ಡೆಂಘೀ ಬಂದಿದೆ ಎಚ್ಚರ


ವೈದ್ಯಕೀಯ ಶಬ್ದಕೋಶದಲ್ಲಿ ಡೆಂಘೀ ಎಂದು ನಮೂದಿಸಲ್ಪಟ್ಟಿರುವ ಜ್ವರ, ಸೊಳ್ಳೆಗಳಿಂದ ಹರಡುವ ವ್ಯಾಧಿ. ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಚವಾಗಿ ಇರಿಸಿಕೊಳ್ಳುವ ತನಕ, ಸೊಳ್ಳೆಗಳ ಸಂತತಿಯನ್ನು ಸಂಪೂರ್ಣವಾಗಿ ನಾಶಗೊಳಿಸುವ ತನಕ ಈ ವ್ಯಾಧಿಯ ಹಾವಳಿಯನ್ನು ನಿಯಂತ್ರಿಸುವುದು ಅಸಾಧ್ಯ.
ಸುಮಾರು ನಾಲ್ಕ್ತ್ರೈದು ವರ್ಷಗಳ ಹಿಂದೆ ನಮ್ಮ ರಾಜ್ಯಕ್ಕೆ ಹೊಂದಿಕೊಂಡಿರುವ ಕೇರಳದ ಗಡಿ ಪ್ರದೇಶಗಳಲ್ಲಿ ವ್ಯಾಪಕವಾಗಿ ಹರಡುತ್ತಾ, ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸಿದ್ದ ಚಿಕನ್ ಗುನ್ಯಾ ವ್ಯಾಧಿಯೊಂದಿಗೆ ಡೆಂಗೆ ಜ್ವರದ ಹಲವಾರು ಪ್ರಕರಣಗಳು ಪತ್ತೆಯಾಗಿದ್ದವು. ಇವೆರಡೂ ವ್ಯಾಧಿಗಳು ಸೋಂಕು ಪೀಡಿತ ವ್ಯಕ್ತಿಯನ್ನು ಕಚ್ಚಿದ್ದ ಸೊಳ್ಳೆಗಳಿಂದ ಹರಡುವುದರಿಂದ, ಜೊತೆಯಾಗಿ ಕಾಣಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಈ ವ್ಯಾಧಿಗಳನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷಧಗಳನ್ನು ಇದುವರೆಗೆ ಪತ್ತೆಹಚ್ಚಿಲ್ಲ ಎನ್ನಲಾಗುತ್ತಿದೆ. ಹಾಗಾಗಿ, ಹಲವಾರು ಮಂದಿ ಈ ರೋಗಕ್ಕೆ ತುತ್ತಾಗಿದ್ದಾರೆ.
ಅರ್ಬೊ ವೈರಸ್ಗಳ ವರ್ಗಕ್ಕೆ ಸೇರಿದ ಡೆಂಘೀಯ ರೋಗಕಾರಕ ವೈರಸ್ಗಳು ಸಾಮಾನ್ಯವಾಗಿ ಎಡೆಸ್ ಇಜಿಪ್ತ್ತ್ರೈ ಜಾತಿಯ ಹೆಣ್ಣು ಸೊಳ್ಳೆಗಳಿಂದ ಹರಡುತ್ತದೆ. ಡೆಂಘೀ ಪೀಡಿತರನ್ನು ಕಚ್ಚಿದ ಈ ಸೊಳ್ಳೆಗಳು, 8 ರಿಂದ 12 ದಿನಗಳಲ್ಲಿ ಡೆಂಘೀ ವೈರಸ್ಗಳನ್ನು ಹರಡುವ ಸಾಮರ್ಥ್ಯವನ್ನು ಗಳಿಸುತ್ತವೆ. ವಿಶೇಷವೆಂದರೆ ಈ ಸೊಳ್ಳೆಗಳು ಸಾಯುವ ತನಕ ಈ ಸಾಮರ್ಥ್ಯವನ್ನು ಉಳಿಸಿಕೊಳ್ಳುತ್ತವೆ.
ಡೆಂಘೀ ವ್ಯಾದಿಪೀಡಿತ ವ್ಯಕ್ತಿಗಳು ಈ ವೈರಸ್ ಗಳ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಗಳಿಸಿಕೊಂಡರೂ, ಇದು ಕೇವಲ 9 ತಿಂಗಳ ಅವಧಿಗೆ ಸೀಮಿತವಾಗಿರುತ್ತದೆ. ಆದರೆ ಹಲವಾರು ಬಾರಿ ಡೆಂಘೀ ಜ್ವರದಿಂದ ಪೀಡಿತರಾದ ವ್ಯಕ್ತಿಗಳು, ಶಾಶ್ವತವಾಗಿ ರೋಗಪ್ರತಿರೋಧಕ ಶಕ್ತಿಯನ್ನು ಗಳಿಸಿಕೊಳ್ಳುತ್ತಾರೆ. ಡೆಂಘೀ ರೋಗಿಗಳನ್ನು ಕಚ್ಚಿದ ಸೊಳ್ಳೆಗಳು ಆರೋಗ್ಯವಂತರನ್ನು ಕಚ್ಚಿದ ನಂತರ ಸುಮಾರು 5-6 ದಿನಗಳಲ್ಲಿ ರೋಗಲಕ್ಷಣಗಳು ಕಾಣಲು ಆರಂಭಿಸುತ್ತವೆ. ಕಾಯಿಲೆಯ ತೀವ್ರತೆ ಹೆಚ್ಚಿದ್ದಲ್ಲಿ 7-10 ದಿನಗಳು ಹಾಗೂ ಸೌಮ್ಯರೂಪದಲ್ಲಿ ಇದ್ದಲ್ಲಿ 4-6 ದಿನಗಳ ಕಾಲ ರೋಗಿಯನ್ನು ಪೀಡಿಸುತ್ತವೆ.
ರೋಗ ಲಕ್ಷಣಗಳು:
ಡೆಂಘೀ ರೋಗಿಗಳಲ್ಲಿ ಜ್ವರ ಕಾಣಿಸುತ್ತದೆ. ಶರೀರದಾದ್ಯಂತ ನೋವು, ಅದರಲ್ಲೂ ಕಣ್ಣುಗಳ ಹಿಂಭಾಗ, ತಲೆ ಮತ್ತು ಅಸ್ಥಿಸಂಧಿಗಳಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ. ಕಣ್ಣುಗಳು ಕೆಂಪಾಗಿ ನೀರು ಒಸರುವುದು, ಬೆಳಕನ್ನು ನೋಡಲು ಆಗದಿರುವುದು, ವಾಕರಿಕೆ, ವಾಂತಿ ಬರುವುದು, ಹಸಿವಿಲ್ಲದಿರುವುದು, ಎದ್ದೇಳಲು ಆಗದೇ ಹಾಸಿಗೆಯಲ್ಲೇ ಬಿದ್ದಿರುವುದು,ನಿದ್ರಾಹೀನತೆ ಮತ್ತು ಖಿನ್ನತೆಗಳು ಈ ರೋಗದ ಲಕ್ಷಣಗಳು.
ರೋಗದ ತೀವ್ರತೆ ಹೆಚ್ಚಾದರೆ 7 ರಿಂದ 8 ದಿನಗಳ ಕಾಲ ಜ್ವರ ಇರುತ್ತದೆ. ಕೆಲರೋಗಿಗಳಲ್ಲಿ ಮೂರು ದಿನಗಳ ಬಳಿಕ ಮಾಯವಾಗುವ ಜ್ವರ ಮತ್ತು ಅನ್ಯ ಲಕ್ಷಣಗಳು, ಒಂದೆರಡು ದಿನಗಳಲ್ಲಿ ಮತ್ತೆ ಮರುಕಳಿಸುವ ಸಾಧ್ಯತೆಯೂ ಇರುತ್ತದೆ. ಈ ಸಂದರ್ಭದಲ್ಲಿ ರೋಗಿಗಳ ಕೈಕಾಲುಗಳ ಮೇಲೆ ಬೆವರುಸಾಲೆಯಂತಹ ದದ್ದುಗಳು ಮೂಡಿ, ಶರೀರದ ಅನ್ಯಭಾಗಗಳಿಗೂ ಹರಡಬಹುದು. ಬಹುತೇಕ ರೋಗಿಗಳು ಜ್ವರಮುಕ್ತರಾದ ಬಳಿಕವೂ ಅತಿಯಾದ ಆಯಾಸ ಮತ್ತು ಬಳಲಿಕೆಗಳಿಂದ ಮಲಗಿಕೊಂಡೇ ಇರುವುದು ಈ ವ್ಯಾಧಿಯ ಪೀಡೆಗಳಲ್ಲಿ ಒಂದು.
1956ರಿಂದ ದಕ್ಷಿಣ ಆಫ್ರಿಕಾದಲ್ಲಿ ಅನೇಕ ಬಾರಿ ಇದು ಸಾಂಕ್ರಾಮಿಕವಾಗಿ ಹರಡಿದ ಉದಾಹರಣೆಗಳಿವೆ. ಡೆಂಘೀ ಜ್ವರದೊಂದಿಗೆ ಚಿಕುನ್ ಗುನ್ಯಾ ವೈರಸ್ಗಳು ಸೇರಿಕೊಂಡಿದ್ದ ಪರಿಣಾಮ, ರಕ್ತಸ್ರಾವ ಕಂಡು ಬಂದಿತ್ತು. ಡೆಂಘೀ ಹೆಮೊರೇಜಿಕ್ ಫಿವರ್ ಎನ್ನುವ ಈ ಅಪಾಯಕಾರಿ ಸಮಸ್ಯೆಯ ಮಾರಕತೆಗೆ ಶೇ.10ರಷ್ಟು ರೋಗಿಗಳು ಬಲಿಯಾಗಿದ್ದರು.
ಪತ್ತೆಹಚ್ಚುವುದು ಹೇಗೆ?:
ಶಂಕಿತ ಜ್ವರ ಪೀಡಿತರ ರಕ್ತದ ಮಾದರಿಯನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸುವ ಮೂಲಕ ಡೆಂಘೀ ವೈರಸ್ ಗಳ ಇರುವಿಕೆಯನ್ನು ಪತ್ತೆ ಹಚ್ಚಬಹುದಾಗಿದೆ.
ಚಿಕಿತ್ಸೆ:
ಡೆಂಘೀ ಜ್ವರವನ್ನು ನಿಶ್ಚಿತವಾಗಿ ಗುಣಪಡಿಸಬಲ್ಲ ಔಷಧಗಳನ್ನು ಯಾವುದೇ ಸಂಶೋಧಕರು ಇಂದಿನ ತನಕ ಪತ್ತೆಹಚ್ಚಿಲ್ಲ. ರೋಗಿಯನ್ನು ಬಾಧಿಸುವ ಲಕ್ಷಣಗಳಿಗೆ ಅನುಗುಣವಾಗಿ ವೈದ್ಯರು ನೀಡುವ ಔಷಧಗಳನ್ನು ಸೇವಿಸಿ, ಸಂಪೂರ್ಣ ವಿಶ್ರಾಂತಿಯನ್ನು ಪಡೆಯುವುದೇ ಇದಕ್ಕೆ ಏಕಮಾತ್ರ ಪರಿಹಾರ.
ರೋಗಪೀಡಿತರನ್ನು ಪ್ರತ್ಯೇಕವಾದ ಕೋಣೆಯಲ್ಲಿರಿಸಿ, ಸೊಳ್ಳೆಪರದೆಯನ್ನು ಕಡ್ಡಾಯವಾಗಿ ಬಳಸುವ ಮೂಲಕ ರೋಗವು ಇತರರಿಗೆ ಹರಡದಂತೆ ತಡೆಗಟ್ಟಬಹುದು. ಜೊತೆಗೆ ಸುತ್ತಮುತ್ತಲಿನ ಪರಿಸರದಲ್ಲಿ ಇರಬಹುದಾದ ಸೊಳ್ಳೆಗಳ ಸಂತಾನೋತ್ಪತ್ತಿ ಕೇಂದ್ರಗಳನ್ನು ನಾಶಗೊಳಿಸುವುದು, ನಿಶ್ಚಿತವಾಗಿಯೂ ಇದನ್ನು ತಡೆಗಟ್ಟುವ ಪರಿಣಾಮಕಾರಿ ವಿಧಾನವೂ ಹೌದು.
ರೋಗಿಯನ್ನು ಬಾಧಿಸುತ್ತಿರುವ ಯಾವುದೇ ಲಕ್ಷಣಗಳು ತೀವ್ರವಾಗಿದ್ದಲ್ಲಿ ಮತ್ತು ರೋಗಿಯ ಸ್ಥಿತಿಗತಿಗಳು ವಿಷಮಿಸುತ್ತಿದ್ದಲ್ಲಿ, ತಕ್ಷಣ ಸುಸಜ್ಜಿತ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆಯನ್ನು ನೀಡುವುದು ಹಿತಕರ.

ಇದು ಸರಳ ಮಾಹಿತಿಯಷ್ಟೆ. ಡೆಂಘೀ ಜ್ವರ ಬಂದವರು, ಲಕ್ಷಣ ಇರುವವರು ಕಡ್ಡಾಯವಾಗಿ ನುರಿತ ವೈದ್ಯರನ್ನು ಭೇಟಿ ಮಾಡಿ, ಚಿಕಿತ್ಸೆ ಪಡೆದುಕೊಳ್ಳಬೇಕು.

