ಕೊಳೆ ರೋಗದಿಂದ ಅಡಿಕೆ ಮರ ಉಳಿಸಿಕೊಳ್ಳಿ


 ಹೆಚ್ಚು ಮಳೆಯಿಂದಾಗಿ ಈ ಬಾರಿ ಅಡಿಕೆಗೆ ವಿಪರೀತ ಕೊಳೆ ಬಂದಿದೆ. ಮೋಡ ಕವಿದ ವಾತಾವರಣ,  ತೋಟದಲ್ಲಿ ನೀರು ನಿಲ್ಲುವಿಕೆ, ಹೆಚ್ಚಾದ ಮಣ್ಣಿನ ತೇವಾಂಶ, ಪೋಷಕಾಂಶಗಳ ಕೊರತೆ ಮತ್ತು ಸೂರ್ಯನ ಬೆಳಕಿನ ಕೊರತೆ ಕೊಳೆ ರೋರ ಬರಲು ಪ್ರಮುಖ ಕಾರಣಗಳು.
ಈಗಾಗಲೇ ಮಲೆನಾಡು, ಕರಾವಳಿ ಮತ್ತು ಇತರ ಪ್ರದೇಶಗಳಲ್ಲಿ ಕೊಳೆ ರೋಗ ಉಲ್ಬಣಗೊಂಡಿದೆ. ಕೊಳೆಯಿಂದ ಹಸಿರು ಎಳೆ ಕಾಯಿ ಉದುರುವಿಕೆ, ಅಲ್ಲದೆ ಬೆಳೆದ ಕಾಯಿಗಳಲ್ಲಿ ನೀರ್ಗೊಳೆ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಬಲಿತ ಕಾಯಿಗಳ ಮೇಲೆ ಬೂದುಗೂಳೆ ಬಂದು ಹಾನಿ ಹೆಚ್ಚಾಗುವ ಸಂಭವವಿದೆ. ಚಳಿಗಾಲ ಪ್ರಾರಂಭವಾಗುವ ಅಕ್ಟೋಬರ್ ತಿಂಗಳಿನಿಂದ ಫೆಬ್ರವರಿವರೆಗೂ ಅಡಿಕೆ ಕಾಯಿ ಕೊಳೆಗೆ ಕಾರಣವಾದ ಶಿಲೀಂಧ್ರ ರೋಗಾಣುಗಳು ಅಭಿವೃದ್ಧಿ ಹೊಂದಿ ಶಿರಕೊಳೆ (ಕ್ರೌನ್ರೋಟ್) ಮತ್ತು ಸುಳಿಕೊಳೆ (ಬಡ್ರೋಟ್) ಬಂದು ಅಡಿಕೆ ಮರಗಳು ಸಾಯುವ ಸಂಭವವೂ ಇದೆ.
ಈ ಅವಧಿಯಲ್ಲಿ ಹೆಚ್ಚಾಗುವ ಮಂಜಿನ ಹನಿಗಳು ರೋಗಾಣುಗಳು ಅಭಿವೃದ್ಧಿಗೆ ಅನುಕೂಲಕರವಾಗಿರುತ್ತವೆ. ಅಡಿಕೆ ಕಾಯಿ ಕೊಳೆಗೆ ಕಾರಣವಾದ ಶಿಲೀಂಧ್ರ ರೋಗಾಣುಗಳು ಸೋಗೆಗಳ ಬುಡಗಳ ಭಾಗಗಳಲ್ಲಿ ಅಭಿವೃದ್ಧಿ ಹೊಂದಿ ಹಾಳೆಗಳನ್ನು ಕೊಳೆಸುವುದರಿಂದ ಸೋಗೆಗಳು ಹಳದಿಯಾಗಿ ಕೊಳೆತು ಒಣಗುತ್ತವೆ. ಒಂದರ ಅನಂತರ ಇನ್ನೊಂದು ಸೋಗೆ ಹೊರ ಭಾಗದಿಂದ ಕೊಳೆತು ಕೊನೆಗೆ ಶಿರಕೊಳೆ ಅಥವಾ ಸುಳಿ ಕೊಳೆಯಿಂದಾಗಿ ಮರ ಸಾಯುತ್ತದೆ.
ಆದ್ದರಿಂದ ಮರ ಉಳಿಸಿಕೊಳ್ಳುವ ಬಗ್ಗೆ ರೈತರು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಅಡಿಕೆ ಸಂಶೋಧನಾ ಕೇಂದ್ರ, ಶಿವಮೊಗ್ಗದ ವಿಜ್ಞಾನಿಗಳ ವತಿಯಿಂದ ಈ ಕೆಳಕಂಡ ಕ್ರಮಗಳನ್ನು ಶಿಫಾರಸುಗಳನ್ನು ಮಾಡಲಾಗಿದೆ.
