ಡಿಎಡ್ ಕಾಲೇಜಿಗಳಿಗೆ ಈಗ ವಿದ್ಯಾರ್ಥಿಗಳೇ ಇಲ್ಲ


ಟಿಸಿಎಚ್ (ಡಿಎಡ್) ಮಾಡಿದರೆ ಸರ್ಕಾರಿ ಉದ್ಯೋಗ ಖಾತ್ರಿ ಎಂಬ ಕಾಲವೊಂದಿತ್ತು. 8-10 ವರ್ಷಗಳ ಹಿಂದೆ ಟಿಸಿಎಚ್ಗೆ ಪ್ರವೇಶ ಪಡೆಯುವುದೆಂದರೆ ಹರಸಾಹಸವಾಗಿತ್ತು. ಕಾಲೇಜಿನಲ್ಲಿ ಪ್ರವೇಶಕ್ಕಾಗಿ ಡೊನೇಶನ್ ಜೊತೆಗೆ ರಾಜಕಾರಣಿಗಳು, ಸಂಘ-ಸಂಸ್ಥೆಗಳ ಮುಖ್ಯಸ್ಥರು ಅಥವಾ ಸ್ವಾಮೀಜಿಗಳ ವಶೀಲಿ ಬೇಕಿತ್ತು. ಟಿಸಿಎಚ್ ಪ್ರವೇಶ ಸಿಕ್ಕರೆ ಮುಗಿಯಿತು, ಕೋರ್ಸ್ ಮುಗಿಯುವಷ್ಟರಲ್ಲಿಯೇ ಕರೆದು ಸರ್ಕಾರಿ ನೌಕರಿ ಕೊಡಲಾಗುತ್ತದೆ ಎಂಬ ಸ್ಥಿತಿಯಿತ್ತು. ದಶಕದ ಹಿಂದೆ ಡಿಎಡ್ ಕಾಲೇಜು ತೆರೆಯಲು ಅನುಮತಿ ಸಿಕ್ಕರೆ ಜಾಕ್ಪಾಟ್ ಹೊಡೆದಂತೆ ಎಂದೇ ಪರಿಗಣಿಸಲಾಗುತ್ತಿತ್ತು. ಆದರೆ, ಈಗ ಅವೇ ಶಿಕ್ಷಣ ಸಂಸ್ಥೆಗಳು ಕಾಲೇಜು ಮುಚ್ಚಿದರೆ ಸಾಕು ಎನ್ನುತ್ತಿವೆ.
ಈಗ ಡಿಎಡ್ನತ್ತ ನೋಡುವವರೇ ಇಲ್ಲ. ವಿದ್ಯಾರ್ಥಿಗಳ ಕೊರತೆಯಿಂದಾಗಿ ಹಲವಾರು ಕಾಲೇಜುಗಳು ಮುಚ್ಚುವ ಸ್ಥಿತಿಗೆ ಬಂದರೆ, ಕೆಲವು ಕಾಲೇಜುಗಳನ್ನು ಬೇಡಿಕೆ ಇದ್ದೆಡೆಗೆ ಸ್ಥಳಾಂತರ ಮಾಡಲಾಗುತ್ತಿದೆ. ಜೂನ್ನಿಂದ ಶೈಕ್ಷಣಿಕ ವರ್ಷ ಆರಂಭಗೊಳ್ಳಲಿದ್ದು, ಈ ವರ್ಷ ಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ರಾಜ್ಯದಲ್ಲಿರುವ ಸುಮಾರು 1,000 ಡಿಎಡ್ ಕಾಲೇಜುಗಳಿಂದ ಡಿಎಡ್ ಪದವಿ ಪಡೆದ ಎರಡು ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಸರ್ಕಾರಿ ಶಿಕ್ಷಕ ಹುದ್ದೆಗಾಗಿ ಕಾಯುತ್ತಿದ್ದಾರೆ.
ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಹೆಚ್ಚು ಆದ್ಯತೆ ನೀಡಿತ್ತು. ಇದರಿಂದಾಗಿ ಡಿಎಡ್ ಶಿಕ್ಷಣಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿತ್ತು. ಅಂದಿನ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನೇಮಿಸಿದ ಸಮಿತಿ ಧಾರಾಳವಾಗಿ ಡಿಎಡ್ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಿತು. ಇದರಿಂದಾಗಿ ಡಿಎಡ್ ಕಾಲೇಜುಗಳು ನಾಯಿಕೊಡೆಗಳಂತೆ ತಲೆ ಎತ್ತಿದವು. 1ರಿಂದ 2 ಲಕ್ಷ ರೂ.ವರೆಗೂ ಡೊನೇಶನ್ ನೀಡಿ ಪ್ರವೇಶ ಪಡೆದವರು ಹಲವರು. ಡೊನೇಷನ್ ಕೊಟ್ಟವರಿಗಾಗಿ ಆದ್ಯತೆ ನೀಡುವ ಉದ್ದೇಶದಿಂದ ಕೆಲವು ಕಾಲೇಜುಗಳಲ್ಲಿ ಪ್ರಾಕ್ಟಿಕಲ್ ವಿಷಯಗಳಲ್ಲಿ ಹೆಚ್ಚಿನ ಅಂಕ ನೀಡಲಾಗುತ್ತಿದೆ ಎಂಬ ಆರೋಪ ಕೂಡ ಹಲವು ಬಾರಿ ಕೇಳಿ ಬಂದಿತ್ತು.