ಮಲೆನಾಡಲ್ಲಿ ಶುಂಠಿ ಬೆಳೆದೋನೇ ಬಾಸು


ಬೆಲೆ ಕುಸಿತದಿಂದ ರೋಸಿ ಹೋಗಿದ್ದ ರೈತರು ಇದೀಗ ಶುಂಠಿಗೆ ಹೆಚ್ಚಿನ ಬೆಲೆ ಬಂದಿರುವ ಹಿನ್ನೆಲೆಯಲ್ಲಿ ಸಂತಸಗೊಂಡಿದ್ದಾರೆ. ಸಾಮಾನ್ಯವಾಗಿ ಶುಂಠಿ ಸೀಸನ್ ಮುಕ್ತಾಯವಾಗುತ್ತಿದ್ದಂತೆ ಬೆಲೆ ಇಳಿಕೆಯಾಗುತ್ತದೆ. ಆದರೆ ಈ ಬಾರಿ ಮಳೆಗಾಲದಲ್ಲೂ ಮಾರುಕಟ್ಟೆಯಲ್ಲಿ ಶುಂಠಿ ಹೆಚ್ಚಿನ ಬೆಲೆಗೆ ಬಿಕರಿಯಾಗುತ್ತಿದೆ. ಇದರಿಂದಾಗಿ ಕಳೆದ ಕೆಲವು ವರ್ಷಗಳಿಂದ ಬೆಲೆ ಇಳಿಕೆಯಿಂದಾಗಿ ರೋಸಿ ಹೋಗಿದ್ದ ರೈತರ ಮೊಗದಲ್ಲಿ ಈ ಬಾರಿ ಸಂತಸ ಮನೆಮಾಡಿದೆ.
ಇತ್ತೀಚಿನ ದಿನಗಳಲ್ಲಿ ಬಯಲು ಸೀಮೆ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಶುಂಠಿಯನ್ನು ಪ್ರಮುಖ ಬೆಳೆಯಾಗಿ ಬೆಳೆಯಲಾಗುತ್ತಿದೆ. ಸಾಮಾನ್ಯವಾಗಿ ಜನವರಿ ತಿಂಗಳಿನಲ್ಲಿ ಶುಂಠಿಯನ್ನು ಬಿತ್ತನೆ ಮಾಡಲಾಗುತ್ತದೆ. ಹೀಗೆ ಬಿತ್ತನೆ ಮಾಡಿದ ಶುಂಠಿ ನವೆಂಬರ್ ತಿಂಗಳಿನಲ್ಲಿ ಕಟಾವಿಗೆ ಸಿದ್ಧವಾಗುತ್ತದೆ. ಒಂದು ವರ್ಷದ ಸುದೀರ್ಘ ಬೆಳೆಯಾಗಿರುವ ಶುಂಠಿ ಕಟಾವಿನ ಸಮಯದಲ್ಲಿ ಹೆಚ್ಚಿನ ಬೆಲೆಗೆ ಬಿಕರಿಯಾಗಿ, ಮಳೆಗಾಲ ಆರಂಭವಾಗುತ್ತಿದಂತೆಯೇ ಬೆಲೆಯಲ್ಲಿ ಇಳಿಕೆಯಾಗುತ್ತದೆ. ಆದರೆ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶುಂಠಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಕಳೆದ ಬಾರಿ ಆರಂಭದಲ್ಲಿ ಕ್ವಿಂಟಾಲ್ಗೆಗೆ ಶುಂಠಿ 3,000 ರೂ.ಗಳಿಗೆ ಮಾರಾಟವಾದರೆ, ಜೂನ್ ತಿಂಗಳಿನಲ್ಲಿ 800 ರೂ.ಗಳಿಗೆ ಇಳಿಕೆಯಾಗಿತ್ತು. ಆದರೆ ಈ ಬಾರಿ 6500ಗಳಿಂದ 7,000ರೂ.ಗಳಿಗೆ ಮಾರಾಟವಾಗಿದೆ. ಅಂದ ಹಾಗೆ, ಶುಂಠಿಯನ್ನು ದೆಹಲಿ, ಜೈಪುರ, ಕೋಲ್ಕತ್ತಾ, ಬೆಳಗಾಂ, ಒರಿಸ್ಸಾ, ದೆಹಲಿ ಮುಂತಾದ ರಾಜ್ಯಗಳಿಗೆ ರಪ್ತು ಮಾಡಲಾಗುತ್ತಿದೆ.
ಕಳೆದ ಒಂದು ತಿಂಗಳ ಹಿಂದೆ ಶುಂಠಿ ಬೆಲೆಯು 10 ಸಾವಿರ ರೂ. ಗಡಿ ದಾಟಿತ್ತು. ಇದೀಗ ಬೆಲೆಯು 7,500 ರೂ.ಗೆ ಇಳಿಕೆಯಾಗಿದ್ದರೂ ಸಹ ರೈತರು ಉತ್ತಮ ಬೆಲೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ ಸಾಲಿನಲ್ಲಿ ಶುಂಠಿ ಬೆಳೆದಿದ್ದ ರೈತರು ಬೆಲೆ ಕುಸಿತದಿಂದಾಗಿ ನಷ್ಟ ಅನುಭವಿಸಿದ್ದರು. ಇದರಿಂದಾಗಿ ಈ ವರ್ಷ ಹೆಚ್ಚಿನ ರೈತರು ಶುಂಠಿ ಬೆಳೆದಿರಲಿಲ್ಲ. ಶುಂಠಿ ಕಟಾವು ಮಾಡಿದ ನಂತರ ಹಲವು ಸಮಯದವರೆಗೆ ಯಾವುದೇ ಇತರ ಬೆಳೆ ತೆಗೆಯುವುದು ಸಾಧುವಲ್ಲ ಎನ್ನುತ್ತಾರೆ ಕೃಷಿಕರು.
ಗೊಬ್ಬರ ಸಮಸ್ಯೆ, ಅತಿವೃಷ್ಟಿ, ಪ್ರತಿಕೂಲವಲ್ಲದ ಹವಾಮಾನ...ಹೀಗೆ ಪ್ರತಿ ವರ್ಷ ಒಂದಿಲ್ಲೊಂದು ಸಮಸ್ಯೆ ಸುಳಿಯಲ್ಲಿ ಸಿಲುಕುತ್ತಿದ್ದ ರೈತರಿಗೆ ಶುಂಠಿ ಬೆಳೆ ವರವಾಗಿ ಪರಿಣಮಿಸಿದೆ. ಕಳೆದ ಕೆಲವು ವರ್ಷಗಳಿಂದ ಬೆಲೆ ಇಳಿಕೆಯಿಂದಾಗಿ ರೋಸಿ ಹೋಗಿದ್ದ ಬೆಳೆಗಾರರು ಈ ಬಾರಿ ಸಂಕಷ್ಟದಿಂದಲೇ ನಾಟಿ ಮಾಡಿದ್ದರು. ಆದರೆ ಈ ಬಾರಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿರುವುದರಿಂದ ಶುಂಠಿ ಬೆಳೆಗಾರರು ಸಂತಸದಿಂದಲೆ ತಮ್ಮ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.

ಸಾವಯವ ಕೃಷಿ ಲೇಸು


ಜಾಗತಿಕ ತಾಪಮಾನ ಏರಿಕೆ ಅಂದರೆ, ಭೂಮಿಯ ವಾತಾವರಣಕ್ಕೆ ಸಂಬಂಧಿಸಿದಂತೆ ಒಂದು ಶತಮಾನದಿಂದೀಚೆಗೆ ಉಷ್ಣತೆಯಲ್ಲಿ ಏರಿಕೆಯಾಗಿ, ಪ್ರಕೃತಿ ನಿಯಮದಲ್ಲಿ ಏರುಪೇರಾಗಿ, ಪ್ರಕೃತಿ ತನ್ನ ನಿತ್ಯಕರ್ಮಗಳಲ್ಲಿ ವ್ಯತ್ಯಾಸದ ನಡವಳಿಕೆಯನ್ನು ತೋರುತ್ತಿದೆ. ಇದರಿಂದ ಭೂಮಿಯ ಮೇಲಿನ ಪ್ರಾಣಿಸಂಕುಲಗಳು, ಮಾನವ ಸಂಪತ್ತು, ಸಸ್ಯರಾಶಿಗಳ ಮೇಲೆ ಪರಿಣಾಮ ಉಂಟಾಗಿದೆ.
ಮಾನವ ತನ್ನ ದುರಾಸೆಯಿಂದ ಅಭಿವೃದ್ಧಿಯನ್ನೇ ಪಣವಾಗಿಟ್ಟು ಪ್ರಕೃತಿಯ ರೀತಿ, ನಿಯಮಗಳ ಮೇಲೆ ದಾಳಿ ಮಾಡಿ, ಅತಿ ಸ್ವಾರ್ಥಿಯಾಗುತ್ತಿದ್ದಾನೆ. ಇದು ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿದ್ದು, ಈ ಬಗ್ಗೆ ಜಗತ್ತಿನ ಹೆಚ್ಚಿನ ರಾಷ್ಟ್ರಗಳಲ್ಲಿ ರಾಜಕೀಯ, ಸಾಮಾಜಿಕ, ಆರ್ಥಿಕ ವ್ಯವಸ್ಥೆಯಲ್ಲಿ ಮುಖ್ಯವಾಗಿ ಚರ್ಚಿಸುವ ವಿಷಯವಾಗಿದೆ. ಜಾಗತಿಕ ತಾಪಮಾನ ಏರಿಕೆಯ ಕುರಿತು 1988ರಲ್ಲಿ ಪ್ರತಿರಾಷ್ಟ್ರಗಳಲ್ಲಿ ಒಂದು ಒಕ್ಕೂಟವನ್ನು ರಚಿಸಿ, ಚಿಂತನೆ ನಡೆಸಿ ತ್ವರಿತವಾಗಿ ಸಮಸ್ಯೆಯನ್ನು ಪರಿಹರಿಸಬೇಕೆಂದು ವಿಶ್ವಸಂಸ್ಥೆ ಸಲಹೆ ಕೊಟ್ಟಿದೆ. ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ವಿವಿಧ ದೇಶಗಳಲ್ಲಿ ಸಭೆ ಸೇರಿ ಚರ್ಚಿಸಿದರೂ ಯಾವುದೇ ಪರಿಹಾರವಾಗಿಲ್ಲ. ಸಮಸ್ಯೆಯ ಪರಿಹಾರದ ನಿಟ್ಟಿನಲ್ಲಿ ಕೆಲಸ ಮಾಡುವ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದೆ.
ಜಾಗತಿಕ ತಾಪಮಾನ ಏರಿಕೆಗೆ ರೈತರು ಮತ್ತು ಕೃಷಿರಂಗ ಕಾರಣವಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಯಾವುದೇ ಪೂರ್ವಾಪರ ಯೋಚನೆ ಇಲ್ಲದೆ ನಡೆಯುತ್ತಿರುವ ಕೈಗಾರೀಕರಣ, ಆರ್ಥಿಕ ಅಭಿವೃದ್ಧಿ, ವಿಲಾಸಿ ಜೀವನಕ್ಕೆ ಬೇಕಾದ ವ್ಯವಸ್ಥೆಗಳು ಇದಕ್ಕೆ ಮುಖ್ಯಕಾರಣಗಳಾಗಿವೆ. ಆದರೆ ಇದರ ಪರಿಣಾಮ ನೇರವಾಗಿ ಬಿದ್ದಿರುವುದು ಕೃಷಿ ವ್ಯವಸ್ಥೆಯ ಮೇಲೆ. ನಾವು ಕಾಣುತ್ತಿರುವ ಸಸ್ಯ ಸಂಕುಲಗಳು ನಿಗದಿತ ಪ್ರಕೃತಿ ನಿಯಮದಿಂದ ಹೂ ಬಿಟ್ಟು ವಂಶಾಭಿವೃದ್ಧಿ ಮಾಡಿ ರೈತರಿಗೆ ಒಳ್ಳೆಯ ಬೆಳೆ ನೀಡಬೇಕಾದವು ಹೊಸ ಹೊಸ ರೋಗಗಳಿಗೆ ತುತ್ತಾಗುತ್ತಿವೆ. ಇದು ಕೃಷಿರಂಗದ ಮೇಲೆ ನೇರ ದುಷ್ಪರಿಣಾಮವನ್ನು ಬೀರಿದೆ.
ಅನಿರ್ದಿಷಾವಧಿ ಮಳೆ, ಹವಮಾನ ಬದಲಾವಣೆ, ನೆರೆ, ಬರ, ಬಿರುಗಾಳಿ, ಉಷ್ಣತೆಯಲ್ಲಿ ಏರುಪೇರು, ವಿವಿಧ ರೋಗಗಳು ರೈತರನ್ನು ದಿಕ್ಕೆಡಿಸಿದೆ. ಕೆಲವು ರೈತರು ಈ ದುರಾವಸ್ಥೆಗೆ ಪೂರಕವಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ ಕೈಂಕರ್ಯಕ್ಕೆ ಅಗತ್ಯಕ್ಕಿಂತ ಹೆಚ್ಚು ರಸಗೊಬ್ಬರ ಮತ್ತು ವಿಷಕಾರಿಯಾದ ಕೃಷಿ ರೋಗನಿರೋಧಕಗಳನ್ನು ಅವಲಂಬಿಸಿ, ಪರೋಕ್ಷವಾಗಿ ಹವಮಾನ ಬದಲಾವಣೆಗೆ ಕಾರಣಕರ್ತರಾಗುತ್ತಿದ್ದಾರೆ.
ಈ ನಿಟ್ಟಿನಲ್ಲಿ ರೈತರು ಸಕಾರಾತ್ಮಕವಾಗಿ ಸ್ಪಂದಿಸಿದರೆ ಕೃಷಿರಂಗವೂ ಈ ಸಮಸ್ಯೆಯನ್ನು ಸ್ವಲ್ಪಮಟ್ಟಿನಲ್ಲಿ ಶಮನ ಮಾಡಬಹುದು. ಈ ಕಾರಣದಿಂದ ನಮ್ಮ ರೈತರು ಸಾವಯವ ಕೃಷಿ ಪದ್ದತಿಗೆ ಒತ್ತುಕೊಟ್ಟು ರಾಸಾಯನಿಕ ಹಾಗೂ ಕೀಟನಾಶಕಗಳ ಉಪಯೋಗ ಕಡಿಮೆ ಮಾಡಿದರೆ ಕೃಷಿರಂಗದ ವಿಷಾನಿಲಗಳು ವಾತಾವರಣ ಸೇರುವುದು ತಪ್ಪುತ್ತದೆ. ಇಂದು ರಾಸಾಯನಿಕ ಗೊಬ್ಬರ ಉಪಯೋಗಿಸಿ ತಯಾರಾದ ಕೃಷಿ ಉತ್ಪನ್ನಗಳನ್ನು ಸೇವಿಸಿ ಜನ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಿದ್ದಾರೆ. ಇದರ ಅಪಾಯಗಳನ್ನು ತಿಳಿದುಕೊಂಡು ಸಾವಯವ ಕೃಷಿಗೆ ಒತ್ತು ನೀಡಲೇಬೇಕು.
ಕೃಷಿಕರು ತಮ್ಮ ಖಾಲಿ ಜಾಗಗಳಲ್ಲಿ ಹೆಚ್ಚು, ಹೆಚ್ಚು ಕೃಷಿಗಿಡಗಳನ್ನು ನೆಟ್ಟು ಆದಾಯದ ಜೊತೆಗೆ ಪ್ರಕೃತಿಯನ್ನೂ ರಕ್ಷಿಸಬೇಕಿದೆ. ಬೇಲಿ ಬದಿಗಳಲ್ಲಿ ಪ್ರಕೃತಿದತ್ತವಾದ ಮರಗಳನ್ನು ನೆಟ್ಟು ಸಸ್ಯಸಂಪತ್ತನ್ನು ಉಳಿಸಬೇಕಿದೆ. ಸರಕಾರವು ಪ್ರಕೃತಿಯ ರ್ಷಣೆಗೆ ನೀಡುವ ಅನೇಕ ಯೋಜನೆಗಳು ಸರಿಯಾದ ಅನುಷ್ಠಾನವಾದಲ್ಲಿ ಜಾಗತಿಕ ತಾಪಮಾನದಂತಹ ಸಮಸ್ಯೆಗಳು ದೂರವಾಗಿ ಕೃಷಿರಂಗದ ಜೊತೆಗೆ ಪ್ರಕೃತಿಯೂ ಬೆಳೆಯಬಹುದು.

