1 ರೂ.ಗೆ ಕೆ.ಜಿ. ಅಕ್ಕಿ ಸಿಗುವಾಗ ರೈತನಿಗೆ ಕೃಷಿಯೇಕೆ ಬೇಕು?


ಅನ್ನ ಕೊಡುವ ರೈತನ ಕಷ್ಟದ ಬದುಕನ್ನು ಅರಿಯದ ಮಂದಿ ಇಂದು ಆದೇಶಗಳನ್ನು ನೀಡುತ್ತಿದ್ದಾರೆ ಎಂಬ ಕಟು ಸತ್ಯವೀಗ ಅರಿವಾಗಿದೆ. 1 ರೂಪಾಯಿಗೆ 1 ಕೆ.ಜಿ. ಅಕ್ಕಿ ನೀಡಲು ಸರ್ಕಾರ ಮುಂದಾಗಿದೆ. ಹಾಗಾಗಿ, ಈ ಅಕ್ಕಿಯನ್ನು ಬೆಳೆಯಲು ಮಳೆ-ಬಿಸಿಲು-ಚಳಿ ಎನ್ನದೇ ದುಡಿಯುವ ರೈತ ತನ್ನ ಕೃಷಿಕಸುಬುಗಳನ್ನು ನಿಲ್ಲಿಸಿ ಪುಕ್ಸಟೆಯಾಗಿ, ಶ್ರಮ ಪಡದೇ ಸಿಗುವ ಸರ್ಕಾರದ ಯೋಜನೆಗಳತ್ತ ಕೈ ಚಾಚಬೇಕಾಗುತ್ತದೆ. ಇದರಿಂದಾಗಿ ಮುಂದೆ ರೈತನಿಲ್ಲದೆ ಅಕ್ಕಿಯಂತಹ ಅಗತ್ಯ ವಸ್ತುಗಳ ಕೊರತೆಯಾಗಿ, ಪುಕ್ಸಟೆ ಬಿಡಿ, ದುಡ್ಡು ಕೊಟ್ಟರೂ ಉಣ್ಣಲು ಅಕ್ಕಿ ಸಿಗಲಾರದ ಸ್ಥಿತಿ ನಿರ್ಮಾಣವಾಗಬಹುದು.
ಪಡಿತರ ವ್ಯವಸ್ಥೆಯಲ್ಲಿ ಸಿಕ್ಕಿದ ಕಡಿಮೆ ದರದ ಸಾಮಾನುಗಳು ಮನೆಗೆ ತಲುಪುವ ಮುನ್ನ ಪಕ್ಕದ ಅಂಗಡಿಗೆ ರವಾನೆಯಾಗುವುದು ಗುಟಾಗೇನೂ ಉಳಿದಿಲ್ಲ. ಸರ್ಕಾರಗಳು ಜನರಿಗೆ ಕಡಿಮೆ ದರದಲ್ಲಿ ಸವಲತ್ತುಗಳನ್ನು ನೀಡಿದ ತಕ್ಷಣ ವ್ಯವಸ್ಥೆಗಳು ಸುಧಾರಣೆಯಾಗುತ್ತವೆ ಎಂದು ಭಾವಿಸಿದಂತಿದೆ. ಅಲ್ಲದೆ, ಈ ಜನಪರ ಯೋಜನೆಗಳಿಗಾಗಿ ಹಣ ಹೊಂದಿಸಲು ಅಂತಿಮವಾಗಿ ಜನಸಾಮಾನ್ಯರ ಮೇಲೆ ತೆರಿಗೆ ವಿಧಿಸುತ್ತದೆ. ಇದರಿಂದಾಗಿ ಜನಸಾಮಾನ್ಯರ ಮೇಲೆ ಹೆಚ್ಚಿನ ಹೊರೆ. ಹಾಗಾಗಿ, ಹಗಲು, ರಾತ್ರಿ ಎನ್ನದೇ ಭೂಮಿಯಲ್ಲಿ ದುಡಿದು ಅನ್ನ ಕೊಡುವ ರೈತನಿಗೆ ಇಂತಹ ಯೋಜನೆಗಳಿಂದ ಪ್ರಯೋಜನ ಕಾಣಲು ಸಾಧ್ಯವಿಲ್ಲ. ಜನಸಾಮಾನ್ಯರಿಗೂ ಲಾಭವಿಲ್ಲ.
