ಫೇಸ್ಬುಕ್ ವಂಚಕ, ಪೊಲೀಸ್ ಬಲೆಗೆ ಬಿದ್ದ

ಉತ್ತರ ಪ್ರದೇಶದ ಮಿಸ್ಬಾಹ್ ಅಯೂಬ್ ಅಲಿ ಖಾನ್, 18ರ ಹರೆಯದ ಯುವಕ. ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿ. ಅಜ್ಜ, ಅಜ್ಜಿ ಜತೆ ವಾಸಿಸುತ್ತಿದ್ದ. ಓದು ಬೇಸರ ಎನಿಸಿತು. ಕೆಲವು ತಿಂಗಳುಗಳ ಕಾಲೇಜಿಗೆ ಹೋಗಲಿಲ್ಲ. ತ್ವರಿತವಾಗಿ ಹಣ ಮಾಡುವ ಹಂಬಲ ಬಂತು.ರಡು ನಕಲಿ ಫೇಸ್ಬುಕ್ ಪ್ರೊಫೈಲ್ ಸೃಷ್ಟಿಸಿದ. ಒಂದು ಶೈಲಿ ಪಾರೀಖ್ ಎಂಬ ಯುವತಿಯ ಹೆಸರಿನಲ್ಲಿ, ಇನ್ನೊಂದು ಅರ್ಮಾನ್ ಕಪೂರ್ ಎಂಬ ಯುವಕ ಹೆಸರಿನಲ್ಲಿ ಫೇಸ್ಬುಕ್ ಪ್ರೊಫೈಲ್ ಸೃಷ್ಟಿಸಿದ. ಎರಡೂ ಪ್ರೊಫೈಲ್ಗಳಲ್ಲಿ ತನ್ನದೇ ಛಾಯಾಚಿತ್ರಗಳನ್ನು ಲಗತ್ತಿಸಿದ. ಕೆಲವು ದಿನಗಳ ಬಳಿಕ ಆತ ಶೈಲಿ ಪ್ರೊಫೈಲ್ನಿಂದ ಸಂದೇಶಗಳನ್ನು ಹಾಕಲಾರಂಭಿಸಿದ. ಅರ್ಮಾನ್ ಜತೆ ಸಂಬಂಧ ಕಡಿದುಕೊಳ್ಳಲು ತಾನು ಉದ್ದೇಶಿಸಿದ್ದೇನೆ. ಆಸಕ್ತ ವ್ಯಕ್ತಿಗಳು ಅರ್ಮಾನ್ ಜತೆ ಸಂಬಂಧ ಕುದುರಿಸಿಕೊಳ್ಳಬಹುದು. ತಾನು ಮತ್ತು ಅರ್ಮಾನ್ ಈಗಲೂ ಒಳ್ಳೆಯ ಸ್ನೇಹಿತರು ಎಂದು ಸಂದೇಶದಲ್ಲಿ ಬರೆದಿದ್ದ.
ಶೈಲಿ ಒಳ್ಳೆಯ ಹುಡುಗಿ ಎಂದು ಭಾವಿಸಿದ ಕೆಲವು ಯುವತಿಯರು ಶೈಲಿ ಜತೆಗೆ ಸ್ನೇಹ ಬೆಳೆಸಿದರು. ತಾವು ಅರ್ಮಾನ್ನನ್ನು ಭೇಟಿ ಮಾಡಲು ಬಯಸಿರುವುದಾಗಿ ಶೈಲಿಗೆ ತಿಳಿಸಿದರು. ಆಗ ಖಾನ್, ಈ ಹುಡುಗಿಯರ ಜತೆ ಸ್ನೆಹ ಬೆಳೆಸಲು ಅರ್ಮಾನ್ನ ಪ್ರೊಫೈಲ್ ಬಳಸಿದ. ಈ ಹುಡುಗಿಯರ ಪೈಕಿ ಕೆಲವರ ಜತೆಗೆ ಚಾಟ್ ನಡೆಸಿದ ಬಳಿಕ ಖಾನ್, ಮುಂಬಯಿಯ 14 ವರ್ಷದ ಶಾಲಾ ಬಾಲಕಿಯನ್ನು ಗುರಿಯಾಗಿ ಆಯ್ಕೆ ಮಾಡಿಕೊಂಡ.