ಡಿಎಡ್ ಮುಗಿಸಿ ನಾಲ್ಕಾರು ವರ್ಷ ಹೊಟ್ಟೆಪಾಡಿಗಾಗಿ ಬೇರೆ ಬೇರೆ ಉದ್ಯೋಗ ಅವಲಂಬಿಸಿದ ಅನೇಕರು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾದದ್ದೂ ಉಂಟು. ಆದರೆ ಈಗ ಸ್ಥಿತಿ ಸಂಪೂರ್ಣ ವಿರುದ್ಧವಾಗಿದೆ. ಡಿಎಡ್ ಕಾಲೇಜುಗಳು ಬಿಕೋ ಎನ್ನುತ್ತಿವೆ. ಕಳೆದ ನಾಲ್ಕು ವರ್ಷಗಳಿಂದ ಸರ್ಕಾರ ನೇಮಕ ಮಾಡಿಕೊಳ್ಳದಿರುವುದು ಡಿಎಡ್ ಪೂರ್ಣಗೊಳಿಸಿದ ಸಾವಿರಾರು ಅಭ್ಯರ್ಥಿಗಳಿಗೆ ಆತಂಕ ಮೂಡಿಸಿದೆ.
ಶಿಕ್ಷಕರ ಟ್ರಾನ್ಸಫರ್ ಪಾಲಿಸಿ ಕೂಡ ವಿದ್ಯಾರ್ಥಿಗಳು ಕಲಿಯಲು ಹಿಂದೇಟು ಹಾಕುವುದಕ್ಕೆ ಕಾರಣವಾಗಿದೆ. ಸರ್ಕಾರ ಹೊಸ ಶಾಲೆಗಳನ್ನು ತೆರೆಯುವುದು ದೂರದ ಮಾತು, ಇದ್ದ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಇದೇ ಸಂದರ್ಭದಲ್ಲಿ ಖಾಸಗಿ ಶಾಲೆಗಳು ಹೆಚ್ಚುತ್ತಿವೆ. ಪಾಲಕರಿಗೆ ಕಾನ್ವೆಂಟ್ ಶಾಲೆಗಳ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ. ಮಕ್ಕಳ ಶಾಲಾ ಶಿಕ್ಷಣದಿಂದ ಖರ್ಚು ಹೆಚ್ಚಿದರೂ ಖಾಸಗಿ ಶಾಲೆಗಳಲ್ಲಿಯೇ ಕಲಿಯಲಿ ಎಂಬುದು ಪಾಲಕರ ಮನೋಭಾವವಾಗಿದೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಹಾಗಾಗಿ ಸರ್ಕಾರ ಶಾಲೆಗಳನ್ನು ವಿಲೀನಗೊಳಿಸಲು ನಿರ್ಧರಿಸಿತ್ತು. ಕೇವಲ ಡಿಎಡ್ ಅಷ್ಟೇ ಅಲ್ಲ, ಹಲವಾರು ಬಿಎಡ್ ಕಾಲೇಜುಗಳು ಕೂಡ ಬಂದ್ ಆಗುತ್ತಿವೆ.

ಕಣ್ಮರೆಯಾಗುತ್ತಿವೆ ಮಳೆಗಾಲದ ತಿಂಡಿ ತಿನಸುಗಳು


ಹಿಂದೆಲ್ಲಾ ಮಳೆಗಾಲ ಬಂತೆಂದರೆ ಸಾಕು. ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಯಲ್ಲೂ ಮಳೆಗಾಲಕ್ಕೆಂದು ತಯಾರಿಸಿದ ತಿಂಡಿ, ತಿನಿಸುಗಳನ್ನು ಮನೆಯವರೆಲ್ಲರೂ ಸೇರಿ ತಿನ್ನುತ್ತಿದ್ದರು. ಹೊರಗಡೆ ಧಾರಾಕಾರ ಮಳೆ ಸುರಿದು ಚಳಿಯ ಅನುಭವವಾಗುತ್ತಿದ್ದರೆ ಎಣ್ಣೆಯಲ್ಲೋ ಅಥವಾ ಬೆಂಕಿಯಲೋ ಕರಿದ ಹಪ್ಪಳಗಳು ಬೆಚ್ಚಗಿನ ಅನುಭವ ನೀಡುತ್ತಿದ್ದವು. ಮಳೆಗಾಲದಲ್ಲಿ ಕೆಲಸವೂ ಕಡಿಮೆ, ಹೊರಗಡೆ ಹೋಗುವುದಕ್ಕೂ ಆಗದೆ ಮನೆಯಲ್ಲೇ ಕುಳಿತ ಮನೆ ಮಂದಿಗೆಲ್ಲ ಇಂತಹ ತಿಂಡಿ ತಿನಿಸುಗಳು ಮುದ ನೀಡುತ್ತಿದ್ದವು. ಆದರೆ ಇಂದು ಇಂತಹ ತಿಂಡಿ ತಿನಸುಗಳು ಕಾಣಲು ಅಪರೂಪವಾಗುತ್ತಿವೆ.
ಹಿಂದೆ ಹಳ್ಳಿಗರಿಗೆ ಏಪ್ರಿಲ್-ಮೇ ತಿಂಗಳಲ್ಲಿ ಇಂತಹ ತಿಂಡಿ ತಿನಿಸುಗಳನ್ನು ತಯಾರಿಸುವುದೇ ಒಂದು ಕೆಲಸ. ಮರದಲ್ಲಿ ಹಲಸು ಬಲಿಯುತ್ತಿದ್ದಂತೆ ಅದನ್ನು ಕೊಯ್ದು ಹಪ್ಪಳ ಹಾಕುತ್ತಿದ್ದರು. ಜೊತೆಗೆ ಗೆಣಸಿನ ಹಪ್ಪಳ, ಅಲೂಗಡ್ಡೆ ಹಪ್ಪಳಗಳನ್ನೂ ಹಾಕುತ್ತಿದ್ದರು.  ಹಲಸಿನಿಂದ ಹಪ್ಪಳ ಮಾತ್ರವಲ್ಲದೆ ಪದಾರ್ಥಕ್ಕೆ ಉಪಯೋಗವಾಗುವ ಅನೇಕ ತಿನಿಸುಗಳನ್ನು ತಯಾರಿಸುತ್ತಿದ್ದರು. ಆದರೆ, ಇಂದು ಹಪ್ಪಳ ಮಾಡುವುದು ಬಿಡಿ, ಹಲಸು ಹಣ್ಣಾದರೂ ಕೊಯ್ಯುವವರು ಇಲ್ಲದೆ ಕೊಳೆತು ಹೋಗುತ್ತಿದೆ.
