ಬೆಣ್ಣೆಹಳ್ಳಕ್ಕೆ ಗ್ರಾಮಸ್ಥರೇ ತೂಗು ಸೇತುವೆ ನಿರ್ಮಿಸಿದರು

ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಸಂತೇಗುಳಿ ಸಮೀಪದ ಅಘನಾಶಿನಿ ನದಿಯ ಉಪನದಿ ಬಂಗಣೆ -ಮೊರ್ಸೆ ಊರಿನ ಬೆಣ್ಣೆ ಹಳ್ಳಕ್ಕೆ ಒಂದೇ ತಿಂಗಳಿನಲ್ಲಿ ತೂಗು ಸೇತುವೆ ನಿರ್ಮಾಣವಾಗಿದೆ. ಇದನ್ನು ಗ್ರಾಮಸ್ಥರೇ ನಿರ್ಮಿಸಿದ್ದಾರೆ. ಆ ಮೂಲಕ ಮಳೆಗಾಲದ ಸಂಚಾರ ಸಮಸ್ಯೆಗೆ ಸ್ವತಃ ಸಂಘಟಿತ ಪ್ರಯತ್ನದಿಂದ ಪರಿಹಾರ ಕಂಡುಕೊಂಡಿದ್ದಾರೆ. ಅಘನಾಶಿನಿ ನದಿಯ ಉಪನದಿಯಾಗಿ ಮಳೆಗಾಲದಲ್ಲಿ ತುಂಬಿಹರಿಯುವ ಬೆಣ್ಣೆ ಹಳ್ಳವು ಬಂಗಣೆ, ಮೊರ್ಸೆ, ಹೆಬ್ಬಳೆ ಗ್ರಾಮದ ನಡುವಿನ ಅಡ್ಡಗೋಡೆಯಂತಿತ್ತು. ದೋಣಿ ಹಾಕಲೂ ಸಾಧ್ಯವಿಲ್ಲದಷ್ಟು ರಭಸವಾಗಿ ಹರಿಯುವ ನೀರಿನಿಂದಾಗಿ ಮಳೆಗಾಲದಲ್ಲಿ ಹೊರ ಜಗತ್ತಿನ ಸಂಪರ್ಕವಿಲ್ಲದೇ ಪರಿತಪಿಸುತ್ತಿದ್ದ ಜನತೆಗೆ ತೂಗು ಸೇತುವೆಯೊಂದೇ ಪರ್ಯಾಯವಾಗಿತ್ತು. ಪಕ್ಕದಲ್ಲಿ ಸಮಾನಾಂತರವಾಗಿ ಹರಿಯುವ ಅಘನಾಶಿನಿ ನದಿಗೆ ವರ್ಷದ ಹಿಂದೆ ನಿರ್ಮಿಸಲಾಗಿದ್ದ ಜಿಲ್ಲೆಯ ಅತಿ ಉದ್ದ ತೂಗು ಸೇತುವೆಯಿಂದ ಪ್ರೇರಿತರಾದ ಗ್ರಾಮಸ್ಥರು ತಮಗೂ ತೂಗು ಸೇತುವೆಯ ಅಗತ್ಯವನ್ನು ಮನಗಂಡಿದ್ದರು. ಈ ಕುರಿತಾಗಿ ಗ್ರಾಮಸ್ಥರು ತಮ್ಮದೇ ಸಮಿತಿಯೊಂದನ್ನು ರಚಿಸಿಕೊಂಡು ಬೆಣ್ಣೆ ಹಳ್ಳಕ್ಕೂ ಚಿಕ್ಕ ತೂಗು ಸೇತುವೆಯನ್ನು ನಿರ್ಮಿಸಿಕೊಳ್ಳಲು ನಿರ್ಧರಿಸಿದರು. ಒಂದಷ್ಟು ಸರಕಾರದ ಅನುದಾನ, ದಾನಿಗಳ ಹಣದಿಂದ ಸೇತುವೆಯನ್ನು ಪೂರ್ಣಗೊಳಿಸಬೇಕೆಂಬ ಹಠದಿಂದ ಸಮಾನ ಮನಸ್ಕರಿಂದ ದೇಣಿಗೆ ಪಡೆದು, ಪ್ರತಿ ಮನೆಯವರು ಕೆಲಸದಲ್ಲಿ ತೊಡಗಿಕೊಂಡು ಕೇವಲ ಎರಡು ತಿಂಗಳ ಹಿಂದಷ್ಟೇ ಕೆಲಸ ಆರಂಭಿಸಿದ್ದರು.
ಮಳೆ ಆರಂಭವಾಗಿ ಹೊಳೆಯಲ್ಲಿ ಯಥೇಚ್ಛ ನೀರು ಹರಿಯುತ್ತಿದ್ದರೂ ಲೆಕ್ಕಿಸದೇ ತಮ್ಮ ಗುರಿ ಸಾಧನೆಯಲ್ಲಿ ನಿರತರಾದರು. ಇದೀಗ ಸೇತುವೆಯ ಕಾರ್ಯ ಬಹುತೇಕ ಮುಗಿದಿದ್ದು ವಿಧ್ಯುಕ್ತ ಉದ್ಘಾಟನೆಯೊಂದೇ ಬಾಕಿ ಇದೆ. ಹೀಗಾಗಿ ಜನರ ಸಂಚಾರ ಆರಂಭವಾಗಿದೆ.