ಬತ್ತುತ್ತಿದೆ ಗದ್ದೆಯ ಒಡಲು


ಹಿಂದೆಲ್ಲಾ ಮುಂಗಾರು ಧರೆಗಿಳಿಯುತ್ತಿದ್ದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕಾಯಕಗಳು ಗರಿಗೆದರುತ್ತಿದ್ದವು. ಇದು ಕಾಲಚಕ್ರದ ನಿಯಮವಾಗಿತ್ತು. ಆದರಿಂದು ಪರಿಸ್ಥಿತಿ ಬದಲಾಗಿದೆ. ಕೃಷಿ ಕಸುಬುಗಳ ನೆಲೆಯಾಗಿದ್ದ ಭೂಮಿಗಳು ಆರ್ಥಿಕ ವಿತ್ತ ವಲಯಗಳಾಗುತ್ತಿವೆ. ಅಳಿದುಳಿದ ಭತ್ತದ ಗದ್ದೆಗಳಲ್ಲಿ ಇನ್ನೂ ಕೃಷಿ ಕಾರ್ಯಗಳು ನಡೆಯುತ್ತಿವೆಯಾದರೂ, ಹಿಂದಿನ ಕಾಲದ ಕೃಷಿಭೂಮಿಯ ಮೇಲಿನ ಆಸಕ್ತಿ, ಪ್ರೀತಿ, ದುಡಿಮೆಗಳು ಕೃಷಿ ಅಂಗಳದಿಂದ ದೂರವಾಗುತ್ತಿವೆ.
ಎತ್ತು, ಕೋಣಗಳ ಜಾಗದಲ್ಲೀಗ ಮೆಷಿನ್ಗಳು ನೆಲವನ್ನು ಹದಗೊಳಿಸುವ ನಿಟ್ಟಿನಲ್ಲಿ ಬಳಕೆಯಾಗುತ್ತಿವೆ. ಹಿಂದೆ ಮಳೆರಾಯನ ಆಗಮನದ ಹೊತ್ತಿನಲ್ಲಿ ಬಹುತೇಕ ಮನೆಗಳಲ್ಲಿ ಕುಟುಂಬ ಸದಸ್ಯರು ಗದ್ದೆಯ ಕೆಲಸ ಕಾರ್ಯಗಳ ತಯಾರಿಯಲ್ಲಿ ತೊಡಗಿಕೊಳ್ಳುತ್ತಿದ್ದರು. ಉಳುಮೆ, ಬಿತ್ತನೆ, ನೇಜಿ ನೆಡುವ ನಿಟ್ಟಿನಲ್ಲಿ ಮನೆಯ ಸದಸ್ಯರುಗಳೆಲ್ಲಾ ವಿವಿಧ ರೀತಿಯಲ್ಲಿ ಕರ್ತವ್ಯಕ್ಕೆ ಇಳಿಯುತ್ತಿದ್ದರು. ಈಗ ಹಾಗಿಲ್ಲ, ಗದ್ದೆಗಳೆ ಅಪರೂಪವಾಗುತ್ತಿವೆ. ಮನೆಯಲ್ಲಿ ತಂದೆ-ತಾಯಿಯನ್ನು ಬಿಟ್ಟರೆ ಉಳಿದವರು ಹೈಟೆಕ್ ಸಿಟಿಗಳಲ್ಲಿ ಉದ್ಯೋಗದಲ್ಲಿ ಇದ್ದಾರೆ. ಅಳಿದುಳಿದ ಗದ್ದೆಗೆ ಆಳುಗಳನ್ನು ಅಥವಾ ಯಂತ್ರಗಳನ್ನು ತರಿಸಿ ಬೇಸಾಯದ ಕಾರ್ಯಗಳನ್ನು ಮಾಡುತ್ತಾರೆ. ಗದ್ದೆಯ ಕೆಲಸವೊಮ್ಮೆ ಮುಗಿದರೆ ಸಾಕು ಎಂದು ಮೂಗು ಮುರಿಯುವವರೆ ಹೆಚ್ಚು.
