ಬೂದುಗುಂಬಳ ಬೆಳೆಯಿರಿ

ಬೂದುಗುಂಬಳವೊಂದು ಬಳ್ಳಿ ತರಕಾರಿ. ಬೂದಿಯ ಮೈ ಹೊಂದಿರುವುದರಿಂದ ಇದನ್ನು ಬೂದುಗುಂಬಳ ಎನ್ನುತ್ತಾರೆ. ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಇದು ಕುಂಬಳಕಾಯಿ ಎಂದೇ ಪ್ರಸಿದ.್ಧ ಕುಂಬಳ ಕೃಷಿ ಲಾಭದಾಯಕ. ಸಣ್ಣ ಹಿಡುವಳಿದಾರರು ಬೂದುಗುಂಬಳ ಬೆಳೆದು ಮಾರಾಟ ಮಾಡಿ ಸಾಕಷ್ಟು ಹಣ ಗಳಿಸಬಹುದು. ಇದು ಹೆಚ್ಚಿನ ಆರೈಕೆಯಿಲ್ಲದೆ, ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾದ ಬೆಳೆ. ಇದನ್ನು ಬಹಳ ದಿನಗಳವರೆಗೆ ಕೆಡದಂತೆ ಇಡಬಹುದು.
ಬೂದುಗುಂಬಳಕ್ಕೆ ಸರ್ವಋತುವಿನಲ್ಲೂ ಬೇಡಿಕೆ ಇದೆ. ಅಪರಕ್ರಿಯೆ ಕಾರ್ಯಕ್ರಮಕ್ಕೆ, ಭೂತಾರಾಧನೆ, ದೇವಿಯ ಆರಾಧನೆ, ಆಯುಧಪೂಜೆ, ನೂತನ ಕಟ್ಟಡಗಳಿಗೆ ಶಿಲಾನ್ಯಾಸ ನೆರವೇರಿಸುವಾಗ ಬೂದುಗುಂಬಳ ಬೇಕೇ ಬೇಕು. ಅಡುಗೆಯಲ್ಲೂ ಇದಕ್ಕೆ ಮಹತ್ವದ ಸ್ಥಾನವಿದೆ. ಇದರಿಂದ ತಯಾರಿಸಿದ ಹಲ್ವ, ಕೀರು, ಸಾಂಬಾರ್, ಬೋಳುಹುಳಿ, ದೋಸೆ, ಕಡುಬು, ಪಲ್ಯ, ಮಜ್ಜಿಗೆ ಹುಳಿ, ಸಂಡಿಗೆ ಎಲ್ಲವೂ ಒಂದಕ್ಕಿಂತ ಒಂದು ರುಚಿ. ಕರಾವಳಿ ಜಿಲ್ಲೆಗಳಲ್ಲಿರುವ ದೇವಸ್ಥಾನಗಳ ಮೆನುವಿನಲ್ಲಿ ಬೂದುಗುಂಬಳ ಖಾದ್ಯ ಇದ್ದೇ ಇರುತ್ತದೆ. ಹೊಟೇಲ್ನವರೂ ಇದನ್ನು ಹೆಚ್ಚು ಬಳಸುತ್ತಾರೆ.
ಬೂದುಗುಂಬಳ ಔಷಧೀಯ ಗುಣವನ್ನೂ ಹೊಂದಿದೆ. ಹೃದಯ ರೋಗಿಗಳಿಗೆ, ಮಧುಮೇಹಿಗಳಿಗೆ, ಕ್ಷಯ ರೋಗದಿಂದ ನರಳುವವರಿಗೆ ಉತ್ತಮ. ಶರೀರಕ್ಕೆ ಬಲವನ್ನು ನೀಡುತ್ತದೆ. ಕುಂಬಳ ಬಳ್ಳಿಯನ್ನು ನೆಲದಲ್ಲೂ ಬಿಡಬಹುದು ಅಥವಾ ಮರಕ್ಕೂ ಹಬ್ಬಿಸಬಹುದು. ಜೊತೆಗೆ ಚಪ್ಪರ ಹಾಕಿಯೂ ಬೆಳೆಸಬಹುದು. ಆದರೆ ಇವುಗಳಲ್ಲಿ ನೆಲಕ್ಕೆ ಬಿಡುವುದೇ ಉತ್ತಮ. ಚಪ್ಪರ ಮತ್ತು ಮರಕ್ಕೆ ಬಿಟ್ಟರೆ ಕಾಯಿ ದೊಡ್ಡದಾದಂತೆ ಬಳ್ಳಿ ಕಡಿಮೆ ಬೀಳಬಹುದು. ಕುಂಬಳಕಾಯಿ ಬೀಜ ಬಿತ್ತಿದ ಮೂರು ತಿಂಗಳಲ್ಲಿ ಸಲು ಕೊಯ್ಲಿಗೆ ಬರುತ್ತದೆ.
ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಬೂದುಗುಂಬಳಕ್ಕೆ 10ರಿಂದ 15 ರೂ. ಬೆಲೆ ಇದೆ. ಒಂದು ಕುಂಬಳ 2 ರಿಂದ 20 ಕೆ.ಜಿ.ವರೆಗೆ ತೂಗುತ್ತದೆ. ಕುಂಬಳ ಬೆಳೆಗೆ ರಾಸಾಯನಿಕಗಳ ಅಗತ್ಯವಿಲ್ಲ. ಸೊಪ್ಪು, ಹಟ್ಟಿಗೊಬ್ಬರ ಮತ್ತು ನೀರು ಇಷ್ಟಿದ್ದರೆ ಹುಲುಸಾಗಿ ಬೆಳೆದು ಸಮೃದ್ಧ ಇಳುವರಿ ಕೊಡುತ್ತದೆ.