 ಕೃಷಿಭೂಮಿಗಳು ಆರ್ಥಿಕ ವಲಯವಾಗುತ್ತಿರುವ ಹಿನ್ನೆಲೆಯಲ್ಲಿ ಭತ್ತದ ಪೈರುಗಳು ಇತಿಹಾಸದ ಪುಟ ಸೇರತೊಡಗಿವೆ. ಈಗ 1 ರೂ. ಗೆ ಅಕ್ಕಿ ಸಿಗುತ್ತದೆ ಎಂದಾಗ ಭೂಮಿಯಲ್ಲಿ ವ್ಯವಸಾಯ ಮಾಡುವ ಮಂದಿ, ತಮ್ಮ ಕೃಷಿ ಕಸುಬುಗಳನ್ನು ನಿಲ್ಲಿಸಬಹುದು. ಹೊಲದಲ್ಲಿ ಒಂದು ಕೆ.ಜಿ. ಅಕ್ಕಿ ಪಡೆಯಬೇಕಾದರೆ ರೈತನೊಬ್ಬ ಪಡಬೇಕಾದ ಪಾಡು ಅಷ್ಟಿಷ್ಟಲ್ಲ. ಹಾಗಾಗಿ ಸುಲಭವಾಗಿ, ಕಡಿಮೆ ದರದಲ್ಲಿ ಸರ್ಕಾರವೇ ಅಕ್ಕಿ ಕೊಡುತ್ತದೆಯಾದರೆ ಕಷ್ಟಪಡುವುದು ಯಾಕೆ ಎಂಬ ಭಾವನೆ ಬಂದರೆ ಅಚ್ಚರಿಯೇನಿಲ್ಲ. ಸರ್ಕಾರ ನೀಡುವ ಅಕ್ಕಿ ಪಡೆದು ಜನರು ಸುಮ್ಮನಾಗಬಹುದು. ಆದರೆ ಎಲ್ಲ ಕೃಷಿಕರು ಈ ಹಾದಿ ತುಳಿದಾಗ ಸರ್ಕಾರಕ್ಕೆ ಅಕ್ಕಿಯ ನಿಜ ಬೆಲೆ ಅರಿವಾಗಬಹುದು. ಬೆಳೆ ಬೆಳೆಯುವವರು ಇಲ್ಲದಿದ್ದಾಗೆ ಅಕ್ಕಿ ಕೊಡುವುದು ಎಲ್ಲಿಂದ ಸ್ವಾಮಿ..?

ಚೀನಾದಿಂದ ಚಿಯಾಂಗ್-ಲ್ಹಾಸಾ ರೈಲು ಮಾರ್ಗ ನಿರ್ಮಾಣವೇಕೆ?


ಚೀನಾ ನಮ್ಮ ನಿಜವಾದ ಶತ್ರುವಾಗಿದ್ದು, ಅದರ ಸಮರ ಸಿದ್ಧತೆಗಳು, ತಂತ್ರಗಳು ಹಾಗೂ ಅದರ ತಂತ್ರಜ್ಞಾನದ ಮಟ್ಟ, ಆಳವನ್ನು ಭಾರತ ತಿಳಿಯಬೇಕು. ಪ್ರಕೃತಿ ನಮಗೆ ಚೀನಾದಷ್ಟು ಅನುಕೂಲಕರವಾಗಿಲ್ಲ. ಆದರೆ, ಚೀನಾದ ತಂತ್ರಕ್ಕೆ ಪ್ರತಿತಂತ್ರ ಹಾಗೂ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸುವ ಸಮಯ ಈಗ ಸನ್ನಿಹಿತವಾಗಿದೆ.
