸುವಂತಹ ಉತ್ಸುಕತೆಯ 'ಮೂಡ್' ಜನರಲ್ಲಿ ಇಲ್ಲವೆಂಬುದು ಮಾರುಕಟ್ಟೆಯಲ್ಲಿ ಸುತ್ತಾಡಿದರೆ ಕಂಡು ಬರುತ್ತದೆ. ಅಕ್ಕಿ, ಬೇಳೆ, ಬೆಲ್ಲ, ಕಡಲೆ, ಎಣ್ಣೆ, ಹಿಟ್ಟು, ಕೊಬ್ಬರಿ, ಸಕ್ಕರೆ ಬೆಲೆಗಳು ಗಗನಮುಖಿಯಾಗಿವೆ. ಯುಗಾದಿ ಸಂಕೇತವಾಗಿರುವ ಬೇವು- ಬೆಲ್ಲ ತಯಾರಿಸಲು ಬೇಕಾದ ಕಡಲೆ ಮತ್ತು ಬೆಲ್ಲದ ಬೆಲೆಗಳು ಜನರಿಗೆ ಕಹಿ ಉಂಟು ಮಾಡುವಂತಿವೆ. ಕಡಲೆ ಕೆಜಿಗೆ 80-85 ರೂ., ಬೆಲ್ಲದ ರೇಟು 40-45!. ಸಕ್ಕರೆ ಬೆಲೆಗಿಂತಲೂ ಬೆಲ್ಲದ ಬೆಲೆಯೇ ಹೆಚ್ಚಾಗಿದೆ.
ಹೂವಿನ ಬೆಲೆ 'ಕೈ'ಸುಡುವಂತೆ ಇಲ್ಲದಿದ್ದರೂ ಹಣ್ಣಿನ ಬೆಲೆ ತುಸು ಜಾಸ್ತಿಯೇ ಇದೆ. ಇನ್ನು ಹಬ್ಬದಂದು ಶೃಂಗರಿಸಲು ಬಳಸುವ ಮಾವು- ಬೇವು ಕೈಗೆಟುಕುವ ದರದಲ್ಲಿ ಇಲ್ಲ. ಯುಗಾದಿಯ ವಿಶೇಷ 'ಶ್ಯಾವಿಗೆ' ಬೆಲೆಯೂ ಹೆಚ್ಚಾಗಿದೆ.
ಈ ಬಾರಿಯ ಯುಗಾದಿ ಹಬ್ಬದ ಮುನ್ನಾ ದಿನವೇ ಏ.10 ರಿಂದ 14ನೇ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯವೂ ಪ್ರಾರಂಭವಾಗಿದೆ. ಝರ್ರನೆ ಏರುತ್ತಿರುವ ಬಿಸಿಲಿನ ತಾಪದಂತೆ ಚುನಾವಣಾ ಕಾವೂ ಏರುತ್ತಿದೆ.
 ಬೆಲೆ ಹೆಚ್ಚಳ ಎಂಬ ಕಾರಣಕ್ಕಾಗಿ ಹೊಸ ಸಂವತ್ಸರ 'ವಿಜಯನಾಮ'ವನ್ನು ಹೊತ್ತು ತಂದಿರುವ ಯುಗಾದಿಯನ್ನು ಸ್ವಾಗತಿಸದೆ ಬಿಡುವಂತಿಲ್ಲ. ಹಬ್ಬ ಮಾಡದೆ ಬಿಡುವಂತಿಲ್ಲ. ಇರುವುದರಲ್ಲೇ ಹಬ್ಬ ಮಾಡಬೇಕು ಎಂಬ ಧಾವಂತ ಜನರಲ್ಲಿ ಇದ್ದೇ ಇದೆ.
ಯುಗಾದಿ.... ತಗಾದಿ....
'ಯುಗಾದಿ ಯಾವಾಗಲೂ ತಗಾದಿ...' ಎಂಬ ಚಾಲ್ತಿ ಮಾತಿನಂತೆ ಈ ಬಾರಿಯ ಯುಗಾದಿ ಕೂಡಾ ತಗಾದೆಯೊಂದಿಗೆ ಬಂದಿದೆ. ಬುಧವಾರ ಅಮವಾಸ್ಯೆ ಬಂದಿರುವುದರಿಂದ ಗುರುವಾರ ಚಂದ್ರ ಕಾಣಲು ಸಾಧ್ಯವಿಲ್ಲ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಗುರುವಾರ ಚಂದ್ರನ ದರ್ಶನ ಗ್ಯಾರಂಟಿ. ಹಾಗಾಗಿ ಗುರುವಾರ ಬೆಳಗ್ಗೆ ಶ್ಯಾವಿಗೆ, ಮಧ್ಯಾಹ್ನ ಹೋಳಿಗೆ, ಸಾಯಂಕಾಲ ಚಂದ್ರದರ್ಶನ ಎಂಬ ಲೆಕ್ಕಾಚಾರದೊಂದಿಗೆ ಒಂದೇ ದಿನ ಶ್ಯಾವಿಗೆ, ಹೋಳಿಗೆ ಮಾಡುತ್ತಿದ್ದೇವೆ ಎನ್ನುತ್ತಾರೆ ಅನೇಕರು.
'ಹೊಸ ವರುಷಕೆ ಹೊಸ ಹರುಷವ... ಹೊಸತು ಹೊಸತು ತರುತಿದೆ...'ಎಂಬ ಕವಿವಾಣಿಯಂತೆ ಹಿಂದೂ ಧರ್ಮೀಯರ ಪಾಲಿನ ಹೊಸ ವರ್ಷ, ಹೊಸ ಯುಗದ ಪ್ರಾರಂಭದ ಸಂಕೇತವಾಗಿರುವ ಯುಗಾದಿ ಕಳೆದ ವರ್ಷದ ಎಲ್ಲಾ ಬೇಗುದಿಯನ್ನು ದೂರ ಮಾಡಲಿ. ಮತ್ತೆಂದೂ 'ಬರ'ದ ಕರಾಳ ಛಾಯೆ ಮೂಡದಿರಲಿ. ಉತ್ತಮ ಮಳೆ, ಬೆಳೆ, ಎಲ್ಲೆಡೆ ಸಮೃದ್ಧತೆಯನ್ನು ಹೊತ್ತು ತರಲಿ ಎಂದು ಪ್ರಾರ್ಥಿಸೋಣ.