ಸೌದಿ ಅರೇಬಿಯಾದಲ್ಲಿ ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿ ಭಾರತೀಯರು


ಸೌದಿ ಅರೇಬಿಯಾ ಸರಕಾರ ಜಾರಿಗೊಳಿಸುತ್ತಿರುವ ಹೊಸ ಹೊಸ ಕಾನೂನುಗಳಿಂದಾಗಿ ಆ ದೇಶದಲ್ಲಿರುವ ಭಾರತೀಯರು ಸಂಕಷ್ಟ ಎದುರಿಸುವಂತಾಗಿದೆ. ಅಲ್ಲಿ ಕೆಲಸ ಮಾಡುತ್ತಿರುವ ಹಲವು ಮಂದಿ ಭಾರತೀಯರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಕೆಂಪು ಕಾರ್ಡು ಮತ್ತು ಹಳದಿ ಕಾರ್ಡು ವ್ಯವಸ್ಥೆ ಜಾರಿಗೆ ತಂದು ಸ್ವಲ್ಪ ಪ್ರಮಾಣದ ಭಾರತೀಯರು ಸ್ವದೇಶಕ್ಕೆ ತೆರಳುವಂತೆ ಮಾಡಿದ್ದ ಸೌದಿ ಸರಕಾರ, ಈಗ ಪ್ರೀ ವೀಸಾದಲ್ಲಿ ದೇಶಕ್ಕೆ ಬಂದು ಉದ್ಯೋಗ ಮಾಡಿಕೊಂಡಿರುವವರ ಮೇಲೆ ಕೆಂಗಣ್ಣು ಬೀರಿದೆ. ಹೊಸ ಕಾಯಿದೆಯ ಪ್ರಕಾರ ಸೌದಿ ಅರೇಬಿಯಾದಲ್ಲಿರುವ ಫ್ರೀ ವೀಸಾದ ಉದ್ಯೋಗದಲ್ಲಿರುವವರು ಇನ್ನು ಮುಂದೆ ಸ್ವಂತ ಉದ್ಯೋಗವನ್ನು ಮಾಡುವಂತಿಲ್ಲ. ವಿದೇಶದಿಂದ ಫ್ರೀ ವೀಸಾದಲ್ಲಿ ಸೌದಿಗೆ ಬರುವ ಉದ್ಯೋಗಾರ್ಥಿಗಳು ಒಬ್ಬ ಕಫೀಲ್(ಸಾಹುಕಾರ)ನ ಹೆಸರಿನಲ್ಲಿ ಬಂದಿದ್ದರೂ ದೇಶದ ಎಲ್ಲಿ ಬೇಕಾದರೂ ಕೆಲಸ ಮಾಡಬಹುದಿತ್ತು. ಇನ್ನು ಮುಂದೆ ಯಾವ ಕಫೀಲನ ಹೆಸರಿನಲ್ಲಿ ಅವರು ದೇಶಕ್ಕೆ ಬರುತ್ತಾರೊ ಅದೇ ಕಫೀಲ್ನ ಅಧೀನದಲ್ಲಿ ಉದ್ಯೋಗ ನಿರ್ವಹಿಸತಕ್ಕದ್ದು. ಹಿಂದೆ ಕಫೀಲ್ಗೆ ಮಾಸಿಕ ಮೊತ್ತ ಪಾವತಿಸಿ ದೇಶದ ಎಲ್ಲಿ ಬೇಕಾದರೂ ಉದ್ಯೋಗ ಮಾಡಬಹುದಿತ್ತು.
ಇನ್ನು ಮುಂದೆ ಕಫೀಲ್ಗಳು ತಮ್ಮ ಸಂಸ್ಥೆಗಳಿಗೆ ಅಗತ್ಯವಿರುವ ಉದ್ಯೋಗಿಗಳನ್ನು ಮಾತ್ರ ಆಯ್ದುಕೊಳ್ಳಬೇಕು. ಉಳಿದವರು ದೇಶ ಬಿಟ್ಟು ತೆರಳಬೇಕು. ಈ ಬಗ್ಗೆ ಸರಕಾರ ತೀವ್ರ ತಪಾಸಣೆಯಲ್ಲಿ ತೊಡಗಿದೆ. ಸಾಮಾನ್ಯವಾಗಿ ಹೆಚ್ಚಿನ ಮಂದಿ ಫ್ರೀ ವೀಸಾದಲ್ಲಿ ಸೌದಿಗೆ ಹೋಗಿ ಅಲ್ಲಿ ಎಲ್ಲಾದರೊಂದು ಕಡೆ ಕಷ್ಟಪಟ್ಟು ಉದ್ಯೋಗ ಮಾಡಿ ಊರಿಗೆ ಹಣ ಕಳುಹಿಸುತ್ತಿದ್ದರು. ಇನ್ನು ಮುಂದೆ ಕಫೀಲ್ಗಳು ಕೆಲಸಕ್ಕೆ ಇಟ್ಟುಕೊಂಡರೆ ಉಂಟು, ಇಲ್ಲದಿದ್ದರೆ ಹಿಂತಿರುಗಬೇಕು. ಆದರೆ, ಕಂಪನಿ ವೀಸಾದಲ್ಲಿ ಹೋದವರಿಗೆ ಈ ಸಮಸ್ಯೆ ಇಲ್ಲ.