ಬಿತ್ತದೆ ಭತ್ತ ಬೆಳೆಯೋ ನಾಡಿದು

ಇಲ್ಲಿ ಭತ್ತ ಬಿತ್ತಲು ಉಳುಮೆ ಮಾಡುವುದಿಲ್ಲ, ಬೀಜ ಬಿತ್ತುವುದಿಲ್ಲ. ಆದರೂ, ಭತ್ತ ಬೆಳೆಯುತ್ತದೆ. ಇಂತಹ ವಿಸ್ಮಯ ನಡೆಯುವ ಚಿತ್ತಾಪುರ ತಾಲೂಕಿನ ಎರಡನೇ ತಿರುಪತಿ ಎಂದೇ ಖ್ಯಾತಿ ಪಡೆದಿರುವ ಸೂಗೂರು (ಕೆ) ಗ್ರಾಮದಲ್ಲಿ ಅ.9ರಿಂದ 17ರವರೆಗೆ ನವರಾತ್ರಿ ಬ್ರಹ್ಮೋತ್ಸವ ನಡೆಯಿತು. ದೇವಸ್ಥಾನದ ಪಕ್ಕದಲ್ಲಿರುವ ಬೆಟ್ಟದಲ್ಲಿರುವ 200ಅಡಿ ಉದ್ದ, ಏಳು ಅಡಿ ಅಗಲದ ಕ್ಷೇತ್ರದಲ್ಲಿ ಒಂದರಿಂದ ಎರಡು ಚೀಲದವರೆಗೆ ಭತ್ತ ಬೆಳೆಯುತ್ತದೆ. ಭತ್ತದ ಮೇಲೆ ಬಿಳಿ, ಕೆಂಪು, ಹಸಿರು ಬಣ್ಣ ಕಂಡು ಬರುತ್ತದೆ. ಪ್ರತಿಯೊಂದು ಅಕ್ಕಿಯ ಮೇಲೆ ಮೂರು ನಾಮಗಳಂತೆ ಮೂರು ರೇಖೆಗಳು ಇರುತ್ತವೆ. ಈ ಬೆಳೆ ಜೂನ್ದಿಂದ ಅಕ್ಟೋಬರ್ ತಿಂಗಳವರೆಗೆ ಮಾತ್ರ ಇರುತ್ತದೆ. ರಾತ್ರಿ ಸಮಯದಲ್ಲಿ ಭತ್ತದ ಗದ್ದೆಯ ಸಮೀಪ ಮಲಗಿದರೆ ‘ನಾರಾಯಣ ನಾರಾಯಣ’ ಎಂಬ ಧ್ವನಿ ಕೇಳಿ ಬರುತ್ತದೆ ಎನ್ನುತ್ತಾರೆ ಹಿರಿಯರು. ಹಾಗಂತ, ಈ ಭತ್ತವನ್ನು ಬೇರೆ ಕಡೆ ನಾಟಿ ಮಾಡಿದರೆ ಬೆಳೆಯೋದಿಲ್ಲ ಹಾಗೂ ಇದನ್ನು ಸ್ವಂತಕ್ಕೆ ಬಳಸಿಕೊಂಡರೆ ಅಪಾಯ ತಪ್ಪಿದ್ದಲ್ಲ ಎನ್ನುವ ಪ್ರತೀತಿಯೂ ಇದೆ. ಈ ಸ್ಥಳದಲ್ಲಿ ಋಷಿ ಮುನಿಗಳು ಜಪ-ತಪ-ಅನುಷ್ಠಾನ ಮಾಡಿ ತಮ್ಮ ಭೋಜನಕ್ಕಾಗಿ ಈ ಭಾಗದಲ್ಲಿದ್ದ ಬೆಳೆಯನ್ನು ತೆಗೆದುಕೊಳ್ಳುತ್ತಿದ್ದರು. ಇದಕ್ಕೂ ಮುನ್ನ ವೆಂಕಟೇಶ್ವರನಿಗೆ ನೈವೇದ್ಯ ಅರ್ಪಿಸುತ್ತಿದ್ದರು ಎನ್ನುತ್ತಾರೆ ಈ ಭಾಗದ ಹಿರಿಯರು.
ದೇವಸ್ಥಾನದಿಂದ ಹನುಮಾನ ಮಂದಿರದವರೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪ್ರತಿದಿನ ಒಂದೊಂದು ವಾಹನದ ಮೆರವಣಿಗೆ ನಡೆಯುತ್ತದೆ. ವಿಗ್ರಹಗಳಿಗೆ ಐದು ಕಡೆಯಲ್ಲಿ ಆರತಿ ಬೆಳಗಲಾಗುತ್ತದೆ. ತಿರುಪತಿಯಲ್ಲಿ ಗರುಡವಾಹನ ಶ್ರೇಷ್ಠವೆಂಬಂತೆ ಸೂಗೂರ (ಕೆ) ಗ್ರಾಮದಲ್ಲಿ ಗಜವಾಹನ ಶ್ರೇಷ್ಠವಾಗಿದೆ.