ಕುದಿಯುವ ಎಣ್ಣೆ ಬಂಡಿಯಿಂದ ಬರಿಗೈಯಲ್ಲಿ ವಡೆ ತೆಗೆದ ಭಕ್ತರು

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಸಮೀಪದ ಹನುಮಟ್ಟಾದ ಶ್ರೀ ಲಕ್ಷ್ಮೆ ನಾರಾಯಣ ಮಹಾಮಾಯ ದೇವಸ್ಥಾನದಲ್ಲಿ ಆಶ್ವಿನಿ ವದ್ಯ ಪಂಚಮಿ ಉತ್ಸವ ಸಡಗರ ಸಂಭ್ರಮದಿಂದ ನಡೆಯಿತು. ಶ್ರೀ ಲಕ್ಷ್ಮೆ ನಾರಾಯಣ ಮಹಾಮಾಯ ದೇವಸ್ಥಾನದ ಹಿಂಬದಿಯ ಶ್ರೀ ಭಗವತಿ ದೇವಸ್ಥಾನದಲ್ಲಿ ಭಕ್ತರು ಕುದಿಯುವ ಎಣ್ಣೆಯಿಂದ ಬರಿಗೈಯಲ್ಲಿ ವಡೆ ತೆಗೆದು ದೇವರಿಗೆ ನೈವೇದ್ಯ ಮಾಡಿದರು. ಭಕ್ತರಿಗೆ ವಡೆ ತೆಗೆಯುವ ದಶ್ಯ ವೀಕ್ಷಿಸಲು ದೇವಸ್ಥಾನದ ಆವಾರದಲ್ಲಿ ದೊಡ್ಡದಾದ ಟಿವಿ ಪರದೆ ಅಳವಡಿಸಲಾಗಿತ್ತು.ಮಧ್ಯೆ, ಕುಮಟಾದ ಶ್ರೀ ಶಾಂತೇರಿ ಕಾಮಾಕ್ಷಿ ರಾಮನಾಥ ದೇವಾಲಯ, ಶ್ರೀ ರಾಯೇಶ್ವರ ಕಾಲಭೈರವ ಕಾವೂರ ಕಾಮಾಕ್ಷಿ ದೇವಾಲಯ ಹಾಗೂ ಗುಜರಗಲ್ಲಿಯ ಶ್ರೀ ಕಾವೂರ ಕಾಮಾಕ್ಷಿ ದೇವಾಲಯದಲ್ಲಿಯೂ ಭಕ್ತರು ಕುದಿಯುವ ಎಣ್ಣೆ ಬಂಡಿಯಿಂದ ಬರಿಗೈಯಲ್ಲಿ ವಡೆ ತೆಗೆಯುವ ಮೂಲಕ ಭಕ್ತಿ ಮೆರೆದರು. ದೈವಿ ಜಾಗೃತ ತಾಣಗಳೆಂದೇ ಖ್ಯಾತವಾದ ಈ ದೇವಾಲಯಗಳಲ್ಲಿ ಕುದಿಯುವ ಎಣ್ಣೆಯ ಬಂಡಿಯಿಂದ ಪಾತ್ರಿಗಳು ವಡೆ ತೆಗೆಯುವ ವಿದ್ಯಮಾನವು ನವರಾತ್ರಿ ಸಂಪನ್ನತೆಯ ಪ್ರಮುಖ ಧಾರ್ಮಿಕ ಪದ್ಧತಿಯಾಗಿ ಆಚರಣೆಯಾಗುತ್ತಿದೆ.ಪೈಕಿ ಕಾವೂರ ಕಾಮಾಕ್ಷಿಯ ಶ್ರೀ ಸಂಸ್ಥಾನದಲ್ಲಿ ಪೂರ್ಣಿಮೆಯ ದಿನ ನಡೆಯುವ ಕಾರ್ಯಕ್ರಮಗಳಿಗೆ ವಿಶೇಷ ಪೌರಾಣಿಕ ಹಿನ್ನೆಲೆಯೂ ಅಡಗಿದೆ. ಆದಿಶಕ್ತಿಯ 51 ಸಿದ್ಧ ಪೀಠಗಳ ಪೈಕಿ ಅಸ್ಸಾಂನ ನೀಲಾಚಲ ಪರ್ವತದ ಮೇಲಿರುವ ಕಾಮಾಖ್ಯ ಮಂದಿರ ಪ್ರಥಮ ಸ್ಥಾನದಲ್ಲಿದೆ. ಅಲ್ಲಿನ ಶಕ್ತಿ ರೂಪವೇ ಗೋಮಾಂತಕ (ಗೋವಾ)ದ ರಾಯ ಎನ್ನುವಲ್ಲಿ ನೆಲೆಸಿತ್ತು. ಕಾಲಾನಂತರದಲ್ಲಿ ಪೋರ್ಚುಗೀಸರ ಕಾಟದಿಂದ ತಮ್ಮ ಆರಾಧ್ಯ ದೇವರ ವಿಗ್ರಹ ಸಮೇತ ಕುಮಟಾಕ್ಕೆ ಬಂದು ನೆಲೆಸಿ ಲಕ್ಷಾಂತರ ಭಕ್ತಾದಿಗಳ ಆರಾಧ್ಯ ದೈವವಾಗಿದೆ ಎಂಬ ಪ್ರತೀತಿ ಇದೆ.

