ಭಾರತದಲ್ಲಿ ಪ್ರತಿ ವರ್ಷ ಕೊಳೆಯುತ್ತಿವೆ 13 ಸಾವಿರ ಕೋಟಿ ರೂ.ಗಳ ಹಣ್ಣು

ದೇಶದಲ್ಲಿ ಹಣ್ಣು, ಹಂಪಲುಗಳ ಬೆಲೆ ಗಗನಕ್ಕೇರಿದೆ. ಜನ ಸಾಮಾನ್ಯರು ಇವುಗಳನ್ನು ಕೊಳ್ಳುವುದು ಸಾಧ್ಯವೇ ಇಲ್ಲ ಎಂಬ ಸ್ಥಿತಿ ಆದೆ. ಆದರೆ, ದೇಶದಲ್ಲಿ ಪ್ರತಿವರ್ಷ 13 ಸಾವಿರ ಕೋಟಿ ರೂ. ಮೌಲ್ಯದ ಹಣ್ಣುಗಳು ವ್ಯರ್ಥವಾಗುತ್ತಿವೆ ಎನ್ನುತ್ತದೆ ವರದಿ. ಹಣ್ಣುಗಳ ಶೇಖರಣೆಗೆ ಸೂಕ್ತ ಶೀತಲೀಕರಣ ವ್ಯವಸ್ಥೆ ಇಲ್ಲದಿರುವುದು, ಸಾಗಾಟದ ಅವ್ಯವಸ್ಥೆಗಳಿಂದಾಗಿ ಅಪಾರ ಪ್ರಮಾಣದ ಹಣ್ಣುಗಳು ಕೊಳೆತು ಬಳಕೆಗಿಲ್ಲವಾಗುತ್ತಿವೆ.ಮರ್ಸನ್ ಕ್ಲೈಮೇಟ್ ಟೆಕ್ನಾಲಜೀಸ್ ಇಂಡಿಯಾ ಎಂಬ ಅಮೆರಿಕ ಮೂಲದ ಉತ್ಪಾದಕ ಕಂಪನಿ ಈ ವರದಿ ಹೊರ ತಂದಿದ್ದು, ದೇಶದಲ್ಲಿ ಪ್ರತಿವರ್ಷ 44 ಸಾವಿರ ಕೋಟಿ ರೂ. ಮೌಲ್ಯದ ಹಣ್ಣುಗಳು ಮತ್ತು ತರಕಾರಿಗಳು ವ್ಯರ್ಥವಾಗುತ್ತಿವೆ.
ಪ್ರಪಂಚದಲ್ಲೇ ಭಾರತ ಹಣ್ಣು, ತರಕಾರಿ ಬೆಳೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ, ಅವುಗಳ ಸಂಗ್ರಹಣೆ ವ್ಯವಸ್ಥೆಗಳ ಕೊರತೆ ಅಪಾರವಾಗಿ ಭಾದಿಸುತ್ತಿದೆ. ಸದ್ಯ ದೇಶದಲ್ಲಿ 6,300 ಶೀತಲೀಕರಣ ಘಟಕ ವ್ಯವಸ್ಥೆಯಿದ್ದು, ಇದರಲ್ಲಿ ಸುಮಾರು 3 ಕೋಟಿ ಮೆಟ್ರಿಕ್ ಟನ್ ಹಣ್ಣು ದಾಸ್ತಾನು ಮಾಡಬಹುದಾಗಿದೆ. ಒಟ್ಟು ಉತ್ಪಾದನೆ 6.1 ಕೋಟಿ ಮೆಟ್ರಿಕ್ ಟನ್ ಆಗಿದ್ದು, ದಾಸ್ತಾನು ವ್ಯವಸ್ಥೆ ಉತ್ಪಾದನೆಯ ಅರ್ಧದಷ್ಟಕ್ಕೆ ಮಾತ್ರ ಸಾಕು ಎಂಬುದು ವರದಿಯ ತಿರುಳು.