ಮಂಗಳೂರಿನ ಅಡಿಕೆ ಬೆಳೆಗಾರ ಗುಟ್ಕಾ ನಿಷೇಧಕ್ಕೆ ಹೆದರಲ್ಲ. ಯಾಕೆಂದರೆ...


ರಾಜ್ಯದಲ್ಲಿ ಗುಟ್ಕಾ ನಿಷೇಧ ಜಾರಿಗೊಂಡರೆ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಗೆ ಯಾವ ತೊಂದರೆಯೂ ಇಲ್ಲ ಎನ್ನುತ್ತಾರೆ ಬೆಳೆಗಾರರು. ಯಾಕೆಂದರೆ ಗುಟ್ಕಾ ನಿಷೇಧಿತ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ  ಮಂಗಳೂರು ಚಾಲಿ ಅಡಿಕೆಗೆ ಬೇಡಿಕೆಯಿದೆ. ಗುಣಮಟ್ಟದ ಚಾಲಿ ಅಡಿಕೆ ಗುಟ್ಕಾ ತಯಾರಿಕೆಗೆ ಬಳಕೆಯಾಗುವುದೇ ಇಲ್ಲ. ಹಾಗಾಗಿ, ಮಂಗಳೂರು ಚಾಲಿ ಅಡಿಕೆಗೆ ಬಂಪರ್ ಧಾರಣೆಯಾಗಲಿದೆ ಎಂಬ ಲೆಕ್ಕಾಚಾರವನ್ನು ನೈಜ ಬೆಳೆಗಾರರು ಮುಂದಿಡುತ್ತಿದ್ದಾರೆ.
ಸಹಕಾರಿ ಸಂಘಗಳಿಂದ ಸಾಲ ಪಡೆದು ಮರುಪಾವತಿಗೆ ತಕರಾರು ತೆಗೆಯುವವರು, ಕಡಿಮೆ ಧಾರಣೆಗೆ ಅಡಿಕೆ ಖರೀದಿಸುವ ಹುನ್ನಾರ ಮಾಡುವ ಲಾಬಿಗಳು ಮಾತ್ರ ಗುಟ್ಕಾ ನಿಷೇಧದಿಂದ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಗುಲ್ಲು ಹಬ್ಬಿಸಬಹುದು. ಗುಟ್ಕಾಕ್ಕೂ ಚಾಲಿ ಅಡಿಕೆಗೂ ಸಂಬಂಧವಿದ್ದಿದ್ದರೆ ಮಂಗಳೂರು ಚಾಲಿ ಅಡಿಕೆ ಬಳಕೆದಾರ ಪ್ರದೇಶಗಳಲ್ಲಿ ಅಡಿಕೆ ಖರೀದಿಯೇ ಬಂದ್ ಆಗುತ್ತಿತ್ತು. ಏಕೆಂದರೆ ಅಲ್ಲಿ ಈ ಹಿಂದೆಯೇ ಗುಟ್ಕಾ ನಿಷೇಧ ಜಾರಿಯಲ್ಲಿದೆ. ಮಂಗಳೂರು ಚಾಲಿ ಗುಣಮಟ್ಟದ ಅಡಿಕೆ ಪಾನ್ ಬೀಡಾಗಳಿಗೆ ಮಾತ್ರ ಬಳಕೆಯಾಗುತ್ತದೆ. ಪಾನ್ ಬೀಡಾಗಳಿಗೆ ನಿಷೇಧ ಯಾವ ರಾಜ್ಯದಲ್ಲಿಯೂ ಇಲ್ಲ. ಹಾಗಿರುವಾಗ ಗುಟ್ಕಾ ನಿಷೇಧ ಮಾಡಿದರೆ ಮಂಗಳೂರು ಚಾಲಿ ಅಡಿಕೆ ಧಾರಣೆ ಕುಸಿಯುವುದು ಹೇಗೆ?