ನಾಗಪತಿ ಆದ ಮನಮೋಹನ್ ಸಿಂಗ್

ಕರ್ನಾಟಕದ ರಾಜಧಾನಿ ಬೆಂಗಳೂರಿಗೂ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಭೇಟಿ ಕೊಟ್ಟಿದ್ದು ಅಪರೂಪವೇ?. ಅಂತಹುದರಲ್ಲಿ ಅವರು ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಮತ್ತಿಘಟ್ಟಕ್ಕೆ ಬಂದಿದ್ದರೇ?.
ಸ್ಥಳೀಯ ಯುವಕ ಸಂಘವು ಮತ್ತಿಘಟ್ಟ ಸೊಸೈಟಿ ಆವಾರದಲ್ಲಿ ಇತ್ತೀಚೆಗೆ ನಡೆಸಿದ ಹಲವು ಸ್ಪರ್ಧೆಗಳನ್ನು ನೋಡಲು ಪ್ರಧಾನಿ ಮನಮೋಹನ್ ಸಿಂಗ್ ಪಾತ್ರಧಾರಿ ಬಂದಿದ್ದರು. ಸ್ವತಃ ಸ್ಪರ್ಧಿಯಾಗಿ ಗಮನ ಸೆಳೆದರು. ಪ್ರಧಾನಿಯವರ ನಡಿಗೆ, ಮಾತು, ಕೈ ಬೀಸಿ ನಮಸ್ಕರಿಸುವ ರೀತಿಯಲ್ಲೂ ಅನುಕರಣೆ ಮಾಡಿದರು. ಸ್ಥಳೀಯರೇ ಆದ ನಾಗಪತಿ ಹೆಗಡೆ ಪ್ರಧಾನಿ ಸಿಂಗ್ ವೇಷಧಾರಿಯಾಗಿ ಗಮನ ಸೆಳೆದರು.

