ಕುಟುಗನಹಳ್ಳಿಯಲ್ಲಿ ಅಸ್ತಮಾ ಅಸ್ತಂಗತ


ಪ್ರತಿವರ್ಷ ಮೃಗಶಿರಾ ಮಳೆ ಕೂಡುವ ಘಳಿಗೆಯಲ್ಲಿ ಕೊಪ್ಪಳ ಜಿಲ್ಲೆಯ ಕುಟುಗನಹಳ್ಳಿಯಲ್ಲಿ ಜನ ಜಾತ್ರೆ. ಗ್ರಾಮದ ವ್ಯಾಸರಾವ್ ಕುಲಕರ್ಣಿ ಕುಟುಂಬ ಕಳೆದ 52 ವರ್ಷಗಳಿಂದ ಅಸ್ತಮಾ ಕಾಯಿಲೆಗೆ ಉಚಿತ ಔಷಧಿ ನೀಡುತ್ತಾ ಬಂದಿದ್ದು, ಆ ದಿನ ವಿವಿಧ ರಾಜ್ಯಗಳ ಜನರು ಇಲ್ಲಿಗೆ ಔಷಧಿ ಪಡೆಯಲು ಬರುತ್ತಾರೆ.
ಜಿಲ್ಲೆಯ ಈ ಭಾಗದಲ್ಲಿ ಮಾತ್ರ ಸಿಗುವ ಒಂದಿಷ್ಟು ವಿವಿಧ ಬಗೆಯ ಗಿಡಮೂಲಿಕೆಗಳನ್ನು ಗುಡ್ಡಗಾಡು ಪ್ರದೇಶದಲ್ಲಿ ಹುಡುಕಾಡಿ ತಂದು ಕಲ್ಲಿನ ಮೇಲೆ ಅರಿಯುತ್ತಾರೆ. ವನಸ್ಪತಿಯ ನಾಲ್ಕರಷ್ಟು ಪಟ್ಟು ಬೆಲ್ಲ ಕೂಡಿಸಿ ಜೊತೆಗೊಂದಿಷ್ಟು ಇಂಗು ಬೆರೆಸಿ ಸಣ್ಣಮುತ್ತಿನ ಆಕಾರದಲ್ಲಿ ಸಿದ್ಧಪಡಿಸಲಾಗುತ್ತದೆ. ತಯಾರಾದ ಔಷಧಿಗಳ ಮೇಲೆ ಯಾರ ನೆರಳೂ ಕೂಡಾ ಬೀಳದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಮೃಗಶಿರಾ ಮಳೆಯ ನಕ್ಷತ್ರಕ್ಕಿಂತ ಮುಂಚೆ ಔಷಧಿಯನ್ನು ಕುಲಕರ್ಣಿ ಕುಟುಂಬದ ಅಶೋಕರಾವ್ ಅವರನ್ನು ಬಿಟ್ಟರೆ ಮತ್ಯಾರು ಮುಟ್ಟುವಂತಿಲ್ಲ. ಬಳಿಕ ಜನರಿಗೆ ವಿತರಿಸಲಾಗುತ್ತದೆ.
ಮೃಗಶಿರಾ ಮಳೆಯ ನಕ್ಷತ್ರಕ್ಕೆ ಒಂದು ವಾರ ಬಾಕಿ ಇರುವಂತೆ ಕುಟುಗನಹಳ್ಳಿ ಹಬ್ಬದ ವಾತಾವರಣಕ್ಕೆ ಹೊರಳುತ್ತದೆ. ಗ್ರಾಮದ ಹೊರವಲಯದಲ್ಲಿ ಬರುವ ಜನರಿಗಾಗಿ ಹತ್ತಾರು ಎಕರೆ ಜಾಗವನ್ನು ಸ್ವಚ್ಛಗೊಳಿಸಲಾಗುತ್ತದೆ. ಸಾವಿರಾರು ಜನರ ಅನುಕೂಲಕ್ಕಾಗಿ ಕುಡಿಯುವ ನೀರು ಸೇರಿದಂತೆ ವಿವಿಧ ಆಹಾರ ಸಂಗ್ರಹ ಕಾರ್ಯ ನಡೆಯುತ್ತದೆ. ಇವುಗಳನ್ನೆಲ್ಲ ಸ್ವತಃ ಗ್ರಾಮಸ್ಥರೇ ಸ್ವಇಚ್ಛೆಯಿಂದ ಮಾಡುತ್ತಾರೆ. ಅಂದಾಜಿನ ಪ್ರಕಾರ ಪ್ರತಿವರ್ಷ ಸಾವಿರ ಜನರು ಹೆಚ್ಚುತ್ತಿದ್ದಾರೆ. ಕುಟುಗನಹಳ್ಳಿಯ ಗ್ರಾಮಸ್ಥರಿಗೆ ಕುಲಕರ್ಣಿ ಕುಟುಂಬದ ಬಗ್ಗೆ ಗೌರವ ಭಾವನೆಯಿದ್ದು ಜನರ ನಿಯಂತ್ರಣ ಹಾಗೂ ಅನುಕೂಲಕ್ಕಾಗಿ ಪ್ರತಿಯೊಬ್ಬರೂ ಯಾರ ಆಣತಿಗೂ ಕಾಯದೆ ವಿವಿಧ ಕೆಲಸಗಳಲ್ಲಿ ನಿರತರಾಗಿರುತ್ತಾರೆ.
