ಹೊರದೇಶದಿಂದ ಒಂದು ಕೆಜಿ ಚಿನ್ನ ತಂದರೆ 4 ಲಕ್ಷ ರೂ.ಲಾಭ

ಸರಕಾರ ಚಿನ್ನ ಆಮದು ಸುಂಕವನ್ನು ಹೆಚ್ಚಿಸಿದ ಬಳಿಕ ಗಲ್ಫ್ ದೇಶಗಳಿಂದ ಬರುವವರಿಗೆ ಚಿನ್ನ ಸ್ಮಗ್ಲಿಂಗ್ ನಿಜವಾಗಿಯೂ ಚಿನ್ನದ ಮೊಟ್ಟೆಯಿಡುವ ಕೋಳಿಯಾಗಿದೆ. ಕೊಲ್ಲಿ ರಾಷ್ಟ್ರಗಳು ಮತ್ತು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಬಹಳ ಅಂತರವಿರುವುದರಿಂದ ಕಸ್ಟಮ್ಸ್ ಅಧಿಕಾರಿಗಳ ಕಣ್ಣುತಪ್ಪಿಸಿ 100 ಗ್ರಾಂ ಚಿನ್ನ ತಂದರೂ ಸಾವಿರಾರು ರೂ.ಗಳ ಲಾಭ ಗ್ಯಾರಂಟಿ. ಇದರಿಂದಾಗಿ ಕಳೆದ 10 ತಿಂಗಳಲ್ಲಿ ನೆರೆಯ ಕೇರಳ ರಾಜ್ಯಕ್ಕೆ ದುಬೈ ಮತ್ತಿತರ ದೇಶಗಳಿಂದ ಚಿನ್ನದ ಹೊಳೆಯೇ ಹರಿಯುತ್ತಿದೆ.
ರಾಜ್ಯದ ಮೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ 10 ತಿಂಗಳಲ್ಲಿ ಸುಮಾರು 200 ಕೆಜಿ ಚಿನ್ನ ಸಿಕ್ಕಿದೆ. ಇದು ಸಿಕ್ಕಿ ಬಿದ್ದ ಚಿನ್ನದ ಲೆಕ್ಕಾಚಾರ ಮಾತ್ರ. ಸಿಕ್ಕಿ ಬೀಳದೆ ಪಾರಾದ ಚಿನ್ನ ಇದರ ಎರಡು ಪಟ್ಟಾದರೂ ಇರಬಹುದು. ಮಂಗಳೂರು, ಮುಂಬಯಿ, ಹೈದರಾಬಾದ್ ಮತ್ತು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲೂ ಆಗಾಗ ಕೆಜಿಗಟ್ಟಲೆ ಚಿನ್ನ ವಶವಾದ ಪ್ರಕರಣಗಳು ವರದಿಯಾಗುತ್ತಿರುತ್ತವೆ.
ಸುಂಕ ತಪ್ಪಿಸಿ ಒಂದು ಗ್ರಾಂ ಚಿನ್ನ ತಂದರೆ 424 ರೂ.ಲಾಭವಾಗುತ್ತದೆ. ಈ ಪ್ರಕಾರ ಲೆಕ್ಕ ಹಾಕಿದರೆ ಒಂದು ಕೆಜಿ ಚಿನ್ನ ದಾಟಿಸಿಬಿಟ್ಟರೆ 4,24,000 ರೂ. ಜೇಬಿಗೆ ಬೀಳುತ್ತದೆ. ಇದರಲ್ಲಿ ಚಿನ್ನ ತಂದವರ ಕಮಿಶನ್, ವಿಮಾನ ಟಿಕೆಟ್ನ ದರ, ಲಂಚ ಮತ್ತಿತರ ಖರ್ಚುವೆಚ್ಚಗಳನ್ನು ಕಳೆದರೂ ಕನಿಷ್ಠ 3 ಲಕ್ಷ ರೂ. ಲಾಭ ಗ್ಯಾರಂಟಿ. ಹೀಗಾಗಿ ಈಗ ಮಾದಕ ವಸ್ತುವಿಗಿಂತಲೂ ಚಿನ್ನ ಕಳ್ಳಸಾಗಾಟವೇ ಸ್ಮಗ್ಲರ್ಗಳ ಪಾಲಿಗೆ ಹೆಚ್ಚು ಲಾಭದಾಯಕವಾಗಿದೆ.ಲ್ಫ್ ದೇಶಗಳಲ್ಲಿ ಮಲಯಾಳಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಕೇರಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಅಕ್ರಮ ಚಿನ್ನ ಬರುತ್ತದೆ. ಅಲ್ಲಿ ಉದ್ಯೋಗದಲ್ಲಿರುವವರು ಕೂಡ ಊರಿಗೆ ಬರುವಾಗ ಖರ್ಚಿಗಾದೀತು ಎಂದು ಹೇಳಿ ಸ್ವಲ್ಪ ಚಿನ್ನ ತರುತ್ತಾರೆ. ಸ್ಮಗ್ಲರ್ಗಳು ಇಂತವರನ್ನು ಹಿಡಿದು ಚಿನ್ನ ದಾಟಿಸುತ್ತಾರೆ.