ಬಿತ್ತದೆ ಭತ್ತ ಬೆಳೆಯೋ ನಾಡಿದು

ಇಲ್ಲಿ ಭತ್ತ ಬಿತ್ತಲು ಉಳುಮೆ ಮಾಡುವುದಿಲ್ಲ, ಬೀಜ ಬಿತ್ತುವುದಿಲ್ಲ. ಆದರೂ, ಭತ್ತ ಬೆಳೆಯುತ್ತದೆ. ಇಂತಹ ವಿಸ್ಮಯ ನಡೆಯುವ ಚಿತ್ತಾಪುರ ತಾಲೂಕಿನ ಎರಡನೇ ತಿರುಪತಿ ಎಂದೇ ಖ್ಯಾತಿ ಪಡೆದಿರುವ ಸೂಗೂರು (ಕೆ) ಗ್ರಾಮದಲ್ಲಿ ಅ.9ರಿಂದ 17ರವರೆಗೆ ನವರಾತ್ರಿ ಬ್ರಹ್ಮೋತ್ಸವ ನಡೆಯಿತು. ದೇವಸ್ಥಾನದ ಪಕ್ಕದಲ್ಲಿರುವ ಬೆಟ್ಟದಲ್ಲಿರುವ 200ಅಡಿ ಉದ್ದ, ಏಳು ಅಡಿ ಅಗಲದ ಕ್ಷೇತ್ರದಲ್ಲಿ ಒಂದರಿಂದ ಎರಡು ಚೀಲದವರೆಗೆ ಭತ್ತ ಬೆಳೆಯುತ್ತದೆ. ಭತ್ತದ ಮೇಲೆ ಬಿಳಿ, ಕೆಂಪು, ಹಸಿರು ಬಣ್ಣ ಕಂಡು ಬರುತ್ತದೆ. ಪ್ರತಿಯೊಂದು ಅಕ್ಕಿಯ ಮೇಲೆ ಮೂರು ನಾಮಗಳಂತೆ ಮೂರು ರೇಖೆಗಳು ಇರುತ್ತವೆ. ಈ ಬೆಳೆ ಜೂನ್ದಿಂದ ಅಕ್ಟೋಬರ್ ತಿಂಗಳವರೆಗೆ ಮಾತ್ರ ಇರುತ್ತದೆ. ರಾತ್ರಿ ಸಮಯದಲ್ಲಿ ಭತ್ತದ ಗದ್ದೆಯ ಸಮೀಪ ಮಲಗಿದರೆ ‘ನಾರಾಯಣ ನಾರಾಯಣ’ ಎಂಬ ಧ್ವನಿ ಕೇಳಿ ಬರುತ್ತದೆ ಎನ್ನುತ್ತಾರೆ ಹಿರಿಯರು. ಹಾಗಂತ, ಈ ಭತ್ತವನ್ನು ಬೇರೆ ಕಡೆ ನಾಟಿ ಮಾಡಿದರೆ ಬೆಳೆಯೋದಿಲ್ಲ ಹಾಗೂ ಇದನ್ನು ಸ್ವಂತಕ್ಕೆ ಬಳಸಿಕೊಂಡರೆ ಅಪಾಯ ತಪ್ಪಿದ್ದಲ್ಲ ಎನ್ನುವ ಪ್ರತೀತಿಯೂ ಇದೆ. ಈ ಸ್ಥಳದಲ್ಲಿ ಋಷಿ ಮುನಿಗಳು ಜಪ-ತಪ-ಅನುಷ್ಠಾನ ಮಾಡಿ ತಮ್ಮ ಭೋಜನಕ್ಕಾಗಿ ಈ ಭಾಗದಲ್ಲಿದ್ದ ಬೆಳೆಯನ್ನು ತೆಗೆದುಕೊಳ್ಳುತ್ತಿದ್ದರು. ಇದಕ್ಕೂ ಮುನ್ನ ವೆಂಕಟೇಶ್ವರನಿಗೆ ನೈವೇದ್ಯ ಅರ್ಪಿಸುತ್ತಿದ್ದರು ಎನ್ನುತ್ತಾರೆ ಈ ಭಾಗದ ಹಿರಿಯರು.
ದೇವಸ್ಥಾನದಿಂದ ಹನುಮಾನ ಮಂದಿರದವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿದಿನ ಒಂದೊಂದು ವಾಹನದ ಮೆರವಣಿಗೆ ನಡೆಯುತ್ತದೆ. ವಿಗ್ರಹಗಳಿಗೆ ಐದು ಕಡೆಯಲ್ಲಿ ಆರತಿ ಬೆಳಗಲಾಗುತ್ತದೆ. ತಿರುಪತಿಯಲ್ಲಿ ಗರುಡವಾಹನ ಶ್ರೇಷ್ಠವೆಂಬಂತೆ ಸೂಗೂರ (ಕೆ) ಗ್ರಾಮದಲ್ಲಿ ಗಜವಾಹನ ಶ್ರೇಷ್ಠವಾಗಿದೆ.