ಮಂಗಳೂರು ಚಾಲಿ ಅಡಿಕೆಯ 100 ಕೆ.ಜಿ. ತೂಕದಲ್ಲಿ 5 ಕೆ.ಜಿ.ಯಷ್ಟು ಪಟೋರ, ಉಳ್ಳಿಗಡ್ಡೆ, ಕರಿಗೋಟುನಂತಹ ಕಳಪೆ ಗುಣಮಟ್ಟದ ಅಡಿಕೆ ಸಿಗುತ್ತದೆ. ಇವುಗಳನ್ನು ಕೋಕಾ ಎಂದು ಕರೆಯುತ್ತಾರೆ. ಈಗ ಗುಣಮಟ್ಟದ ಹಳೆ ಅಡಿಕೆಗೆ ಕೆ.ಜಿ.ಗೆ 200 ರೂ. ಧಾರಣೆ ಇದೆ. ಕಳಪೆ ಗುಣಮಟ್ಟದ ಕೋಕಾ ಅಡಿಕೆಗೆ ಕೆ.ಜಿ.ಗೆ 180 ರೂ. ಗಳಿಗೆ ಖರೀದಿಯಾಗುತ್ತದೆ. ಕೋಕಾವನ್ನು ಸ್ವಲ್ಪ ಪ್ರಮಾಣದಲ್ಲಿ ಗುಟ್ಕಾಕ್ಕೆ ಬಳಸಲಾಗುತ್ತಿತ್ತು. ಕೋಕಾ ಅಡಿಕೆಗೆ ಗರಿಷ್ಠ ಬೇಡಿಕೆ ಇರುವ ರಾಜ್ಯ ಒರಿಸ್ಸಾ. ಅಲ್ಲಿ ಕೋಕಾ ಅಡಿಕೆಯನ್ನು ನೀರಲ್ಲಿ ನೆನೆಸಿ, ಬಳಿಕ ಕತ್ತರಿಸಿ ಬೀಡಾಗಳಲ್ಲಿ ಬಳಕೆ ಮಾಡಲಾಗುತ್ತದೆ. ಕೋಕಾ ಅಡಿಕೆ ಎಷ್ಟು ಪ್ರಮಾಣದಲ್ಲಿದ್ದರೂ ಒರಿಸ್ಸಾ ರಾಜ್ಯದಲ್ಲಿ ಬೇಡಿಕೆ ಇದೆ. ಅಲ್ಲಿನ ಸಾಮಾನ್ಯ ಅಂಗಡಿಗಳಲ್ಲಿ ನೀರಲ್ಲಿ ನೆನೆಸಿಟ್ಟ ಕೋಕಾ ಅಡಿಕೆಗಳು ಲಭ್ಯ ಎನ್ನುತ್ತಾರೆ ಅಡಿಕೆ ಬೆಳೆಗಾರರು.
ಗುಣಮಟ್ಟದ ಅಡಿಕೆಯಲ್ಲಿ ಕೋಕಾ ಮಿಶ್ರಣ ತೆಗೆದಾಗ ಉತ್ತಮ ದರ್ಜೆಯ ಅಡಿಕೆ ಲಭ್ಯವಾಗುತ್ತದೆ. ಅಡಿಕೆಯನ್ನು ಸಂಸ್ಕರಿಸುವ ಮೂಲಕ ಕೋಕಾವನ್ನು ಬೇರ್ಪಡಿಸಲಾಗುತ್ತದೆ. ಗುಟ್ಕಾ ನಿಷೇಧದ ಹಿನ್ನೆಲೆಯಲ್ಲಿ ಕಡಿಮೆ ಧಾರಣೆಯ ಪಾನ್ ಬೀಡಾಗಳಿಗೆ ಕೋಕಾ ಬಳಕೆಯಾಗುವ ಸಾಧ್ಯತೆ ಇರುವುದರಿಂದ ಚಾಲಿ ಅಡಿಕೆ ಮಾರುಕಟ್ಟೆಯ ಧಾರಣೆಯಲ್ಲಿ ಕೋಕಾದಿಂದ ಯಾವುದೇ ದುಷ್ಪರಿಣಾಮ ಉಂಟಾಗದು. ಒಂದು ವೇಳೆ ಅಂತಹ ವ್ಯತ್ಯಾಸಗಳಾದರೂ ಕೆ.ಜಿ.ಗೆ ಅಡಿಕೆ ಖರೀದಿಯಲ್ಲಿ 1 ರಿಂದ 2 ರೂ. ವ್ಯತ್ಯಾಸವಾಗಬಹುದು.