ಏನು ಮಾಡಬೇಕು?
* ಕೆಳಗೆ ಬಿದ್ದಿರುವ ರೋಗಪೀಡಿತ ಕಾಯಿ ಹಾಗೂ ಒಣಗಿದ ಹಿಂಗಾರಗಳನ್ನು ಆರಿಸಿ ತೆಗೆದು ಸುಡಬೇಕು ಅಥವಾ ಗುಂಡಿಗಳಲ್ಲಿ ಹಾಕಿ ಮಣ್ಣಿನಿಂದ ಮುಚ್ಚಬೇಕು.
* ತೋಟಗಳಲ್ಲಿ ನೀರು ನಿಲ್ಲದಂತೆ ಬಸಿಗಾಲುವೆ ಚೊಕ್ಕ ಮಾಡಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡುವುದು.
* ಗಾಳಿ ಆಡುವಂತೆ ಮಾಡಲು ಅಂತರ ಬೆಳೆಗಳ ಅಥವಾ ಕಾಡು ಮರಗಳ ಹೆಚ್ಚುವರಿ ರೆಂಬೆಗಳನ್ನು ಕತ್ತರಿಸಿ ತೆಗೆಯುವುದು.
* ತೋಟದಲ್ಲಿ ಅಲ್ಲಲ್ಲಿ ಅಡಿಕೆ ಸಿಪ್ಪೆ, ಭತ್ತದ ಹೊಟ್ಟು ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನು ಬಳಸಿ ಹೊಗೆ ಹಾಕುವುದು. (ಎಕರೆಗೆ 3-4 ಕಡೆ ಈ ರೀತಿ ಮಾಡುವುದು).
* ರೋಗ ಪೀಡಿತ ಮರಗಳಿಗೆ ಆಗಸ್ಟ್ - ಸೆಪ್ಟಂಬರ್ ಅವಧಿಯಲ್ಲಿ ಶೇ.1ರ ಬೋರ್ಡೋ ದ್ರಾವಣ ಅಥವಾ ಶೇ. 0.2 ರ ಮೆಟಕಾಕ್ಸಿಲ್ ಎಂ.ಜಡ್ (2 ಗ್ರಾಂ 1 ಲೀ. ನೀರಿನಲ್ಲಿ ಕರಗಿಸಿ) ಅಥವಾ ಶೇ 0.3 ರ ತಾಮ್ರದ ಆಕ್ಸಿಕ್ಲೋರೈಡ್ (3 ಗ್ರಾಂ. 1 ಲೀ. ನೀರಿನಲ್ಲಿ ಕರಗಿಸಿ) ದಿಂದ ಗೊನೆಗಳಿಗೆ ಹಾಗೂ ಎಲೆ ತೊಟ್ಟು, ಹೊಡೆ ಭಾಗ ಮತ್ತು ಸುಳಿ ಭಾಗಗಳು ಚೆನ್ನಾಗಿ ನೆನೆಯುವಂತೆ ಸೂಕ್ತ ಅಂಟಿನೊಂದಿಗೆ (ರಾಳ) ಸಿಂಪರಣೆ ಮಾಡಿ.
*ಮುಂಜಾಗ್ರತೆ ಕ್ರಮವಾಗಿ ಶಿರಿಕೊಳೆ ರೋಗ ಕಂಡುಬಂದಲ್ಲಿ ಶೇ. 0.2ರ ತಾಮ್ರದ ಆಕ್ಷಿಕ್ಲೋರೈಡ್ ಮತ್ತು ಶೇ. 0.05ರ ಸ್ಟ್ರೆಪ್ಟೊಸೈಕ್ಲಿನ್ ದ್ರಾವಣದಿಂದ ಶಿರ ಭಾಗಗಳನ್ನು (ತೊಂಡೆಭಾಗ ನೆನೆಸುವುದು).
