ಕಣ್ಮರೆಯಾಗುತ್ತಿವೆ ಮಳೆಗಾಲದ ತಿಂಡಿ ತಿನಸುಗಳು


ಹಿಂದೆಲ್ಲಾ ಮಳೆಗಾಲ ಬಂತೆಂದರೆ ಸಾಕು. ಗ್ರಾಮೀಣ ಭಾಗದಲ್ಲಿ ಪ್ರತಿ ಮನೆಯಲ್ಲೂ ಮಳೆಗಾಲಕ್ಕೆಂದು ತಯಾರಿಸಿದ ತಿಂಡಿ, ತಿನಿಸುಗಳನ್ನು ಮನೆಯವರೆಲ್ಲರೂ ಸೇರಿ ತಿನ್ನುತ್ತಿದ್ದರು. ಹೊರಗಡೆ ಧಾರಾಕಾರ ಮಳೆ ಸುರಿದು ಚಳಿಯ ಅನುಭವವಾಗುತ್ತಿದ್ದರೆ ಎಣ್ಣೆಯಲ್ಲೋ ಅಥವಾ ಬೆಂಕಿಯಲೋ ಕರಿದ ಹಪ್ಪಳಗಳು ಬೆಚ್ಚಗಿನ ಅನುಭವ ನೀಡುತ್ತಿದ್ದವು. ಮಳೆಗಾಲದಲ್ಲಿ ಕೆಲಸವೂ ಕಡಿಮೆ, ಹೊರಗಡೆ ಹೋಗುವುದಕ್ಕೂ ಆಗದೆ ಮನೆಯಲ್ಲೇ ಕುಳಿತ ಮನೆ ಮಂದಿಗೆಲ್ಲ ಇಂತಹ ತಿಂಡಿ ತಿನಿಸುಗಳು ಮುದ ನೀಡುತ್ತಿದ್ದವು. ಆದರೆ ಇಂದು ಇಂತಹ ತಿಂಡಿ ತಿನಸುಗಳು ಕಾಣಲು ಅಪರೂಪವಾಗುತ್ತಿವೆ.
ಹಿಂದೆ ಹಳ್ಳಿಗರಿಗೆ ಏಪ್ರಿಲ್-ಮೇ ತಿಂಗಳಲ್ಲಿ ಇಂತಹ ತಿಂಡಿ ತಿನಿಸುಗಳನ್ನು ತಯಾರಿಸುವುದೇ ಒಂದು ಕೆಲಸ. ಮರದಲ್ಲಿ ಹಲಸು ಬಲಿಯುತ್ತಿದ್ದಂತೆ ಅದನ್ನು ಕೊಯ್ದು ಹಪ್ಪಳ ಹಾಕುತ್ತಿದ್ದರು. ಜೊತೆಗೆ ಗೆಣಸಿನ ಹಪ್ಪಳ, ಅಲೂಗಡ್ಡೆ ಹಪ್ಪಳಗಳನ್ನೂ ಹಾಕುತ್ತಿದ್ದರು.  ಹಲಸಿನಿಂದ ಹಪ್ಪಳ ಮಾತ್ರವಲ್ಲದೆ ಪದಾರ್ಥಕ್ಕೆ ಉಪಯೋಗವಾಗುವ ಅನೇಕ ತಿನಿಸುಗಳನ್ನು ತಯಾರಿಸುತ್ತಿದ್ದರು. ಆದರೆ, ಇಂದು ಹಪ್ಪಳ ಮಾಡುವುದು ಬಿಡಿ, ಹಲಸು ಹಣ್ಣಾದರೂ ಕೊಯ್ಯುವವರು ಇಲ್ಲದೆ ಕೊಳೆತು ಹೋಗುತ್ತಿದೆ.
ಹಿತ್ತಲಲ್ಲಿ ಹೇರಳವಾಗಿ ಬೀಳುತ್ತಿದ್ದ ಮಾವಿನ ಹಣ್ಣಿನಿಂದ ಮಾಂಬಳ ತಯಾರಿಸಿ ಮಳೆಗಾಲಕ್ಕೆ ಇಡುತ್ತಿದ್ದರು. ಇದನ್ನು ಕೇವಲ ತಿನ್ನುವುದಕ್ಕೆ ಮಾತ್ರವಲ್ಲದೆ ಪದಾರ್ಥಕ್ಕೂ ಉಪಯೋಗಿಸುತ್ತಿದ್ದರು. ಇನ್ನು ಮಳೆಗಾಲಕ್ಕೆ ಮಾವಿನ ಹಣ್ಣು ಮತ್ತು ಕಾಯಿಯಿಂದ ಅನೇಕ ತಿನಿಸುಗಳನ್ನು ತಯಾರಿಸಿ ತೆಗೆದಿಡುತ್ತಿದ್ದರು. ಹಣ್ಣಾದ ಮಾವನ್ನು ಉಪ್ಪಿನ ನೀರಿನಲ್ಲಿ ಹಾಕಿ ಊಟಕ್ಕೆ ಉಪಯೋಗಿಸುತ್ತಿದ್ದರು. ಮಾವಿನ ಮಿಡಿಗಳನ್ನು ಮಳೆಗಾಲದಲ್ಲಿ ಉಪ್ಪಿನಕಾಯಿಗೆ ಉಪಯೋಗಿಸುತ್ತಿದ್ದರು.