ಗಣೇಶ್ ಪಾಲ್ ಬಳಿ ಮಿನಿ ಡ್ಯಾಂ ಬೇಡ


ಉತ್ತರ ಕನ್ನಡ ಜಿಲ್ಲೆಯ ಸಹ್ಯಾದ್ರಿ ತಪ್ಪಲಿನ ಶಾಲ್ಮಲಾ, ಸೋಂದಾ ನದಿಗೆ ಗಣೇಶ್ಪಾಲ್ ಬಳಿ ಅಣೆಕಟ್ಟು ನಿರ್ಮಿಸಲು ಖಾಸಗಿ ಕಂಪನಿ ಕಾರೆ ಪವರ್ ರಿಸೋರ್ಸಸ್ ಪ್ರೈವೇಟ್ ಕಂಪನಿ ಪ್ರಸ್ತಾವನೆ ಸಲ್ಲಿಸಿದೆ ಎಂಬ ಸುದ್ದಿ ಹರಡಿದೆ. ಈ ಯೋಜನೆ ಬೇಡವೇ ಬೇಡ. ಗಣೇಶಪಾಲ್ ಜಲವಿದ್ಯುತ್ ಯೋಜನೆ ಶಾಲ್ಮಲಾ ನದಿ ಪರಿಸರದ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿದೆ. ಇದು ಬೇಡ್ತಿ ಕಣಿವೆ ಸಂರಕ್ಷಿತ ಪ್ರದೇಶಕ್ಕೆ ಹೊಂದಿಕೊಂಡಿದೆ. ಯೋಜನಾ ಪ್ರದೇಶ ಅರಣ್ಯ ವ್ಯಾಪ್ತಿಯಲ್ಲಿ ಬರುತ್ತದೆ. ಹಾಗಾಗಿ ಈ ಯೋಜನೆಯಿಂದ ಅರಣ್ಯ ಕಾಯಿದೆ, ವನ್ಯ ಜೀವಿ ಕಾಯಿದೆ ಉಲ್ಲಂಘನೆ ಗುತ್ತದೆ.
ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಗಣೇಶಪಾಲ್ ಬರುತ್ತದೆ. ರಾಜ್ಯ ಸರ್ಕಾರದ 2011ರ ಆದೇಶದ ಪ್ರಕಾರ ಪಶ್ಚಿಮಘಟ್ಟ ಪ್ರದೇಶದಲ್ಲಿ ಜಲವಿದ್ಯುತ್ ಯೋಜನೆಗೆ ಅವಕಾಶ ಇಲ್ಲ. ಹಾಗಾಗಿ, ಗಣೇಶಪಾಲ್ ಯೋಜನೆಗೆ ಅರಣ್ಯ ಇಲಾಖೆಯಿಂದ ಅನುಮತಿ ಸುಗುವುದು ಕಷ್ಟ. 2010ಕ್ಕಿಂತ ಮೊದಲೇ ಕ್ರೆಡಿಲ್ (ಅಸಂಪ್ರದಾಯಿಕ ಇಂಧನ ಮಂಡಳಿ) ಮೂಲಕ ಕೇವಲ ಆರಂಭಿಕ ಒಪ್ಪಿಗೆ ಪತ್ರವನ್ನಷ್ಟೇ ಪಡೆದ ಗಣೇಶಪಾಲ್ ಯೋಜನೆ 6 ತಿಂಗಳ ಒಳಗೆ ಎಲ್ಲ ಇಲಾಖೆಗಳ ಪರವಾನಿಗೆ ಪಡೆಯಬೇಕಿತ್ತು, ಪಡೆದಿಲ್ಲ. ಈ ಕಾರಣದಿಂದ ಈ ಯೋಜನೆ ಕಾಯಿದೆ ಪ್ರಕಾರ ರದ್ದಾಗಿದೆ. ಈಗ 2012 ರಲ್ಲಿ ಯೋಜನಾ ವರದಿ ತಯಾರಿಸಿದ್ದು ಅಸಿಂಧು ಎಂಬ ಪರಿಸರವಾದಿಗಳ ಅನಿಸಿಕೆ ಸಮಂಜಸ.
ಗಣೇಶಪಾಲ್ ಯೋಜನೆಯ ಪರಿಸರ ವರದಿಯಲ್ಲಿ (ಚಾಪ್ಟರ್ 11) ‘ಇಲ್ಲಿ ಕಾಡೇ ಇಲ್ಲ, ವನ್ಯಜಿವಿ ಇಲ್ಲ, ಅರಣ್ಯ ನಾಶ ಆಗುವುದೇ ಇಲ್ಲ, ಕೇವಲ ಟೀಕ್ ಪ್ಲಾಂಟೇಶನ್ ಮಾತ್ರ ಇದೆ’. ಇತ್ಯಾದಿ ಸುಳ್ಳು ಮಾಹಿತಿ ನೀಡಲಾಗಿದೆ. ಈ ಪ್ರದೇಶವನ್ನು ಸರ್ಕಾರವೇ ಸಂರಕ್ಷಿತ ಪ್ರದೇಶ ಎಂದು ವನ್ಯಜೀವಿ ಕಾಯಿದೆ ಅಡಿ ಘೋಷಿಸಿದ ಸಂಗತಿ ಡಿಪಿಆರ್ ತಯಾರಿಸಿದ ತಜ್ಞರಿಗೆ ಗೊತ್ತೇ ಇಲ್ಲ ಎನ್ನಲಾಗುತ್ತಿದೆ.
ಗಣೇಶಪಾಲ್ ಯೋಜನೆಯಲ್ಲಿ 5 ಮೀ. ಎತ್ತರ, 20ಮೀ. ಉದ್ದದ ಅಣೆಕಟ್ಟು ಇರುತ್ತದೆ. ವಿದ್ಯುತ್ ಟನೆಲ್ 3ಜನರೇಟಿಂಗ್ ಕೇಂದ್ರಗಳು, 110ಕೆ.ವಿ. ವಿದ್ಯುತ್ ತಂತಿ ಮಾರ್ಗ(ಉಮಚಗಿ ವರೆಗೆ) ಗೆ ನಿರ್ಮಾಣ ಆಗಬೇಕು. ಗೆಸ್ಟ್ ಹೌಸ್ ಆಗಬೇಕು. ವಸತಿ ಕಾಲೋನಿ, ಇವೆಲ್ಲ ನಿರ್ಮಾಣ ಆಗಬೇಕು. ಇವೆಲ್ಲ ಆಗುವುದು ನದಿಯ ಅಕ್ಕ ಪಕ್ಕದ ಅರಣ್ಯಗಳ ಮಧ್ಯೆ. ಇದಕ್ಕಾಗಿ ಸುಮಾರು 210 ಎಕರೆ ಅರಣ್ಯ ನಾಶ ಆಗುತ್ತದೆ. ಅರಣ್ಯ ನಾಶವೇ ಇಲ್ಲ. ಎಂದು ಯೋಜನಾ ವರದಿ ಹೇಳಿದೆ. ವಾಸ್ತವವಾಗಿ ಗಣೇಶಪಾಲ್ ಯೋಜನೆಯಿಂದ ಸುಮಾರು 360 ಎಕರೆ ನದಿ ಪಾತ್ರದ ಅರಣ್ಯ ಮುಳುಗಡೆ ಆಗುತ್ತದೆ. ನೆಡತೋಪು ಮಾಡುತ್ತೇವೆ, ಪ್ರವಾಸೋದ್ಯಮ ಬೆಳೆಸುತ್ತೇವೆ ಎಂಬ ಯೋಜನಾ ವರದಿಯ ಆಶ್ವಾಸನೆಗೆ ಅರ್ಥವೇ ಇಲ್ಲ. ಇವೆಲ್ಲದರ ಹೊರತಾಗಿಯೂ, ಇಡಿ ಪಶ್ಚಿಮಘಟ್ಟದಲ್ಲಿ ಮಿನಿ ಜಲವಿದ್ಯುತ್ ಯೋಜನೆಗೆ ಅರಣ್ಯ ಪರವಾನಿಗೆ ನೀಡುವುದಿಲ್ಲ ಎಂದು ರಾಜ್ಯ ಅರಣ್ಯ ಇಲಾಖೆ ಸ್ಪಷ್ಟವಾಗಿ, ಲಿಖಿತವಾಗಿ ಹೈಕೊರ್ಟ್ಗೆ ತಿಳಿಸಿದೆ ಎಂಬ ಸಂಗತಿ ಗಮನಾರ್ಹ.

ಕೊಡೆ ರಿಪೇರಿ ಕಾಯಕ ಇದು ತಾತ್ಕಾಲಿಕ


ಮಳೆಗಾಲದಲ್ಲಿ ಕೊಡೆ ಇಲ್ಲದೆ ನಡೆದಾಡುವಂತಿಲ್ಲ. ಮಳೆಗಾಲದ ದಿನಗಳಲ್ಲಿ ಕೊಡೆ ಎಲ್ಲರ ಸಂಗಾತಿ. ಇತ್ತೀಚಿನ ದಿನಗಳಲ್ಲಿ ವಿವಿಧ ವಿನ್ಯಾಸಗಳ ಮತ್ತು ಬಣ್ಣಗಳ ಕೊಡೆಗಳು ಲಭ್ಯ. ಕೊಡೆಗಳನ್ನು ಮಾರಾಟ ಮಾಡುವ ಅಂಗಡಿಗಳು ಬಹಳಷ್ಟಿವೆ. ಆದರೆ ಕೊಡೆಗಳನ್ನು ದುರಸ್ಥಿ ಮಾಡಲು ಬೀದಿ ಬದಿಯ ಕಾಯಕ ಜೀವಿಗಳನ್ನು ಅವಲಂಬಿಸಬೇಕು. ಪಟ್ಟಣಗಳಲ್ಲಿ ಮಳೆಗಾಲದ ದಿನಗಳಲ್ಲಿ ರಸ್ತೆ ಬದಿ ಸಣ್ಣ ಸೂರು ಮಾಡಿಕೊಂಡು ಕೊಡೆ ರಿಪೇರಿ ವೃತ್ತಿಯನ್ನು ನಿರ್ವಹಿಸುವವರಿದ್ದಾರೆ. ಮಳೆಗಾಲ ಮುಗಿಯುವಾಗ ಇವರ ಕಾಯಕ ಕೂಡ ಮುಗಿಯುತ್ತದೆ.
ಕೊಡೆ ರಿಪೇರಿ ಕಾಯಕ ಇದು ತಾತ್ಕಾಲಿಕ. ಮಳೆಗಾಲದ ದಿನಗಳಲ್ಲಿ ಆದಾಯಕ್ಕೊಂದು ದಾರಿ. ಇತರ ದಿನಗಳಲ್ಲಿ ಬೇರೆ ವೃತ್ತಿಗಳನ್ನು ಮಾಡಿಕೊಂಡಿದ್ದವರು ಮಳೆಗಾಲದ ದಿನಗಳಲ್ಲಿ ತಾತ್ಕಾಲಿಕವಾಗಿ ಕೊಡೆ ರಿಪೇರಿ ವೃತ್ತಿಯನ್ನು ಕೈಗೊಳ್ಳುತ್ತಾರೆ. ಕೊಡೆಯ ಕಡ್ಡಿ, ಹ್ಯಾಂಡಲ್, ಬಟ್ಟೆ ಮೊದಲಾದ ವಸ್ತುಗಳ ಬದಲಾವಣೆ ದುರಸ್ಥಿಯಿಂದ ಇವರಿಗೆ ಜೀವನ ನಿರ್ವಹಣೆಗೆ ಸಾಧ್ಯವಾಗುತ್ತದೆ. ಕೊಡೆ ರಿಪೇರಿ ವೃತ್ತಿಯವರದು ಸಂಚಾರಿ ಬದುಕು. ಮಳೆಗಾಲದ ದಿನಗಳಲ್ಲಿ ಜಾಗ ಬದಲಾಯಿಸುತ್ತಾ ಇವರು ತಮ್ಮ ವೃತ್ತಿಯನ್ನು ನಿರ್ವಹಿಸುತ್ತಾರೆ.
ಊರಿನಲ್ಲಿ ನಡೆಯುವ ಸಂತೆ ಕೂಡ ಕೊಡೆ ರಿಪೇರಿಯವರ ಒಂದು ಠಿಕಾಣಿ ಸ್ಥಳ. ತಾಳ್ಮೆಯಿಂದ ನಿರ್ವಹಿಸಬೇಕಾದ ಕೊಡೆ ರಿಪೇರಿ ವೃತ್ತಿಯನ್ನು ಸ್ತ್ರೀಯರೂ ನಿರ್ವಹಿಸಬಹುದಾದರೂ, ಪುರುಷರ ಸಂಖ್ಯೆಯೇ ಹೆಚ್ಚು. ವಿದ್ಯಾವಂತ ನಿರುದ್ಯೋಗಿಗಳು ಕೂಡ ಕೊಡೆ ರಿಪೇರಿ ಕೆಲಸ ನಿರ್ವಹಿಸುವ ಉದಾಹರಣೆಗಳಿವೆ. ಮಳೆಗಾಲದ ದಿನಗಳಲ್ಲಿ ಈ ವೃತ್ತಿ ಆದಾಯದ ದಾರಿಯಾದ ಕಾರಣ ಈ ವೃತ್ತಿಗೆ ಬರುತ್ತಾರೆ.
ಕೊಡೆ ರಿಪೇರಿ ವೃತ್ತಿಯವರದು ಅಸಂಘಟಿತ ಕಾರ್ಮಿಕ ವರ್ಗ. ಇವರಿಗೆ ಸರಕಾರದಿಂದ ಯಾವುದೇ ನೆರವು ಲಭ್ಯವಾಗುತ್ತಿಲ್ಲ. ಮಳೆಗಾಲದ ದಿನಗಳಲ್ಲಿ ಮಾತ್ರ ತಮ್ಮ ಮೂಲ ವೃತ್ತಿಯನ್ನು ಬಿಟ್ಟು ಕೊಡೆ ರಿಪೇರಿ ಕಾಯಕಕ್ಕೆ ತೊಡಗಿಸಿಕೊಳ್ಳುತ್ತಾರೆ. ಇವರೇ ಬಂಡವಾಳ ಹಾಕಿ ಈ ವೃತ್ತಿಯನ್ನು ನಿರ್ವಹಿಸಬೇಕು. ಜೀವನ ನಿರ್ವಹಣೆಗೆ ತಕ್ಕಮಟ್ಟಿನ ಆದಾಯವನ್ನು ಈ ವೃತ್ತಿ ನೀಡುತ್ತದೆ ಅಷ್ಟೆ.