ಚಿಯಾಂಗ್ನಿಂದ ಲ್ಹಾಸಾವರೆಗಿನ ಅಂದಾಜು 1,200 ಕಿ.ಮೀ ಮಾರ್ಗದಲ್ಲಿ ಜನವಸತಿ ತೀರ ವಿರಳ. ಲ್ಹಾಸಾಗೆ ರೈಲು ಬೇಡವೇ ಬೇಡ ಎಂದು ಟಿಬೆಟಿಯನ್ನರು ಪ್ರತಿಭಟಿಸಿದ್ದರು. ಇಷ್ಟೆಲ್ಲಾ ಅಡೆತಡೆ, ವಿರೋಧವನ್ನು ಎದುರಿಸಿ ಅಪಾರ ವೆಚ್ಚದಲ್ಲಿ ಚೀನಾ ಈ ರೈಲು ನಿರ್ಮಿಸಿದ್ದಾದರೂ ಏಕೆ?. ಕಾರಣ, ಚೀನಾ ಈ ರೈಲು ಮಾರ್ಗವನ್ನು ಬಳಸಿ ತನ್ನ ಕ್ಷಿಪಣಿ ಹಾಗೂ ಸೈನ್ಯವನ್ನು ಟಿಬೆಟ್ಟಿನ ಆಯಕಟ್ಟಿನ ಸ್ಥಳಗಳಲ್ಲಿ ಭಾರತದ ವಿರುದ್ಧ ಪ್ರಯೋಗಿಸಲು ತಂದಿರಿಸಿದೆ. ಆದರೆ, ಇದಕ್ಕೆ ತದ್ವಿರುದ್ಧವಾಗಿದೆ ಭಾರತದ ಸ್ಥಿತಿ. ಚೀನಾದ ಗಡಿಯಲ್ಲಿರುವ ನಮ್ಮ ರಸ್ತೆಗಳು ತೀರಾ ದು:ಸ್ಥಿತಿಯಲ್ಲಿವೆ.
ಚೀನಾ ಹಿಮಾಲಯದಲ್ಲಿ ಮಾತ್ರವಲ್ಲ, ಸಾಗರದಲ್ಲೂ ಜಗಜ್ಜಾಲದ ಯುದ್ಧದಲ್ಲೂ ನಮ್ಮನ್ನು ಸುತ್ತುವರಿಯುತ್ತಿದೆ. ಚೀನಾವನ್ನು ಎದುರಿಸಲು ಸರ್ವ ಸಿದ್ಧತೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯ ಸ್ಥಿತಿಗೆ ನಾವು ತಲುಪಿದ್ದೇವೆ.

ಬೆಣ್ಣೆಹಳ್ಳಕ್ಕೆ ಗ್ರಾಮಸ್ಥರೇ ತೂಗು ಸೇತುವೆ ನಿರ್ಮಿಸಿದರು

ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಸಂತೇಗುಳಿ ಸಮೀಪದ ಅಘನಾಶಿನಿ ನದಿಯ ಉಪನದಿ ಬಂಗಣೆ -ಮೊರ್ಸೆ ಊರಿನ ಬೆಣ್ಣೆ ಹಳ್ಳಕ್ಕೆ ಒಂದೇ ತಿಂಗಳಿನಲ್ಲಿ ತೂಗು ಸೇತುವೆ ನಿರ್ಮಾಣವಾಗಿದೆ. ಇದನ್ನು ಗ್ರಾಮಸ್ಥರೇ ನಿರ್ಮಿಸಿದ್ದಾರೆ. ಆ ಮೂಲಕ ಮಳೆಗಾಲದ ಸಂಚಾರ ಸಮಸ್ಯೆಗೆ ಸ್ವತಃ ಸಂಘಟಿತ ಪ್ರಯತ್ನದಿಂದ ಪರಿಹಾರ ಕಂಡುಕೊಂಡಿದ್ದಾರೆ. ಅಘನಾಶಿನಿ ನದಿಯ ಉಪನದಿಯಾಗಿ ಮಳೆಗಾಲದಲ್ಲಿ ತುಂಬಿಹರಿಯುವ ಬೆಣ್ಣೆ ಹಳ್ಳವು ಬಂಗಣೆ, ಮೊರ್ಸೆ, ಹೆಬ್ಬಳೆ ಗ್ರಾಮದ ನಡುವಿನ ಅಡ್ಡಗೋಡೆಯಂತಿತ್ತು. ದೋಣಿ ಹಾಕಲೂ ಸಾಧ್ಯವಿಲ್ಲದಷ್ಟು ರಭಸವಾಗಿ ಹರಿಯುವ ನೀರಿನಿಂದಾಗಿ ಮಳೆಗಾಲದಲ್ಲಿ ಹೊರ ಜಗತ್ತಿನ ಸಂಪರ್ಕವಿಲ್ಲದೇ ಪರಿತಪಿಸುತ್ತಿದ್ದ ಜನತೆಗೆ ತೂಗು ಸೇತುವೆಯೊಂದೇ ಪರ್ಯಾಯವಾಗಿತ್ತು. ಪಕ್ಕದಲ್ಲಿ ಸಮಾನಾಂತರವಾಗಿ ಹರಿಯುವ ಅಘನಾಶಿನಿ ನದಿಗೆ ವರ್ಷದ ಹಿಂದೆ ನಿರ್ಮಿಸಲಾಗಿದ್ದ ಜಿಲ್ಲೆಯ ಅತಿ ಉದ್ದ ತೂಗು ಸೇತುವೆಯಿಂದ ಪ್ರೇರಿತರಾದ ಗ್ರಾಮಸ್ಥರು ತಮಗೂ ತೂಗು ಸೇತುವೆಯ ಅಗತ್ಯವನ್ನು ಮನಗಂಡಿದ್ದರು. ಈ ಕುರಿತಾಗಿ ಗ್ರಾಮಸ್ಥರು ತಮ್ಮದೇ ಸಮಿತಿಯೊಂದನ್ನು ರಚಿಸಿಕೊಂಡು ಬೆಣ್ಣೆ ಹಳ್ಳಕ್ಕೂ ಚಿಕ್ಕ ತೂಗು ಸೇತುವೆಯನ್ನು ನಿರ್ಮಿಸಿಕೊಳ್ಳಲು ನಿರ್ಧರಿಸಿದರು. ಒಂದಷ್ಟು ಸರಕಾರದ ಅನುದಾನ, ದಾನಿಗಳ ಹಣದಿಂದ ಸೇತುವೆಯನ್ನು ಪೂರ್ಣಗೊಳಿಸಬೇಕೆಂಬ ಹಠದಿಂದ ಸಮಾನ ಮನಸ್ಕರಿಂದ ದೇಣಿಗೆ ಪಡೆದು, ಪ್ರತಿ ಮನೆಯವರು ಕೆಲಸದಲ್ಲಿ ತೊಡಗಿಕೊಂಡು ಕೇವಲ ಎರಡು ತಿಂಗಳ ಹಿಂದಷ್ಟೇ ಕೆಲಸ ಆರಂಭಿಸಿದ್ದರು.
ಮಳೆ ಆರಂಭವಾಗಿ ಹೊಳೆಯಲ್ಲಿ ಯಥೇಚ್ಛ ನೀರು ಹರಿಯುತ್ತಿದ್ದರೂ ಲೆಕ್ಕಿಸದೇ ತಮ್ಮ ಗುರಿ ಸಾಧನೆಯಲ್ಲಿ ನಿರತರಾದರು. ಇದೀಗ ಸೇತುವೆಯ ಕಾರ್ಯ ಬಹುತೇಕ ಮುಗಿದಿದ್ದು ವಿಧ್ಯುಕ್ತ ಉದ್ಘಾಟನೆಯೊಂದೇ ಬಾಕಿ ಇದೆ. ಹೀಗಾಗಿ ಜನರ ಸಂಚಾರ ಆರಂಭವಾಗಿದೆ.

ಒಂದೂವರೆ ತಿಂಗಳಿಗೇ ಹೊಸ ರಸ್ತೆ ಚಿಂದಿ, ಚಿಂದಿ


ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ-ಸಿದ್ದಾಪುರ ಮುಖ್ಯ ರಸ್ತೆಯನ್ನು ಹೀನಗಾರ ಕ್ರಾಸ್ನಿಂದ ಕಬ್ಬಗಾರ ವರೆಗೆ ಒಂದೂವರೆ ತಿಂಗಳ ಹಿಂದಷ್ಟೇ ಸುಧಾರಣೆ ಮಾಡಲಾಗಿತ್ತು. ಡಾಂಬರು ರಸ್ತೆ ಒಂದೂವರೆ ತಿಂಗಳಲ್ಲಿ ಅಲ್ಲಲ್ಲಿ ಕಿತ್ತು ಹೋಗುತ್ತಿದ್ದು ರಸ್ತೆ ಕೂಡ ಕುಸಿಯುತ್ತಿದೆ.