* ಮಣ್ಣು ಪರೀಕ್ಷೆ ಆಧಾರದ ಮೇಲೆ ಶಿಫಾರಸು ಮಾಡಿದ ಸುಣ್ಣ, ಸಾವಯವ ಗೊಬ್ಬರ (ಪ್ರತಿ ಮರಕ್ಕೆ 10-12 ಕಿ.ಗ್ರಾಂ) ಮತ್ತು ರಾಸಾಯನಿಕ ಗೊಬ್ಬರಗಳನ್ನು (ಪ್ರತಿ ಮರಕ್ಕೆ 140:40:140 ಗ್ರಾಂ. ಸಾ.ರಂ.ಪೊ.) ಸೆಪ್ಟಂಬರ್ - ಅಕ್ಟೋಬರ್ ಅವಧಿಯಲ್ಲಿ ಮಣ್ಣಿಗೆ ಸೇರಿಸಬೇಕು. ಈಗಾಗಲೇ ಶಿಫಾರಸು ಮಾಡಿದ ಶೇ.50ರಷ್ಟು ರಸಗೊಬ್ಬರಗಳನ್ನು ಮುಂಗಾರಿನ ಮೊದಲು ಕೊಟ್ಟಿದ್ದರೆ, ಈಗ ಉಳಿದ ಅರ್ಧ ಭಾಗವನ್ನು ಕೊಟ್ಟರೆ ಸಾಕಾಗುತ್ತದೆ.
* ಇದೇ ಅವಧಿಯಲ್ಲಿ ಬೇರುಗಳ ವಲಯವನ್ನು ಶೇ. 1ರ ಬೋರ್ಡೋ ದ್ರಾವಣ ಅಥವಾ ಶೇ. 0.3ರ ಅಕೋಮಿನ್/ತಾಮ್ರದ ಆಕ್ಸಿಕ್ಲೋರೈಡ್ ದ್ರಾವಣದಿಂದ ನೆನೆಸುವುದು, ಪ್ರತಿ ಮರಕ್ಕೆ ಸುಮಾರು 5 ಲೀ. ದ್ರಾವಣ ಬೇಕಾಗುವುದು.
* ತುಂತುರು ಮಳೆ ಇರುವಾಗ ಬೋರ್ಡೋ ದ್ರಾವಣವನ್ನು ಹಾಗೂ ಶುಷ್ಕ ವಾತಾವರಣ ಇದ್ದಾಗ ಬೋರ್ಡೋ ದ್ರಾವಣಕ್ಕೆ ಬದಲಿ ಶಿಲೀಂಧ್ರ ನಾಶಕಗಳಾದ ತಾಮ್ರದ ಆಕ್ಸಿಕ್ಲೋರೈಡ್ ಅಥವಾ ಮೆಟಲಾಕ್ಸಿಲ್ ಎಂ.ಜಡ್. ಔಷಧಗಳನ್ನು ಸೂಕ್ತ ಅಂಟಿನೊಂದಿಗೆ ಸಿಂಪರಣೆಗೆ ಬಳಸಬಹುದಾಗಿದೆ.
ಈ ಮೇಲಿನ ಕ್ರಮಗಳನ್ನು ಸಾಮೂಹಿಕವಾಗಿ ಏಕಕಾಲದಲ್ಲಿ ಅನುಸರಿಸಿದಲ್ಲಿ ಮರಗಳನ್ನು ಸುಳಿಕೊಳೆ ಅಥವಾ ಶಿರಕೊಳೆಯಿಂದ ಸಾಯುವುದನ್ನು ತಪ್ಪಿಸಬಹುದಾಗಿದೆ.
ಸಹಾಯಧನ ಲಭ್ಯ:
ರೋಗ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ರೈತರು, ತಾವು ಖರೀದಿಸುವ ಮೈಲುತುತ್ತಕ್ಕೆ, ವಿವಿಧ ಸಸ್ಯ ಸಂರಕ್ಷಣಾ ಔಷಧಕ್ಕೆ ತೋಟಗಾರಿಕೆ ಇಲಾಖೆಯಿಂದ ಶೇ.50ರಂತೆ ಪ್ರತಿ ಹೆಕ್ಟೇರ್ಗೆ ರೂ. 2,000ದಂತೆ ಗರಿಷ್ಠ 2 ಹೆಕ್ಟೇರ್ವರೆಗೆ ರೂ. 4,000 ಸಹಾಯಧನ ಪಡೆಯಬಹುದಾಗಿದೆ. ರೈತರು ಅರ್ಜಿ, ಪಹಣಿ ಹಾಗೂ ಸಸ್ಯ ಸಂರಕ್ಷಣಾ ಔಷಧ ಖರೀದಿಸಿದ ಟಿನ್ ಸಂಖ್ಯೆ ಇರುವ ಬಿಲ್ಲಿನೊಂದಿಗೆ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸಬಹುದು.
ಬೋರ್ಡೋ ದ್ರಾವಣ ತಯಾರಿಸುವ ವಿಧಾನ:
1. ಬೋರ್ಡೋ ದ್ರಾವಣ ತಯಾರಿಸಲು ಮಣ್ಣಿನ, ಪ್ಲಾಸ್ಟಿಕ್ ಅಥವಾ ತಾಮ್ರದ ಪಾತ್ರೆಗಳನ್ನು ಉಪಯೋಗಿಸಬೇಕು. ಪ್ಲಾಸ್ಟಿಕ್ ಉತ್ತಮ.