ಬತ್ತುತ್ತಿದೆ ಗದ್ದೆಯ ಒಡಲು


ಹಿಂದೆಲ್ಲಾ ಮುಂಗಾರು ಧರೆಗಿಳಿಯುತ್ತಿದ್ದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕಾಯಕಗಳು ಗರಿಗೆದರುತ್ತಿದ್ದವು. ಇದು ಕಾಲಚಕ್ರದ ನಿಯಮವಾಗಿತ್ತು. ಆದರಿಂದು ಪರಿಸ್ಥಿತಿ ಬದಲಾಗಿದೆ. ಕೃಷಿ ಕಸುಬುಗಳ ನೆಲೆಯಾಗಿದ್ದ ಭೂಮಿಗಳು ಆರ್ಥಿಕ ವಿತ್ತ ವಲಯಗಳಾಗುತ್ತಿವೆ. ಅಳಿದುಳಿದ ಭತ್ತದ ಗದ್ದೆಗಳಲ್ಲಿ ಇನ್ನೂ ಕೃಷಿ ಕಾರ್ಯಗಳು ನಡೆಯುತ್ತಿವೆಯಾದರೂ, ಹಿಂದಿನ ಕಾಲದ ಕೃಷಿಭೂಮಿಯ ಮೇಲಿನ ಆಸಕ್ತಿ, ಪ್ರೀತಿ, ದುಡಿಮೆಗಳು ಕೃಷಿ ಅಂಗಳದಿಂದ ದೂರವಾಗುತ್ತಿವೆ.
ಎತ್ತು, ಕೋಣಗಳ ಜಾಗದಲ್ಲೀಗ ಮೆಷಿನ್ಗಳು ನೆಲವನ್ನು ಹದಗೊಳಿಸುವ ನಿಟ್ಟಿನಲ್ಲಿ ಬಳಕೆಯಾಗುತ್ತಿವೆ. ಹಿಂದೆ ಮಳೆರಾಯನ ಆಗಮನದ ಹೊತ್ತಿನಲ್ಲಿ ಬಹುತೇಕ ಮನೆಗಳಲ್ಲಿ ಕುಟುಂಬ ಸದಸ್ಯರು ಗದ್ದೆಯ ಕೆಲಸ ಕಾರ್ಯಗಳ ತಯಾರಿಯಲ್ಲಿ ತೊಡಗಿಕೊಳ್ಳುತ್ತಿದ್ದರು. ಉಳುಮೆ, ಬಿತ್ತನೆ, ನೇಜಿ ನೆಡುವ ನಿಟ್ಟಿನಲ್ಲಿ ಮನೆಯ ಸದಸ್ಯರುಗಳೆಲ್ಲಾ ವಿವಿಧ ರೀತಿಯಲ್ಲಿ ಕರ್ತವ್ಯಕ್ಕೆ ಇಳಿಯುತ್ತಿದ್ದರು. ಈಗ ಹಾಗಿಲ್ಲ, ಗದ್ದೆಗಳೆ ಅಪರೂಪವಾಗುತ್ತಿವೆ. ಮನೆಯಲ್ಲಿ ತಂದೆ-ತಾಯಿಯನ್ನು ಬಿಟ್ಟರೆ ಉಳಿದವರು ಹೈಟೆಕ್ ಸಿಟಿಗಳಲ್ಲಿ ಉದ್ಯೋಗದಲ್ಲಿ ಇದ್ದಾರೆ. ಅಳಿದುಳಿದ ಗದ್ದೆಗೆ ಆಳುಗಳನ್ನು ಅಥವಾ ಯಂತ್ರಗಳನ್ನು ತರಿಸಿ ಬೇಸಾಯದ ಕಾರ್ಯಗಳನ್ನು ಮಾಡುತ್ತಾರೆ. ಗದ್ದೆಯ ಕೆಲಸವೊಮ್ಮೆ ಮುಗಿದರೆ ಸಾಕು ಎಂದು ಮೂಗು ಮುರಿಯುವವರೆ ಹೆಚ್ಚು.
ಹಿಂದೆಲ್ಲಾ ಬೇಸಾಯದ ಗದ್ದೆಗಳು ಜನಪದದ ಹುಟ್ಟಿಗೆ ಮೂಲ ನೆಲೆಯಾಗಿದ್ದವು. ಕೃಷಿ ಭೂಮಿಯಾದ ಗದ್ದೆಗಳು ಕೇವಲ ಅನ್ನ ನೀಡುವ ನೆಲೆಗಳಾಗದೇ ಪ್ರಕೃತಿ ಸಂರಕ್ಷಕನಾಗಿಯೂ ಕೆಲಸ ಮಾಡುತ್ತಿದ್ದವು. ಮಳೆ ನೀರನ್ನು ವ್ಯರ್ಥವಾಗಿ ಹರಿಯಲು ಬಿಡದೇ ನೀರಿಂಗಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದ್ದವು. ಜೊತೆಗೆ ಒಂದಷ್ಟು ಜೀವಜಂತುಗಳು ಗದ್ದೆಯಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದವು.
ಉಳುಮೆ, ಬಿತ್ತನೆ ಸಂದರ್ಭಗಳಲ್ಲಿ ಮಹಿಳೆಯರು ಹಾಡುತ್ತಿದ್ದ ಜಾನಪದ ಸೊಗಡಿನ ಪದ್ಯಗಳು ಈಗ ಮಾಯವಾಗುತ್ತಿವೆ. ಅವುಗಳು ನಮ್ಮ ನೆಲದ ವಿಶೇಷತೆಗಳು, ದುಗುಡಗಳನ್ನು ತೆರೆದಿಡುತ್ತಿದ್ದವು. ಆದರೆ ಗದ್ದೆಯ ಜಗತ್ತೇ ಇಲ್ಲವಾಗುತ್ತಿರುವ ಇಂದಿನ ದಿನಗಳಲ್ಲಿ ಜನಪದದ ಹಾಡುಗಳನ್ನು ಸೃಷ್ಟಿಸಿ ಬರೆಯಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಅನುಭವದ ಹಾಡಿಗೆ ಮೂಲವಾಗಿದ್ದ ಜನಪದದ ನೆಲೆಗಟ್ಟಾದ ಕೃಷಿ ಭೂಮಿ ಕಣ್ಮರೆಯಾಗಿದೆ.
ಆಧುನಿಕ ಸಮಾಜದಲ್ಲಿ ಬದುಕಿನ ಮಟ್ಟಗಳು ಶ್ರೀಮಂತಿಕೆಯ ಆಧಾರದಲ್ಲಿ ರೂಪಿತಗೊಳ್ಳಲು ತೊಡಗಿದಾಗ, ಮೈ ಮುರಿದು ದುಡಿಯುವುದಕ್ಕಿಂತ ಆರಾಮಾಗಿ ಕುಳಿತು ಸಂಪಾದಿಸಿಬಲ್ಲ ಉದ್ಯೋಗದತ್ತ ನಮ್ಮ ದೃಷ್ಟಿ ಹರಿದಿದೆ. ಹಾಗಾಗಿ ವ್ಯವಸಾಯದಂತಹ ಕೃಷಿ ಕಸುಬುಗಳಲ್ಲಿ ಬದುಕು ಕಟ್ಟಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಕೃಷಿ ಭೂಮಿಗಳು ಆರ್ಥಿಕ ವಲಯಗಳಾಗುತ್ತಿವೆ. ಬೇಸಾಯ ಮಾಡುತ್ತಿದ್ದ ಗದ್ದೆಗಳಲ್ಲಿ ವಾಣಿಜ್ಯ ಬೆಳೆಗಳು ರಾರಾಜಿಸುತ್ತಿವೆ. ಶ್ರಮವಿಲ್ಲದೆ ದುಡಿಯಬೇಕೆನ್ನುವ ಮಂದಿಯ ಕನಸುಗಳಿಗೆ ನಗರೀಕರಣ, ವಿತ್ತ ವಲಯಗಳು ಜೀವ ತುಂಬುತ್ತಿವೆ. ಇವೆಲ್ಲಕ್ಕಿಂತ ಹೆಚ್ಚಾಗಿ, ಇಂದು ದುಡಿಯಲು ರೈತನಿಲ್ಲದಿದ್ದರೂ, ಕೃಷಿ ಭೂಮಿಯಿಲ್ಲದಿದ್ದರೂ 1 ರೂಪಾಯಿಗೆ ಅಕ್ಕಿ ಕೊಡುತ್ತೇನೆ ಎನ್ನುತ್ತಿದೆ ಸರ್ಕಾರ.

ಕುಟುಗನಹಳ್ಳಿಯಲ್ಲಿ ಅಸ್ತಮಾ ಅಸ್ತಂಗತ


ಪ್ರತಿವರ್ಷ ಮೃಗಶಿರಾ ಮಳೆ ಕೂಡುವ ಘಳಿಗೆಯಲ್ಲಿ ಕೊಪ್ಪಳ ಜಿಲ್ಲೆಯ ಕುಟುಗನಹಳ್ಳಿಯಲ್ಲಿ ಜನ ಜಾತ್ರೆ. ಗ್ರಾಮದ ವ್ಯಾಸರಾವ್ ಕುಲಕರ್ಣಿ ಕುಟುಂಬ ಕಳೆದ 52 ವರ್ಷಗಳಿಂದ ಅಸ್ತಮಾ ಕಾಯಿಲೆಗೆ ಉಚಿತ ಔಷಧಿ ನೀಡುತ್ತಾ ಬಂದಿದ್ದು, ಆ ದಿನ ವಿವಿಧ ರಾಜ್ಯಗಳ ಜನರು ಇಲ್ಲಿಗೆ ಔಷಧಿ ಪಡೆಯಲು ಬರುತ್ತಾರೆ.
ಜಿಲ್ಲೆಯ ಈ ಭಾಗದಲ್ಲಿ ಮಾತ್ರ ಸಿಗುವ ಒಂದಿಷ್ಟು ವಿವಿಧ ಬಗೆಯ ಗಿಡಮೂಲಿಕೆಗಳನ್ನು ಗುಡ್ಡಗಾಡು ಪ್ರದೇಶದಲ್ಲಿ ಹುಡುಕಾಡಿ ತಂದು ಕಲ್ಲಿನ ಮೇಲೆ ಅರಿಯುತ್ತಾರೆ. ವನಸ್ಪತಿಯ ನಾಲ್ಕರಷ್ಟು ಪಟ್ಟು ಬೆಲ್ಲ ಕೂಡಿಸಿ ಜೊತೆಗೊಂದಿಷ್ಟು ಇಂಗು ಬೆರೆಸಿ ಸಣ್ಣಮುತ್ತಿನ ಆಕಾರದಲ್ಲಿ ಸಿದ್ಧಪಡಿಸಲಾಗುತ್ತದೆ. ತಯಾರಾದ ಔಷಧಿಗಳ ಮೇಲೆ ಯಾರ ನೆರಳೂ ಕೂಡಾ ಬೀಳದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಮೃಗಶಿರಾ ಮಳೆಯ ನಕ್ಷತ್ರಕ್ಕಿಂತ ಮುಂಚೆ ಔಷಧಿಯನ್ನು ಕುಲಕರ್ಣಿ ಕುಟುಂಬದ ಅಶೋಕರಾವ್ ಅವರನ್ನು ಬಿಟ್ಟರೆ ಮತ್ಯಾರು ಮುಟ್ಟುವಂತಿಲ್ಲ. ಬಳಿಕ ಜನರಿಗೆ ವಿತರಿಸಲಾಗುತ್ತದೆ.
ಮೃಗಶಿರಾ ಮಳೆಯ ನಕ್ಷತ್ರಕ್ಕೆ ಒಂದು ವಾರ ಬಾಕಿ ಇರುವಂತೆ ಕುಟುಗನಹಳ್ಳಿ ಹಬ್ಬದ ವಾತಾವರಣಕ್ಕೆ ಹೊರಳುತ್ತದೆ. ಗ್ರಾಮದ ಹೊರವಲಯದಲ್ಲಿ ಬರುವ ಜನರಿಗಾಗಿ ಹತ್ತಾರು ಎಕರೆ ಜಾಗವನ್ನು ಸ್ವಚ್ಛಗೊಳಿಸಲಾಗುತ್ತದೆ. ಸಾವಿರಾರು ಜನರ ಅನುಕೂಲಕ್ಕಾಗಿ ಕುಡಿಯುವ ನೀರು ಸೇರಿದಂತೆ ವಿವಿಧ ಆಹಾರ ಸಂಗ್ರಹ ಕಾರ್ಯ ನಡೆಯುತ್ತದೆ. ಇವುಗಳನ್ನೆಲ್ಲ ಸ್ವತಃ ಗ್ರಾಮಸ್ಥರೇ ಸ್ವಇಚ್ಛೆಯಿಂದ ಮಾಡುತ್ತಾರೆ. ಅಂದಾಜಿನ ಪ್ರಕಾರ ಪ್ರತಿವರ್ಷ ಸಾವಿರ ಜನರು ಹೆಚ್ಚುತ್ತಿದ್ದಾರೆ. ಕುಟುಗನಹಳ್ಳಿಯ ಗ್ರಾಮಸ್ಥರಿಗೆ ಕುಲಕರ್ಣಿ ಕುಟುಂಬದ ಬಗ್ಗೆ ಗೌರವ ಭಾವನೆಯಿದ್ದು ಜನರ ನಿಯಂತ್ರಣ ಹಾಗೂ ಅನುಕೂಲಕ್ಕಾಗಿ ಪ್ರತಿಯೊಬ್ಬರೂ ಯಾರ ಆಣತಿಗೂ ಕಾಯದೆ ವಿವಿಧ ಕೆಲಸಗಳಲ್ಲಿ ನಿರತರಾಗಿರುತ್ತಾರೆ.
ಮುಂಜಾಗ್ರತಾ ಕ್ರಮವಾಗಿ ಎರಡು ದಿನಗಳ ಮುಂಚೆ ಪೊಲೀಸರು ಬೀಡು ಬಿಟ್ಟಿರುತ್ತಾರೆ. ಮೃಗಶಿರಾ ನಕ್ಷತ್ರದ ಹಿಂದಿನ ರಾತ್ರಿಯೇ ಸಾಕಷ್ಟು ಜನ ಇಲ್ಲಿಗೆ ಆಗಮಿಸುವುದರಿಂದ ಪೋಲೀಸರ ಕಾವಲು ಇರುತ್ತದೆ. ಕುಟುಗನಹಳ್ಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೇ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳ ಜನರ ಮಹಾಪೂರ ಇಲ್ಲಿಗೆ ಹರಿದು ಬರುತ್ತದೆ. ಈ ವರ್ಷ ಜೂ. 9ರಂದು ಮೃಗಶಿರಾ ಮಳೆ ಕೂಡುವ ದಿನವಾಗಿದ್ದು, ಜೂ. 8ರ ರಾತ್ರಿಯಿಂದಲೇ ಜನಸಾಗರ ಇಲ್ಲಿರುತ್ತದೆ.
1961ರಿಂದ ಆರಂಭವಾದ ಈ ಪರಂಪರೆಯನ್ನು ವ್ಯಾಸರಾವ್ ಕುಲಕರ್ಣಿ 30 ವರ್ಷಗಳವರೆಗೆ ನಡೆಸಿಕೊಂಡು ಬಂದರು. ತಮ್ಮ ಕೊನೆಯ ದಿನಗಳಲ್ಲಿ ಪುತ್ರ ಅಶೋಕರಾವ್ ಅವರಿಗೆ ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವಂತೆ ಹೇಳಿದ್ದರಿಂದ ಅಶೋಕರಾವ್ 20 ವರ್ಷಗಳಿಂದ ಉಚಿತವಾಗಿ ಔಷಧಿ ಕೊಡುತ್ತಾ ಬಂದಿದ್ದಾರೆ. ಕುಟುಗನಹಳ್ಳಿಗೆ ಬರುವ ಜನರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇಲ್ಲಿ ಬರುವ ಜನರು ಯಾವಾಗ ಬರಬೇಕು ಎಂದು ಯಾರನ್ನೂ ಕೇಳುವುದಿಲ್ಲ. ಕ್ಯಾಲೆಂಡರ್ ನೋಡಿ ಮೃಗಶಿರಾ ಮಳೆ ಕೂಡುವ ಘಳಿಗೆಗೆ ಸರಿಯಾಗಿ ಕುಟುಗನಹಳ್ಳಿಯಲ್ಲಿ ಇರುತ್ತಾರೆ. ಕುಲಕರ್ಣಿ ಕುಟುಂಬವೂ ಕೂಡಾ ಯಾವುದೇ ಬಗೆಯಲ್ಲಿ ಪ್ರಚಾರ ಮಾಡುವುದಿಲ್ಲ ಎಂಬುದು ವಿಶೇಷ.