ಇದರಿಂದ ಆ ಮಾರ್ಗದಲ್ಲಿ ಸಾರಿಗೆ ಸಂಚಾರ ಸ್ಥಗಿತಗೊಂಡಿದೆ. ಇದರಿಂದಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಮಸ್ಯೆ ಎದುರಿಸಬೇಕಾದ ಸ್ಥಿತಿ ಉಂಟಾಗಿದೆ. ಹಾರ್ಸಿಕಟ್ಟಾ-ಸಿದ್ದಾಪುರ ಮುಖ್ಯ ರಸ್ತೆಯ ಹೀನಗಾರ ಕ್ರಾಸ್ನಿಂದ ಕಬ್ಬಗಾರ-ಕಿಲವಳ್ಳಿವರೆಗೆ ಪ್ರಧಾನ ಮಂತ್ರಿ ಗ್ರಾಮಸಡಕ್ ಯೋಜನೆಯಡಿಯಲ್ಲಿ 4 ಕೋಟಿ ರೂ. ಮಂಜೂರಿಯಾಗಿ ಕಳೆದ ಮೂರು ವರ್ಷದ ಹಿಂದೆ ಕಾಮಗಾರಿ ಆರಂಭಗೊಂಡಿತ್ತು. ಆದರೆ ಆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ ಮಾರ್ಗದಲ್ಲಿನ ಹೀನಗಾರ ಕ್ರಾಸ್ನಿಂದ ಕಬ್ಬಗಾರ ವರೆಗೆ ಒಂದೂವರೆ ತಿಂಗಳ ಹಿಂದೆ ಡಾಂಬರೀಕರಣ ನಡೆದಿದ್ದು, ಅದು ಮೊದಲ ಮಳೆಗೆ ಚಿಂದಿಯಾಗಿರುವುದರಿಂದ ಈ ಕಾಮಗಾರಿ ಕಳಪೆ ಗುಣಮಟ್ಟದ್ದು ಎಂಬುದು ಸಾಬೀತಾಗಿದೆ.
ಕೆಲಸದಲ್ಲಿ ಗುಣಮಟ್ಟವನ್ನು ಕಾಪಾಡುವಂತೆ ಕಾಮಗಾರಿ ನಡೆಯುವಾಗ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ತಿಳಿಸಿದರೂ ಅವರು ಗುತ್ತಿಗೆದಾರರ ಪರವಾಗಿಯೇ ಮಾತನಾಡುತ್ತಾರೆ. ಅದರ ಲವೇ ರಸ್ತೆ ಇಂತಹ ಸ್ಥಿತಿಗೆ ಬರಲು ಕಾರಣವಾಗಿದೆ.
ರಸ್ತೆ ಪಕ್ಕ ಚರಂಡಿ ಇಲ್ಲದಿರುವುದರಿಂದ ಶೀಬಳಿ ಹತ್ತಿರ ರಸ್ತೆ ಕುಸಿಯುತ್ತಿದ್ದು ಸಿದ್ದಾಪುರದಿಂದ ಹೊನಮಾಂವಗೆ ಬರುತ್ತಿದ್ದ ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿದೆ. ಹೀನಗಾರ ಶಾಲೆಯವರೆಗೆ ಮಾತ್ರ ಸಾರಿಗೆ ವ್ಯವಸ್ಥೆ ಇದ್ದು ಪ್ರತಿ ನಿತ್ಯ ಕಬ್ಬಗಾರ, ಹೊನಮಾಂವ, ಶೀಬಳಿ ಮತ್ತಿತರ ಊರಿನ ಐವತ್ತಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಎರಡು ಕಿ.ಮೀ.ನಷ್ಟು ಕಾಲ್ನಡಿಗೆಯಲ್ಲಿ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.