ಹಿತ್ತಲಲ್ಲಿ ಹೇರಳವಾಗಿ ಬೀಳುತ್ತಿದ್ದ ಮಾವಿನ ಹಣ್ಣಿನಿಂದ ಮಾಂಬಳ ತಯಾರಿಸಿ ಮಳೆಗಾಲಕ್ಕೆ ಇಡುತ್ತಿದ್ದರು. ಇದನ್ನು ಕೇವಲ ತಿನ್ನುವುದಕ್ಕೆ ಮಾತ್ರವಲ್ಲದೆ ಪದಾರ್ಥಕ್ಕೂ ಉಪಯೋಗಿಸುತ್ತಿದ್ದರು. ಇನ್ನು ಮಳೆಗಾಲಕ್ಕೆ ಮಾವಿನ ಹಣ್ಣು ಮತ್ತು ಕಾಯಿಯಿಂದ ಅನೇಕ ತಿನಿಸುಗಳನ್ನು ತಯಾರಿಸಿ ತೆಗೆದಿಡುತ್ತಿದ್ದರು. ಹಣ್ಣಾದ ಮಾವನ್ನು ಉಪ್ಪಿನ ನೀರಿನಲ್ಲಿ ಹಾಕಿ ಊಟಕ್ಕೆ ಉಪಯೋಗಿಸುತ್ತಿದ್ದರು. ಮಾವಿನ ಮಿಡಿಗಳನ್ನು ಮಳೆಗಾಲದಲ್ಲಿ ಉಪ್ಪಿನಕಾಯಿಗೆ ಉಪಯೋಗಿಸುತ್ತಿದ್ದರು.
ತಮ್ಮಲ್ಲಿ ಬೆಳೆಯುತ್ತಿದ್ದ ಮೆಣಸನ್ನು ಕೊಯ್ದು ಎರಡು ಭಾಗಗಳನ್ನಾಗಿ ಮಾಡಿ, ಉಪ್ಪು ಸೇರಿಸಿ ಬೇಯಿಸಿ, ಒಣಗಿಸಿ ಮಳೆಗಾಲಕ್ಕೆ ತೆಗೆದಿಡುತ್ತಿದ್ದರು. ಇದನ್ನು ಮಜ್ಜಿಗೆ ಮೆಣಸು ಎಂದು ಕರೆಯುತ್ತಾರೆ. ಮಳೆಗಾಲದಲ್ಲಿ ಊಟದ ಸಮಯದಲ್ಲಿ ಇದನ್ನು ಎಣ್ಣೆಯಲ್ಲಿ ಕರಿದು ಅಥವಾ ಬೆಂಕಿಯಲ್ಲಿ ಸುಟ್ಟು ಊಟಕ್ಕೆ ಉಪಯೋಗಿಸುತ್ತಿದ್ದರು. ಹಣ್ಣಾದ ಹಲಸಿನ ಬೀಜಗಳನ್ನು ಬೇಯಿಸಿ, ಬಿಸಿಲಿನಲ್ಲಿ ಒಣಗಿಸಿ ಮಳೆಗಾಲದಲ್ಲಿ ಅದನ್ನು ಸುಟ್ಟು ತಿನ್ನುತ್ತಿದ್ದರು. ಗೇರು ಬೀಜಗಳನ್ನು ಒಣಗಿಸಿಟ್ಟುಕೊಂಡು ಮಳೆಗಾಲದಲ್ಲಿ ಬೇಯಿಸಿ ತಿನ್ನುತ್ತಿದ್ದರು.
ಆದರೆ ಇಂದು ಇಂತಹ ತಿಂಡಿ ತಿನಿಸುಗಳು ಕಾಣಸಿಗುವುದೇ ಅಪರೂಪವಾಗುತ್ತಿವೆ. ಅಲ್ಲೋ ಇಲ್ಲೋ ಕೆಲವೊಂದು ಕಡೆಗಳಲ್ಲಿ ತಿನಿಸುಗಳನ್ನು ತಯಾರಿಸುವುದು ಕಾಣಸಿಗುತ್ತಿವೆ. ಪ್ರಸ್ತುತ ದಿನಗಳಲ್ಲಿ ಜನರಿಗೆ ಸಮಯವೂ ಸಿಗುತ್ತಿಲ್ಲ. ಜೊತೆಗೆ ತಿಂಡಿ ತಿನಿಸುಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ದೊರೆಯುವುದರಿಂದ ಜನ ಮಾರುಕಟ್ಟೆಯಲ್ಲೇ ಖರೀದಿಸುತ್ತಾರೆ. ಹಿಂದೆ ಮಳೆಗಾಲದಲ್ಲಿ ಮನೆಯಲ್ಲಿ ಕುಳಿತಿರುತ್ತಿದ್ದ ಜನ ಇಂದು ಮನೆಯಲ್ಲಿ ಕೂರುತ್ತಿಲ್ಲ. ಜೊತೆಗೆ ಮನೆಗಳ ಸಂಖ್ಯೆಗಳು ಹೆಚ್ಚಾಗಿ ಮನೆಮಂದಿಯ ಸಂಖ್ಯೆ ಇಳಿದು, ತಿಂಡಿ ತಿನಿಸುಗಳನ್ನು ತಯಾರಿಸಲು ಮನೆಯಲ್ಲಿ ಜನರೇ ಇಲ್ಲದಂತಾಗಿದೆ. ಕಾಕತಾಳೀಯವಾಗಿ ಇಂದು ಮಳೆಯ ಪ್ರಮಾಣವೂ ಗಣನೀಯ ಇಳಿಕೆಯಾಗಿದೆ. ಹಿಂದೆ ಸುರಿಯುತ್ತಿದ್ದ ಧಾರಾಕಾರ ಈಗ ಕಾಣುವುದು ಅಪರೂಪ.