ದಾವಣಗೆರೆಯ ಅಡಿಕೆ ಬೆಳೆಗಾರರಲ್ಲಿ ಮೂಡಿದೆ ಆತಂಕ


ಕೆಲವು ವರ್ಷಗಳಿಂದೀಚೆಗೆ ಅಡಕೆಗೆ ದೊರೆಯುತ್ತಿದ್ದ ಭಾರೀ ಬೆಲೆಯಿಂದ ಉತ್ತೇಜಿತಗೊಂಡ ದಾವಣಗೆರೆ ಜಿಲ್ಲೆಯ ಕೆಲವು ರೈತರು ನಿಧಾನವಾಗಿ ಸಾಂಪ್ರದಾಯಿಕ ಬೆಳೆಗಳಾದ ಭತ್ತ, ಕಬ್ಬಿಗೆ ತಿಲಾಂಜಲಿ ನೀಡಿ ಅಡಿಕೆ ಬೆಳೆಯತೊಡಗಿದರು. ನೋಡ ನೋಡುತ್ತಿದ್ದಂತೆ ಭತ್ತದ ಗದ್ದೆಗಳು ಅಡಿಕೆ ತೋಟಗಳಾಗಿ ಪರಿವರ್ತನೆಗೊಂಡವು. ಗದ್ದೆ ಮಾತ್ರವಲ್ಲ ಗ್ರಾಮಗಳ ಹೊರ ವಲಯ, ಗುಡ್ಡಗಾಡು ಪ್ರದೇಶದಲ್ಲೂ ಅಡಿಕೆ ತೋಟಗಳೇ ಕಾಣಿಸತೊಡಗಿದವು.
ಅರೆ ಮಲೆನಾಡು, ಶುಷ್ಕ ಪ್ರದೇಶ ಹೊಂದಿರುವ ನಡು ಕರ್ನಾಟಕದ ಕೇಂದ್ರಬಿಂದು ದಾವಣಗೆರೆ ಜಿಲ್ಲೆಯಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ದಾವಣಗೆರೆ ತಾಲೂಕಿನ 7,900, ಚನ್ನಗಿರಿ 18,550, ಹೊನ್ನಾಳಿ 5,300, ಹರಿಹರ 1,300, ಹರಪನಹಳ್ಳಿ 600 ಹಾಗೂ ಜಗಳೂರು ತಾಲೂಕಿನ 900 ಹೆಕ್ಟೇರ್ ಸೇರಿ ಜಿಲ್ಲೆಯಲ್ಲಿ ಒಟ್ಟಾರೆ 34,466 ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಪ್ರತಿ ಹೆಕ್ಟೇರ್ಗೆ ಸರಾಸರಿ 2.5 ಟನ್ ಅಡಕೆ ಇಳುವರಿ ದೊರೆಯುತ್ತದೆ.
ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಅತಿ ಹೆಚ್ಚು 18,550 ಹೆಕ್ಟೇರ್ಗೂ ಹೆಚ್ಚಿನ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಅರೆ ಮಲೆನಾಡಿನಂತಿರುವ ಚನ್ನಗಿರಿ ತಾಲೂಕಿನ ಬಸವಾಪಟ್ಟಣ, ಕಸಬಾ, ಉಬ್ರಾಣಿ ಹೋಬಳಿಗಳಲ್ಲಿ ಹೆಚ್ಚಿನ ಅಡಿಕೆ ತೋಟಗಳಿವೆ. ಅಡಿಕೆ ಮಾರುಕಟ್ಟೆಗೆ ಖ್ಯಾತಿ ಹೊಂದಿರುವ ಭೀಮಸಮುದ್ರಕ್ಕೆ ಸಮೀಪದ, ಮಾವು ಬೆಳೆಗೆ ಹೆಸರುವಾಸಿಯಾಗಿರುವ ಸಂತೇಬೆನ್ನೂರು ಹೋಬಳಿಯಲ್ಲೂ ರೈತರು ಅಡಿಕೆಯತ್ತ ಮುಖ ಮಾಡಿದ್ದಾರೆ. ಹಲವು ವರ್ಷಗಳ ಹಿಂದೆ ತಲೆದೋರಿದ್ದ ಬರಗಾಲದಿಂದ ಚನ್ನಗಿರಿ ತಾಲೂಕಿನ ಅಡಿಕೆ ಬೆಳೆಗಾರರು ತೋಟ ಉಳಿಸಿಕೊಳ್ಳಲು ನಡೆಸಿದ ಭಗೀರಥ ಪ್ರಯತ್ನ ರಾಜ್ಯದ ಗಮನವನ್ನೇ ಸೆಳೆದಿತ್ತು. 800ರಿಂದ 1,000 ಸಾವಿರ ಅಡಿ ಕೊರೆದರೂ ನೀರು ಸಿಗದ ಪರಿಸ್ಥಿತಿ ಎದುರಾಗಿತ್ತು. ಟ್ಯಾಂಕರ್ ಮೂಲಕ ನೀರು ತಂದು ತೋಟ ಉಳಿಸಿಕೊಂಡ ಉದಾಹರಣೆಗಳೂ ಇವೆ.
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿರುವ ಹೊನ್ನಾಳಿ ತಾಲೂಕಿನಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಅತಿ ಹೆಚ್ಚಿನ ನೀರಾವರಿ ಪ್ರದೇಶ ಹೊಂದಿರುವ ಹರಿಹರದಲ್ಲಿ ರೈತರು ಅಷ್ಟಾಗಿ ಅಡಿಕೆಯತ್ತ ಮುಖ ಮಾಡಿಲ್ಲ. ದಾವಣಗೆರೆ ತಾಲೂಕಿನ ಎಚ್. ಕಲ್ಪನಹಳ್ಳಿ, ಮಾಯಕೊಂಡ, ಹೆದ್ನೆ, ಕಬ್ಬೂರು, ರಾಮಗೊಂಡನಹಳ್ಳಿ, ಅತ್ತಿಗೆರೆ, ಶ್ಯಾಗಲೆ, ಬೆಳವನೂರು, ತುರ್ಚಘಟ್ಟ, ಹದಡಿ, ಕುಕ್ಕುವಾಡ, ಶಿರಮಗೊಂಡನಹಳ್ಳಿ ಇತರೆಡೆ ಅಡಿಕೆ ಕಂಡು ಬರುತ್ತದೆ.
ಬರಪೀಡಿತ ತಾಲೂಕು ಹಣೆಪಟ್ಟಿ ಹೊಂದಿರುವ ಹರಪನಹಳ್ಳಿ, ಜಗಳೂರಿನಲ್ಲೂ ಅಡಿಕೆ ಬೆಳೆಯಲಾಗುತ್ತಿದೆ. ಹರಪನಹಳ್ಳಿ ತಾಲೂಕಿನ ಅರಸೀಕೆರೆ, ದುಗ್ಗಾವತಿ, ತೆಲಗಿ, ಉಚ್ಚಂಗಿದುರ್ಗ, ಕುರೇಮಾಗನಹಳ್ಳಿ ಇತರೆಡೆ ಬೆಳೆಯಲಾಗುತ್ತಿದೆ. ಜಗಳೂರು ತಾಲೂಕಿನ ಬಿದರಕೆರೆ, ಸೊಕ್ಕೆ, ಬಿಳಿಚೋಡು ಇತರರಡೆ ಕೊಳವೆಬಾವಿ ನೀರಿನಿಂದ ಬೆಳೆಯಲಾಗುತ್ತಿದೆ.
ಗುಟ್ಕಾ ನಿಷೇಧ ಅಡಿಕೆ ಬೆಳೆಗಾರರನ್ನು ಕನಲುವಂತೆ ಮಾಡಿದೆ. ಎರಡು ವರ್ಷದ ಹಿಂದೆ ಗುಟ್ಕಾ ನಿಷೇಧದ ವಿರುದ್ಧ ದಾವಣಗೆರೆಯಲ್ಲಿ ಸುರಿಯುವ ಮಳೆಯಲ್ಲೇ ಬೃಹತ್ ಹೋರಾಟ ನಡೆಸಿದ್ದ ರೈತರು ಸುಮಾರು ಎರಡೂವರೆ ಗಂಟೆಗೂ ಅಧಿಕ ಕಾಲ ಹುಬ್ಬಳ್ಳಿ- ಬೆಂಗಳೂರು ಪ್ಯಾಸೆಂಜರ್ ರೈಲು ತಡೆದಿದ್ದರು.
20 ಸಾವಿರ ಕ್ವಿಂಟಲ್ ಅಡಿಕೆ ಗುಟ್ಕಾಕ್ಕೆ
ಕ್ಯಾಂಪ್ಕೋ ಮೂಲಗಳ ಪ್ರಕಾರ ದಾವಣಗೆರೆ ಜಿಲ್ಲೆಯಿಂದ ಪ್ರತಿ ವರ್ಷ 15ರಿಂದ 20 ಸಾವಿರ ಕ್ವಿಂಟಲ್ ಅಡಿಕೆ ಉತ್ತರ ಭಾರತದ ವಿವಿಧ ರಾಜ್ಯಗಳಿಗೆ ಅಂದರೆ ‘ಗುಟ್ಕಾ’ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಿಗೆ ರ್ತಾಗುತ್ತದೆ. ಪ್ರತಿ ನಿತ್ಯ ನೂರಾರು ಕ್ವಿಂಟಲ್ ಅಡಿಕೆ ಕ್ಯಾಂಪ್ಕೋಗೆ ಬರುತ್ತದೆ. ಜಿಲ್ಲೆಯ 70-80 ಸಾವಿರ ಎಕರೆ ಪ್ರದೇಶದಿಂದ ವರ್ಷಕ್ಕೆ 8 ರಿಂದ 9 ಲಕ್ಷ ಚೀಲ ಅಡಿಕೆ ಬರುತ್ತದೆ. ದಾವಣಗೆರೆಯಲ್ಲಿರುವ ಖಾಸಗಿ ಮಾರುಕಟ್ಟೆಗೂ ಅಧಿಕ ಅವಕ ಬರುತ್ತದೆ.
ಚನ್ನಗಿರಿಯಲ್ಲಿರುವ ತುಮ್ಕೋಸ್ ಮೂಲಗಳ ಪ್ರಕಾರ, ಕಳೆದ ಸಾಲಿನಲ್ಲಿ 2,15,000 ಚೀಲ ಅಡಕೆ ಬಂದಿದ್ದು, 1,86,000 ಚೀಲ ಮಾರಾಟವಾಗಿದೆ. ರಾಶಿ, ಗೊರಬಲು ಈ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಚನ್ನಗಿರಿ ತಾಲೂಕಲ್ಲದೆ, ಭದ್ರಾವತಿ (ಶಿವಮೊಗ್ಗ ಜಿಲ್ಲೆ) ಹಾಗೂ ಹೊಳಲ್ಕೆರೆ (ಚಿತ್ರದುರ್ಗ ಜಿಲ್ಲೆ) ತಾಲೂಕಿನ ರೈತರು ತುಮ್ಕೋಸ್ಗೆ ಅಡಕೆ ತರುತ್ತಾರೆ.

ಗುಟ್ಕಾ ನಿಷೇಧದಿಂದ ದರ ಇಳಿಯುವ ಸಾಧ್ಯತೆಯಿದೆ, ಯಾಕೆಂದರೆ...


ಪ್ರಸಕ್ತ ವರ್ಷ ಅಡಿಕೆ ದರ ಕುಸಿದ ಕಾರಣ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬೆಳೆಗಾರರು ಗುಟ್ಕಾ ನಿಷೇಧದಿಂದ ಇನ್ನಷ್ಟು ಕಂಗಾಲಾಗಿದ್ದಾರೆ. ಅಡಿಕೆ ವಹಿವಾಟು ಚೇತರಿಕೆ ಕಂಡುಕೊಳ್ಳುತ್ತದೆ ಎನ್ನುತ್ತಿರುವಂತೆಯೇ ಆಗಾಗ ಪ್ರತ್ಯಕ್ಷವಾಗುವ ಗುಟ್ಕಾ ನಿಷೇಧ ಗುಮ್ಮ ಅಡಿಕೆ ಬೆಳೆಗಾರರನ್ನು ಬೆಂಬಿಡದ ಕಂಟಕವಾಗಿ ಪರಿಣಮಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರಗಳಲ್ಲಿ ಬೆಲೆಯುವ ಅಡಿಕೆಯಲ್ಲಿ ಪ್ರಮುಖವಾಗಿ ಎರಡು ಬಗೆ. ಕೆಂಪಡಿಕೆ ಹಾಗೂ ಚಾಲಿ. ಕೆಂಪಡಿಕೆಯಲ್ಲಿ ಆಪಿ, ಕೆಂಪು(ರಾಶಿ) ಮುಖ್ಯವಾಗಿದ್ದು ಅವನ್ನು ಪರಿಷ್ಕರಿಸಿದಾಗ ಕೆಂಪುಗೋಟು, ಕಲ್ಲು ಬೆಟ್ಟೆ ಮುಂತಾಗಿ ಎರಡನೇ ದರ್ಜೆಯೆಂದು ವಿಂಗಡಿಸಲಾಗುತ್ತದೆ. ಚಾಲಿ ಅಡಕೆಯನ್ನು ಪರಿಷ್ಕರಿಸಿ ಗಟ್ಟಿಚಾಲಿ ನಂತರ ಎರಡನೇ ದರ್ಜೆಯಲ್ಲಿ ಸೆಕೆಂಡ್ ಚಾಲಿ, ಬಿಳೆಗೋಟು, ಕೋಕಾ ಮುಂತಾಗಿ ವಿಂಗಡಿಸಲಾಗುತ್ತದೆ. ದಕ್ಷಿಣ ಕನ್ನಡದಲ್ಲಿ ಚಾಲಿಗೆ ಮಾತ್ರ ಪ್ರಾಶಸ್ತ್ಯವಾಗಿದ್ದರೆ ಉತ್ತರ ಕನ್ನಡದಲ್ಲಿ ಕೆಂಪಡಿಕೆ ಹಾಗೂ ಚಾಲಿ ಪ್ರಮುಖವಾಗಿ ಉತ್ಪಾದಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಬಹುಭಾಗದಲ್ಲಿ ಕೆಂಪಡಿಕೆ, ಸ್ವಲ್ಪಮಟ್ಟಿಗೆ ಚಾಲಿ, ಚಿಕ್ಕಮಗಳೂರು, ಹಾಸನ, ದಾವಣಗೆರೆ ಜಿಲ್ಲೆಗಳಲ್ಲಿ ಕೆಂಪಡಿಕೆ (ಸರಕು) ಉತ್ಪಾದಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಯಲ್ಲಿ ಸಾಕಷ್ಟು ವೈವಿಧ್ಯತೆಯಿದ್ದು ಕರಾವಳಿ ಪ್ರದೇಶದಲ್ಲಿ ಅಡಿಕೆಯನ್ನು ಹಣ್ಣಾದ ನಂತರ ಕೊಯ್ಲು ಮಾಡಿ ಒಣಗಿಸಿ ಚಾಲಿ ಮಾಡಲಾಗುತ್ತದೆ. ಯಲ್ಲಾಪುರ ಭಾಗದ ಆಫಿ ಅಡಿಕೆಗೆ ಬೇಡಿಕೆಯಿರುವ ಕಾರಣ ಬಹುಪಾಲು ಕೆಂಪಡಿಕೆ, ಶಿರಸಿ, ಸಿದ್ದಾಪುರ ಭಾಗದಲ್ಲಿ ಕೆಂಪಡಿಕೆ, ಚಾಲಿ ಎರಡೂ ಒಂದೇ ಮಟ್ಟದಲ್ಲಿ ಉತ್ಪಾದನೆಯಾಗುತ್ತಿದೆ.
ಎಳೆ ಅಡಿಕೆ ಗೊನೆಯನ್ನು ಕೊಯ್ಲು ಮಾಡಿ ಅಡಿಕೆ ಸುಲಿದು, ಒಣಗಿಸಿ ನಂತರ ಅದಕ್ಕೆ ಅಡಿಕೆ ಚೊಗರಿನ ದ್ರವದಿಂದ ಬಣ್ಣ ಹಾಕಿ ಮಾರುಕಟ್ಟೆಗೆ ತರಲಾಗುತ್ತದೆ. ಚಾಲಿ ತಯಾರಿಸಬೇಕೆಂದರೆ ಅಡಿಕೆ ಪೂರ್ತಿ ಹಣ್ಣಾದ ನಂತರ ಕೊಯ್ಲು ಮಾಡಿ ಒಣಗಿಸಿ, ಸುಲಿದು ಪರಿಷ್ಕರಿಸಿ ಮಾರುಕಟ್ಟೆಗೆ ತರಲಾಗುತ್ತದೆ. ದಕ್ಷಿಣ ಕನ್ನಡದಲ್ಲಿ ಪೂರ್ತಿ ಹಣ್ಣಾದ ನಂತರ ಕೊಯ್ಲು ಮಾಡಲಾಗುತ್ತದೆ. ಉತ್ತರ ಕನ್ನಡದಲ್ಲಿ ಕೆಂಪಡಿಕೆ ಮಾಡಬೇಕೆಂದರೆ ಎಳೆಗೊನೆಗಳನ್ನು, ಚಾಲಿ ಮಾಡಬೇಕೆಂದರೆ ಹಣ್ಣು ಗೊನೆಗಳನ್ನು ಕೊಯ್ಯುತ್ತಾರೆ. ಋತುಮಾನ ಮತ್ತು ಹಂಗಾಮನ್ನು ಅವಲಂಬಿಸಿ ಕೆಲವು ಬಾರಿ ಬದಲಾಗುತ್ತದೆ. ಉಳಿದ ಜಿಲ್ಲೆಗಳಲ್ಲಿ ಬಹುತೇಕ ಎಳೆಗೊನೆ ಕೊಯ್ಲು ಮಾಡಿ ಕೆಂಪಡಿಕೆ ಅಥವಾ ಸರಕು ಸಿದ್ಧಗೊಳಿಸಲಾಗುತ್ತದೆ.
ಅಡಿಕೆ ದರದ ಏರಿಳಿತಕ್ಕೆ ಪ್ರಮುಖವಾಗಿ ಬೇಡಿಕೆ ಮತ್ತು ಪೂರೈಕೆ ಎನ್ನಲಾಗುತ್ತಿದ್ದರೂ ವಾಸ್ತವಿಕವಾಗಿ ದರದ ಏರಿಳಿತ ಶೇರು ಮಾರುಕಟ್ಟೆ ಹಾಗೂ ಅಡಿಕೆ ಆಮದಿನ ವದಂತಿಗಳನ್ನು ಅವಲಂಬಿಸಿಕೊಂಡಿದೆ. ಶೇ.75ಕ್ಕಿಂತ ಹೆಚ್ಚು ಪಾಲು ತಂಬಾಕಿನ ಜೊತೆಗೆ ಅಡಿಕೆ ಬಳಕೆಯಾಗುತ್ತದೆ.ಉಳಿದ ಶೇ. 25 ಎಲೆ ಹಾಗೂ ಮಸಾಲಾದ ಜೊತೆ ಬಳಸಲಾಗುತ್ತದೆ. ಬಹುಪಾಲು ಚ್ಯೂಯಿಂಗ್ಗೆ ಬಳಸಲಾಗುತ್ತಿದ್ದು ಔಷಧ, ವೈನ್ಗೆ ಬಳಸಲು ಬರುತ್ತದೆ ಎನ್ನುವುದು ಇನ್ನೂ ಸಂಶೋಧನೆ ಹಂತದಲ್ಲಿದೆ.
ಕರ್ನಾಟಕದಲ್ಲಿ ಪ್ರತಿವರ್ಷ 5 ಲಕ್ಷ ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆಗೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ-13,678 ಟನ್, ಸಿದ್ದಾಪುರ-9,498 ಟನ್, ಯಲ್ಲಾಪುರ-7,490 ಟನ್, ಹೊನ್ನಾವರ-4,920 ಟನ್, ಕುಮಟಾ- 2,178 ಟನ್ ಹಾಗೂ ಇತರ ತಾಲೂಕುಗಳಲ್ಲಿ 3327 ಟನ್ ಉತ್ಪಾದಿಸಲಾಗುತ್ತಿದೆ ಎನ್ನಲಾಗುತ್ತಿದೆ.
ಗುಟ್ಕ ನಿಷೇಧ ಪರಿಣಾಮ ಸದ್ಯದಲ್ಲಿ ಬಹುಪಾಲು ಕೆಂಪಡಿಕೆ ಉತ್ಪಾದಿಸುವ ಮಲೆನಾಡು ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮುಂತಾದ ಪ್ರದೇಶಗಳ ಮೇಲಾದರೂ ದೂರಗಾಮಿ ಪರಿಣಾಮವನ್ನು ಇನ್ನುಳಿದ ಭಾಗದ ಮೇಲೆ ಕಾಣಬಹುದಾಗಿದೆ. ಗುಟ್ಕಾ ನಿಷೇಧದಿಂದ ಕೆಂಪಡಿಕೆ ಉತ್ಪಾದಿಸುವ ಪ್ರದೇಶದಲ್ಲಿ ಚಾಲಿ ಉತ್ಪಾದಿಸತೊಡಗಿದರೆ ಚಾಲಿ ಮಾರುಕಟ್ಟೆ ಮೇಲೆ ಬೀಳುವ ಒತ್ತಡದಿಂದಾಗಿ ಬೇಡಿಕೆಗಿಂತ ಪೂರೈಕೆ ಹೆಚ್ಚಾಗಿ ದರ ಕುಸಿಯುವ ಸಾಧ್ಯತೆ ಹೆಚ್ಚಿದೆ.

