ಗುಟ್ಕಾ ನಿಷೇಧದಿಂದ ದರ ಇಳಿಯುವ ಸಾಧ್ಯತೆಯಿದೆ, ಯಾಕೆಂದರೆ...


ಪ್ರಸಕ್ತ ವರ್ಷ ಅಡಿಕೆ ದರ ಕುಸಿದ ಕಾರಣ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬೆಳೆಗಾರರು ಗುಟ್ಕಾ ನಿಷೇಧದಿಂದ ಇನ್ನಷ್ಟು ಕಂಗಾಲಾಗಿದ್ದಾರೆ. ಅಡಿಕೆ ವಹಿವಾಟು ಚೇತರಿಕೆ ಕಂಡುಕೊಳ್ಳುತ್ತದೆ ಎನ್ನುತ್ತಿರುವಂತೆಯೇ ಆಗಾಗ ಪ್ರತ್ಯಕ್ಷವಾಗುವ ಗುಟ್ಕಾ ನಿಷೇಧ ಗುಮ್ಮ ಅಡಿಕೆ ಬೆಳೆಗಾರರನ್ನು ಬೆಂಬಿಡದ ಕಂಟಕವಾಗಿ ಪರಿಣಮಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಯಲ್ಲಾಪುರಗಳಲ್ಲಿ ಬೆಲೆಯುವ ಅಡಿಕೆಯಲ್ಲಿ ಪ್ರಮುಖವಾಗಿ ಎರಡು ಬಗೆ. ಕೆಂಪಡಿಕೆ ಹಾಗೂ ಚಾಲಿ. ಕೆಂಪಡಿಕೆಯಲ್ಲಿ ಆಪಿ, ಕೆಂಪು(ರಾಶಿ) ಮುಖ್ಯವಾಗಿದ್ದು ಅವನ್ನು ಪರಿಷ್ಕರಿಸಿದಾಗ ಕೆಂಪುಗೋಟು, ಕಲ್ಲು ಬೆಟ್ಟೆ ಮುಂತಾಗಿ ಎರಡನೇ ದರ್ಜೆಯೆಂದು ವಿಂಗಡಿಸಲಾಗುತ್ತದೆ. ಚಾಲಿ ಅಡಕೆಯನ್ನು ಪರಿಷ್ಕರಿಸಿ ಗಟ್ಟಿಚಾಲಿ ನಂತರ ಎರಡನೇ ದರ್ಜೆಯಲ್ಲಿ ಸೆಕೆಂಡ್ ಚಾಲಿ, ಬಿಳೆಗೋಟು, ಕೋಕಾ ಮುಂತಾಗಿ ವಿಂಗಡಿಸಲಾಗುತ್ತದೆ. ದಕ್ಷಿಣ ಕನ್ನಡದಲ್ಲಿ ಚಾಲಿಗೆ ಮಾತ್ರ ಪ್ರಾಶಸ್ತ್ಯವಾಗಿದ್ದರೆ ಉತ್ತರ ಕನ್ನಡದಲ್ಲಿ ಕೆಂಪಡಿಕೆ ಹಾಗೂ ಚಾಲಿ ಪ್ರಮುಖವಾಗಿ ಉತ್ಪಾದಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಬಹುಭಾಗದಲ್ಲಿ ಕೆಂಪಡಿಕೆ, ಸ್ವಲ್ಪಮಟ್ಟಿಗೆ ಚಾಲಿ, ಚಿಕ್ಕಮಗಳೂರು, ಹಾಸನ, ದಾವಣಗೆರೆ ಜಿಲ್ಲೆಗಳಲ್ಲಿ ಕೆಂಪಡಿಕೆ (ಸರಕು) ಉತ್ಪಾದಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅಡಿಕೆ ಬೆಳೆಯಲ್ಲಿ ಸಾಕಷ್ಟು ವೈವಿಧ್ಯತೆಯಿದ್ದು ಕರಾವಳಿ ಪ್ರದೇಶದಲ್ಲಿ ಅಡಿಕೆಯನ್ನು ಹಣ್ಣಾದ ನಂತರ ಕೊಯ್ಲು ಮಾಡಿ ಒಣಗಿಸಿ ಚಾಲಿ ಮಾಡಲಾಗುತ್ತದೆ. ಯಲ್ಲಾಪುರ ಭಾಗದ ಆಫಿ ಅಡಿಕೆಗೆ ಬೇಡಿಕೆಯಿರುವ ಕಾರಣ ಬಹುಪಾಲು ಕೆಂಪಡಿಕೆ, ಶಿರಸಿ, ಸಿದ್ದಾಪುರ ಭಾಗದಲ್ಲಿ ಕೆಂಪಡಿಕೆ, ಚಾಲಿ ಎರಡೂ ಒಂದೇ ಮಟ್ಟದಲ್ಲಿ ಉತ್ಪಾದನೆಯಾಗುತ್ತಿದೆ.