ಮುಂಜಾಗ್ರತಾ ಕ್ರಮವಾಗಿ ಎರಡು ದಿನಗಳ ಮುಂಚೆ ಪೊಲೀಸರು ಬೀಡು ಬಿಟ್ಟಿರುತ್ತಾರೆ. ಮೃಗಶಿರಾ ನಕ್ಷತ್ರದ ಹಿಂದಿನ ರಾತ್ರಿಯೇ ಸಾಕಷ್ಟು ಜನ ಇಲ್ಲಿಗೆ ಆಗಮಿಸುವುದರಿಂದ ಪೋಲೀಸರ ಕಾವಲು ಇರುತ್ತದೆ. ಕುಟುಗನಹಳ್ಳಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೇ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕೇರಳ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳ ಜನರ ಮಹಾಪೂರ ಇಲ್ಲಿಗೆ ಹರಿದು ಬರುತ್ತದೆ. ಈ ವರ್ಷ ಜೂ. 9ರಂದು ಮೃಗಶಿರಾ ಮಳೆ ಕೂಡುವ ದಿನವಾಗಿದ್ದು, ಜೂ. 8ರ ರಾತ್ರಿಯಿಂದಲೇ ಜನಸಾಗರ ಇಲ್ಲಿರುತ್ತದೆ.
1961ರಿಂದ ಆರಂಭವಾದ ಈ ಪರಂಪರೆಯನ್ನು ವ್ಯಾಸರಾವ್ ಕುಲಕರ್ಣಿ 30 ವರ್ಷಗಳವರೆಗೆ ನಡೆಸಿಕೊಂಡು ಬಂದರು. ತಮ್ಮ ಕೊನೆಯ ದಿನಗಳಲ್ಲಿ ಪುತ್ರ ಅಶೋಕರಾವ್ ಅವರಿಗೆ ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುವಂತೆ ಹೇಳಿದ್ದರಿಂದ ಅಶೋಕರಾವ್ 20 ವರ್ಷಗಳಿಂದ ಉಚಿತವಾಗಿ ಔಷಧಿ ಕೊಡುತ್ತಾ ಬಂದಿದ್ದಾರೆ. ಕುಟುಗನಹಳ್ಳಿಗೆ ಬರುವ ಜನರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಇಲ್ಲಿ ಬರುವ ಜನರು ಯಾವಾಗ ಬರಬೇಕು ಎಂದು ಯಾರನ್ನೂ ಕೇಳುವುದಿಲ್ಲ. ಕ್ಯಾಲೆಂಡರ್ ನೋಡಿ ಮೃಗಶಿರಾ ಮಳೆ ಕೂಡುವ ಘಳಿಗೆಗೆ ಸರಿಯಾಗಿ ಕುಟುಗನಹಳ್ಳಿಯಲ್ಲಿ ಇರುತ್ತಾರೆ. ಕುಲಕರ್ಣಿ ಕುಟುಂಬವೂ ಕೂಡಾ ಯಾವುದೇ ಬಗೆಯಲ್ಲಿ ಪ್ರಚಾರ ಮಾಡುವುದಿಲ್ಲ ಎಂಬುದು ವಿಶೇಷ.