20 ರಾಜ್ಯಗಳಲ್ಲಿ ಗುಟ್ಕಾ ನಿಷೇಧವಿದ್ದರೂ ಅಡಿಕೆ ಮಾರುಕಟ್ಟೆ ಅಸ್ವಿತ್ವದಲ್ಲಿದೆ, ಇದು ವಾಸ್ತವ...


ದೇಶದ 20 ರಾಜ್ಯಗಳಲ್ಲಿ ಗುಟ್ಕಾ ನಿಷೇಧ ಜಾರಿಯಾದ ಬಳಿಕವೂ ಅಡಿಕೆ ಬೆಳೆ ಮತ್ತು ಮಾರುಕಟ್ಟೆ ಅಸ್ತಿತ್ವದಲ್ಲಿದೆ. ಗುಟ್ಕಾ ನಿಷೇಧಿತ ರಾಜ್ಯಗಳ ಪಟ್ಟಿಗೆ ಕರ್ನಾಟಕ 2 ದಿನಗಳ ಹಿಂದಷ್ಟೇ ಸೇರ್ಪಡೆಗೊಂಡಿದೆ. ಆದರೆ, ಚಾಲಿ ಅಡಿಕೆಯ ಮಟ್ಟಿಗೆ ಗುಟ್ಕಾ ನಿಷೇಧ ಬಾಧಕವಾಗುವುದಿಲ್ಲ. ಯಾಕೆಂದರೆ ಪಾನ್ ಬೀಡಾಗಳಲ್ಲಿ ಬಳಕೆಯಾಗುತ್ತಿರುವ ಚಾಲಿ ಅಡಿಕೆಯ ಮಾರುಕಟ್ಟೆಗೂ, ಗುಟ್ಕಾ ತಯಾರಿಕೆಗೂ ನೇರ ಸಂಬಂಧವಿಲ್ಲ.
ಗುಟ್ಕಾ ಉದ್ಯಮ ಆರಂಭವಾದುದು 1989ರಲ್ಲಿ. ದೇಶದಾದ್ಯಂತ ಗುಟ್ಕಾ ಮಾರುಕಟ್ಟೆಗೆ ಬರಲು 2 ವರ್ಷದ ಅವಧಿ ತಗಲಿತ್ತು. 2005ರ ವೇಳೆಗೆ ದೇಶದ ಎಲ್ಲ ರಾಜ್ಯಗಳಲ್ಲಿ ವಿವಿಧ ಹೆಸರುಗಳುಳ್ಳ ಗುಟ್ಕಾ ಮಾರುಕಟ್ಟೆ ಪ್ರವೇಶಿಸಿತು. 2008ರಿಂದ ಗುಟ್ಕಾ ನಿಷೇಧ ಹಂತ ಹಂತವಾಗಿ ಜಾರಿಗೆ ಬರುತ್ತಿದೆ. ಗುಟ್ಕಾ ಉದ್ಯಮ ಆರಂಭವಾಗುವುದಕ್ಕೂ ಮೊದಲಿಗೂ ಅಡಿಕೆ ಮಾರುಕಟ್ಟೆ ಮತ್ತು ಬೆಳೆ ವಿಸ್ತರಣೆ ನಡೆಯುತ್ತಾ ಬಂದಿದೆ. 1991ರ ನಂತರ ಚಾಲಿ ಅಡಿಕೆ ಬೆಳೆ ದಾವಣಗೆರೆ, ಶಿವಮೊಗ್ಗ ಮತ್ತು ಮೈಸೂರಿನಂತಹ ಸಾಂಪ್ರದಾಯಿಕ ಬೆಳೆ ಪ್ರದೇಶಗಳಾಚೆಯ ಜಿಲ್ಲೆಗಳಲ್ಲಿಯೂ ವಿಸ್ತರಣೆಗೊಂಡಿದೆ. ಗಾತ್ರ ಮತ್ತು
ಗಟ್ಟಿತನದಲ್ಲಿ ಗುಣಮಟ್ಟ ಕಡಿಮೆ ಇದ್ದ ಚಾಲಿ ಅಡಿಕೆ, ಪಾನ್ ಬೀಡ ಮಾರುಕಟ್ಟೆಗೆ ಸರಬರಾಜಾಗಿದೆಯೇ ಹೊರತು ಗುಟ್ಕಾ ಉದ್ಯಮಕ್ಕೆ ಪೂರೈಕೆಯಾಗಲಿಲ್ಲ. ಚಾಲಿ ಅಡಿಕೆಯಲ್ಲಿನ ಕೋಕಾ ದರ್ಜೆಯ ಅಡಿಕೆ ಸ್ವಲ್ಪ ಪ್ರಮಾಣದಲ್ಲಿ ಗುಟ್ಕಾ ತಯಾರಿಕೆಗೆ ಪೂರೈಕೆಯಾಗುತ್ತಿತ್ತಾದರೂ ಗುಟ್ಕಾ ತಯಾರಕರು ಆಮದು ಅಡಿಕೆಯನ್ನೇ ಅವಲಂಬಿಸಿದ್ದರು ಎಂಬುದು ವಾಸ್ತವ.

ಮಂಗಳೂರಿನ ಅಡಿಕೆ ಬೆಳೆಗಾರ ಗುಟ್ಕಾ ನಿಷೇಧಕ್ಕೆ ಹೆದರಲ್ಲ. ಯಾಕೆಂದರೆ...