ಶರಾವತಿ ದಾಟಲು ಸುಂಕ, ಜನರಿಗೆ ಸುಲಿಗೆಯ ಆತಂಕ


ಕೋಟಿ ರೂ.ಗೂ ಕಡಿಮೆ ವೆಚ್ಚದಲ್ಲಿ ತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪ ಶರಾವತಿಗೆ 1.1 ಕಿ.ಮೀ.ಸೇತುವೆ ನಿರ್ಮಿಸಲಾಗಿತ್ತು. 25 ವರ್ಷಗಳಲ್ಲೇ ಕೆಟ್ಟು ನಿಂತ ಈ ಸೇತುವೆಗೆ 4 ಕೋಟಿ ರೂ.ಗೂ ಹೆಚ್ಚು ವೆಚ್ಚ ಮಾಡಿ 3 ಬಾರಿ ದುರಸ್ತಿ ಮಾಡಲಾಯಿತು. ಸೇತುವೆ ಮೇಲೆ ಸಂಚಾರ ಸ್ಥಗಿತ ಮಾಡಿದಾಗ 2 ವರ್ಷ ಬಾರ್ಜ್ನವರು ಅಕ್ಷರಶಃ ಜನರನ್ನು ಸುಲಿಗೆ ಮಾಡಿದರು, ದಣಿಸಿದರು. ದುರಸ್ತಿಯಾದ ಮೇಲೆ ಆರಂಭವಾದ ಸುಂಕ ಇನ್ನೂ ನಿಂತಿಲ್ಲ. ಸರಕಾರ ನಿಗದಿಪಡಿಸಿದ ಮೊತ್ತಕ್ಕಿಂತ ಹೆಚ್ಚು ಪಡೆಯುತ್ತಾರೆ. ಬೇಸಿಗೆ ರಜಾ ದಿನದಲ್ಲಿ ಕೇರಳಕ್ಕೆ ಹೋಗುವ ಪ್ರಯಾಣಿಕರಿಂದ ಮತ್ತು ಉತ್ತರ ಭಾರತದ ವಾಹನಗಳಿಂದ ಹೆಚ್ಚು ಹಣ ಕೀಳುತ್ತಾರೆ. ಅವರಿಗೆ ಭಾಷೆ ಬರುವುದಿಲ್ಲ. ಸುಂಕದವರೊಂದಿಗೆ ಸುಖ-ದುಃಖ ಹೇಳಿ ಪ್ರಯೋಜನವೂ ಇಲ್ಲ. ಆರಂಭದಲ್ಲಿ ಸುಂಕವನ್ನು ಸ್ಥಳೀಯರು ಪ್ರತಿಭಟಿಸಿದ್ದರು. ಸ್ಥಳೀಯರಿಗೆ ರಿಯಾಯತಿ ಕೊಟ್ಟ ಮೇಲೆ ಸುಮ್ಮನಾದರು. ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ಕೇಳಿದರೆ ಲಿಖಿತ ದೂರು ಬಂದರೆ ವಿಚಾರಿಸುವುದಾಗಿ ಹೇಳುತ್ತಾರೆ. ಹೊನ್ನಾವರ ದಾಟಿ ಹೋಗುವ ಪ್ರಯಾಣಿಕರು ದೂರು ಕೊಡಲು ಕುಳಿತರೆ ದೂರದ ಮನೆ ಸೇರುವುದು ಹೇಗೆ?
ನಂತರ ಬಳ್ಳಾರಿಯ ಜನಾರ್ದನ ರೆಡ್ಡಿ ದರ್ಬಾರಿದ್ದ ಕಾಲದಲ್ಲಿ ಅದೇ ಊರಿನವರು ಗುತ್ತಿಗೆ ಪಡೆದಿದ್ದಾರೆ. ವಾರಕ್ಕೆ 3 ಲಕ್ಷ ರೂ.ಗಳನ್ನು ಇಲಾಖೆಗೆ ಕಟ್ಟುತ್ತಾರೆ. ನಿತ್ಯ ಅಂದಾಜು 3 ಲಕ್ಷ ರೂ.ಗಳಷ್ಟು ಅಧಿಕೃತವಾಗಿ ಸಂಗ್ರಹವಾಗುತ್ತದೆ. ಅನಧಿಕೃತ ಸಂಗ್ರಹದ ಹಣ ಗುತ್ತಿಗೆದಾರನಿಗೂ ಹೋಗುವುದಿಲ್ಲ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಈ ಸಾಲಿನ ಅಂತ್ಯದವರೆಗೆ ಗುತ್ತಿಗೆ ನೀಡಿದೆ. ನಂತರ ಈ ರಾಷ್ಟ್ರೀಯ ಹೆದ್ದಾರಿ ನಿಗಮಕ್ಕೆ ಹಸ್ತಾಂತರವಾಗಿ ವಿಸ್ತರಣೆಗೊಳ್ಳಲಿದೆ. ಆಗ ಬೇರೆ ರೀತಿಯ ಸುಂಕ ಆರಂಭವಾಗುತ್ತದೆ. ಒಂದು ಕೋಟಿ ರೂ.ಗೂ ಹೆಚ್ಚಿನ ವೆಚ್ಚದ ಸೇತುವೆಗೆ ಸುಂಕ ಸಂಗ್ರಹಿಸಲು ಸರಕಾರದ ಆದೇಶ ಇದೆ. ದುರಸ್ತಿಯಾದ ಸೇತುವೆಗೆ ತೆರಿಗೆ ಸಂಗ್ರಹಿಸುವುದು ಸರಿಯಲ್ಲ. ಕಳಪೆ ಕಾಮಗಾರಿಗೆ ಜನ ಏಕೆ ದಂಡ ತೆರಬೇಕು?. ಕೋಟಿ ರೂ.ಗಿಂತ ಹೆಚ್ಚು ವೆಚ್ಚವಾದ ಸೇತುವೆಗೆ ಸುಂಕ ಸಂಗ್ರಹಿಸಲು ಆದೇಶವಿದೆ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು. 10 ವರ್ಷ ಸಹಿಸಿಕೊಂಡು ಆಗಿದೆ. ಇನ್ನು 7 ತಿಂಗಳು ಸಹಿಸಿಕೊಳ್ಳಬೇಕು. ನಂತರ ಚತುಷ್ಪಥದ ಹೊಸ ದರ ಪಟ್ಟಿಯಂತೆ ಹಣ ತೆರಬೇಕು. ಎಷ್ಟಿದ್ದರೂ ಶೋಷಣೆಗೆ ಒಗ್ಗಿ ಹೋಗಿದ್ದೇವೆ ಬಿಡಿ, ನಾವು.