ತಮ್ಮಲ್ಲಿ ಬೆಳೆಯುತ್ತಿದ್ದ ಮೆಣಸನ್ನು ಕೊಯ್ದು ಎರಡು ಭಾಗಗಳನ್ನಾಗಿ ಮಾಡಿ, ಉಪ್ಪು ಸೇರಿಸಿ ಬೇಯಿಸಿ, ಒಣಗಿಸಿ ಮಳೆಗಾಲಕ್ಕೆ ತೆಗೆದಿಡುತ್ತಿದ್ದರು. ಇದನ್ನು ಮಜ್ಜಿಗೆ ಮೆಣಸು ಎಂದು ಕರೆಯುತ್ತಾರೆ. ಮಳೆಗಾಲದಲ್ಲಿ ಊಟದ ಸಮಯದಲ್ಲಿ ಇದನ್ನು ಎಣ್ಣೆಯಲ್ಲಿ ಕರಿದು ಅಥವಾ ಬೆಂಕಿಯಲ್ಲಿ ಸುಟ್ಟು ಊಟಕ್ಕೆ ಉಪಯೋಗಿಸುತ್ತಿದ್ದರು. ಹಣ್ಣಾದ ಹಲಸಿನ ಬೀಜಗಳನ್ನು ಬೇಯಿಸಿ, ಬಿಸಿಲಿನಲ್ಲಿ ಒಣಗಿಸಿ ಮಳೆಗಾಲದಲ್ಲಿ ಅದನ್ನು ಸುಟ್ಟು ತಿನ್ನುತ್ತಿದ್ದರು. ಗೇರು ಬೀಜಗಳನ್ನು ಒಣಗಿಸಿಟ್ಟುಕೊಂಡು ಮಳೆಗಾಲದಲ್ಲಿ ಬೇಯಿಸಿ ತಿನ್ನುತ್ತಿದ್ದರು.
ಆದರೆ ಇಂದು ಇಂತಹ ತಿಂಡಿ ತಿನಿಸುಗಳು ಕಾಣಸಿಗುವುದೇ ಅಪರೂಪವಾಗುತ್ತಿವೆ. ಅಲ್ಲೋ ಇಲ್ಲೋ ಕೆಲವೊಂದು ಕಡೆಗಳಲ್ಲಿ ತಿನಿಸುಗಳನ್ನು ತಯಾರಿಸುವುದು ಕಾಣಸಿಗುತ್ತಿವೆ. ಪ್ರಸ್ತುತ ದಿನಗಳಲ್ಲಿ ಜನರಿಗೆ ಸಮಯವೂ ಸಿಗುತ್ತಿಲ್ಲ. ಜೊತೆಗೆ ತಿಂಡಿ ತಿನಿಸುಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ದೊರೆಯುವುದರಿಂದ ಜನ ಮಾರುಕಟ್ಟೆಯಲ್ಲೇ ಖರೀದಿಸುತ್ತಾರೆ. ಹಿಂದೆ ಮಳೆಗಾಲದಲ್ಲಿ ಮನೆಯಲ್ಲಿ ಕುಳಿತಿರುತ್ತಿದ್ದ ಜನ ಇಂದು ಮನೆಯಲ್ಲಿ ಕೂರುತ್ತಿಲ್ಲ. ಜೊತೆಗೆ ಮನೆಗಳ ಸಂಖ್ಯೆಗಳು ಹೆಚ್ಚಾಗಿ ಮನೆಮಂದಿಯ ಸಂಖ್ಯೆ ಇಳಿದು, ತಿಂಡಿ ತಿನಿಸುಗಳನ್ನು ತಯಾರಿಸಲು ಮನೆಯಲ್ಲಿ ಜನರೇ ಇಲ್ಲದಂತಾಗಿದೆ. ಕಾಕತಾಳೀಯವಾಗಿ ಇಂದು ಮಳೆಯ ಪ್ರಮಾಣವೂ ಗಣನೀಯ ಇಳಿಕೆಯಾಗಿದೆ. ಹಿಂದೆ ಸುರಿಯುತ್ತಿದ್ದ ಧಾರಾಕಾರ ಈಗ ಕಾಣುವುದು ಅಪರೂಪ.