ಡಿಎಡ್ ಕಾಲೇಜಿಗಳಿಗೆ ಈಗ ವಿದ್ಯಾರ್ಥಿಗಳೇ ಇಲ್ಲ


ಟಿಸಿಎಚ್ (ಡಿಎಡ್) ಮಾಡಿದರೆ ಸರ್ಕಾರಿ ಉದ್ಯೋಗ ಖಾತ್ರಿ ಎಂಬ ಕಾಲವೊಂದಿತ್ತು. 8-10 ವರ್ಷಗಳ ಹಿಂದೆ ಟಿಸಿಎಚ್ಗೆ ಪ್ರವೇಶ ಪಡೆಯುವುದೆಂದರೆ ಹರಸಾಹಸವಾಗಿತ್ತು. ಕಾಲೇಜಿನಲ್ಲಿ ಪ್ರವೇಶಕ್ಕಾಗಿ ಡೊನೇಶನ್ ಜೊತೆಗೆ ರಾಜಕಾರಣಿಗಳು, ಸಂಘ-ಸಂಸ್ಥೆಗಳ ಮುಖ್ಯಸ್ಥರು ಅಥವಾ ಸ್ವಾಮೀಜಿಗಳ ವಶೀಲಿ ಬೇಕಿತ್ತು. ಟಿಸಿಎಚ್ ಪ್ರವೇಶ ಸಿಕ್ಕರೆ ಮುಗಿಯಿತು, ಕೋರ್ಸ್ ಮುಗಿಯುವಷ್ಟರಲ್ಲಿಯೇ ಕರೆದು ಸರ್ಕಾರಿ ನೌಕರಿ ಕೊಡಲಾಗುತ್ತದೆ ಎಂಬ ಸ್ಥಿತಿಯಿತ್ತು. ದಶಕದ ಹಿಂದೆ ಡಿಎಡ್ ಕಾಲೇಜು ತೆರೆಯಲು ಅನುಮತಿ ಸಿಕ್ಕರೆ ಜಾಕ್ಪಾಟ್ ಹೊಡೆದಂತೆ ಎಂದೇ ಪರಿಗಣಿಸಲಾಗುತ್ತಿತ್ತು. ಆದರೆ, ಈಗ ಅವೇ ಶಿಕ್ಷಣ ಸಂಸ್ಥೆಗಳು ಕಾಲೇಜು ಮುಚ್ಚಿದರೆ ಸಾಕು ಎನ್ನುತ್ತಿವೆ.
ಈಗ ಡಿಎಡ್ನತ್ತ ನೋಡುವವರೇ ಇಲ್ಲ. ವಿದ್ಯಾರ್ಥಿಗಳ ಕೊರತೆಯಿಂದಾಗಿ ಹಲವಾರು ಕಾಲೇಜುಗಳು ಮುಚ್ಚುವ ಸ್ಥಿತಿಗೆ ಬಂದರೆ, ಕೆಲವು ಕಾಲೇಜುಗಳನ್ನು ಬೇಡಿಕೆ ಇದ್ದೆಡೆಗೆ ಸ್ಥಳಾಂತರ ಮಾಡಲಾಗುತ್ತಿದೆ. ಜೂನ್ನಿಂದ ಶೈಕ್ಷಣಿಕ ವರ್ಷ ಆರಂಭಗೊಳ್ಳಲಿದ್ದು, ಈ ವರ್ಷ ಸ್ಥಿತಿ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ರಾಜ್ಯದಲ್ಲಿರುವ ಸುಮಾರು 1,000 ಡಿಎಡ್ ಕಾಲೇಜುಗಳಿಂದ ಡಿಎಡ್ ಪದವಿ ಪಡೆದ ಎರಡು ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಸರ್ಕಾರಿ ಶಿಕ್ಷಕ ಹುದ್ದೆಗಾಗಿ ಕಾಯುತ್ತಿದ್ದಾರೆ.
ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಹೆಚ್ಚು ಆದ್ಯತೆ ನೀಡಿತ್ತು. ಇದರಿಂದಾಗಿ ಡಿಎಡ್ ಶಿಕ್ಷಣಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿತ್ತು. ಅಂದಿನ ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನೇಮಿಸಿದ ಸಮಿತಿ ಧಾರಾಳವಾಗಿ ಡಿಎಡ್ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಿತು. ಇದರಿಂದಾಗಿ ಡಿಎಡ್ ಕಾಲೇಜುಗಳು ನಾಯಿಕೊಡೆಗಳಂತೆ ತಲೆ ಎತ್ತಿದವು. 1ರಿಂದ 2 ಲಕ್ಷ ರೂ.ವರೆಗೂ ಡೊನೇಶನ್ ನೀಡಿ ಪ್ರವೇಶ ಪಡೆದವರು ಹಲವರು. ಡೊನೇಷನ್ ಕೊಟ್ಟವರಿಗಾಗಿ ಆದ್ಯತೆ ನೀಡುವ ಉದ್ದೇಶದಿಂದ ಕೆಲವು ಕಾಲೇಜುಗಳಲ್ಲಿ ಪ್ರಾಕ್ಟಿಕಲ್ ವಿಷಯಗಳಲ್ಲಿ ಹೆಚ್ಚಿನ ಅಂಕ ನೀಡಲಾಗುತ್ತಿದೆ ಎಂಬ ಆರೋಪ ಕೂಡ ಹಲವು ಬಾರಿ ಕೇಳಿ ಬಂದಿತ್ತು.
ಡಿಎಡ್ ಮುಗಿಸಿ ನಾಲ್ಕಾರು ವರ್ಷ ಹೊಟ್ಟೆಪಾಡಿಗಾಗಿ ಬೇರೆ ಬೇರೆ ಉದ್ಯೋಗ ಅವಲಂಬಿಸಿದ ಅನೇಕರು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾದದ್ದೂ ಉಂಟು. ಆದರೆ ಈಗ ಸ್ಥಿತಿ ಸಂಪೂರ್ಣ ವಿರುದ್ಧವಾಗಿದೆ. ಡಿಎಡ್ ಕಾಲೇಜುಗಳು ಬಿಕೋ ಎನ್ನುತ್ತಿವೆ. ಕಳೆದ ನಾಲ್ಕು ವರ್ಷಗಳಿಂದ ಸರ್ಕಾರ ನೇಮಕ ಮಾಡಿಕೊಳ್ಳದಿರುವುದು ಡಿಎಡ್ ಪೂರ್ಣಗೊಳಿಸಿದ ಸಾವಿರಾರು ಅಭ್ಯರ್ಥಿಗಳಿಗೆ ಆತಂಕ ಮೂಡಿಸಿದೆ.
ಶಿಕ್ಷಕರ ಟ್ರಾನ್ಸಫರ್ ಪಾಲಿಸಿ ಕೂಡ ವಿದ್ಯಾರ್ಥಿಗಳು ಕಲಿಯಲು ಹಿಂದೇಟು ಹಾಕುವುದಕ್ಕೆ ಕಾರಣವಾಗಿದೆ. ಸರ್ಕಾರ ಹೊಸ ಶಾಲೆಗಳನ್ನು ತೆರೆಯುವುದು ದೂರದ ಮಾತು, ಇದ್ದ ಶಾಲೆಗಳನ್ನು ಮುಚ್ಚಲು ಮುಂದಾಗಿದೆ. ಇದೇ ಸಂದರ್ಭದಲ್ಲಿ ಖಾಸಗಿ ಶಾಲೆಗಳು ಹೆಚ್ಚುತ್ತಿವೆ. ಪಾಲಕರಿಗೆ ಕಾನ್ವೆಂಟ್ ಶಾಲೆಗಳ ಬಗ್ಗೆ ಆಸಕ್ತಿ ಹೆಚ್ಚುತ್ತಿದೆ. ಮಕ್ಕಳ ಶಾಲಾ ಶಿಕ್ಷಣದಿಂದ ಖರ್ಚು ಹೆಚ್ಚಿದರೂ ಖಾಸಗಿ ಶಾಲೆಗಳಲ್ಲಿಯೇ ಕಲಿಯಲಿ ಎಂಬುದು ಪಾಲಕರ ಮನೋಭಾವವಾಗಿದೆ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಹಾಗಾಗಿ ಸರ್ಕಾರ ಶಾಲೆಗಳನ್ನು ವಿಲೀನಗೊಳಿಸಲು ನಿರ್ಧರಿಸಿತ್ತು. ಕೇವಲ ಡಿಎಡ್ ಅಷ್ಟೇ ಅಲ್ಲ, ಹಲವಾರು ಬಿಎಡ್ ಕಾಲೇಜುಗಳು ಕೂಡ ಬಂದ್ ಆಗುತ್ತಿವೆ.