ರಾಜಕೀಯವಿಂದು ಉದ್ಯೋಗವೇ ಹೊರತು ಸೇವೆಯಲ್ಲ


ನಮ್ಮಿಂದ ಆರಿಸಿಹೋದ ಶಾಸಕರು ಹಾಗೂ ಸಂಸದರು ಇಂದು ಗಳಿಸುತ್ತಿರುವ ಸಂಬಳ-ವೈವಿಧ್ಯಮಯ ಭತ್ಯೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ ಇವರು ಮಾಡುತ್ತಿರುವುದು ನಿಶ್ಚಿತವಾಗಿಯೂ ಸೇವೆಯಲ್ಲ ಎನ್ನುವುದು ಜನಸಾಮಾನ್ಯರಿಗೆ ಮನದಟ್ಟಾಗುತ್ತದೆ. ನಮ್ಮ ದೇಶದಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಕನಿಷ್ಠ ವಯೋಮಿತಿಯನ್ನು ನಿಗದಿ ಪಡಿಸಲಾಗಿದ್ದರೂ, ಶೈಕ್ಷಣಿಕ, ಶಾರೀರಿಕ-ಮಾನಸಿಕ ಆರೋಗ್ಯ,ಅನುಭವ, ಸಚ್ಚಾರಿತ್ರ್ಯ ಇತ್ಯಾದಿ ಅರ್ಹತೆಗಳ ಬಗ್ಗೆ ಯಾವುದೇ ಮಾನದಂಡಗಳನ್ನು ನಿಗದಿಪಡಿಸಿಲ್ಲ. ಪ್ರಾಯಶಃ ಇದೇ ಕಾರಣದಿಂದಾಗಿ ಅನಕ್ಷರಸ್ಥ, ಅನಾರೋಗ್ಯಪೀಡಿತ, ಅನನುಭವಿ, ಅತ್ಯಾಚಾರ, ದರೋಡೆ, ಸುಲಿಗೆ, ವಂಚನೆ ಹಾಗೂ ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಮತ್ತು ಬಂದೀಖಾನೆಯಲ್ಲಿರುವ ವ್ಯಕ್ತಿಗಳೂ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ. ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿ ಜೈಲು ಸೇರಿ ಹೊರಬಂದ ನಮ್ಮ ರಾಜ್ಯದ ಹಿರಿಯ ನೇತಾರರೇ ಹೇಳುವಂತೆ, ಅವರೊಬ್ಬ ಆರೋಪಿಯೇ ಹೊರತು ಅಪರಾಧಿಯಲ್ಲ!.
ನಮ್ಮ ದೇಶದಲ್ಲಿನ ಯಾವುದೇ ಉದ್ಯೋಗದಲ್ಲಿರುವ ವ್ಯಕ್ತಿಯೊಬ್ಬ ತನ್ನ ಸಂಬಳ-ಭತ್ಯೆ ಇತ್ಯಾದಿಗಳನ್ನು ಹೆಚ್ಚಿಸಿಕೊಳ್ಳುವ ಅಧಿಕಾರವನ್ನು ಹೊಂದಿರುವುದಿಲ್ಲ. ಆದರೆ ನಮ್ಮ ಜನಪ್ರಿಯ ಜನನಾಯಕರು ಮಾತ್ರ ತಮಗೆ ಬೇಕೆನಿಸಿದಾಗ ಮತ್ತು ತಮಗೆ ಬೇಕೆನಿಸದಷ್ಟು ಪ್ರಮಾಣದಲ್ಲಿ, ತಮ್ಮ ಸಂಬಳ-ಭತ್ಯೆ ಮತ್ತು ಇತರ ಸವಲತ್ತುಗಳನ್ನು ಹೆಚ್ಚಿಸಿಕೊಳ್ಳುವ ಪರಮಾಧಿಕಾರವನ್ನು ಹೊಂದಿದ್ದಾರೆ. ವಿಶೇಷವೆಂದರೆ ಸದಾ ಕಚ್ಚಾಡುವ ಹಾಗೂ ಒಬ್ಬರು ಹೇಳಿದ್ದನ್ನು ಮತ್ತೊಬ್ಬರು ಅಲ್ಲಗಳೆವ ಆಡಳಿತ-ವಿರೋಧ ಪಕ್ಷಗಳ ಸದಸ್ಯರೆಲ್ಲರೂ, ತಮ್ಮ ಸಂಬಳ-ಭತ್ಯೆಗಳನ್ನು ಹೆಚ್ಚಿಸುವ ವಿಚಾರದಲ್ಲಿ ಒಗ್ಗಟ್ಟನ್ನು ಪ್ರದರ್ಶಿಸುತ್ತಾರೆ. ಇಂತಹ ಸಂದರ್ಭದಲ್ಲಿ ಪ್ರಸ್ತಾವನೆಯನ್ನು ಮಂಡಿಸುವ ಮಂತ್ರಿಯ ಭಾಷಣಕ್ಕೆ ಅಡ್ಡಿಪಡಿಸುವ, ಸದನದ ಬಾವಿಯನ್ನು ಪ್ರವೇಶಿಸಿ ಗದ್ದಲವೆಬ್ಬಿಸುವ, ತಮ್ಮ ಆಸನದ ಮೇಲೇರಿ ಘೋಷಣೆಗಳನ್ನು ಕೂಗುವ, ಧರಣಿ ಅಥವಾ ಸಭಾತ್ಯಾಗ ಮಾಡುವುದನ್ನು ಮರೆತು ಬಿಡುತ್ತಾರೆ. ಇಂತಹ ನಿರ್ಣಯಗಳನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸುತ್ತಾರೆ.