ಎಳೆ ಅಡಿಕೆ ಗೊನೆಯನ್ನು ಕೊಯ್ಲು ಮಾಡಿ ಅಡಿಕೆ ಸುಲಿದು, ಒಣಗಿಸಿ ನಂತರ ಅದಕ್ಕೆ ಅಡಿಕೆ ಚೊಗರಿನ ದ್ರವದಿಂದ ಬಣ್ಣ ಹಾಕಿ ಮಾರುಕಟ್ಟೆಗೆ ತರಲಾಗುತ್ತದೆ. ಚಾಲಿ ತಯಾರಿಸಬೇಕೆಂದರೆ ಅಡಿಕೆ ಪೂರ್ತಿ ಹಣ್ಣಾದ ನಂತರ ಕೊಯ್ಲು ಮಾಡಿ ಒಣಗಿಸಿ, ಸುಲಿದು ಪರಿಷ್ಕರಿಸಿ ಮಾರುಕಟ್ಟೆಗೆ ತರಲಾಗುತ್ತದೆ. ದಕ್ಷಿಣ ಕನ್ನಡದಲ್ಲಿ ಪೂರ್ತಿ ಹಣ್ಣಾದ ನಂತರ ಕೊಯ್ಲು ಮಾಡಲಾಗುತ್ತದೆ. ಉತ್ತರ ಕನ್ನಡದಲ್ಲಿ ಕೆಂಪಡಿಕೆ ಮಾಡಬೇಕೆಂದರೆ ಎಳೆಗೊನೆಗಳನ್ನು, ಚಾಲಿ ಮಾಡಬೇಕೆಂದರೆ ಹಣ್ಣು ಗೊನೆಗಳನ್ನು ಕೊಯ್ಯುತ್ತಾರೆ. ಋತುಮಾನ ಮತ್ತು ಹಂಗಾಮನ್ನು ಅವಲಂಬಿಸಿ ಕೆಲವು ಬಾರಿ ಬದಲಾಗುತ್ತದೆ. ಉಳಿದ ಜಿಲ್ಲೆಗಳಲ್ಲಿ ಬಹುತೇಕ ಎಳೆಗೊನೆ ಕೊಯ್ಲು ಮಾಡಿ ಕೆಂಪಡಿಕೆ ಅಥವಾ ಸರಕು ಸಿದ್ಧಗೊಳಿಸಲಾಗುತ್ತದೆ.
ಅಡಿಕೆ ದರದ ಏರಿಳಿತಕ್ಕೆ ಪ್ರಮುಖವಾಗಿ ಬೇಡಿಕೆ ಮತ್ತು ಪೂರೈಕೆ ಎನ್ನಲಾಗುತ್ತಿದ್ದರೂ ವಾಸ್ತವಿಕವಾಗಿ ದರದ ಏರಿಳಿತ ಶೇರು ಮಾರುಕಟ್ಟೆ ಹಾಗೂ ಅಡಿಕೆ ಆಮದಿನ ವದಂತಿಗಳನ್ನು ಅವಲಂಬಿಸಿಕೊಂಡಿದೆ. ಶೇ.75ಕ್ಕಿಂತ ಹೆಚ್ಚು ಪಾಲು ತಂಬಾಕಿನ ಜೊತೆಗೆ ಅಡಿಕೆ ಬಳಕೆಯಾಗುತ್ತದೆ.ಉಳಿದ ಶೇ. 25 ಎಲೆ ಹಾಗೂ ಮಸಾಲಾದ ಜೊತೆ ಬಳಸಲಾಗುತ್ತದೆ. ಬಹುಪಾಲು ಚ್ಯೂಯಿಂಗ್ಗೆ ಬಳಸಲಾಗುತ್ತಿದ್ದು ಔಷಧ, ವೈನ್ಗೆ ಬಳಸಲು ಬರುತ್ತದೆ ಎನ್ನುವುದು ಇನ್ನೂ ಸಂಶೋಧನೆ ಹಂತದಲ್ಲಿದೆ.
ಕರ್ನಾಟಕದಲ್ಲಿ ಪ್ರತಿವರ್ಷ 5 ಲಕ್ಷ ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆಗೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ-13,678 ಟನ್, ಸಿದ್ದಾಪುರ-9,498 ಟನ್, ಯಲ್ಲಾಪುರ-7,490 ಟನ್, ಹೊನ್ನಾವರ-4,920 ಟನ್, ಕುಮಟಾ- 2,178 ಟನ್ ಹಾಗೂ ಇತರ ತಾಲೂಕುಗಳಲ್ಲಿ 3327 ಟನ್ ಉತ್ಪಾದಿಸಲಾಗುತ್ತಿದೆ ಎನ್ನಲಾಗುತ್ತಿದೆ.
ಗುಟ್ಕ ನಿಷೇಧ ಪರಿಣಾಮ ಸದ್ಯದಲ್ಲಿ ಬಹುಪಾಲು ಕೆಂಪಡಿಕೆ ಉತ್ಪಾದಿಸುವ ಮಲೆನಾಡು ಪ್ರದೇಶಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮುಂತಾದ ಪ್ರದೇಶಗಳ ಮೇಲಾದರೂ ದೂರಗಾಮಿ ಪರಿಣಾಮವನ್ನು ಇನ್ನುಳಿದ ಭಾಗದ ಮೇಲೆ ಕಾಣಬಹುದಾಗಿದೆ. ಗುಟ್ಕಾ ನಿಷೇಧದಿಂದ ಕೆಂಪಡಿಕೆ ಉತ್ಪಾದಿಸುವ ಪ್ರದೇಶದಲ್ಲಿ ಚಾಲಿ ಉತ್ಪಾದಿಸತೊಡಗಿದರೆ ಚಾಲಿ ಮಾರುಕಟ್ಟೆ ಮೇಲೆ ಬೀಳುವ ಒತ್ತಡದಿಂದಾಗಿ ಬೇಡಿಕೆಗಿಂತ ಪೂರೈಕೆ ಹೆಚ್ಚಾಗಿ ದರ ಕುಸಿಯುವ ಸಾಧ್ಯತೆ ಹೆಚ್ಚಿದೆ.