ರಾಜ್ಯದಲ್ಲಿ ಗುಟ್ಕಾ ನಿಷೇಧ ಜಾರಿಗೊಂಡರೆ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಗೆ ಯಾವ ತೊಂದರೆಯೂ ಇಲ್ಲ ಎನ್ನುತ್ತಾರೆ ಬೆಳೆಗಾರರು. ಯಾಕೆಂದರೆ ಗುಟ್ಕಾ ನಿಷೇಧಿತ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ  ಮಂಗಳೂರು ಚಾಲಿ ಅಡಿಕೆಗೆ ಬೇಡಿಕೆಯಿದೆ. ಗುಣಮಟ್ಟದ ಚಾಲಿ ಅಡಿಕೆ ಗುಟ್ಕಾ ತಯಾರಿಕೆಗೆ ಬಳಕೆಯಾಗುವುದೇ ಇಲ್ಲ. ಹಾಗಾಗಿ, ಮಂಗಳೂರು ಚಾಲಿ ಅಡಿಕೆಗೆ ಬಂಪರ್ ಧಾರಣೆಯಾಗಲಿದೆ ಎಂಬ ಲೆಕ್ಕಾಚಾರವನ್ನು ನೈಜ ಬೆಳೆಗಾರರು ಮುಂದಿಡುತ್ತಿದ್ದಾರೆ.
ಸಹಕಾರಿ ಸಂಘಗಳಿಂದ ಸಾಲ ಪಡೆದು ಮರುಪಾವತಿಗೆ ತಕರಾರು ತೆಗೆಯುವವರು, ಕಡಿಮೆ ಧಾರಣೆಗೆ ಅಡಿಕೆ ಖರೀದಿಸುವ ಹುನ್ನಾರ ಮಾಡುವ ಲಾಬಿಗಳು ಮಾತ್ರ ಗುಟ್ಕಾ ನಿಷೇಧದಿಂದ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಗುಲ್ಲು ಹಬ್ಬಿಸಬಹುದು. ಗುಟ್ಕಾಕ್ಕೂ ಚಾಲಿ ಅಡಿಕೆಗೂ ಸಂಬಂಧವಿದ್ದಿದ್ದರೆ ಮಂಗಳೂರು ಚಾಲಿ ಅಡಿಕೆ ಬಳಕೆದಾರ ಪ್ರದೇಶಗಳಲ್ಲಿ ಅಡಿಕೆ ಖರೀದಿಯೇ ಬಂದ್ ಆಗುತ್ತಿತ್ತು. ಏಕೆಂದರೆ ಅಲ್ಲಿ ಈ ಹಿಂದೆಯೇ ಗುಟ್ಕಾ ನಿಷೇಧ ಜಾರಿಯಲ್ಲಿದೆ. ಮಂಗಳೂರು ಚಾಲಿ ಗುಣಮಟ್ಟದ ಅಡಿಕೆ ಪಾನ್ ಬೀಡಾಗಳಿಗೆ ಮಾತ್ರ ಬಳಕೆಯಾಗುತ್ತದೆ. ಪಾನ್ ಬೀಡಾಗಳಿಗೆ ನಿಷೇಧ ಯಾವ ರಾಜ್ಯದಲ್ಲಿಯೂ ಇಲ್ಲ. ಹಾಗಿರುವಾಗ ಗುಟ್ಕಾ ನಿಷೇಧ ಮಾಡಿದರೆ ಮಂಗಳೂರು ಚಾಲಿ ಅಡಿಕೆ ಧಾರಣೆ ಕುಸಿಯುವುದು ಹೇಗೆ?
ಮಂಗಳೂರು ಚಾಲಿ ಅಡಿಕೆಯ 100 ಕೆ.ಜಿ. ತೂಕದಲ್ಲಿ 5 ಕೆ.ಜಿ.ಯಷ್ಟು ಪಟೋರ, ಉಳ್ಳಿಗಡ್ಡೆ, ಕರಿಗೋಟುನಂತಹ ಕಳಪೆ ಗುಣಮಟ್ಟದ ಅಡಿಕೆ ಸಿಗುತ್ತದೆ. ಇವುಗಳನ್ನು ಕೋಕಾ ಎಂದು ಕರೆಯುತ್ತಾರೆ. ಈಗ ಗುಣಮಟ್ಟದ ಹಳೆ ಅಡಿಕೆಗೆ ಕೆ.ಜಿ.ಗೆ 200 ರೂ. ಧಾರಣೆ ಇದೆ. ಕಳಪೆ ಗುಣಮಟ್ಟದ ಕೋಕಾ ಅಡಿಕೆಗೆ ಕೆ.ಜಿ.ಗೆ 180 ರೂ. ಗಳಿಗೆ ಖರೀದಿಯಾಗುತ್ತದೆ. ಕೋಕಾವನ್ನು ಸ್ವಲ್ಪ ಪ್ರಮಾಣದಲ್ಲಿ ಗುಟ್ಕಾಕ್ಕೆ ಬಳಸಲಾಗುತ್ತಿತ್ತು. ಕೋಕಾ ಅಡಿಕೆಗೆ ಗರಿಷ್ಠ ಬೇಡಿಕೆ ಇರುವ ರಾಜ್ಯ ಒರಿಸ್ಸಾ. ಅಲ್ಲಿ ಕೋಕಾ ಅಡಿಕೆಯನ್ನು ನೀರಲ್ಲಿ ನೆನೆಸಿ, ಬಳಿಕ ಕತ್ತರಿಸಿ ಬೀಡಾಗಳಲ್ಲಿ ಬಳಕೆ ಮಾಡಲಾಗುತ್ತದೆ. ಕೋಕಾ ಅಡಿಕೆ ಎಷ್ಟು ಪ್ರಮಾಣದಲ್ಲಿದ್ದರೂ ಒರಿಸ್ಸಾ ರಾಜ್ಯದಲ್ಲಿ ಬೇಡಿಕೆ ಇದೆ. ಅಲ್ಲಿನ ಸಾಮಾನ್ಯ ಅಂಗಡಿಗಳಲ್ಲಿ ನೀರಲ್ಲಿ ನೆನೆಸಿಟ್ಟ ಕೋಕಾ ಅಡಿಕೆಗಳು ಲಭ್ಯ ಎನ್ನುತ್ತಾರೆ ಅಡಿಕೆ ಬೆಳೆಗಾರರು.
ಗುಣಮಟ್ಟದ ಅಡಿಕೆಯಲ್ಲಿ ಕೋಕಾ ಮಿಶ್ರಣ ತೆಗೆದಾಗ ಉತ್ತಮ ದರ್ಜೆಯ ಅಡಿಕೆ ಲಭ್ಯವಾಗುತ್ತದೆ. ಅಡಿಕೆಯನ್ನು ಸಂಸ್ಕರಿಸುವ ಮೂಲಕ ಕೋಕಾವನ್ನು ಬೇರ್ಪಡಿಸಲಾಗುತ್ತದೆ. ಗುಟ್ಕಾ ನಿಷೇಧದ ಹಿನ್ನೆಲೆಯಲ್ಲಿ ಕಡಿಮೆ ಧಾರಣೆಯ ಪಾನ್ ಬೀಡಾಗಳಿಗೆ ಕೋಕಾ ಬಳಕೆಯಾಗುವ ಸಾಧ್ಯತೆ ಇರುವುದರಿಂದ ಚಾಲಿ ಅಡಿಕೆ ಮಾರುಕಟ್ಟೆಯ ಧಾರಣೆಯಲ್ಲಿ ಕೋಕಾದಿಂದ ಯಾವುದೇ ದುಷ್ಪರಿಣಾಮ ಉಂಟಾಗದು. ಒಂದು ವೇಳೆ ಅಂತಹ ವ್ಯತ್ಯಾಸಗಳಾದರೂ ಕೆ.ಜಿ.ಗೆ ಅಡಿಕೆ ಖರೀದಿಯಲ್ಲಿ 1 ರಿಂದ 2 ರೂ. ವ್ಯತ್ಯಾಸವಾಗಬಹುದು.
ಪಾನ್ವಾಲಾಗಳು ಉತ್ತಮ ದರ್ಜೆಯ ಕತ್ತರಿಸಿದ ಅಡಿಕೆಯ ಜತೆ ಕೋಕಾವನ್ನು ಕೂಡ ಮಿಶ್ರಣ ಮಾಡುವ ಕ್ರಮ ಈಗಾಗಲೇ ಅಡಿಕೆ ಬಳಕೆದಾರ ಪ್ರದೇಶದಲ್ಲಿ ಚಾಲ್ತಿಯಲ್ಲಿರುವುದರಿಂದ ಕೋಕಾ ಅಡಿಕೆಯ ಪ್ರಶ್ನೆಯನ್ನು ಮುಂದಿಟ್ಟು ಗುಣಮಟ್ಟದ ಅಡಿಕೆಯ ಧಾರಣೆಯನ್ನು ಕಡಿಮೆ ಮಾಡುವ ಹುನ್ನಾರಕ್ಕೆ ಅವಕಾಶವಾಗದಂತೆ ಅಡಿಕೆ ಬೆಳೆಗಾರರು ವ್ಯಾವಹಾರಿಕ ಜಾಣತನವನ್ನು ಪ್ರದರ್ಶಿಸಬೇಕಾದ ಸಂದರ್ಭವಿದು.
ಗುಟ್ಕಾ ನಿಷೇಧದ ಹಿನ್ನೆಲೆಯಲ್ಲಿ ಗುಟ್ಕಾ ಪ್ರಿಯರು ಮತ್ತೆ ಪಾನ್ಬೀಡಾಗಳಿಗೆ ಮರಳುವ ಸಾಧ್ಯತೆಗಳು ಹೆಚ್ಚಾಗಿವೆ. ಗುಟ್ಕಾ ನಿಷೇಧಿತ ರಾಜ್ಯಗಳಲ್ಲಿ ನಿಷೇಧದ ಬಳಿಕ ಪಾನ್ ತಿನ್ನುವವರ ಸಂಖ್ಯೆ ಮತ್ತು ಪಾನ್ ಬೀಡಾ ಅಂಗಡಿಗಳ ಸಂಖ್ಯೆ ಹೆಚ್ಚಿದೆ. ಹಾಗಿರುವಾಗ ಕರ್ನಾಟಕದಲ್ಲೂ ಪಾನ್ ವಾಲಾಗಳ ಸಂಖ್ಯೆ ಹೆಚ್ಚಾಗಲಿದೆ. ಗುಟ್ಕಾ ಬಳಕೆಯ ಕಾರಣದಿಂದಾಗಿ ಕಳೆದ 10 ವರ್ಷಗಳ ಅವಧಿಯಲ್ಲಿ ಉತ್ತರ ಭಾರತದ ಪಾನ್ವಾಲಾಗಳು ಇಲ್ಲಿಗೆ ವ್ಯಾಪಾರಕ್ಕಾಗಿ ಬರುವುದು ಕಡಿಮೆಯಾಗಿತ್ತು.
ಅಷ್ಟಕ್ಕೂ ಗುಟ್ಕಾ ನಿಷೇಧದ ನೇರ ಪರಿಣಾಮ ಬೀರುವುದು ಆಮದು ಅಡಿಕೆಯ ಮೇಲೆ. ಆಮದು ಅಡಿಕೆ ಬರುವುದು ನಿಂತರೆ ಇಲ್ಲಿನ ಅಡಿಕೆಗೆ ಸಹಜವಾಗಿ ಧಾರಣೆ ಏರುತ್ತದೆ. ಪಾನ್ ಬೀಡಾಗಳಿಗೆ ಬೇಡಿಕೆ ಹೆಚ್ಚುತ್ತದೆ.
ಗುಟ್ಕಾ ನಿಷೇಧ ಕೆಂಪಡಿಕೆ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಮುಂದಿನ ಸಾಲಿನಿಂದ ಅಥವಾ ಹಂತ ಹಂತವಾಗಿ ಕೆಂಪಡಿಕೆ ಬೆಳೆಗಾರ ಪ್ರದೇಶಗಳ ಅಡಿಕೆ ಬೆಳೆಗಾರರು ಚಾಲಿ ಅಡಿಕೆಯನ್ನು ಬೆಳೆಯಲು ಆರಂಭಿಸುವ ಸಾಧ್ಯತೆಗಳಿವೆ. ಈ ಹಂತದಲ್ಲಿ ಕೂಡ ಮಂಗಳೂರು ಚಾಲಿ ಮತ್ತು ಶಿವಮೊಗ್ಗ, ಶಿರಸಿ ಚಾಲಿ ಅಡಿಕೆಗಳ ನಡುವಣ ಗುಣಮಟ್ಟದಲ್ಲಿ ಅಷ್ಟೇ ವ್ಯತ್ಯಾಸವಿರುತ್ತದೆ. ಮಂಗಳೂರು ಚಾಲಿ ಅಡಿಕೆ ಬಳಕೆದಾರ ಪ್ರದೇಶ ರಾಜ್ಯಗಳಲ್ಲಿ ತಂಬಾಕು ಯುಕ್ತ ಪಾನ್ ಬೀಡಾಗಳ ನಿಷೇಧವಾಗುವ ತನಕ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ ಸುರಕ್ಷಿತವಾಗಿರುತ್ತದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.
ಇಲ್ಲಿದೆ ಖಡಕ್ ಕಟಿಂಗ್:
ಅಡಿಕೆಯ ಗುಣಮಟ್ಟದ ಕುರಿತಂತೆ ಮಾರುಕಟ್ಟೆಯಲ್ಲಿ ಒಂದು ವಿಂಗಡಣೆ ಇದೆ. ಮಂಗಳೂರು ಚಾಲಿ ಅಡಿಕೆ ಉತ್ತಮವಾಗಿ ಒಣಗಿರುವುದರಿಂದ ಅಡಕತ್ತರಿಯಲ್ಲಿ ಇಟ್ಟು ಕತ್ತರಿಸುವಾಗ ಗಟ್ಟಿಯಾಗಿರುತ್ತದೆ. ಇದನ್ನು ಖಡಕ್ ಕಟಿಂಗ್ ಎನ್ನುತ್ತಾರೆ. ಸಾಗರ, ಪಿರಿಯಾಪಟ್ಟಣ, ದಾವಣಗೆರೆ ಕಡೆಯ ಚಾಲಿ ಅಡಿಕೆಯನ್ನು ಬಿಸಿಲಿಗೆ ಎಷ್ಟು ಒಣಗಿಸಿದರೂ ಅದನ್ನು ಅಡಕತ್ತರಿಯಲ್ಲಿ ಕತ್ತರಿಸುವಾಗ ಮೆದುವಾಗಿರುತ್ತದೆ. ಇದನ್ನು ರಬ್ಬರ್ ಕಟಿಂಗ್ ಎನ್ನುತ್ತಾರೆ. ಕಾಸರಗೋಡು, ದ.ಕ., ಜಿಲ್ಲೆಗಳ ಚಾಲಿ ಅಡಿಕೆ ಯಾವತ್ತೂ ಖಡಕ್ ಕಟಿಂಗ್ ವರ್ಗಕ್ಕೆ ಸೇರಿದ ಅಡಿಕೆಯಾಗಿದೆ.