ಕೇವಲ ಎರಡು ವರ್ಷಗಳ ಹಿಂದೆ ಕರ್ನಾಟಕದ ಮುಖ್ಯಮಂತ್ರಿ, ಅನ್ಯ ಮಂತ್ರಿಗಳು, ಸಭಾಧ್ಯಕ್ಷರು, ವಿಪಕ್ಷ ನಾಯಕರು, ಸಚೇತಕರು ಮತ್ತು ಶಾಸಕರ ವೇತನ ಭತ್ಯೆ ಮತ್ತಿತರ ಸವಲತ್ತುಗಳನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಸದನ ಕೇವಲ ಎರಡೇ ನಿಮಿಷಗಳಲ್ಲಿ ಅಂಗೀಕರಿಸಿತ್ತು. ಬಹಳಷ್ಟು ವರ್ಷಗಳಿಂದ ಇದನ್ನು ಪರಿಷ್ಕರಣೆ ಮಾಡದೇ ಇದ್ದ ನೆಪವನ್ನು ಮುಂದೊಡ್ಡಿ, ಈ ಜನನಾಯಕರ ಸಂಬಳ-ಭತ್ಯೆ ಮತ್ತಿತರ ಸವಲತ್ತುಗಳನ್ನು ಎರಡರಿಂದ ಎರಡೂವರೆ ಪಟ್ಟು ಹೆಚ್ಚಿಸಲಾಗಿತ್ತು. ಇಷ್ಟು ಮಾತ್ರವಲ್ಲ, ಸದನದ ಸದಸ್ಯರು ಮುಂದಿನ ಚುನಾವಣೆಯಲ್ಲಿ ದುರಾದೃಷ್ಟವಶಾತ್ ಸೋತಲ್ಲಿ ಅಥವಾ ಕಾರಣಾಂತರಗಳಿಂದ ನಿವತ್ತರಾದಲ್ಲಿ ದೊರೆಯಲಿರುವ ಪಿಂಚಣಿಯ ಮೊತ್ತವನ್ನೂ ಹೆಚ್ಚಿಸಲಾಗಿತ್ತು. ಇದರಿಂದಾಗಿ ನಿವತ್ತ ಶಾಸಕರಿಗೆ ಕನಿಷ್ಠ 25 ರಿಂದ ಗರಿಷ್ಟ 35 ಸಾವಿರ ರೂ. ಮಾಸಿಕ ಪಿಂಚಣಿಯೊಂದಿಗೆ ವರ್ಷಕ್ಕೊಂದು ಬಾರಿ ಔಷಧೋಪಚಾರ ಮತ್ತು ಪ್ರವಾಸಕ್ಕಾಗಿ ತಲಾ 1 ಲಕ್ಷ ರೂ. ಗಳನ್ನು ನೀಡುವ ನಿರ್ಣಯವನ್ನು ಅಂಗೀ ಕರಿಸಲಾಗಿತ್ತು. ಇವೆಲ್ಲಕ್ಕೂ ಮಿಗಿಲಾಗಿ ಇತ್ತೀಚಿಗೆ ಬೆಳಗಾವಿಯಲ್ಲಿ ನಡೆದಿದ್ದ ಅಧಿವೇಶನದಲ್ಲಿ "ಅನರ್ಹ ಶಾಸಕ'ರಿಗೂ ಪಿಂಚಣಿಯನ್ನು ನೀಡುವ ಪ್ರಸ್ತಾವನೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು. ಆದರೆ, ಅನೇಕ ಹಗರಣ-ಪ್ರಕರಣಗಳ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಹೂಡುವ ಪ್ರಜ್ಞಾವಂತ ನಾಗರಿಕರ ಗಮನವನ್ನು ಸೆಳೆಯುವಲ್ಲಿ ಇದು ವಿಲವಾಗಿತ್ತು.
ಮೇಲೆ ನಮೂದಿಸಿದ ವಿಚಾರಗಳು ಕೇವಲ ಸ್ಯಾಂಪಲ್ ಮಾತ್ರ. ನಮ್ಮನ್ನಾಳುವವರಿಗೆ ದೊರೆಯುವ ಅನ್ಯ ಸವಲತ್ತುಗಳು ಯಾವುದೇ ಬಹುರಾಷ್ಟ್ರೀಯ ಸಂಸ್ಥೆಗಳ ಉನ್ನತ ಅಧಿಕಾರಿಗಳಿಗಿಂತ ಕಡಿಮೆಯೇನಿಲ್ಲ. ಹಾಗಾಗಿ, ರಾಜಕೀಯವಿಂದು ಉದ್ಯೋಗವಾಗಿದೆಯೇ ಹೊರತು ಸೇವೆಯಲ್ಲ ಎಂಬುದು ನಿಶ್ಚಿತ. ನೀವೇನಂತಿರಿ?.

40 ಹಳ್ಳಿಗಳಲ್ಲಿ ಮದುವೆ-ಮುಂಜಿ ನಿಷಿದ್ಧ


ಯುಗಾದಿ ಹಬ್ಬದ ದಿನದಿಂದ ಬರುವ ಅಕ್ಷತ್ತದಗಿ ಅಮಾವಾಸ್ಯೆವರೆಗೆ ಚಿಂಚೋಳಿ ತಾಲೂಕಿನ ಸುಲೇಪೇಟೆ ಪಟ್ಟಣ ಹಾಗೂ ಸುತ್ತಮುತ್ತಲಿನ 40 ಹಳ್ಳಿಗಳಲ್ಲಿ ಮದುವೆ, ಮುಂಜಿ, ಜಾವುಳ, ನಿಶ್ಚಿತಾರ್ಥ ಕಾರ್ಯಕ್ರಮಗಳಿಗೆ ನಿಷೇಧವಿದೆ.