ವಿಶೇಷವೆಂದರೆ ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರು ಚಿನ್ನ ಕಳ್ಳ ಸಾಗಾಣಿಕೆ ಮಾಡುತ್ತಿದ್ದಾರೆ. ಕೇರಳದಲ್ಲಿ ಹಲವು ಮಹಿಳೆಯರು ಚಿನ್ನ ಕಳ್ಳ ಸಾಗಾಟ ಮಾಡಿ ಸಿಕ್ಕಿ ಬಿದ್ದಿದ್ದಾರೆ. 1 ಕೋಟಿ ರೂ. ಮೌಲ್ಯದ ತನಕ ಸುಂಕ ತಪ್ಪಿಸಿ ಚಿನ್ನ ತಂದರೆ ಅದು ಜಾಮೀನು ಸಿಗುವ ಅಪರಾಧ. ಸಿಕ್ಕಿ ಬಿದ್ದರೂ ಜಾಮೀನಿನಲ್ಲಿ ಬಿಡುಗಡೆಯಾಗುವ ಭರವಸೆಯಿರುವುದರಿಂದ 3 ಕೆಜಿಯಷ್ಟು ಚಿನ್ನ ತರಲು ಇವರು ಹೆದರುವುದಿಲ್ಲ.
ಚಿನ್ನದ ಲೆಕ್ಕಾಚಾರ:


  • ದುಬೈನಲ್ಲಿ ಚಿನ್ನದ ಬೆಲೆ 1 ಗ್ರಾಂಗೆ 2,579 ರೂ.
  • ಭಾರತದಲ್ಲಿ ಚಿನ್ನದ ಬೆಲೆ 1 ಗ್ರಾಂಗೆ 3,100 ರೂ.ಸ್ಟಮ್ಸ್
  • ಅಧಿಕಾರಿಗಳ ಕಣ್ಣು ತಪ್ಪಿಸಿ ತಂದರೆ ಆಗುವ ಲಾಭ 1 ಗ್ರಾಂಗೆ 424 ರೂ.
  • 1 ಗ್ರಾಂ ಚಿನ್ನಕ್ಕೆ ಕಸ್ಟಮ್ಸ್ ಸುಂಕ ಶೇ.10 (ಗ್ರಾಂಗೆ 257 ರೂ.)
  • ಚಿನ್ನ ಕಳ್ಳಸಾಗಾಟ ಮಾಡುವವರ ವಿಮಾನದ ಟಿಕೆಟ್, ಇತರ ಖರ್ಚುವೆಚ್ಚ ಮತ್ತು ಅಧಿಕಾರಿಗಳಿಗೆ ಕೊಡುವ ಲಂಚ ಎಲ್ಲ ಸೇರಿಸಿ ಗ್ರಾಂಗೆ 100 ರೂ.ಯಂತೆ ಖರ್ಚಾದರೂ 324 ರೂ. ಲಾಭ ಗ್ಯಾರಂಟಿ.