ಕುದಿಯುವ ಎಣ್ಣೆ ಬಂಡಿಯಿಂದ ಬರಿಗೈಯಲ್ಲಿ ವಡೆ ತೆಗೆದ ಭಕ್ತರು

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ಸಮೀಪದ ಹನುಮಟ್ಟಾದ ಶ್ರೀ ಲಕ್ಷ್ಮೆ ನಾರಾಯಣ ಮಹಾಮಾಯ ದೇವಸ್ಥಾನದಲ್ಲಿ ಆಶ್ವಿನಿ ವದ್ಯ ಪಂಚಮಿ ಉತ್ಸವ ಸಡಗರ ಸಂಭ್ರಮದಿಂದ ನಡೆಯಿತು. ಶ್ರೀ ಲಕ್ಷ್ಮೆ ನಾರಾಯಣ ಮಹಾಮಾಯ ದೇವಸ್ಥಾನದ ಹಿಂಬದಿಯ ಶ್ರೀ ಭಗವತಿ ದೇವಸ್ಥಾನದಲ್ಲಿ ಭಕ್ತರು ಕುದಿಯುವ ಎಣ್ಣೆಯಿಂದ ಬರಿಗೈಯಲ್ಲಿ ವಡೆ ತೆಗೆದು ದೇವರಿಗೆ ನೈವೇದ್ಯ ಮಾಡಿದರು. ಭಕ್ತರಿಗೆ ವಡೆ ತೆಗೆಯುವ ದಶ್ಯ ವೀಕ್ಷಿಸಲು ದೇವಸ್ಥಾನದ ಆವಾರದಲ್ಲಿ ದೊಡ್ಡದಾದ ಟಿವಿ ಪರದೆ ಅಳವಡಿಸಲಾಗಿತ್ತು.ಮಧ್ಯೆ, ಕುಮಟಾದ ಶ್ರೀ ಶಾಂತೇರಿ ಕಾಮಾಕ್ಷಿ ರಾಮನಾಥ ದೇವಾಲಯ, ಶ್ರೀ ರಾಯೇಶ್ವರ ಕಾಲಭೈರವ ಕಾವೂರ ಕಾಮಾಕ್ಷಿ ದೇವಾಲಯ ಹಾಗೂ ಗುಜರಗಲ್ಲಿಯ ಶ್ರೀ ಕಾವೂರ ಕಾಮಾಕ್ಷಿ ದೇವಾಲಯದಲ್ಲಿಯೂ ಭಕ್ತರು ಕುದಿಯುವ ಎಣ್ಣೆ ಬಂಡಿಯಿಂದ ಬರಿಗೈಯಲ್ಲಿ ವಡೆ ತೆಗೆಯುವ ಮೂಲಕ ಭಕ್ತಿ ಮೆರೆದರು. ದೈವಿ ಜಾಗೃತ ತಾಣಗಳೆಂದೇ ಖ್ಯಾತವಾದ ಈ ದೇವಾಲಯಗಳಲ್ಲಿ ಕುದಿಯುವ ಎಣ್ಣೆಯ ಬಂಡಿಯಿಂದ ಪಾತ್ರಿಗಳು ವಡೆ ತೆಗೆಯುವ ವಿದ್ಯಮಾನವು ನವರಾತ್ರಿ ಸಂಪನ್ನತೆಯ ಪ್ರಮುಖ ಧಾರ್ಮಿಕ ಪದ್ಧತಿಯಾಗಿ ಆಚರಣೆಯಾಗುತ್ತಿದೆ.ಪೈಕಿ ಕಾವೂರ ಕಾಮಾಕ್ಷಿಯ ಶ್ರೀ ಸಂಸ್ಥಾನದಲ್ಲಿ ಪೂರ್ಣಿಮೆಯ ದಿನ ನಡೆಯುವ ಕಾರ್ಯಕ್ರಮಗಳಿಗೆ ವಿಶೇಷ ಪೌರಾಣಿಕ ಹಿನ್ನೆಲೆಯೂ ಅಡಗಿದೆ. ಆದಿಶಕ್ತಿಯ 51 ಸಿದ್ಧ ಪೀಠಗಳ ಪೈಕಿ ಅಸ್ಸಾಂನ ನೀಲಾಚಲ ಪರ್ವತದ ಮೇಲಿರುವ ಕಾಮಾಖ್ಯ ಮಂದಿರ ಪ್ರಥಮ ಸ್ಥಾನದಲ್ಲಿದೆ. ಅಲ್ಲಿನ ಶಕ್ತಿ ರೂಪವೇ ಗೋಮಾಂತಕ (ಗೋವಾ)ದ ರಾಯ ಎನ್ನುವಲ್ಲಿ ನೆಲೆಸಿತ್ತು. ಕಾಲಾನಂತರದಲ್ಲಿ ಪೋರ್ಚುಗೀಸರ ಕಾಟದಿಂದ ತಮ್ಮ ಆರಾಧ್ಯ ದೇವರ ವಿಗ್ರಹ ಸಮೇತ ಕುಮಟಾಕ್ಕೆ ಬಂದು ನೆಲೆಸಿ ಲಕ್ಷಾಂತರ ಭಕ್ತಾದಿಗಳ ಆರಾಧ್ಯ ದೈವವಾಗಿದೆ ಎಂಬ ಪ್ರತೀತಿ ಇದೆ.