ಪ್ರತಿ ವರ್ಷ ಯುಗಾದಿಯಿಂದ ಅಕ್ಷತ್ತದಗಿ ಹಬ್ಬದ ವರೆಗೂ ಯಾವುದೇ ಶುಭ ಕಾರ್ಯ ಮಾಡದೆ ಇರುವಂತ ಪರಂಪರೆಯನ್ನು ಇಲ್ಲಿ ಮುಂದುವರಿಸಿಕೊಂಡು ಬರಲಾಗುತ್ತಿದೆ. ಸುಲೇಪೇಟದ ವೀರಭದ್ರೇಶ್ವರ ಜಾತ್ರೆ ಯುಗಾದಿಯಿಂದ ಆರಂಭವಾಗಿ ಅಕ್ಷತ್ತದಗಿ ಅಮಾವಾಸ್ಯೆವರೆಗೂ ನಡೆಯುತ್ತದೆ. ಜಾತ್ರೆ ಹಿನ್ನೆಲೆಯಲ್ಲಿ ಜನರು ಯಾವುದೇ ಶುಭ ಕಾರ್ಯ ಮಾಡದೇ ಇರುವ ವಿಶಿಷ್ಟ ಪರಂಪರೆಯನ್ನು ಬಹು ಹಿಂದಿನಿಂದಲೂ ಮುಂದುವರಿಸಿಕೊಂಡು ಬಂದಿದ್ದಾರೆ. ಶುಭ ಕಾರ್ಯಕ್ಕಷ್ಟೇ ಸಂಪ್ರದಾಯ ಸಿಮೀತವಾಗಿಲ್ಲ. ರೈತರು ತಿಪ್ಪೆಗೊಬ್ಬರವನ್ನು ಸಹ ಈ ಸಮಯದಲ್ಲಿ ಹೊಲಕ್ಕೆ ಹಾಕುವುದಿಲ್ಲ. ಈ ತಿಂಗಳ ಅವಧಿಯಲ್ಲಿ ಶುಭ ಕಾರ್ಯ ಮಾಡಿದರೆ ಯಶಸ್ಸು ದೊರೆಯುವುದಿಲ್ಲ ಹಾಗೂ ವೀರಭದ್ರೇಶ್ವರ ದೇವರ ಅವಕೃಪೆಗೆ ಒಳಗಾಗಬೇಕಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಹೀಗಾಗಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ.
ಕೆಲವೊಮ್ಮೆ ನಂಬಿಕೆ ಧಿಕ್ಕರಿಸಿ ಆಗಿರುವ ಶುಭ ಕಾರ್ಯಗಳು ಯಶಸ್ಸು ಕಾಣದೇ ವಿಭಿನ್ನ ರೀತಿಯಲ್ಲಿ ಅಂತ್ಯ ಕಂಡಿವೆ. ಹೀಗಾಗಿ ಈ ಪದ್ಧತಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾ ಬರಲಾಗುತ್ತಿದೆ ಎನ್ನುತ್ತಾರೆ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಮಹಾರುದ್ರಪ್ಪ ದೇಸಾಯಿ.
ಅಷ್ಟೇ ಅಲ್ಲ, ಈ ತಿಂಗಳ ಅವಧಿಯಲ್ಲಿ ಯಾರೂ ಹೊಸ ಬಟ್ಟೆ ಹಾಕಿಕೊಳ್ಳುವುದಿಲ್ಲ. ಎಲ್ಲ ಧರ್ಮದವರು ಈ ನಿಯಮ ಪಾಲಿಸುತ್ತಿರುವುದು ಇನ್ನೊಂದು ವಿಶೇಷ. ಜಾತಿ, ಮತ, ಪಂಥ ಮೀರಿ ಶುಭ ಕಾರ್ಯ ಮಾಡದೆ ಇರುವ ಸಂಪ್ರದಾಯ ನಿಜಕ್ಕೂ ಅಪರೂಪ.
ವೀರಭದ್ರೇಶ್ವರ ಜಾತ್ರೆ ಯುಗಾದಿ ಹಬ್ಬದಿಂದ ಆರಂಭಗೊಂಡಿದೆ. ಪ್ರತಿದಿನ ಸಂಜೆ 7:00ಗಂಟೆಗೆ ಪಲ್ಲಕ್ಕಿ ಮೆರವಣಿಗೆ ನಡೆದು ನಂತರ ಉಚ್ಛಾಯ ನಡೆಯುತ್ತದೆ. ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸುತ್ತಾರೆ. ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅಂತ್ಯಕ್ರಿಯೆ ಆಗುವವರೆಗೂ ಈ ಎರಡೂ ಕಾರ್ಯಕ್ರಮಗಳು ನಡೆಯುವುದಿಲ್ಲ. ಬರುವ ಮೇ 8ರ ವರೆಗೆ ಶುಭ ಕಾರ್ಯಗಳಿಗೆ ಇಲ್ಲಿನ 40 ಹಳ್ಳಿಗಳಲ್ಲಿ ತಡೆಯಿದೆ. ತಿಂಗಳ ಕಾಲ ನಡೆಯುವ ಜಾತ್ರೆಯು ಅಕ್ಷತ್ತದಗಿ ಅಮಾವಾಸ್ಯೆ ಮುನ್ನಾ ದಿನ ನಡೆಯುವ ರಥೋತ್ಸವ ಹಾಗೂ ಪ್ರಭಾವಳಿಯೊಂದಿಗೆ ಮುಕ್ತಾಯಗೊಳ್ಳುತ್ತದೆ. ರಥೋತ್ಸವ ಹಾಗೂ ಪ್ರಭಾವಳಿಗೆ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ.
