40 ಹಳ್ಳಿಗಳಲ್ಲಿ ಮದುವೆ-ಮುಂಜಿ ನಿಷಿದ್ಧ


ಯುಗಾದಿ ಹಬ್ಬದ ದಿನದಿಂದ ಬರುವ ಅಕ್ಷತ್ತದಗಿ ಅಮಾವಾಸ್ಯೆವರೆಗೆ ಚಿಂಚೋಳಿ ತಾಲೂಕಿನ ಸುಲೇಪೇಟೆ ಪಟ್ಟಣ ಹಾಗೂ ಸುತ್ತಮುತ್ತಲಿನ 40 ಹಳ್ಳಿಗಳಲ್ಲಿ ಮದುವೆ, ಮುಂಜಿ, ಜಾವುಳ, ನಿಶ್ಚಿತಾರ್ಥ ಕಾರ್ಯಕ್ರಮಗಳಿಗೆ ನಿಷೇಧವಿದೆ.
ಪ್ರತಿ ವರ್ಷ ಯುಗಾದಿಯಿಂದ ಅಕ್ಷತ್ತದಗಿ ಹಬ್ಬದ ವರೆಗೂ ಯಾವುದೇ ಶುಭ ಕಾರ್ಯ ಮಾಡದೆ ಇರುವಂತ ಪರಂಪರೆಯನ್ನು ಇಲ್ಲಿ ಮುಂದುವರಿಸಿಕೊಂಡು ಬರಲಾಗುತ್ತಿದೆ. ಸುಲೇಪೇಟದ ವೀರಭದ್ರೇಶ್ವರ ಜಾತ್ರೆ ಯುಗಾದಿಯಿಂದ ಆರಂಭವಾಗಿ ಅಕ್ಷತ್ತದಗಿ ಅಮಾವಾಸ್ಯೆವರೆಗೂ ನಡೆಯುತ್ತದೆ. ಜಾತ್ರೆ ಹಿನ್ನೆಲೆಯಲ್ಲಿ ಜನರು ಯಾವುದೇ ಶುಭ ಕಾರ್ಯ ಮಾಡದೇ ಇರುವ ವಿಶಿಷ್ಟ ಪರಂಪರೆಯನ್ನು ಬಹು ಹಿಂದಿನಿಂದಲೂ ಮುಂದುವರಿಸಿಕೊಂಡು ಬಂದಿದ್ದಾರೆ. ಶುಭ ಕಾರ್ಯಕ್ಕಷ್ಟೇ ಸಂಪ್ರದಾಯ ಸಿಮೀತವಾಗಿಲ್ಲ. ರೈತರು ತಿಪ್ಪೆಗೊಬ್ಬರವನ್ನು ಸಹ ಈ ಸಮಯದಲ್ಲಿ ಹೊಲಕ್ಕೆ ಹಾಕುವುದಿಲ್ಲ. ಈ ತಿಂಗಳ ಅವಧಿಯಲ್ಲಿ ಶುಭ ಕಾರ್ಯ ಮಾಡಿದರೆ ಯಶಸ್ಸು ದೊರೆಯುವುದಿಲ್ಲ ಹಾಗೂ ವೀರಭದ್ರೇಶ್ವರ ದೇವರ ಅವಕೃಪೆಗೆ ಒಳಗಾಗಬೇಕಾಗುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಹೀಗಾಗಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ.
ಕೆಲವೊಮ್ಮೆ ನಂಬಿಕೆ ಧಿಕ್ಕರಿಸಿ ಆಗಿರುವ ಶುಭ ಕಾರ್ಯಗಳು ಯಶಸ್ಸು ಕಾಣದೇ ವಿಭಿನ್ನ ರೀತಿಯಲ್ಲಿ ಅಂತ್ಯ ಕಂಡಿವೆ. ಹೀಗಾಗಿ ಈ ಪದ್ಧತಿಯನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾ ಬರಲಾಗುತ್ತಿದೆ ಎನ್ನುತ್ತಾರೆ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಮಹಾರುದ್ರಪ್ಪ ದೇಸಾಯಿ.