ಪಾನ್ವಾಲಾಗಳು ಉತ್ತಮ ದರ್ಜೆಯ ಕತ್ತರಿಸಿದ ಅಡಿಕೆಯ ಜತೆ ಕೋಕಾವನ್ನು ಕೂಡ ಮಿಶ್ರಣ ಮಾಡುವ ಕ್ರಮ ಈಗಾಗಲೇ ಅಡಿಕೆ ಬಳಕೆದಾರ ಪ್ರದೇಶದಲ್ಲಿ ಚಾಲ್ತಿಯಲ್ಲಿರುವುದರಿಂದ ಕೋಕಾ ಅಡಿಕೆಯ ಪ್ರಶ್ನೆಯನ್ನು ಮುಂದಿಟ್ಟು ಗುಣಮಟ್ಟದ ಅಡಿಕೆಯ ಧಾರಣೆಯನ್ನು ಕಡಿಮೆ ಮಾಡುವ ಹುನ್ನಾರಕ್ಕೆ ಅವಕಾಶವಾಗದಂತೆ ಅಡಿಕೆ ಬೆಳೆಗಾರರು ವ್ಯಾವಹಾರಿಕ ಜಾಣತನವನ್ನು ಪ್ರದರ್ಶಿಸಬೇಕಾದ ಸಂದರ್ಭವಿದು.
ಗುಟ್ಕಾ ನಿಷೇಧದ ಹಿನ್ನೆಲೆಯಲ್ಲಿ ಗುಟ್ಕಾ ಪ್ರಿಯರು ಮತ್ತೆ ಪಾನ್ಬೀಡಾಗಳಿಗೆ ಮರಳುವ ಸಾಧ್ಯತೆಗಳು ಹೆಚ್ಚಾಗಿವೆ. ಗುಟ್ಕಾ ನಿಷೇಧಿತ ರಾಜ್ಯಗಳಲ್ಲಿ ನಿಷೇಧದ ಬಳಿಕ ಪಾನ್ ತಿನ್ನುವವರ ಸಂಖ್ಯೆ ಮತ್ತು ಪಾನ್ ಬೀಡಾ ಅಂಗಡಿಗಳ ಸಂಖ್ಯೆ ಹೆಚ್ಚಿದೆ. ಹಾಗಿರುವಾಗ ಕರ್ನಾಟಕದಲ್ಲೂ ಪಾನ್ ವಾಲಾಗಳ ಸಂಖ್ಯೆ ಹೆಚ್ಚಾಗಲಿದೆ. ಗುಟ್ಕಾ ಬಳಕೆಯ ಕಾರಣದಿಂದಾಗಿ ಕಳೆದ 10 ವರ್ಷಗಳ ಅವಧಿಯಲ್ಲಿ ಉತ್ತರ ಭಾರತದ ಪಾನ್ವಾಲಾಗಳು ಇಲ್ಲಿಗೆ ವ್ಯಾಪಾರಕ್ಕಾಗಿ ಬರುವುದು ಕಡಿಮೆಯಾಗಿತ್ತು.
ಅಷ್ಟಕ್ಕೂ ಗುಟ್ಕಾ ನಿಷೇಧದ ನೇರ ಪರಿಣಾಮ ಬೀರುವುದು ಆಮದು ಅಡಿಕೆಯ ಮೇಲೆ. ಆಮದು ಅಡಿಕೆ ಬರುವುದು ನಿಂತರೆ ಇಲ್ಲಿನ ಅಡಿಕೆಗೆ ಸಹಜವಾಗಿ ಧಾರಣೆ ಏರುತ್ತದೆ. ಪಾನ್ ಬೀಡಾಗಳಿಗೆ ಬೇಡಿಕೆ ಹೆಚ್ಚುತ್ತದೆ.