ಗುಟ್ಕಾ ನಿಷೇಧ ಬೇಡ, ಯಾಕೆಂದರೆ...ಮಲೆನಾಡಿನ ಸಾಂಪ್ರದಾಯಿಕ ಬೆಳೆಗಳಲ್ಲಿ ಅಡಿಕೆಗೆ ಮೊದಲ ಪ್ರಾಶಸ್ತ್ಯ. ಅಡಿಕೆ ಹಿಂದೂ ಸಂಸ್ಕೃತಿಯಲ್ಲಿ ಮಿಳಿತವಾಗಿ ಬೆಳೆದು ಬಂದ ವಸ್ತು. ಎಲ್ಲ ಧಾರ್ಮಿಕ ಆಚರಣೆಗಳಲ್ಲಿ  ಪ್ರಮುಖ ಪಾತ್ರ ವಹಿಸುವ ಅಡಿಕೆ ಮರ ಚಪ್ಪರದಲ್ಲಿ ಬಳಕೆಯಾದರೆ, ಅಡಿಕೆ ಸಿಂಗಾರ ಎಲ್ಲ ಶುಭ ಸಮಾರಂಭಗಳಲ್ಲಿಯೂ ಪ್ರಮುಖ ಸ್ಥಾನ ವಹಿಸುತ್ತದೆ. ಸಂಸ್ಕರಣೆಗೊಂಡ ಅಡಿಕೆ ಮಂಗಳ ದ್ರವ್ಯಗಳಲ್ಲಿ ಒಂದು. ವೀಳ್ಯದೆಲೆ ಜೊತೆ ಅಡಿಕೆ ಇಲ್ಲದಿದ್ದರೆ ಅದಕ್ಕೊಂದು ರಾಜ ಮರ್ಯಾದೆಯೇ ಇಲ್ಲ. ಮುತ್ತೈದೆಯರನ್ನು ಗೌರವಿಸುವ ಆಚರಣೆಯ ಒಂದು ಭಾಗವಾದ ಅರಿಸಿನ ಕುಂಕುಮದ ಜೊತೆ ನೀಡುವ ಬಟ್ಟೆ ಕಣದ ಜೊತೆ ಎಲೆಯಡಿಕೆ ಇರಲೇಬೇಕು. ದೇವರ ನೈವೇದ್ಯಕ್ಕೂ ಇದು ಬೇಕು. ದಂಪತಿಯ ಪಿಸುಮಾತಿನ ನಡುವೆ ತಾಂಬೂಲ ಇರಲೇಬೇಕು. ಅಡಿಕೆ ಆರೋಗ್ಯವರ್ಧಕವೂ ಹೌದು. ಮಲೆನಾಡಿನ ಬಹುತೇಕ ಜನ ತಾಂಬೂಲ ಪ್ರಿಯರು. ಮನೆಗೆ ಅತಿಥಿಗಳು ಬಂದಾಗ ತಾಂಬೂಲ ತಟ್ಟೆ ಕಾಣಿಸಿಕೊಂಡು ಅತಿಥಿಗಳನ್ನು ಎದುರುಗೊಳ್ಳುತ್ತದೆ.
ಮಲೆನಾಡು ಮತ್ತು ಬಯಲು ನಾಡಿನಲ್ಲಿ ಕೆಂಪಡಿಕೆಯಿದೆ. ಕೆಂಪಡಿಕೆಯಲ್ಲಿ ಸರಕು, ಬೆಟ್ಟೆ, ರಾಶಿ ಇಡಿ, ಇಡಿ, ಸಿಪ್ಪೆಗೋಟು, ಗೊರಬಲು,ಆಪಿ,ಚಿಕಣಿ, ಕೆಂಪುಗೋಟು, ಸಿಪ್ಪೆಗೋಟುಗಳಿವೆ. ಕೆಂಪಡಿಕೆಯಲ್ಲಿ ಸರಕು ವೆರೈಟಿ ಅಡಿಕೆಗೆ ಅಗ್ರ ಸ್ಥಾನ. ಅಡಿಕೆ ಧಾರಣೆಯಲ್ಲಿ ಮುಂಚೂಣಿಯಲ್ಲಿರುತ್ತದೆ. ಸದ್ಯ ಕ್ವಿಂಟಲ್ ಒಂದಕ್ಕೆ ಗರಿಷ್ಟ 27 ಸಾವಿರ ರೂ.ಗಳಿವೆ. ಹದವಾಗಿ ಬಲಿತ ಅಥವಾ ಸ್ವಲ್ಪ ಎಳೆಯದು ಎನ್ನಬಹುದಾದ ಅಡಿಕೆಯ ಸಿಪ್ಪೆಯನ್ನು ಸುಲಿದು ಒಳಗಿನ ಅಡಿಕೆಯನ್ನು ಎರಡು ಭಾಗ ಮಾಡಿ ಚೊಗರಿನೊಡನೆ ಬೇಯಿಸಿ ಒಣಗಿಸಿದರೆ ಸರಕು ಸಿದ್ಧ. ಬಳಿಕದ ಸ್ಥಾನ ಬೆಟ್ಟೆಯದು. ಸ್ವಲ್ಪ ಬಲಿತ ಅಡಿಕೆಯನ್ನು ಸುಲಿದು ಎರಡು ಭಾಗ ಮಾಡಿ ಸಂಸ್ಕರಣೆ ಮಾಡಿದರೆ ಬೆಟ್ಟೆ ಸಿದ್ಧವಾಗುತ್ತದೆ. ಸ್ವಲ್ಪ ಬಲಿತ, ಸ್ವಲ್ಪ ಎಳೆಯ ಅಡಿಕೆಯನ್ನು ಸುಲಿದು ಇಡಿಯಾಗಿ ಬೇಯಿಸಿ ಸಂಸ್ಕರಿಸಿದರೆ ರಾಶಿಇಡಿ ತಯಾರಾಗುತ್ತದೆ. ಬಲಿತ ಅಡಿಕೆಯನ್ನು ಸುಲಿದು ಇಡಿಯಾಗಿ ಬೇಯಿಸಿದರೆ ಇಡಿ. ಅಡಿಕೆ ಸಂಸ್ಕರಣೆಯಲ್ಲಿ ಬರುವ, ಯಾವ ವರ್ಗಕ್ಕೂ ಸರಿಯಾಗಿ ಸೇರದೆ, ಕೊನೆ ದರ್ಜೆ ಎಂದು ಪರಿಗಣಿಸುವ ಅಡಿಕೆಯನ್ನು ಗೊರಬಲು ಎನ್ನಲಾಗುತ್ತದೆ. ಇದಕ್ಕೆ ಕೊನೆಯ ಸ್ಥಾನ. ಮರದಲ್ಲಿಯೇ ಅಡಿಕೆ ಹಣ್ಣಾಗಲು ಬಿಟ್ಟು ಬಳಿಕ ಸಿಪ್ಪೆ ಸಮೇತ ಒಣಗಿಸಿದರೆ ಅದೇ ಸಿಪ್ಪೆಗೋಟು. ಒಳಗಿರುವುದು ಹಸಿ ಚಿಕಣಿ.
ಆಪಿ, ಚಿಕಣಿಗೆ ಉತ್ತಮ ಧಾರಣೆ:
ಸಾಗರದಲ್ಲಿ ಆಪಿ, ಚಿಕಣಿ ಮತ್ತು ಕೆಂಪುಗೋಟು ಅಡಿಕೆಯಿದೆ. ಆಪಿ ಮತ್ತು ಚಿಕಣಿಗೆ ಉತ್ತಮ ಧಾರಣೆಯಿದೆ. ಎಳೆ ಅಡಿಕೆಯನ್ನು ಸುಲಿದು ಉಂಡೆಯಾಗಿ ಬೇಯಿಸಿದರೆ ಚಿಕಣಿ, ಸ್ವಲ್ಪ ಬಲಿತ ಅಡಿಕೆಯನ್ನು ಸುಲಿದು ಇಡಿಯಾಗಿ ಬೇಯಿಸಿದರೆ ಆಪಿ. ಇಡಿ ಅಡಿಕೆಯಲ್ಲಿ ಇನ್ನೊಂದು ದರ್ಜೆಯೇ ಕೆಂಪಡಿಕೆ. ಕೆಂಪಡಿಕೆ, ಆಪಿ ಮತ್ತು ಚಿಕಣಿ ವೆರೈಟಿಗೆ ಆಯಾ ಪ್ರದೇಶದ ಮಣ್ಣಿನ ಗುಣಗಳು ಪ್ರಮುಖ ಪಾತ್ರ ವಹಿಸುತ್ತದೆ.
ಫೆಬ್ರುವರಿ ಹೊತ್ತಿಗೆ ಸಿಂಗಾರ ಕಾಣಿಸಿಕೊಂಡು ಮೇ ಹೊತ್ತಿಗೆ ಕಾಯಿ ಕಟ್ಟಲಾರಂಭಿಸುತ್ತದೆ. ಸೆಪ್ಟೆಂಬರ್ನಿಂದ ೆಬ್ರವರಿವರೆಗೆ ಅಡಿಕೆ ಕೊಯ್ಲಿನ ಕಾಲ. ಬಯಲು ನಾಡಿನಲ್ಲಿ ಸೆಪ್ಟೆಂಬರ್ ಹೊತ್ತಿಗೆ ಬೆಳೆ ಕೊಯ್ಲು ಆರಂಭಗೊಂಡರೆ, ಮಲೆನಾಡಿನಲ್ಲಿ ಕೊಯ್ಲು ಆರಂಭಗೊಳ್ಳುವುದೇ ಅಕ್ಟೋಬರ್ನ ವಿಜಯ ದಶಮಿಯ ಬಳಿಕ.
ಬಯಲು ನಾಡಿನಲ್ಲಿ ಅಡಿಕೆ ಮರದ ಎತ್ತರ ಕಡಿಮೆ. ಮಲೆನಾಡಿನಲ್ಲಿ ಹೆಚ್ಚು. ಕಾರಣ ಅಲ್ಲಿನ ಕಣಿವೆ ಪ್ರದೇಶ. ಅಡಿಕೆಯನ್ನು ಮಲೆನಾಡಿನಲ್ಲಿ ಕಣಿವೆ ಪ್ರದೇಶಗಳಲ್ಲಿ ಸಾಂಪ್ರದಾಯಿಕವಾಗಿ ಬೆಳೆಯುತ್ತಿದ್ದರು. ಇದರ ಉಗಮ ಯಾವಾಗ ಎಂದು ನಿಖರವಾಗಿ ಗೊತ್ತಿಲ್ಲ. ಆದರೆ ಇದು ಮಲೆನಾಡಿನ ಸಾಂಪ್ರದಾಯಿಕ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಮಲೆನಾಡಿನಲ್ಲಿ ಅಡಿಕೆ ಕೊಯ್ಲು ಎಂಬುದು ಬದುಕಿನ ಅವಿಭಾಜ್ಯ ಅಂಗ. 90ರ ದಶಕದ ನಂತರ ಅಡಿಕೆಗೆ ಧಾರಣೆ ಕಾಣಿಸಿಕೊಂಡ ಬಳಿಕ ಬಯಲು ನಾಡಿನಲ್ಲಿಯೂ ಇದನ್ನು ಬೆಳೆಯಲಾರಂಭಿಸಿದರು. ನೀರು ಮತ್ತು ಬಿಸಿಲು ಇದ್ದರೆ ಎಲ್ಲಿ ಬೇಕಾದರೂ ಉತ್ತಮವಾಗಿ ಬೆಳೆಯಬಹುದಾದ ವಿಶೇಷ ಬೆಳೆ. ಬಯಲು ನಾಡಿನಲ್ಲಿ ಮರದ ಎತ್ತರ ಕಡಿಮೆ ಇರುವುದರಿಂದ ಕೆಳಗಿನಿಂದಲೇ ನಿಂತು ಅಡಿಕೆ ಗೊನೆಯನ್ನು ಕೊಯ್ಯುತ್ತಾರೆ. ಮಲೆನಾಡಿನಲ್ಲಿ ಎತ್ತರದ ಅಡಿಕೆ ಮರವನ್ನು ಹತ್ತಿ ಅಡಿಕೆ ಗೊನೆ ತೆಗೆಯುವುದೇ ಒಂದು ಕಲೆ. ಹಿಂದೆ ಸಾಕಷ್ಟು ಸಂಖ್ಯೆಯಲ್ಲಿದ್ದ ಕೊನೆಗಾರರು ಇದೀಗ ಕಡಿಮೆಯಾಗಿದ್ದಾರೆ. ಹೊಸಬರು ಕಲಿಯುತ್ತಿಲ್ಲ. ಎತ್ತರಕ್ಕೆ ಏರಿ ಮರದಿಂದ ಮರಕ್ಕೆ ದಾಟುವ ಈ ಸಾಹಸ ರೋಮಾಂಚನ ಉಂಟು ಮಾಡುವ ಕ್ರಿಯೆ.
ಅಡಿಕೆ ತೋಟದಿಂದ ಅಡಿಕೆ ಗೊನೆ ಮನೆಯಂಗಳಕ್ಕೆ ಬಂದ ನಂತರ ಅದನ್ನು ಸುಲಿಯುವ ಕಾರ್ಯ ಆರಂಭ. ಸುಲಿದ ಅಡಿಕೆಯನ್ನು ದೊಡ್ಡ ದೊಡ್ಡ ಹಂಡೆಗಳಲ್ಲಿ ಚೊಗರಿನೊಡನೆ ಬೇಯಿಸಲಾಗುತ್ತದೆ. ಹೊನ್ನೆಮರ ಮತ್ತು ನೇರಲೆ ಮರದ ತೊಗಟೆಯನ್ನು ಬಳಸಿ ಚೊಗರು ತಯಾರು ಮಾಡಲಾಗುವುದು. ಈ ಚೊಗರು ಅಡಿಕೆಗೆ ಬಣ್ಣ ನೀಡುತ್ತದೆ. ಸುಮಾರು ನಾಲ್ಕು ತಾಸು ಬೇಯಿಸಿದ ಅಡಿಕೆಯನ್ನು ಸರಾಸರಿ 5-7 ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಬೇಕು. ಹೀಗೆ ಒಣಗಿದ ಅಡಿಕೆಯನ್ನು ಕೆಲವೆಡೆ ವಿವಿಧ ವೆರೈಟಿ ಅಡಿಕೆಯನ್ನಾಗಿ ವಿಂಗಡಿಸಿಯೇ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ. ಮಲೆನಾಡಿನಲ್ಲಿ ಇದು ಲಾಗಾಯ್ತಿನಿಂದ ನಡೆದು ಬಂದಿದೆ. ಆದರೆ ಬಯಲು ನಾಡಿನಲ್ಲಿ ಅಡಿಕೆ ವಿಂಗಡನೆ ಮಾಡುತ್ತಿಲ್ಲ. ಎಲ್ಲವನ್ನೂ ರಾಶಿಇಡಿ ಅಡಿಕೆಯನ್ನಾಗಿ ಮಾಡಿ ಮಾರುಕಟ್ಟೆಗೆ ಕಳುಹಿಸಲಾಗುತ್ತದೆ.
ಈಶಾನ್ಯ ರಾಜ್ಯಗಳಲ್ಲೂ ಬೆಳೆಯುತ್ತಾರೆ:
ಕರ್ನಾಟಕ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಉತ್ತರ ಈಶಾನ್ಯ ರಾಜ್ಯಗಳಲ್ಲಿ ಇದನ್ನು ಬೆಳೆಯಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ಮತ್ತು ಕೇರಳದಲ್ಲಿ ಬೆಳೆಯಲಾಗುತ್ತಿದ್ದು, ಇಲ್ಲಿ ಇದೊಂದು ವಾಣಿಜ್ಯ ಬೆಳೆಯಾಗಿದೆ. ಕರ್ನಾಟಕದಲ್ಲಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಇದೊಂದು ಸಾಂಪ್ರದಾಯಿಕ ವಾಣಿಜ್ಯ ಬೆಳೆ. ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಇದನ್ನು ಬೆಳೆಯಲಾಗುತ್ತಿದೆ. ಉಳಿದಂತೆ ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿಯೂ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 6 ಲಕ್ಷ ಎಕರೆ ಪ್ರದೇಶದಲ್ಲಿ ಇದನ್ನು ಬೆಳೆಯಲಾಗುತ್ತಿದ್ದು, ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಸುಮಾರು 4 ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ 35 ಲಕ್ಷ ಕ್ವಿಂಟಲ್ ಅಡಿಕೆಯನ್ನು ಪ್ರತಿ ವರ್ಷ ಉತ್ಪಾದಿಸಲಾಗುತ್ತಿದ್ದು, 90ರ ದಶಕದ ಬಳಿಕ ಉತ್ಪಾದನೆಯಲ್ಲಿ ಏರಿಕೆ ಗತಿ ಕಾಣಿಸಿದೆ. ಕಳೆದ ಎರಡು ವರ್ಷಗಳಿಂದ ಉತ್ಪಾದನೆಯ ಗತಿ ಸ್ಥಿರಗೊಂಡಿದೆ.
ಅಡಿಕೆಯನ್ನು ಸಾಂಪ್ರದಾಯಿಕವಾಗಿ ತಾಂಬೂಲದ ಒಂದು ಭಾಗವಾಗಿ ಬಳಸಲಾಗುತ್ತಿತ್ತು. ತಾಂಬೂಲ ಸೇವನೆ ಈ ದೇಶದಲ್ಲಿ ಸಾಮಾನ್ಯವಾಗಿದ್ದು, ಇದರ ಬಳಕೆ ಗರಿಷ್ಟ ಪ್ರಮಾಣದಲ್ಲಿಯೇ ಇತ್ತು. ಮಲೆನಾಡಿನ ಅಡಿಕೆಯಲ್ಲಿ ಸಾಮಾನ್ಯವಾಗಿ ಸರಕು ಮತ್ತು ಚಾಲಿ ಅಡಿಕೆಯನ್ನು ತಮಿಳುನಾಡು ಭಾಗಕ್ಕೆ ಕಳುಹಿಸಿಕೊಡಲಾಗುತ್ತಿತ್ತು. ಜೊತೆಗೆ ಮಹಾರಾಷ್ಟ್ರ ಮತ್ತು ಉತ್ತರ ಭಾರತದ ರಾಜ್ಯಗಳಿಗೂ ಕಳುಹಿಸಿಕೊಡಲಾಗುತ್ತಿತ್ತು. ಬೆಟ್ಟೆ, ಚಿಕಣಿ, ಗೊರಬಲು, ಇಡಿ ಅಡಿಕೆ ಉತ್ತರ ಭಾರತಕ್ಕೆ ಹೋಗುತ್ತಿತ್ತು. ಪಾಕಿಸ್ತಾನಕ್ಕೂ ಅಡಿಕೆ ರ್ತಾಗುತ್ತಿತ್ತು.
ಅಡಿಕೆಯನ್ನು ತಿನ್ನುವುದರ ಹೊರತಾಗಿ ಇತರೆ ಉದ್ದೇಶಕ್ಕಾಗಿ ಬಳಸಿರಲೇ ಇಲ್ಲ. ಬಣ್ಣ ಮತ್ತಿತರ ಉದ್ದೇಶಕ್ಕೆ ಇದು ಬಳಕೆಯಾಗುತ್ತಿದೆ ಎಂಬ ಮಾತುಗಳಷ್ಟೇ ಕೇಳಿ ಬರುತ್ತಿದ್ದರೂ ನಿಜವಾಗಿಯೂ ದೊಡ್ಡ ಪ್ರಮಾಣದಲ್ಲಿ ಎಲ್ಲಿಯೂ ಬಳಕೆಯಾಗಿಲ್ಲ. ಪಾನ್ ಮಸಾಲ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿರಲಿಲ್ಲ.
90ರ ದಶಕದಲ್ಲಿ ಬಂತು ಲಕ್:
90ರ ದಶಕದಲ್ಲಿ ಗುಟ್ಕಾ ತಯಾರಿಕೆ ಆರಂಭಗೊಂಡಾಗ ಅಡಿಕೆಗೆ ನಿಜಕ್ಕೂ ಲಕ್ ತಿರುಗಿದ್ದು. ಒಂದೇ ಬಾರಿಗೆ ಧಾರಣೆ ಏರುಮುಖದಲ್ಲಿ ಓಡಲಾರಂಭಿಸಿದ್ದು, ನಂತರದ ದಿನಗಳಲ್ಲಿ ಇಳಿದದ್ದು ಕಡಿಮೆ. ಹೀಗಾಗಿ ಇದಕ್ಕೆ ಚಿನ್ನದ ಬೆಳೆ ಎಂದೇ ಕರೆಯಲಾಯಿತು. ಬೆಲೆ ಏರುತ್ತಿದ್ದಂತೆ ಅಡಿಕೆ ತೋಟದ ವಿಸ್ತರಣೆಯೂ ಜಾಸ್ತಿಯಾಯಿತು. ಅಡಿಕೆಯಲ್ಲಿ ಶೇ. 50ರಷ್ಟು ಅಡಿಕೆ ಗುಟ್ಕಾ ಬಳಕೆಗೆ ಹೋಗುತ್ತಿದೆ ಎಂಬುದು ಒಂದು ಅಂದಾಜು. ಆದರೆ ಗುಟ್ಕಾ ನಿಷೇಧವಾದ ಬಹುತೇಕ ಸಂದರ್ಭದಲ್ಲಿ ಅಡಿಕೆ ಧಾರಣೆ ಕುಸಿದ ಉದಾಹರಣೆ ಕಡಿಮೆ. ಆದರೆ ಅಡಿಕೆ ಧಾರಣೆಯ ಮೇಲೆ ಗುಟ್ಕಾ ಪರಿಣಾಮ ಬೀರಿದ್ದಂತೂ ನಿಜ. ಗುಟ್ಕಾ ನಿಷೇಧವಾದರೆ ಅಡಿಕೆ ಧಾರಣೆ ಮೇಲೆ ಗಂಭೀರ ಪರಿಣಾಮ ಬೀರುವುದಿಲ್ಲ ಎಂಬುದು ಬಹುತೇಕರ ಮಾತು. ಒಮ್ಮೆ ಗುಟ್ಕಾ ನಿಷೇಧಗೊಂಡರೆ ನಿಜವಾಗಿಯೂ ಅಡಿಕೆಗೆ ಮಾನ ಬರುತ್ತದೆ ಎನ್ನುತ್ತಾರೆ. ಧಾರಣೆಯ ಏರಿಳಿತ ಕಡಿಮೆಯಾಗಿ ಸ್ಥಿರತೆ ಕಾಣುತ್ತದೆ ಎಂಬುದು ಬಹುತೇಕ ಜನರ ನಂಬಿಕೆ.