ಅಷ್ಟೇ ಅಲ್ಲ, ಈ ತಿಂಗಳ ಅವಧಿಯಲ್ಲಿ ಯಾರೂ ಹೊಸ ಬಟ್ಟೆ ಹಾಕಿಕೊಳ್ಳುವುದಿಲ್ಲ. ಎಲ್ಲ ಧರ್ಮದವರು ಈ ನಿಯಮ ಪಾಲಿಸುತ್ತಿರುವುದು ಇನ್ನೊಂದು ವಿಶೇಷ. ಜಾತಿ, ಮತ, ಪಂಥ ಮೀರಿ ಶುಭ ಕಾರ್ಯ ಮಾಡದೆ ಇರುವ ಸಂಪ್ರದಾಯ ನಿಜಕ್ಕೂ ಅಪರೂಪ.
ವೀರಭದ್ರೇಶ್ವರ ಜಾತ್ರೆ ಯುಗಾದಿ ಹಬ್ಬದಿಂದ ಆರಂಭಗೊಂಡಿದೆ. ಪ್ರತಿದಿನ ಸಂಜೆ 7:00ಗಂಟೆಗೆ ಪಲ್ಲಕ್ಕಿ ಮೆರವಣಿಗೆ ನಡೆದು ನಂತರ ಉಚ್ಛಾಯ ನಡೆಯುತ್ತದೆ. ಪ್ರತಿನಿತ್ಯ ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸುತ್ತಾರೆ. ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅಂತ್ಯಕ್ರಿಯೆ ಆಗುವವರೆಗೂ ಈ ಎರಡೂ ಕಾರ್ಯಕ್ರಮಗಳು ನಡೆಯುವುದಿಲ್ಲ. ಬರುವ ಮೇ 8ರ ವರೆಗೆ ಶುಭ ಕಾರ್ಯಗಳಿಗೆ ಇಲ್ಲಿನ 40 ಹಳ್ಳಿಗಳಲ್ಲಿ ತಡೆಯಿದೆ. ತಿಂಗಳ ಕಾಲ ನಡೆಯುವ ಜಾತ್ರೆಯು ಅಕ್ಷತ್ತದಗಿ ಅಮಾವಾಸ್ಯೆ ಮುನ್ನಾ ದಿನ ನಡೆಯುವ ರಥೋತ್ಸವ ಹಾಗೂ ಪ್ರಭಾವಳಿಯೊಂದಿಗೆ ಮುಕ್ತಾಯಗೊಳ್ಳುತ್ತದೆ. ರಥೋತ್ಸವ ಹಾಗೂ ಪ್ರಭಾವಳಿಗೆ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ.
ಆಂಧ್ರದಿಂದ ಬಂದ ಮೂರ್ತಿಯಿದು:
ಸುಲೇಪೇಟದಲ್ಲಿ ಪ್ರತಿಷ್ಠಾಪಿಸಲಾಗಿರುವ ಆರು ಅಡಿ ಎತ್ತರದ ವೀರಭದ್ರೇಶ್ವರ ಮೂರ್ತಿ, ನೆರೆಯ ಆಂಧ್ರಪ್ರದೇಶದ ತಾಂಡೂರ ತಾಲೂಕಿನ ಕರ್ನಕೋಟೆಯಿಂದ ಬಂದಿದ್ದಾಗಿದೆ. ಕರ್ನಕೋಟೆಯಲ್ಲಿ ಮಾಟ ಮಂತ್ರಕ್ಕೆ ಅಡ್ಡಿಯಾಗುತ್ತಿದೆ ಎಂದು ತಿಳಿದು ಮೂರ್ತಿಯನ್ನು ಸುಲೇಪೇಟ ಸಮೀಪ ರಾಮತೀರ್ಥ ಹಳ್ಳದಲ್ಲಿ ತಂದು ಎಸೆಯಲಾಗಿತ್ತು. ಸುಲೇಪೇಟ ವ್ಯಾಪಾರಕ್ಕೆ ಪ್ರಸಿದ್ಧ. ಈ ಹಳ್ಳದ ಮೇಲೆ ವ್ಯಾಪಾರಿಗಳು ಹೋಗಿ ಬರುತ್ತಿರುವಾಗ ಮೂರ್ತಿ ಕಣ್ಣಿಗೆ ಬಿದ್ದಿತ್ತು. ಇದನ್ನು ಗ್ರಾಮದ ಮುಖಂಡರಲ್ಲಿ ತಿಳಿಸಿ ಮೂರ್ತಿಯನ್ನು ಗ್ರಾಮಕ್ಕೆ ತರಲು ನಿರ್ಧರಿಸಲಾಗಿತ್ತು. ಇದನ್ನರಿತ ರಾಮತೀರ್ಥ ಗ್ರಾಮದವರು ಅಡ್ಡಿಪಡಿಸಿದ್ದರು. ನಮ್ಮೂರ ಹಳ್ಳದ ಮೂರ್ತಿ ನಾವು ಒಯ್ಯುತ್ತೇವೆ ಎಂದಿದ್ದರು. ಇದಕ್ಕೆ ಸುಲೇಪೇಟ ಜನರು ಕ್ಯಾತೆ ತೆಗೆಯದೆ ಮರಳಿ ಬಂದಿದ್ದರು.