ಗುಟ್ಕಾ ನಿಷೇಧ ಕೆಂಪಡಿಕೆ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದ್ದು, ಮುಂದಿನ ಸಾಲಿನಿಂದ ಅಥವಾ ಹಂತ ಹಂತವಾಗಿ ಕೆಂಪಡಿಕೆ ಬೆಳೆಗಾರ ಪ್ರದೇಶಗಳ ಅಡಿಕೆ ಬೆಳೆಗಾರರು ಚಾಲಿ ಅಡಿಕೆಯನ್ನು ಬೆಳೆಯಲು ಆರಂಭಿಸುವ ಸಾಧ್ಯತೆಗಳಿವೆ. ಈ ಹಂತದಲ್ಲಿ ಕೂಡ ಮಂಗಳೂರು ಚಾಲಿ ಮತ್ತು ಶಿವಮೊಗ್ಗ, ಶಿರಸಿ ಚಾಲಿ ಅಡಿಕೆಗಳ ನಡುವಣ ಗುಣಮಟ್ಟದಲ್ಲಿ ಅಷ್ಟೇ ವ್ಯತ್ಯಾಸವಿರುತ್ತದೆ. ಮಂಗಳೂರು ಚಾಲಿ ಅಡಿಕೆ ಬಳಕೆದಾರ ಪ್ರದೇಶ ರಾಜ್ಯಗಳಲ್ಲಿ ತಂಬಾಕು ಯುಕ್ತ ಪಾನ್ ಬೀಡಾಗಳ ನಿಷೇಧವಾಗುವ ತನಕ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ ಸುರಕ್ಷಿತವಾಗಿರುತ್ತದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.
ಇಲ್ಲಿದೆ ಖಡಕ್ ಕಟಿಂಗ್:
ಅಡಿಕೆಯ ಗುಣಮಟ್ಟದ ಕುರಿತಂತೆ ಮಾರುಕಟ್ಟೆಯಲ್ಲಿ ಒಂದು ವಿಂಗಡಣೆ ಇದೆ. ಮಂಗಳೂರು ಚಾಲಿ ಅಡಿಕೆ ಉತ್ತಮವಾಗಿ ಒಣಗಿರುವುದರಿಂದ ಅಡಕತ್ತರಿಯಲ್ಲಿ ಇಟ್ಟು ಕತ್ತರಿಸುವಾಗ ಗಟ್ಟಿಯಾಗಿರುತ್ತದೆ. ಇದನ್ನು ಖಡಕ್ ಕಟಿಂಗ್ ಎನ್ನುತ್ತಾರೆ. ಸಾಗರ, ಪಿರಿಯಾಪಟ್ಟಣ, ದಾವಣಗೆರೆ ಕಡೆಯ ಚಾಲಿ ಅಡಿಕೆಯನ್ನು ಬಿಸಿಲಿಗೆ ಎಷ್ಟು ಒಣಗಿಸಿದರೂ ಅದನ್ನು ಅಡಕತ್ತರಿಯಲ್ಲಿ ಕತ್ತರಿಸುವಾಗ ಮೆದುವಾಗಿರುತ್ತದೆ. ಇದನ್ನು ರಬ್ಬರ್ ಕಟಿಂಗ್ ಎನ್ನುತ್ತಾರೆ. ಕಾಸರಗೋಡು, ದ.ಕ., ಜಿಲ್ಲೆಗಳ ಚಾಲಿ ಅಡಿಕೆ ಯಾವತ್ತೂ ಖಡಕ್ ಕಟಿಂಗ್ ವರ್ಗಕ್ಕೆ ಸೇರಿದ ಅಡಿಕೆಯಾಗಿದೆ.