ಆಂಧ್ರದಿಂದ ಬಂದ ಮೂರ್ತಿಯಿದು:
ಸುಲೇಪೇಟದಲ್ಲಿ ಪ್ರತಿಷ್ಠಾಪಿಸಲಾಗಿರುವ ಆರು ಅಡಿ ಎತ್ತರದ ವೀರಭದ್ರೇಶ್ವರ ಮೂರ್ತಿ, ನೆರೆಯ ಆಂಧ್ರಪ್ರದೇಶದ ತಾಂಡೂರ ತಾಲೂಕಿನ ಕರ್ನಕೋಟೆಯಿಂದ ಬಂದಿದ್ದಾಗಿದೆ. ಕರ್ನಕೋಟೆಯಲ್ಲಿ ಮಾಟ ಮಂತ್ರಕ್ಕೆ ಅಡ್ಡಿಯಾಗುತ್ತಿದೆ ಎಂದು ತಿಳಿದು ಮೂರ್ತಿಯನ್ನು ಸುಲೇಪೇಟ ಸಮೀಪ ರಾಮತೀರ್ಥ ಹಳ್ಳದಲ್ಲಿ ತಂದು ಎಸೆಯಲಾಗಿತ್ತು. ಸುಲೇಪೇಟ ವ್ಯಾಪಾರಕ್ಕೆ ಪ್ರಸಿದ್ಧ. ಈ ಹಳ್ಳದ ಮೇಲೆ ವ್ಯಾಪಾರಿಗಳು ಹೋಗಿ ಬರುತ್ತಿರುವಾಗ ಮೂರ್ತಿ ಕಣ್ಣಿಗೆ ಬಿದ್ದಿತ್ತು. ಇದನ್ನು ಗ್ರಾಮದ ಮುಖಂಡರಲ್ಲಿ ತಿಳಿಸಿ ಮೂರ್ತಿಯನ್ನು ಗ್ರಾಮಕ್ಕೆ ತರಲು ನಿರ್ಧರಿಸಲಾಗಿತ್ತು. ಇದನ್ನರಿತ ರಾಮತೀರ್ಥ ಗ್ರಾಮದವರು ಅಡ್ಡಿಪಡಿಸಿದ್ದರು. ನಮ್ಮೂರ ಹಳ್ಳದ ಮೂರ್ತಿ ನಾವು ಒಯ್ಯುತ್ತೇವೆ ಎಂದಿದ್ದರು. ಇದಕ್ಕೆ ಸುಲೇಪೇಟ ಜನರು ಕ್ಯಾತೆ ತೆಗೆಯದೆ ಮರಳಿ ಬಂದಿದ್ದರು.
ರಾಮತೀರ್ಥದವರು ಎಷ್ಟೇ ಜನರು ಬಂದರೂ ಮೂರ್ತಿ ಎತ್ತಲಿಕ್ಕೆ ಸಾಧ್ಯವಾಗಿರಲಿಲ್ಲ. ನಂತರ ಸುಲೇಪೇಟೆ ಜನರಿಗೆ ಆಹ್ವಾನ ಬಂತು. ಹೀಗಾಗಿ ವೀರಭದ್ರ ಸುಲೇಪೇಟಗೆ ಬಂದ. ನಂತರ ಸುಲೇಪೇಟ ಅಲ್ಲದೆ ಸುತ್ತಮುತ್ತಲಿನ 40 ಹಳ್ಳಿಗಳಿಗೂ ವೀರಭದ್ರ ಅವತಾರದ ಪ್ರಭಾವ ಬೀರಿತು. ಸುಲೇಪೇಟ ವೀರಭದ್ರೇಶ್ವರನ ಅವತಾರವೇ ವೈಶಿಷ್ಟ್ಯತೆಯಿಂದ ಕೂಡಿದೆ. ಜಿಲ್ಲೆಯ ಚಿನ್ಮಯಗಿರಿ, ವಾಗ್ದರ್ಗಿ, ಕೋರವಾರ ಅಣವೀರಭದ್ರೇಶ್ವರ ಅಗ್ನಿ ಹಾಯುವುದಕ್ಕೆ ಖ್ಯಾತಿ ಪಡೆದಿವೆ. ಬೀದರ ಜಿಲ್ಲೆಯ ಹುಮನಾಬಾದ ವೀರಭದ್ರೇಶ್ವರ ಮೆರವಣಿಗೆ ಹಾಗೂ ಶಲ್ಯ ಹೊದಿಸುವುದು ಮುಖ್ಯವಾಗಿದ್ದರೆ ಸುಲೇಪೇಟದ ವೀರಭದ್ರೇಶ್ವರ ಪ್ರಭಾವಳಿಯು ವೈಶಿಷ್ಟ್ಯ ಹೊಂದಿದೆ.
ಪ್ರಭಾವಳಿ ಎಂದರೆ ಸುಮಾರು 40ರಿಂದ 50 ಫೀಟ್ ಉದ್ದದ ದೊಡ್ಡದಾದ ಎರಡು ಕಟ್ಟಿಗೆ ತುಂಡುಗಳ ನಡುವೆ ವೀರಭದ್ರೇಶ್ವರ ಬೃಹದಾಕಾರದ ಕಂಚಿನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ನಂತರ ಸುಮಾರು 400ರಿಂದ 500ಯುವಕರು ಅದನ್ನು ಹೊತ್ತುಕೊಂಡು ಆ ಕಡೆ, ಈ ಕಡೆ ಸ್ಪರ್ಧೆ ಎನ್ನುವಂತೆ ವಾಲಿಸುತ್ತಾ ಬರುತ್ತಾರೆ. ಹಳೆಕೇರಿ ಹಾಗೂ ಹೊಸಕೇರಿ ಎಂಬ ಯುವಕರ ತಂಡ ಶಕ್ತಿಮೀರಿ ಯುದ್ಧ ಎನ್ನುವ ರೀತಿಯಲ್ಲಿ ಸುಲೇಪೇಟದ ಬೀದಿಯುದ್ದಕ್ಕೂ ಪ್ರಭಾವಳಿ ತೆಗೆದುಕೊಂಡು ಬರುವ ದೃಶ್ಯ ರೋಮಾಂಚನಗೊಳಿಸುತ್ತದೆ. ರಥದ ಸ್ಥಳಕ್ಕೆ ಬಂದು ಅಗ್ನಿ ಹಾಯ್ದು ವಾಪಸ್ಸು ದೇವಸ್ಥಾನಕ್ಕೆ ತೆರಳಲಾಗುತ್ತದೆ.