ರಾಮತೀರ್ಥದವರು ಎಷ್ಟೇ ಜನರು ಬಂದರೂ ಮೂರ್ತಿ ಎತ್ತಲಿಕ್ಕೆ ಸಾಧ್ಯವಾಗಿರಲಿಲ್ಲ. ನಂತರ ಸುಲೇಪೇಟೆ ಜನರಿಗೆ ಆಹ್ವಾನ ಬಂತು. ಹೀಗಾಗಿ ವೀರಭದ್ರ ಸುಲೇಪೇಟಗೆ ಬಂದ. ನಂತರ ಸುಲೇಪೇಟ ಅಲ್ಲದೆ ಸುತ್ತಮುತ್ತಲಿನ 40 ಹಳ್ಳಿಗಳಿಗೂ ವೀರಭದ್ರ ಅವತಾರದ ಪ್ರಭಾವ ಬೀರಿತು. ಸುಲೇಪೇಟ ವೀರಭದ್ರೇಶ್ವರನ ಅವತಾರವೇ ವೈಶಿಷ್ಟ್ಯತೆಯಿಂದ ಕೂಡಿದೆ. ಜಿಲ್ಲೆಯ ಚಿನ್ಮಯಗಿರಿ, ವಾಗ್ದರ್ಗಿ, ಕೋರವಾರ ಅಣವೀರಭದ್ರೇಶ್ವರ ಅಗ್ನಿ ಹಾಯುವುದಕ್ಕೆ ಖ್ಯಾತಿ ಪಡೆದಿವೆ. ಬೀದರ ಜಿಲ್ಲೆಯ ಹುಮನಾಬಾದ ವೀರಭದ್ರೇಶ್ವರ ಮೆರವಣಿಗೆ ಹಾಗೂ ಶಲ್ಯ ಹೊದಿಸುವುದು ಮುಖ್ಯವಾಗಿದ್ದರೆ ಸುಲೇಪೇಟದ ವೀರಭದ್ರೇಶ್ವರ ಪ್ರಭಾವಳಿಯು ವೈಶಿಷ್ಟ್ಯ ಹೊಂದಿದೆ.
ಪ್ರಭಾವಳಿ ಎಂದರೆ ಸುಮಾರು 40ರಿಂದ 50 ಫೀಟ್ ಉದ್ದದ ದೊಡ್ಡದಾದ ಎರಡು ಕಟ್ಟಿಗೆ ತುಂಡುಗಳ ನಡುವೆ ವೀರಭದ್ರೇಶ್ವರ ಬೃಹದಾಕಾರದ ಕಂಚಿನ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ನಂತರ ಸುಮಾರು 400ರಿಂದ 500ಯುವಕರು ಅದನ್ನು ಹೊತ್ತುಕೊಂಡು ಆ ಕಡೆ, ಈ ಕಡೆ ಸ್ಪರ್ಧೆ ಎನ್ನುವಂತೆ ವಾಲಿಸುತ್ತಾ ಬರುತ್ತಾರೆ. ಹಳೆಕೇರಿ ಹಾಗೂ ಹೊಸಕೇರಿ ಎಂಬ ಯುವಕರ ತಂಡ ಶಕ್ತಿಮೀರಿ ಯುದ್ಧ ಎನ್ನುವ ರೀತಿಯಲ್ಲಿ ಸುಲೇಪೇಟದ ಬೀದಿಯುದ್ದಕ್ಕೂ ಪ್ರಭಾವಳಿ ತೆಗೆದುಕೊಂಡು ಬರುವ ದೃಶ್ಯ ರೋಮಾಂಚನಗೊಳಿಸುತ್ತದೆ. ರಥದ ಸ್ಥಳಕ್ಕೆ ಬಂದು ಅಗ್ನಿ ಹಾಯ್ದು ವಾಪಸ್ಸು ದೇವಸ್ಥಾನಕ್ಕೆ ತೆರಳಲಾಗುತ್ತದೆ.