2. ಒಂದು ಕಿ.ಗ್ರಾಂ ಮೈಲುತುತ್ತನ್ನು 50 ಲೀ. ನೀರಿನಲ್ಲಿ ಚೆನ್ನಾಗಿ ಕರಗಿಸಬೇಕು.
3. ಇನ್ನೊಂದು ಪಾತ್ರೆಯಲ್ಲಿ ಒಂದು ಕಿ.ಗ್ರಾಂ ಸುಣ್ಣ ಮತ್ತು ಇದರ ಜತೆಯಲ್ಲಿ 150 ಗ್ರಾಂ ಅಂಟನ್ನು ಮಿಶ್ರ ಮಾಡಿ 50 ಲೀ. ನೀರಿನಲ್ಲಿ ಚೆನ್ನಾಗಿ ಕರಗಿಸಿ ಬೆರೆಸಬೇಕು.
4. ಎರಡು ದ್ರಾವಣಗಳನ್ನು ಒಂದೇ ಸಾರಿ ಮೂರನೇ ಪಾತ್ರೆಗೆ ಸುರಿಯುತ್ತಾ ಕಲಕಿ ಮಿಶ್ರಣ ಮಾಡಬೇಕು.
5. ಬೋರ್ಡೋ ದ್ರಾವಣದ ರಸಸಾರ (ಪಿ.ಎಚ್.) 7 ಇರಬೇಕು. ಕಡಿಮೆಯಾಗಿದ್ದರೆ ಸಸ್ಯಗಳಿಗೆ ಹಾನಿಯಾಗುವುದು. ಅದನ್ನು ಪರೀಕ್ಷಿಸಲು ಇಂತಹ ದ್ರಾವಣದಲ್ಲಿ ಕಬ್ಬಿಣದ ಬ್ಲೇಡನ್ನು ಸುಮಾರು 5-10 ನಿಮಿಷ ಅದ್ದಿ ನೋಡಬೇಕು. ರಸಸಾರ ಸರಿ ಇಲ್ಲದಿದ್ದರೆ ದ್ರಾವಣ ಕೆಂಪು ಮಿಶ್ರಿತ ಕಂದು ಬಣ್ಣವಾಗುವುದು. ರಸಸಾರ ಸರಿಪಡಿಸಿ ತಟಸ್ಥ ರಸಸಾರ(ಪಿ.ಹೆಚ್ 7)ಕ್ಕೆ ತರಲು ಸ್ವಲ್ಪ ಸುಣ್ಣದ ದ್ರಾವಣವನ್ನು ಸೇರಿಸಿ ಬೆರೆಸಬೇಕು. ಬೋರ್ಡೋ ದ್ರಾವಣವನ್ನು ತಯಾರಿಸಿದ ತಕ್ಷಣ ಸಿಂಪರಣೆ ಮಾಡುವುದರಿಂದ ದ್ರಾವಣದ ಶಿಲೀಂಧ್ರನಾಶಕ ಗುಣ ಅತ್ಯುತ್ತಮವಾಗಿರುತ್ತದೆ. ಆ ದಿನಕ್ಕೆ ಬೇಕಾಗುವ ದ್ರಾವಣವನ್ನು ಆ ದಿನವೇ ತಯಾರಿಸಿಕೊಳ್ಳಬೇಕು. ಮರುದಿನ ಬಳಸಬಾರದು. ಅನಿವಾರ್ಯವಾದರೆ ಮಾತ್ರ ಪ್ರತಿ 100 ಲೀ. ಬೋರ್ಡೋ ದ್ರಾವಣಕ್ಕೆ 100 ಗ್ರಾಂ. ಬೆಲ್ಲ ಸೇರಿಸುವುದರಿಂದ ಶಿಲೀಂಧ್ರ ನಾಶಕ ಗುಣವನ್ನು ಒಂದೆರಡು ದಿನಗಳವರೆಗೆ ಉಳಿಸಿಕೊಳ್ಳಬಹುದು. ಸಿಂಪರಣೆಯನ್ನು ಮಳೆ ಇಲ್ಲದಾಗ ಕೈಗೊಳ್ಳಬೇಕು. ಉತ್ತಮ ಲಿತಾಂಶ ಸಿಗಲು ಬೋರ್ಡೋ ದ್ರಾವಣ ಸಿಂಪಡಿಸಿ 4 - 5 ಗಂಟೆ ಕಾಲ ಮಳೆ ಬೀಳಬಾರದು.