 ತಾನಿನ್ನೂ ಯುವಕ. ಯಶಸ್ವಿ ಉದ್ಯಮಿ. ದೇಶ, ವಿದೇಶದಲ್ಲಿ ಸಾಕಷ್ಟು ಆಸ್ತಿಯಿದೆ ಎಂದು ಬಾಲಕಿಗೆ ಖಾನ್ ಹೇಳಿದ. ಆತನ ಸುಳ್ಳುಗಳಿಗೆ ಬಾಲಕಿ ಮರುಳಾದಳು. ಕೆಲವೇ ದಿನಗಳಲ್ಲಿ ವಿವಾಹವಾಗುವ ಕುರಿತೂ ಅವರು ಮಾತನಾಡಿದರು. ತನ್ನ ಪೋಷಕರ ಅರಿವಿಗೆ ಬರದಂತೆ ಆತನನ್ನೂ ಭೇಟಿ ಮಾಡತೊಡಗಿದಳು.
  ತಾನು ಮುಂಬಯಿ ಸಮೀಪದ ಹಿಲ್ ಸ್ಟೇಷನಿನಲ್ಲಿ 2 ಕೋಟಿ ರೂ. ಮೌಲ್ಯದ ನಿವೇಶನ ಖರೀದಿಸಿದ್ದೇನೆ. ಅಲ್ಲಿ ಬೃಹತ್ ಬಂಗಲೆ ನಿರ್ಮಿಸುತ್ತೇನೆ. ವಿವಾಹದ ಬಳಿಕ ಅದರಲ್ಲಿ ತಾವಿಬ್ಬರೂ ವಾಸಿಸಬಹುದು. ಆದರೆ ತಾನು ಈಗ 1.7 ಕೋಟಿ ರೂ. ನೀಡಿದ್ದೇನೆ. ಹಲವು ಯೋಜನೆಗಳಲ್ಲಿ ತನ್ನ ಹಣ ಸಿಕ್ಕಿ ಹಾಕಿಕೊಂಡಿರುವುದರಿಂದ 30 ಲಕ್ಷ ರೂ. ಹಣದ ಕೊರತೆ ಬಂದಿದೆ ಎಂದು ಖಾನ್ ಬಾಲಕಿಗೆ ತಿಳಿಸಿದ.
ತಾನು ಸಾಧ್ಯವಾದಷ್ಟು ನೆರವಾಗುವುದಾಗಿ ಬಾಲಕಿ ಸ್ವಯಂ ಮುಂದೆ ಬಂದಳು. ತನ್ನ ತಾಯಿಯ 19 ತೊಲದ ಚಿನ್ನದ ಒಡವೆಯನ್ನು ಮತ್ತು ಸ್ವಲ್ಪ ನಗದನ್ನು (ಒಟ್ಟು 10 ಲಕ್ಷ ರೂ. ಮೌಲ್ಯದ) ಕದ್ದು, ಆತನನ್ನು ಭೇಟಿ ಮಾಡಿ ಕೊಟ್ಟಳು.ದರೆ, ಬಾಲಕಿ ಆತನನ್ನು ನೋಡಿದುದು ಅದೇ ಕೊನೆಯ ಸಲ. ನಂತರ ಫೋನ್ ಮಾಡಿದರೆ ಆತ ಸ್ವೀಕರಿಸಲಿಲ್ಲ. ಆಗ ಆಕೆಗೆ ಅನುಮಾನ ಬಂತು. ತಾನು ವಂಚನೆಗೊಳಗಾಗಿರುವುದು ಅರಿವಾಯಿತು. ಕೊನೆಗೆ ಧೈರ್ಯ ಮಾಡಿ ತನ್ನ ಹೆತ್ತವರಿಗೆ ವಿಷಯ ತಿಳಿಸಿದಳು. ಹೆತ್ತವರು ಪೊಲೀಸರಿಗೆ ದೂರು ನೀಡಿದರು.
  ಪೊಲೀಸರು ಆತನನ್ನು ಪತ್ತೆ ಹಚ್ಚಲು ಆತನ ತಂತ್ರವನ್ನೇ ಬಳಸಿದರು. ಯುವತಿಯ ಹೆಸರಿನಲ್ಲಿ ಫೇಸ್ಬುಕ್ನಲ್ಲಿ ಪ್ರೊಫೈಲ್ ಸೃಷ್ಟಿಸಿದರು ಮತ್ತು ಅರ್ಮಾನ್ಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದರು. ಆತನ ಸೆಲ್ ಫೋನ್ ಸಂಕೇತಗಳನ್ನು ಬಳಸಿಕೊಂಡು ಆತ ಉತ್ತರ ಪ್ರದೇಶದಲ್ಲಿರುವುದನ್ನು ಪತ್ತೆ ಹಚ್ಚಿದರು. ಬಳಿಕ ಆತನ ನಿವಾಸದಿಂದ ಆತನನ್ನು ಬಂಧಿಸಿದರು.