ಹಿಂದೆಲ್ಲಾ ಬೇಸಾಯದ ಗದ್ದೆಗಳು ಜನಪದದ ಹುಟ್ಟಿಗೆ ಮೂಲ ನೆಲೆಯಾಗಿದ್ದವು. ಕೃಷಿ ಭೂಮಿಯಾದ ಗದ್ದೆಗಳು ಕೇವಲ ಅನ್ನ ನೀಡುವ ನೆಲೆಗಳಾಗದೇ ಪ್ರಕೃತಿ ಸಂರಕ್ಷಕನಾಗಿಯೂ ಕೆಲಸ ಮಾಡುತ್ತಿದ್ದವು. ಮಳೆ ನೀರನ್ನು ವ್ಯರ್ಥವಾಗಿ ಹರಿಯಲು ಬಿಡದೇ ನೀರಿಂಗಿಸುವ ನಿಟ್ಟಿನಲ್ಲಿ ಸಹಕಾರಿಯಾಗಿದ್ದವು. ಜೊತೆಗೆ ಒಂದಷ್ಟು ಜೀವಜಂತುಗಳು ಗದ್ದೆಯಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದವು.
ಉಳುಮೆ, ಬಿತ್ತನೆ ಸಂದರ್ಭಗಳಲ್ಲಿ ಮಹಿಳೆಯರು ಹಾಡುತ್ತಿದ್ದ ಜಾನಪದ ಸೊಗಡಿನ ಪದ್ಯಗಳು ಈಗ ಮಾಯವಾಗುತ್ತಿವೆ. ಅವುಗಳು ನಮ್ಮ ನೆಲದ ವಿಶೇಷತೆಗಳು, ದುಗುಡಗಳನ್ನು ತೆರೆದಿಡುತ್ತಿದ್ದವು. ಆದರೆ ಗದ್ದೆಯ ಜಗತ್ತೇ ಇಲ್ಲವಾಗುತ್ತಿರುವ ಇಂದಿನ ದಿನಗಳಲ್ಲಿ ಜನಪದದ ಹಾಡುಗಳನ್ನು ಸೃಷ್ಟಿಸಿ ಬರೆಯಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಅನುಭವದ ಹಾಡಿಗೆ ಮೂಲವಾಗಿದ್ದ ಜನಪದದ ನೆಲೆಗಟ್ಟಾದ ಕೃಷಿ ಭೂಮಿ ಕಣ್ಮರೆಯಾಗಿದೆ.
ಆಧುನಿಕ ಸಮಾಜದಲ್ಲಿ ಬದುಕಿನ ಮಟ್ಟಗಳು ಶ್ರೀಮಂತಿಕೆಯ ಆಧಾರದಲ್ಲಿ ರೂಪಿತಗೊಳ್ಳಲು ತೊಡಗಿದಾಗ, ಮೈ ಮುರಿದು ದುಡಿಯುವುದಕ್ಕಿಂತ ಆರಾಮಾಗಿ ಕುಳಿತು ಸಂಪಾದಿಸಿಬಲ್ಲ ಉದ್ಯೋಗದತ್ತ ನಮ್ಮ ದೃಷ್ಟಿ ಹರಿದಿದೆ. ಹಾಗಾಗಿ ವ್ಯವಸಾಯದಂತಹ ಕೃಷಿ ಕಸುಬುಗಳಲ್ಲಿ ಬದುಕು ಕಟ್ಟಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಕೃಷಿ ಭೂಮಿಗಳು ಆರ್ಥಿಕ ವಲಯಗಳಾಗುತ್ತಿವೆ. ಬೇಸಾಯ ಮಾಡುತ್ತಿದ್ದ ಗದ್ದೆಗಳಲ್ಲಿ ವಾಣಿಜ್ಯ ಬೆಳೆಗಳು ರಾರಾಜಿಸುತ್ತಿವೆ. ಶ್ರಮವಿಲ್ಲದೆ ದುಡಿಯಬೇಕೆನ್ನುವ ಮಂದಿಯ ಕನಸುಗಳಿಗೆ ನಗರೀಕರಣ, ವಿತ್ತ ವಲಯಗಳು ಜೀವ ತುಂಬುತ್ತಿವೆ. ಇವೆಲ್ಲಕ್ಕಿಂತ ಹೆಚ್ಚಾಗಿ, ಇಂದು ದುಡಿಯಲು ರೈತನಿಲ್ಲದಿದ್ದರೂ, ಕೃಷಿ ಭೂಮಿಯಿಲ್ಲದಿದ್ದರೂ 1 ರೂಪಾಯಿಗೆ ಅಕ್ಕಿ ಕೊಡುತ್ತೇನೆ ಎನ್ನುತ್ತಿದೆ ಸರ್ಕಾರ.