ಜಾನುವಾರುಗಳಿಗೂ ಸೊಳ್ಳೆ ಪರದೆ

ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಲು ಜನಸಾಮಾನ್ಯರು ಸೊಳ್ಳೆ ಪರದೆ ಬಳಸುವುದು ಸಾಮಾನ್ಯ. ಆದರೆ ಯಾದಗಿರಿ ಜಿಲ್ಲೆಯ ಕೆಲವೆಡೆ ಸೊಳ್ಳೆಗಳ ಕಡಿತದಿಂದ ರಕ್ಷಿಸಿಕೊಳ್ಳಲು ಜಾನುವಾರುಗಳಿಗೂ ಸೊಳ್ಳೆ ಪರದೆ ಬಳಸಲಾಗುತ್ತಿದೆ. ಜಿಲ್ಲೆಯ ಶಹಾಪುರ ತಾಲೂಕಿನ ಗಡ್ಡೆಸೂಗೂರು, ಗೌಡ್ಯಾಳ, ಹಲಗೇರಾ, ಅಜ್ಜಣಗಿ, ಕುಮೂರು, ಬಿರನಾಳ, ಹುಲಕಲ್ (ಜೆ), ಬಬಾದಿ, ಗುರುಸಣಗಿ ಸೇರಿದಂತೆ ಇತರ ಗ್ರಾಮಗಳಲ್ಲಿ ಜಾನುವಾರುಗಳಿಗೆ ಸೊಳ್ಳೆ ಪರದೆ ಕಟ್ಟಿ ಸೊಳ್ಳೆಗಳಿಂದ ರಕ್ಷಿಸಲಾಗುತ್ತಿದೆ.
ಹಿಂದಿನ ಕಾಲದಲ್ಲಿ ಕೊಟ್ಟಿಗೆಯಲ್ಲಿ ಹೊಗೆಯಾಡಿಸುವ ಮೂಲಕ ಸೊಳ್ಳೆಗಳನ್ನು ಹೋಗಲಾಡಿಸಿ ಜಾನುವಾರುಗಳಿಗೆ ರಕ್ಷಣೆ ಒದಗಿಸಲಾಗುತ್ತಿತ್ತು. ಈಗ ಸೊಳ್ಳೆಗಳ ಕಡಿತದಿಂದ ತಪ್ಪಿಸಿಕೊಳ್ಳಲು ಎಮ್ಮೆ, ಆಕಳು, ಎತ್ತುಗಳಿಗೆ ಸೊಳ್ಳೆ ಪರದೆ ಕಟ್ಟಲಾಗುತ್ತಿದೆ. ಇದು ರೈತರು ಕಂಡುಕೊಂಡ ಸುಲಭ ತಂತ್ರವಾಗಿದೆ.
ನಗರ ಪ್ರದೇಶಗಳಲ್ಲಿ ಜನತೆ ಸೊಳ್ಳೆ ಪರದೆ ಹಾಗೂ ಸೊಳ್ಳೆ ಬತ್ತಿ ಬಳಸಿ ಸೊಳ್ಳೆ ಕಡಿತದಿಂದ ರಕ್ಷಣೆ ಪಡೆಯುತ್ತಾರೆ. ಆದರೆ ಮೂಕ ಪ್ರಾಣಿಗಳು ಯಾವ ರಕ್ಷಣೆಯಿಲ್ಲದೆ ಸೊಳ್ಳೆ ಕಡಿತದಿಂದ ತೊಂದರೆ ಅನುಭವಿಸುತ್ತಿರುತ್ತವೆ. ಇದನ್ನರಿತ ಈ ಗ್ರಾಮಗಳ ರೈತರು ತಮ್ಮ ಜಾನುವಾರುಗಳಿಗೆ ಸೊಳ್ಳೆ ಪರದೆ ಕಟ್ಟಿ ಸೊಳ್ಳೆ ಕಡಿತದಿಂದ ರಕ್ಷಿಸುತ್ತಿದ್ದಾರೆ.ಭಾಗದಲ್ಲಿ ಇತ್ತೀಚೆಗೆ ನೀರಾವರಿ ಪ್ರದೇಶ ಹೆಚ್ಚಾದಂತೆ ಹಾಗೂ ಭತ್ತದ ಗದ್ದೆಗಳ ವ್ಯಾಪ್ತಿ ವಿಶಾಲವಾದಂತೆ ರಕ್ತ ಹೀರುವ ಸೊಳ್ಳೆಗಳ ಹಾವಳಿ ವಿಪರೀತ ಹೆಚ್ಚಾಗುತ್ತಿವೆ. ಸಂಜೆಯಾಗುತ್ತಲೇ ಸೊಳ್ಳೆ ಕಾಟ ಹೆಚ್ಚಾಗುತ್ತಿರುತ್ತದೆ. ಇದರಿಂದ ಜಾನುವಾರುಗಳು ಮೂಕ ವೇದನೆ ಅನುಭವಿಸುತ್ತಿರುತ್ತವೆ. ಇವುಗಳ ವೇದನೆ ನೋಡಲಾಗದ ರೈತರು ಸಾವಿರಾರು ರೂ. ಖರ್ಚು ಮಾಡಿ ಸೊಳ್ಳೆ ಪರದೆ ಖರೀದಿಸಿ ಸೊಳ್ಳೆಗಳಿಂದ ಜಾನುವಾರುಗಳ ಸಂರಕ್ಷಣೆ ಮಾಡುತ್ತಿದ್ದಾರೆ.
ಸೊಳ್ಳೆಗಳಿಂದ ರಕ್ಷಿಸಲು ಜಾನುವಾರುಗಳಿಗೆ ಸೊಳ್ಳೆ ಪರದೆ ಕಟ್ಟುವುದು ಆಂಧ್ರಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ. ಈ ಮಾದರಿಯನ್ನೇ ಇಲ್ಲಿಯ ರೈತರು ಅನುಸರಿಸುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ರೈತರು ತಮ್ಮ ಜಮೀನುಗಳಲ್ಲಿ ಹಾಗೂ ಮನೆಯ ಮುಂದೆ ಜಾನುವಾರುಗಳಿಗೆ ಮೇವು ಹಾಕಿ ಸೊಳ್ಳೆ ಪರದೆ ಕಟ್ಟುತ್ತಾರೆ. ಪ್ರಾಣಿಗಳಿಗೂ ಸೊಳ್ಳೆಗಳ ಕಡಿತದಿಂದ ರೋಗಗಳು ಬರುತ್ತವೆ. ಹೀಗಾಗಿ ರೈತರು ಮುನ್ನೆಚ್ಚರಿಕೆ ಕ್ರಮ ಅನುಸರಿಸುತ್ತಿದ್ದಾರೆ.